ಬಳುಕುವ ಲತೆ: ನ್ಯೂಜಿಲೆಂಡ್‌ನಿಂದ ಬಂದ್ಳು ಶಿರಸಿ ಸುಂದರಿ
Team Udayavani, Sep 19, 2017, 3:48 PM IST
“ಆ ಚಿತ್ರಕ್ಕೆ ಲತಾ ಹೆಗಡೆ ನಾಯಕಿಯಾಗುವ ಸಾಧ್ಯತೆ ಇದೆಯಂತೆ …’
– ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಯಾವುದಾದರೂ ಸ್ಟಾರ್‌ಗಳ ಅಥವಾ ದೊಡ್ಡ ಬಜೆಟ್‌ನ ಚಿತ್ರಗಳು ಸೆಟ್ಟೇರಿದರೆ ಕೇಳಿಬರುವ ಹೆಸರಿದು. ಲತಾ ಹೆಗಡೆ ಎಂಬ ಹೆಸರು ಕನ್ನಡ ಚಿತ್ರರಂಗದಲ್ಲಿ ಆಗಾಗ ಕೇಳಿಬರುತ್ತಿದೆ. ಅದಕ್ಕೆ ಸರಿಯಾಗಿ ಲತಾ ಕೂಡಾ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಲತಾ ಹೆಗಡೆ ಎಂದರೆ ಕನ್ನಡ ಚಿತ್ರರಂಗದ ನ್ಯೂ ಎಂಟ್ರಿ ಎನ್ನಬಹುದು. ಈಗಷ್ಟೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಬಂದಿರುವ ನ್ಯೂಜಿಲೆಂಡ್ ಹುಡುಗಿ! ಹೀಗೆಂದೆರ ನಿಮಗೆ ಖಂಡಿತಾ ಆಶ್ಚರ್ಯವಾಗಬಹುದು. ನ್ಯೂಜಿಲೆಂಡ್ ಹುಡುಗಿ ಅಂದ ಮೇಲೆ ಹೊಸದಾಗಿ ಕನ್ನಡ ಹೇಳಿಕೊಡಬೇಕು ಎಂದು ನೀವಂದುಕೊಳ್ಳಬಹುದು. ಖಂಡಿತಾ ಆ ಕಷ್ಟ ಇಲ್ಲ. ಏಕೆಂದರೆ ಲತಾ ಕನ್ನಡ ಮೂಲದ ನ್ಯೂಜಿಲೆಂಡ್ ಹುಡುಗಿ. ಲತಾ ಶಿರಸಿ ಸಮೀಪದ ಹೊನ್ನಾವರದವರು. ಚಿಕ್ಕಂದಿನಲ್ಲೇ ಕುಟುಂಬದವರ ಜತೆ ನ್ಯೂಜಿಲೆಂಡ್‌ಗೆ ಹೋಗಿ ಅಲ್ಲೇ ನೆಲೆಸಿದ್ದಾರೆ. ದೂರದ ನ್ಯೂಜಿಲೆಂಡ್‌ನಲ್ಲಿದ್ದರೂ ಲತಾ ಹೆಗಡೆಗೆ ಕನ್ನಡ ಸುಲಲಿತ. ಸ್ಪಷ್ಟವಾಗಿ ಕನ್ನಡ ಮಾತನಾಡುವ ಲತಾ ಹೆಗಡೆಗೆ ಈಗ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತಿದೆ.
