ಬೆಂಗಳೂರು ಸಿನಿಮೋತ್ಸವಕ್ಕೆ ನಿರ್ದೇಶಕರ ಸಂಘ ಲೆಕ್ಕಕ್ಕಿಲ್ಲವೇ?
Team Udayavani, Feb 1, 2017, 11:11 AM IST
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಮುನಿಸಿಕೊಂಡಿದೆ! ಅದಕ್ಕೆ ಕಾರಣ, ಫೆಬ್ರವರಿ 3ರಿಂದ ಶುರುವಾಗಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ. ಹೌದು, ಈ ಸಿನಿಮೋತ್ಸವಕ್ಕೆ ನಿರ್ದೇಶಕರ ಸಂಘವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂಬುದು ಸಂಘದ ಬೇಸರಕ್ಕೆ ಕಾರಣ. ಫಿಲ್ಮ್ ಪಾಲಿಸಿ ಕಮಿಟಿ, ಫಿಲ್ಮ್ ಫೆಸ್ಟಿವಲ್ ಕಮಿಟಿ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಷಯದಲ್ಲೂ ನಿರ್ದೇಶಕರ ಸಂಘವನ್ನು ಕಡೆಗಣಿಸಿದ್ದು, ಆ ಕುರಿತು ಇರುವ ಸಮಸ್ಯೆ ಬಗೆಹರಿಸಿ, ಕೆಲ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ನಿರ್ದೇಶಕರ ಸಂಘ ಮನವಿ ಮಾಡಿದೆ.
ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್ ಇಟ್ಟಿರುವ ಬೇಡಿಕೆ ಬಗ್ಗೆ ಹೇಳುವುದಾದರೆ, “ಚಿತ್ರೋತ್ಸವದಲ್ಲಿ ಸೃಜನಶೀಲ ಚಿತ್ರಗಳ ಪ್ರದರ್ಶನವಾಗಬೇಕು, ಅತಿಥಿಗಳ ಸತ್ಕಾರ ಎಂಬುದು ಬೇರೆ ಭಾಷೆಯ ಸಿನಿಮಾದವರಂತೆ ಕನ್ನಡ ಸಿನಿಮಾದವರಿಗೂ ಕೂಡ ಸಮಾನವಾಗಿರಬೇಕು. ಚಿತ್ರ ಪ್ರದರ್ಶನ ಮಾಡಿ ಹೌಸ್‌ಫುಲ್ ಅಂದರೆ, ಅದನ್ನು ಚಿತ್ರೋತ್ಸವ ಎನ್ನಲು ಸಾಧ್ಯವಿಲ್ಲ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ಅದ್ಧೂರಿಯಾಗಿ ನಡೆದರೆ ಚಿತ್ರೋತ್ಸವ ಯಶಸ್ವಿ ಅನ್ನುವುದು ವಿಷಾದನೀಯ. ಕನ್ನಡ ಚಿತ್ರರಂಗಕ್ಕೆ, ಅದರ ಪ್ರಗತಿಗೆ ಬೇಕಾದ ವಾತಾವರಣ ಸೃಷ್ಟಿಯಾಗಬೇಕು.
ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಣೆಗೆ ಪೂರಕ ವಾತಾವರಣದ ಆಗತ್ಯವಿದೆ. ನಿರ್ಮಾಣಕ್ಕೂ ಪೂರಕ ವಾತಾವರಣ ಆಗಬೇಕು. ವಿಶೇಷ ಅತಿಥಿಗಳನ್ನು ಆಹ್ವಾನಿಸಬೇಕಾದರೆ, ನೇರವಾಗಿ ಇಲ್ಲವೆ ಪರೋಕ್ಷವಾಗಿಯಾದರೂ ಚಿತ್ರರಂಗಕ್ಕೆ ಪ್ರೇರಣೆ ನೀಡುವಂತಿರಬೇಕು. ಇಲಾಖೆ ಮುಖ್ಯಸ್ಥರಿಗೆ ಆಥವಾ ಅಕಾಡೆಮಿಯವರ ವೈಯಕ್ತಿಕ ಆಸೆಗಳು ಇರಬಾರದು’ ಎಂದು ಹೇಳಿಕೆ ನೀಡಿರುವ ಅಧ್ಯಕ್ಷ ರಮೇಶ್, ಕಳೆದ ಸಾಲಿನಲಿ ಆಹ್ವಾನಿಸಿದ ಅತಿಥಿಗಳ ಪಟ್ಟಿ ಆಧರಿಸಿ, ಈ ವಿಷಯ ಪ್ರಸ್ತಾಪಿಸಲಾಗಿದೆ. ಪುಸ್ತಕದಲ್ಲಿ ಎಲ್ಲವೂ ಸರಿ ಎಂಬಂತೆ ತೋರಿಸಿ, ಸರ್ಕಾರದ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನಮ್ಮ ಭಾವನೆ.
