ವಾಸ್ತವತೆಯ ಸಾರ ಈ ಕಿರೀಟ
Team Udayavani, Jul 26, 2017, 10:58 AM IST
ಒಬ್ಬ ವ್ಯಕ್ತಿ ಸಾಧ್ಯವಾದಷ್ಟು ಒಳ್ಳೆಯವನಾಗಿ ಬದುಕೋಕೆ ಶ್ರಮಪಡುತ್ತಾನೆ. ಆದರೆ, ಸುತ್ತಮುತ್ತಲ ವಾತಾವರಣ ಅವನನ್ನು ಒಳ್ಳೆಯವನಾಗಿ ಬದುಕಲು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಕೆಟ್ಟ ವಾತಾವರಣದಿಂದ ಹೇಗೆ ಹೊರಗೆ ಬರುತ್ತಾನೆ ಅನ್ನೋದೇ ಈ ವಾರ ಬಿಡುಗಡೆಯಾಗುತ್ತಿರುವ “ಕಿರೀಟ’ ಚಿತ್ರದ ಒನ್‌ಲೈನ್.ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿದ ಚಿತ್ರ.
ಈ ಚಿತ್ರದ ಮೂಲಕ ಕಿರಣ್ ನಿರ್ದೇಶಕರ ಪಟ್ಟ ಅಲಂಕರಿಸಿದ್ದಾರೆ. ಇನ್ನು, ಸಮರ್ಥ್ ಹೀರೋ ಆಗಿ ಎಂಟ್ರಿಯಾಗಿದ್ದಾರೆ. ಚಂದ್ರಶೇಖರ್ ಕೂಡ ನಿರ್ಮಾಪಕರಾಗಿದ್ದಾರೆ. ಈ ಮೂವರಿಗೂ ಇದು ಮೊದಲ ಅನುಭವ. “ಕಿರೀಟ’ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಕುರಿತು ಒಂದು ರೌಂಡಪ್.
“ಇಂದಿನ ವ್ಯವಸ್ಥೆಯಲ್ಲಿ ನಾನು ಎಂಬುದು ಎಲ್ಲರಲ್ಲೂ ಇದೆ. ಪ್ರತಿಯೊಬ್ಬರೂ ತಮಗೆ ತಾವೇ ಗ್ರೇಟ್ ಅಂದುಕೊಂಡು, ಜಾತಿ, ಧರ್ಮ, ಆಸ್ತಿ, ಅಂತಸ್ತು ಎಂಬ ಕಿರೀಟವನ್ನು ತಲೆಮೇಲೆ ಹೊತ್ತುಕೊಂಡಿದ್ದಾರೆ. ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಬದುಕು ಕಟ್ಟಿಕೊಳ್ಳೋಕೆ ಕಷ್ಟಪಡ್ತಾನೆ. ಜೀವನ ಎಂಬುದು ಮನುಷ್ಯನಿಗೆ ಸಿಕ್ಕ ದೊಡ್ಡ ವರ. ಒಳ್ಳೆಯ ಕಮಿಟ್‌ಮೆಂಟ್‌ಗಳಿಂದ ಬದುಕಬೇಕು. ಇಲ್ಲಿ, ಎಲ್ಲರೂ ಒಂದಿಲ್ಲೊಂದು ಕಮಿಟ್‌ಮೆಂಟ್‌ಗಳಿಂದಲೇ ಬದುಕು ರೂಪಿಸಿಕೊಳ್ಳುತ್ತಿದ್ದಾರೆ.
ಕಳ್ಳ ಇರಬಹುದು, ವೇಶ್ಯೆ ಇರಬಹುದು, ದಡ್ಡ ಇರಬಹುದು, ಜಾಣ ಹೀಗೆ ಒಬ್ಬೊಬ್ಬ ವ್ಯಕ್ತಿ ಒಂದೊಂದು ರೀತಿ ಬದುಕುತ್ತಿದ್ದಾನೆ. ಆ ಎಲ್ಲಾ ಅಂಶಗಳು ಇಲ್ಲಿ ಹೇಗೆಲ್ಲಾ ವಕೌìಟ್ ಆಗತ್ತವೆ ಎಂಬುದನ್ನು ಇಲ್ಲಿ ಹೇಳಲಾಗಿದೆ ಎನ್ನುತ್ತಾರೆ ನಿರ್ದೇಶಕ ಕಿರಣ್ ಚಂದ್ರ. ನಿರ್ದೇಶಕ ಕಿರಣ್‌ಚಂದ್ರ ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆಯುವ ಮೂಲಕ ನಿರ್ದೇಶನ ಮಾಡಿದ್ದಾರೆ. ಇಡೀ ಚಿತ್ರ ಬೆಂಗಳೂರಲ್ಲೇ ಸುಮಾರು 80 ದಿನಗಳ ಕಾಲ ಚಿತ್ರೀಕರಣವಾಗಿದೆ.