ನ್ಯೂಜಿಲೆಂಡ್‌ನಿಂದ ಗಾಂಧಿನಗರಕ್ಕೆ ಬಂದ ಲತಾ ಹೆಗಡೆಗೆ ಅವಕಾಶ ಕೊಟ್ಟಿದ್ದು ಬೇರಾರು ಅಲ್ಲ, ಹೀರೋಯಿನ್‌ಗಳ ವಿಷಯದಲ್ಲಿ ಲಕ್ಕಿ ಹ್ಯಾಂಡ್ ಎನಿಸಿರುವ ಮಹೇಶ್ ಬಾಬು. “ಆ ದಿನಗಳು’ ಚೇತನ್ ನಾಯಕರಾಗಿರುವ ಚಿತ್ರವೊಂದನ್ನು ಮಹೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದ ಮಹೇಶ್ ಬಾಬು ಕಣ್ಣಿಗೆ ಲತಾ ಹೆಗಡೆ ಬೀಳುತ್ತಾರೆ. ಆಡಿಷನ್‌ನಲ್ಲೂ ಓಕೆಯಾಗುವ ಮೂಲಕ ಲತಾ ನಾಯಕಿಯಾಗಿ ಎಂಟ್ರಿಕೊಟ್ಟೇಬಿಟ್ಟಿದ್ದಾರೆ. ಹುಡುಗಿಯ ನಟನೆ ಬಗ್ಗೆ ಮಹೇಶ್ ಬಾಬು ಕೂಡಾ ಖುಷಿಯಾಗಿದ್ದಾರೆ. ಕನ್ನಡದ ಮೊದಲ ಸಿನಿಮಾದಲ್ಲೇ ಪಾತ್ರಕ್ಕೆ ನ್ಯಾಯ ಒದಗಿಸುವಂತಹ ಅಭಿನಯವಿದೆ ಎನ್ನುವುದು ಮಹೇಶ್ ಬಾಬು ಮಾತು. ಮೊದಲ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಲತಾ ಹೆಗಡೆ ಮತ್ತೂಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಕೂಡಾ ಆರಂಭವಾಗಿದೆ. ಮಲಯಾಳಂನ ಹಿಟ್ ಚಿತ್ರ “ಚಾರ್ಲಿ’ಯನ್ನು ಕನ್ನಡದಲ್ಲಿ “ಉತ್ಸವ್’ ಎಂಬ ಹೆಸರಿನಲ್ಲಿ ಮಾಡುತ್ತಿದ್ದು, ದಿಗಂತ್ ಈ ಚಿತ್ರದ ನಾಯಕ. ಮೂಲ ಚಿತ್ರದ ಪಾತ್ರ ನೋಡಿ ಖುಷಿಪಟ್ಟಿರುವ ಲತಾ ಹೆಗಡೆ “ಉತ್ಸವ್’ ಚಿತ್ರದ ತನ್ನ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮಾಡೆಲಿಂಗ್‌ನಿಂದ ಬಂದ ಸುಂದರಿ
ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಮಾಡೆಲಿಂಗ್‌ನಿಂದ ಅನೇಕರು ಬಂದಿದ್ದಾರೆ. ಮಾಡೆಲಿಂಗ್‌ನಲ್ಲಿ ಮಿಂಚುತ್ತಲೇ ಚಿತ್ರರಂಗದ ಕನಸು ಕಾಣುವ ಅನೇಕ ನಟಿಯರಿದ್ದಾರೆ. ಹಾಗೆ ಕನಸು ಕಂಡವರು ಲತಾ ಹೆಗಡೆ.ನ್ಯೂಜಿಲೆಂಡ್‌ನಲ್ಲಿ ಮಾಡೆಲ್ ಆಗಿದ್ದ ಅವರನ್ನು ಬಹುತೇಕ ಮಂದಿ ಸಿನಿಮಾ ಯಾಕೆ ಮಾಡಬಾರದು ಅಂತಾನೇ ಪ್ರಶ್ನಿಸುತ್ತಿದ್ದರಂತೆ. ಕೊನೆಗೆ ಆ ಹುಡುಗಿಗೂ ಆ ಆಸೆ ಹೆಚ್ಚಾಗಿ, ಸಿನಿಮಾದತ್ತ ಒಲವು ಮೂಡಿದೆ. ಕಟ್ ಮಾಡಿದರೆ, ತೆಲಗು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ತೆಲುಗು ಸಿನಿಮಾ ಮುಗಿಯುತ್ತಿದ್ದಂತೆಯೆ ಮೆಹರ್ ರಮೇಶ್ ಅವರ ಮೂಲಕ ಮಹೇಶ್ ಬಾಬು ಅವರ ಪರಿಚಯವಾಗಿ, ಅವರ ನಿರ್ದೇಶನದಲ್ಲಿ ನಟಿಸಿದರೆ, ಅದೃಷ್ಟ ಖುಲಾಯಿಸುತ್ತೆ ಅನ್ನೋ ಮಾತು ಕೇಳಿಸಿಕೊಂಡು, ಮಹೇಶ್ ಬಾಬು ಅವರನ್ನು ಭೇಟಿ ಮಾಡಿ ಅವಕಾಶ ಪಡೆದಿದ್ದಾರೆ. ಲತಾ ಹೆಗಡೆ ಅವರೊಂದಿಗೆ ಮಾತುಕತೆ ನಡೆಸಿದ ಮಹೇಶ್ ಬಾಬುಗೆ, ಅವರ ಸ್ಪಷ್ಟ ಕನ್ನಡವನ್ನು ಕೇಳಿ ತಮ್ಮ ಚಿತ್ರಕ್ಕೆ ನಾಯಕಿ ನೀವೇ ಅಂದಿದ್ದಾರೆ. ಅದರಲ್ಲೂ ಲತಾ ಹೆಗಡೆ ಅವರದು ಫಾರಿನ್ ರಿಟರ್ನ್ ಪಾತ್ರವಂತೆ. ಪತ್ರಕರ್ತೆ ಪಾತ್ರವಾಗಿದ್ದರಿಂದ ಅವರೇ ಸೂಕ್ತ ಅನಿಸಿ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ.