ಈ ಕುರಿತು ಸೂಕ್ತ ಚಿಂತನೆ ನಡೆಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ. “ಕಳೆದ ಐದು ವರ್ಷಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಚಿತ್ರರಂಗಕ್ಕೆ ಪೂರಕವಾದ ಸರ್ಕಾರದ ಯೋಜನೆಗಳಿದ್ದರೂ, ಅವುಗಳನ್ನು ಇಲಾಖೆ ಉದ್ದೇಶಪೂರ್ವಕವಾಗಿ ಕಾಲಹರಣ ಮಾಡಿದೆ. 2013, 2014, 2015 ಮತ್ತು 2016 ಸೇರಿದಂತೆ ಈ ನಾಲ್ಕು ವರ್ಷಗಳಿಂದಲೂ ಚಿತ್ರಗಳಿಗೆ ಪ್ರೋತ್ಸಾಹ ಧನ ನೀಡಿಲ್ಲ. ಇದು ವಾರ್ತಾ ವತ್ತು ಸಾರ್ವಜನಿಕ ಇಲಾಖೆಯ ದಿವ್ಯ ನಿರ್ಲಕ್ಷ್ಯತನ ತೋರಿಸುತ್ತದೆ. ಸಿನಿಮಾ ಸಬ್ಸಿಡಿಗೂ, ಚಿತ್ರೋತ್ಸವಕ್ಕೂ ಯಾವ ಸಂಬಂಧವಿಲ್ಲ.
ಪ್ರತಿ ವರ್ಷ ಸಮಿತಿ ರಚಿಸಿ ಇಷ್ಟು ಸಿನಿಮಾಗಳು ಸಬ್ಸಿಡಿಗೆ ಅರ್ಹ ಎನ್ನಲಾಗುತ್ತಿದೆ. ಆದರೆ, ಪ್ರೋತ್ಸಾಹ ಧನ ಮಾತ್ರ ಇಲ್ಲ. ಇಂತಹ ಕೆಲಸಕ್ಕೆ ಸಮಿತಿ ಬೇಕಾ? ಚಿತ್ರೋತ್ಸವದ ಉದ್ದೇಶ ಕನ್ನಡ ಚಿತ್ರಗಳ ಏಳಿಗೆಗೆ ಅನ್ನುವುದಾದರೆ, ಸಬ್ಸಿಡಿ ವಿಷಯದಲ್ಲೇ ಸುಮ್ಮನಿರುವ ಇಲಾಖೆ ಚಿತ್ರೋತ್ಸವ ಮಾಡುವುದಾದರೂ ಯಾಕೆ? ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸರ್ಕಾರ ಕೊಟ್ಟಿದ್ದರೂ, ಇಲಾಖೆ ಮುಖ್ಯಸ್ಥರು ಮಾತ್ರ ಸಮಿತಿ ಮುಂದೆ ಆ ಸಿನಿಮಾಗಳನ್ನು ಇಟ್ಟಿಲ್ಲ.
ಅಂದರೆ, ಸಮಿತಿಯನ್ನೇ ರಚಿಸಿಲ್ಲ. 2013 ರ ಸಮಿತಿಯಿಂದ ಸಿನಿಮಾಗಳ ಪಟ್ಟಿ ಕೊಟ್ಟಿದ್ದರೂ ಅದು 2016 ನವೆಂಬರ್‌ವರೆಗೂ ನ್ಯಾಯಾಲಯದಲ್ಲಿತ್ತು. ಅದರತ್ತ ಗಮನಿಸದೆ, ಮೂರು ವರ್ಷ ಕಾಲಹರಣ ಮಾಡಲಾಗಿದೆ. ಅರ್ಹತೆಗೊಂಡ ಪಟ್ಟಿ ತಯಾರಾಗಿದ್ದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಈ ಸಲ ನಡೆಯಲಿರುವ ಚಿತ್ರೋತ್ಸವದಿಂದ ನಿರ್ದೇಶಕರ ಸಂಘ ದೂರ ಉಳಿಯಲಿದೆ. ಈ ಕೂಡಲೇ ಈ ಬಗ್ಗೆ ಗಮನಹರಿಸಬೇಕು’ ಎಂದು ಸಂಘದ ಅಧ್ಯಕ್ಷ ರಮೇಶ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.