ಈಗಾಗಲೇ ಚಿತ್ರದ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಟ್ರೇಲರ್ ಕೂಡ ಜನರಿಗೆ ತಲುಪಿದೆ. ಚಿತ್ರಕ್ಕೆ ಸಮೀರ್ ಕುಲಕರ್ಣಿ ಸಂಗೀತ ನೀಡಿದ್ದಾರೆ. ಚಿತ್ರದ ನಾಲ್ಕು ಹಾಡುಗಳನ್ನು ಸ್ವತಃ ನಿರ್ದೇಶಕರೇ ರಚಿಸಿದ್ದಾರೆ. ಪರಮೇಶ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಶ್ರೀಕಾಂತ್ ಸಂಕಲನವಿದೆ. ವಿಕ್ರಮ್, ವಿನೋದ್ ಸಾಸಹ ನಿರ್ದೇಶನ ಮಾಡಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ನಟ ಶ್ರೀಮುರಳಿ ಅವರು ವಾಯ್ಸ ನೀಡಿದ್ದಾರೆ.
ಇಡೀ ಚಿತ್ರದ ಕಥೆಯನ್ನು ಹೇಳುವ ಮೂಲಕ ಸಿನಿಮಾಗೊಂದು ಕಳೆ ಕೊಟ್ಟಿದ್ದಾರೆ ಎಂಬುದು ನಿರ್ದೇಶಕರ ಮಾತು.ಜುಲೈ 28ರಂದು ರಾಜ್ಯಾದ್ಯಂತ “ಕಿರೀಟ’ ತೆರೆಗೆ ಬರುತ್ತಿದೆ. ಅನುಪಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಉಳಿದಂತೆ, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ವಿಜಯ್ ಸಿನಿಮಾಸ್ ಚಿತ್ರದ ವಿತರಣೆ ಹಕ್ಕು ಪಡೆದಿದೆ. ಅಂದಹಾಗೆ, ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದ್ದರೂ, ಇದೊಂದು ಅಪ್ಪಟ ಮನರಂಜನೆಯ ಸಿನಿಮಾ ಆಗಿದೆ.
ಇಲ್ಲಿ ವಸ್ತುಸ್ಥಿತಿಯನ್ನು ಹೇಳಲಾಗಿದೆ. ಈಗಿನ ಯೂತ್ಸ್ ಪ್ರಸ್ತುತ ವಾತಾವರಣದಲ್ಲಿ ಹೇಗೆಲ್ಲಾ ಬದುಕು ಕಳೆಯುತ್ತಿದ್ದಾರೆ ಮತ್ತು, ಒಬ್ಬ ವ್ಯಕ್ತಿ ಚೆನ್ನಾಗಿ ಬದುಕಲು ಹೊರಟಾಗ ಆಗುವ ಸಮಸ್ಯೆಗಳು ಎಂಥವು ಎಂಬುದನ್ನಿಲ್ಲಿ ಹೇಳಲಾಗಿದೆ. ಅದು ಚಿತ್ರದ ಹೈಲೆಟ್ ಎಂಬುದು ನಿರ್ದೇಶಕರ ಮಾತು.
ಹನ್ನೊಂದು ವರ್ಷದ ಪ್ರಯತ್ನ: ಚಿತ್ರದ ನಾಯಕ ಸಮರ್ಥ್ಗೆ ಹನ್ನೊಂದು ವರ್ಷದ ಪ್ರಾಮಾಣಿಕ ಪ್ರಯತ್ನವೇ “ಕಿರೀಟ’ವಂತೆ. ನಾಲ್ಕು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಸಮರ್ಥ್ ಸಿನಿಮಾಗೆ ಬರುವ ಎಲ್ಲಾ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ರವಿ ಜಮಖಂಡಿ ಬಳಿ ಸ್ಟಂಟ್ಸ್ ಕಲಿತಿದ್ದಾರೆ. ಡ್ಯಾನ್ಸ್‌ನಲ್ಲೂ ಪಕ್ವಗೊಂಡಿದ್ದಾರೆ. “ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆ, ಇಲ್ಲಿಗೆ ಬಂದು “ಕಿರೀಟ’ ಮಾಡಿದ್ದೇನೆ. ಮೊದಲ ಸಿನಿಮಾ ಆಗಿರುವುದರಿಂದ ಭಯವಿದೆ. ಜತೆಗೆ ಖುಷಿಯೂ ಇದೆ.
ಮೊದಲ ಚಿತ್ರವಾದ್ದರಿಂದ ಜನರು ಹೇಗೆ ಸ್ವೀಕರಿಸುತಾರೆ ಎಂಬ ಭಯ ಒಂದು ಕಡೆಯಾದರೆ, ಮೊದಲ ಚಿತ್ರಕ್ಕೆ ಈಗಾಗಲೇ ಸಿಕ್ಕಿರುವ ಮೆಚ್ಚುಗೆ ಖುಷಿ ಕೊಟ್ಟಿರುವುದು ಇನ್ನೊಂದು ಕಡೆ. ನಿರ್ದೇಶಕರು ಕಥೆ, ಪಾತ್ರ ವಿವರಿಸಿದಾಗ, ಅದೊಂದು ಚಾಲೆಂಜಿಂಗ್ ಎನಿಸಿತು. ಸ್ಟ್ರಾಂಗ್ ಆಗಿರುವ ನಾಲ್ಕು ಶೇಡ್ ಬರುವ ಪಾತ್ರವದು. ಅನುಭವಿ ನಟ ಮಾಡುವಂತಹ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಮೊದಲು ಆ ಪಾತ್ರವನ್ನು ನನ್ನ ಕೈಯಲ್ಲಿ ಮಾಡೋಕೆ ಆಗುತ್ತಾ ಎಂಬ ಪ್ರಶ್ನೆ ಕಾಡಿದ್ದು ನಿಜ.