“ನಾನು ತೆಲುಗು ಸಿನಿಮಾ ಮಾಡುತ್ತಿದ್ದಾಗ ನನಗೆ ಈ ಕನ್ನಡದ ಆಫರ್ ಬಂತು. ಮೆಹರ್ ರಮೇಶ್ ಅವರು ಮಹೇಶ್ ಬಾಬುಗೆ ನನ್ನ ಫೋಟೋ ಕಳುಹಿಸಿದರು. ಫೋಟೋ ನೋಡಿ ಖುಷಿಯಾದ ಮಹೇಶ್ ಬಾಬು ಅವರು ಆಡಿಷನ್ ಮಾಡಿ ಓಕೆ ಮಾಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಯಾವುದೇ ಭಯವಿಲ್ಲದೇ ಅವರ ಜೊತೆ ಕೆಲಸ ಮಾಡಬಹುದು. ಹೊಸಬರು ಎಂಬ ತಾತ್ಸಾರವಿಲ್ಲದೇ, ಚೆನ್ನಾಗಿ ಹೇಳಿಕೊಟ್ಟು ಆ್ಯಕ್ಟಿಂಗ್ ತೆಗೆಸುತ್ತಾರೆ’ ಎಂದು ಮಹೇಶ್ ಬಾಬು ಬಗ್ಗೆ ಖುಷಿಯಿಂದ ಮಾತನಾಡುತ್ತಾರೆ. ಈಗ ಲತಾ ಹೆಗಡೆ ಮತ್ತೂಂದು ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದು “ಉತ್ಸವ್’. “ಉತ್ಸವ್ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಇಡೀ ಸಿನಿಮಾದುದ್ದಕ್ಕೂ ನನ್ನ ಪಾತ್ರ ಸಾಗಿ ಬರುತ್ತಿದೆ. ಈ ಪಾತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಆಫರ್ ಸಿಗುತ್ತದೆ ಎಂಬ ನಿರೀಕ್ಷೆ ಇದೆ’ ಎನ್ನುವುದು ಲತಾ ಹೆಗಡೆ ಮಾತು.
ತಂದೆ-ತಾಯಿಯ ಆಸೆ
ಮೊದಲೇ ಹೇಳಿದಂತೆ ಲತಾ ಹೆಗಡೆ ಮೂಲತಃ ಶಿರಸಿಯವರು. ಆದರೆ ಅವರ ಕುಟುಂಬ ಲತಾ ಹೆಗಡೆ ಆರನೇ ಕ್ಲಾಸಿನಲ್ಲಿರುವಾಗ ನ್ಯೂಜಿಲೆಂಡ್‌ಗೆ ಶಿಫ್ಟ್ ಆಗಿದೆ. ಅಲ್ಲಿಗೆ ಲತಾ ಓದಿದ್ದು, ಬೆಳೆದಿದ್ದು ಎಲ್ಲವೂ ನ್ಯೂಜಿಲೆಂಡ್‌ನಲ್ಲಿ ಎಂದು ಪ್ರತ್ಯೇಕವಾಗಿ ಅಗತ್ಯವಿಲ್ಲ. ಲತಾ ಕುಟುಂಬ ವಿದೇಶದಲ್ಲಿದ್ದರೂ ಕನ್ನಡ ಪ್ರೀತಿ ಬಿಟ್ಟಿರಲಿಲ್ಲವಂತೆ. ಹಾಗಾಗಿಯೇ ಮನೆಯಲ್ಲಿ ಕನ್ನಡ ಮಾತನಾಡುತ್ತಾ, ಮಗಳಿಗೂ ಕನ್ನಡದ ಬಗ್ಗೆ ಹೇಳಿಕೊಟ್ಟಿದ್ದಾರೆ. ಹಾಗಾಗಿಯೇ ನ್ಯೂಜಿಲೆಂಡ್‌ನಿಂದ ಬಂದ ಲತಾ ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ. ಜೊತೆಗೆ ಮಗಳು ಭಾರತಕ್ಕೆ ಹೋಗಬೇಕು, ಅಲ್ಲಿ ಏನಾದರೂ ಸಾಧನೆ ಮಾಡಬೇಕು. ಅದರಲ್ಲೂ ಕನ್ನಡ ನೆಲದಲ್ಲಿ ಆಕೆಯ ಸಾಧನೆಗೊಂದು ವೇದಿಕೆ ಸಿಗಬೇಕೆಂಬ ಆಸೆ ಇತ್ತಂತೆ. ಅದು ಈಗ ಈಡೇರಿದೆ. ಮೊದಲು ತೆಲುಗು, ತಮಿಳಿನಲ್ಲಿ ಅವಕಾಶ ಸಿಕ್ಕರೂ ಈಗ ಕನ್ನಡದಲ್ಲಿ ಮಗಳುಸ ಬಿಝಿಯಾಗುತ್ತಿರುವ ಬಗ್ಗೆ ಖುಷಿ ಇದೆಯಂತೆ. “ಅವರಿಗೆ ನಾನು ಭಾರತಕ್ಕೆ ಬರಬೇಕೆಂಬ ಆಸೆ ಇತ್ತು. ಅದರಲ್ಲೂ ಕನ್ನಡ ನೆಲದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು. ನನಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಅವರು ತುಂಬಾ ಖುಷಿಪಟ್ಟರು. ಒಳ್ಳೊಳ್ಳೆ ಪಾತ್ರಗಳ ಮೂಲಕ ನಾನು ಚಿತ್ರರಂಗದಲ್ಲಿ ನೆಲೆನಿಲ್ಲಬೇಕೆಂಬ ಆಸೆ ಅವರಿಗಿದೆ’ ಎನ್ನುತ್ತಾರೆ ಲತಾ.
ಲತಾ ಹೆಗಡೆಗೆ ಈಗ ಕನ್ನಡ ಚಿತ್ರಗಳಿಂದ ಒಂದಷ್ಟು ಅವಕಾಶಗಳು ಬರುತ್ತಿರುವುದಂತೂ ಸುಳ್ಳಲ್ಲ. ನಿಖೀಲ್ ಕುಮಾರಸ್ವಾಮಿಯ ಎರಡನೇ ಚಿತ್ರದಿಂದಲೂ ಲತಾಗೆ ಅವಕಾಶ ಬಂದಿತ್ತು. ಆದರೆ, ಅತ್ತ ಕಡೆ “ಉತ್ಸವ್’ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದರಿಂದ ಆ ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಮುಂದೆ ಲತಾ ಹೆಗಡೆ ಕನ್ನಡ ಚಿತ್ರರಂಗದಲ್ಲೇ ನೆಲೆ ನಿಲ್ಲುತ್ತಾರಾ ಎಂದರೆ ಆ ಬಗ್ಗೆ ಲತಾಗೂ ಸ್ಪಷ್ಟತೆ ಇಲ್ಲ. “ನೋಡಬೇಕು, ಇಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಕನ್ನಡ ಚಿತ್ರರಂಗದಲ್ಲೇ ಮುಂದುವರೆಯುತ್ತೇನೆ’ ಎನ್ನುವುದು ಲತಾ ಮಾತು. ಅಂದಹಾಗೆ, ಲತಾ ನಟನೆಗೆ ಸಂಬಂಧ ಪಟ್ಟಂತೆ ಯಾವುದೇ ಕೋರ್ಸ್ ಮಾಡಿಲ್ಲ. ಆದರೆ, ನಟನೆಯಲ್ಲಿ ತುಂಬಾ ಆಸಕ್ತಿ ಇರುವುದರಿಂದ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ಸಾಮರ್ಥ್ಯವಿದೆ. “ಜಬ್ ವಿ ಮೆಟ್’ನಲ್ಲಿ ಕರೀನಾ ಮಾಡಿದಂತಹ ಪಾತ್ರ ಮಾಡಬೇಕೆಂಬ ಆಸೆ ಹೊಂದಿರುವ ಲತಾ ಕನಸು ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.