ಆದರೆ, ನಿರ್ದೇಶಕರು ಕೊಟ್ಟ ಧೈರ್ಯದಿಂದಾಗಿ ನಾನು ಮಾಡಿದ್ದೇನೆ. ಈಗಿನ ಯೂತ್ಸ್ಗೆ ಲೀಡರ್ ಆಗಿರುವಂತಹ ಪವರ್‌ಫುಲ್ ಪಾತ್ರ ಮಾಡಿದ್ದು ಖುಷಿ ಕೊಟ್ಟಿದೆ. ಚಿತ್ರದಲ್ಲಿ ಡಾ.ರಾಜಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಅಂಬರೀಶ್ ಸೇರಿದಂತೆ ಕನ್ನಡದ ನಟರ ಕಟೌಟ್‌ನ ಬ್ಯಾಕ್‌ಡ್ರಾಪ್‌ನಲ್ಲಿ ಬರುವ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಸಮರ್ಥ್. “ಚಿತ್ರದಲ್ಲಿ ನಾನು ಸ್ವತಃ ಸ್ಟಂಟ್ಸ್ ಮಾಡಿದ್ದೇನೆ.
ರಿಸ್ಕ್ ಇದ್ದರೂ, ಸಹ ಅದನ್ನು ಲೆಕ್ಕಿಸದೆ ಕೆಲಸ ಮಾಡಿದ್ದೇನೆ. ಇನ್ನು, ವಿಶೇಷವೆಂದರೆ, ಚಿತ್ರದ ಒಂದು ದೃಶ್ಯದಲ್ಲಿ ಹನ್ನೆರೆಡು ಪೇಜ್ ಇರುವ, ಎರಡುವರೆ ನಿಮಿಷದ ಡೈಲಾಗ್ ಅನ್ನು ಸಿಂಗಲ್ ಶಾಟ್‌ನಲ್ಲಿ ಹೇಳಿ ಆ ದೃಶ್ಯವನ್ನು ಓಕೆ ಮಾಡಿದ್ದು ಮರೆಯದ ಅನುಭವ. ಆ ದೃಶ್ಯ ಚಿತ್ರದ ವಿಶೇಷ’ ಎನ್ನುವ ಸಮರ್ಥ್, ಚಿತ್ರದಲ್ಲಿ ದೀಪ್ತಿ ತಾಪ್ಸೆ, ರಿಷಿಕಾ ಸಿಂಗ್, ಲೇಖಾಸಿಂಗ್ ನಾಯಕಿಯರಾಗಿ ನಟಿಸಿದ್ದಾರೆ. ಮಂಜುನಾಥ್ ಗೌಡ್ರು ವಿಲನ್ ಆದರೆ, ದಿನೇಶ್ ಮಂಗಳೂರು ಪೋಷಕ ನಟರಾಗಿ ನಟಿಸಿದ್ದಾರೆ.
ದೀಪ್ತಿ ಕಾಪ್ಸೆ ಇಲ್ಲಿ ಯಾರೂ ಇಲ್ಲದ ಅನಾಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಗೊತ್ತು ಗುರಿ ಇಲ್ಲದೇ ಸಿಟಿಗೆ ಬರುವ ಹುಡುಗಿ ಅನುಭವಿಸುವ ಯಾತನೆಗಳನ್ನು ಅವರ ಪಾತ್ರದ ಮೂಲಕ ತೋರಿಸಲಾಗಿದೆಯಂತೆ. ನಿರ್ಮಾಪಕ ಚಂದ್ರಶೇಖರ್ ಅವರಿಗೆ ಒಳ್ಳೆಯ ಸಿನಿಮಾ ನಿರ್ಮಾಣ ಮಾಡಿರುವ ಖುಷಿ ಇದೆ. ಅವರಿಗೆ ಮೊದಲ ಅನುಭವ ಆಗಿದ್ದರೂ, ಸಿನಿಮಾಗೆ ಏನು ಬೇಕು, ಬೇಡ ಎಂಬುದನ್ನೆಲ್ಲಾ ಕೊಡುವ ಮೂಲಕ ಅದ್ಧೂರಿತನದೊಂದಿಗೆ ಒಂದೊಳ್ಳೆಯ ಚಿತ್ರ ಕೊಡುತ್ತಿರುವ ಖುಷಿಯಲ್ಲಿದ್ದಾರೆ ಅವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.