ಇಂದು 66ನೇ ಹುಟ್ಟುಹಬ್ಬ: ಎಂದಿಗೂ ಮಾಸದ ಶಂಕರನಾಗ್
ಶಂಕರ್‌ನಾಗ್ ಜೀವಂತ ಎಂಬುದಕ್ಕೆ ಆಟೋ ಚಾಲಕರ ಪ್ರೀತಿಯ ಅಭಿಮಾನವೇ ಕಣ್ಣೆದುರಿಗಿನ ಸಾಕ್ಷಿ.
Team Udayavani, Nov 9, 2020, 2:40 PM IST
ಶಂಕರ್‌ನಾಗ್… ಕನ್ನಡ ಚಿತ್ರರಂಗ ಕಂಡ ಒಬ್ಬ ಯಶಸ್ವಿ ನಟ, ನಿರ್ದೇಶಕ, ನಿರ್ಮಾಪಕ, ಅದ್ಭುತ ತಂತ್ರಜ್ಞ. ಈ ಹೆಸರಲ್ಲೇ ಎನರ್ಜಿ ತುಂಬಿದೆ. ಕನಸು ಕಾಣುವ ಮನಸುಗಳಿಗೆ ಶಂಕರ್‌ನಾಗ್ ಸ್ಫೂರ್ತಿಯ ಚಿಲುಮೆ. ಶಂಕರ್‌ನಾಗ್ ಅಂದಾಕ್ಷಣ ನೆನಪಾಗೋದೇ “ಆಟೋ’. ಹೌದು, “ಆಟೋರಾಜ’ ಚಿತ್ರದ ಮೂಲಕ ಆಟೋ ಚಾಲಕರ ಆರಾಧ್ಯ ದೈವ ಎನಿಸಿಕೊಂಡರು. ಇಂದಿಗೂ ಶಂಕರ್‌ನಾಗ್ ಜೀವಂತ ಎಂಬುದಕ್ಕೆ ಆಟೋ ಚಾಲಕರ ಪ್ರೀತಿಯ ಅಭಿಮಾನವೇ ಕಣ್ಣೆದುರಿಗಿನ ಸಾಕ್ಷಿ. ಹೌದು, ಶಂಕರ್‌ನಾಗ್ ಚಿತ್ರರಂಗ ಮಾತ್ರವಲ್ಲ, ಎಲ್ಲಾ ವರ್ಗದ ಜನರಿಗೂ ಮೆಚ್ಚಿನ ನಟ.
ಅದೆಲ್ಲಕ್ಕಿಂತಲೂ ಹೆಚ್ಚಾಗಿ ಅವರು ಆಟೋ ಚಾಲಕರು ಹಾಗು ಕ್ಯಾಬ್ ಚಾಲಕರ ಅಚ್ಚುಮೆಚ್ಚಿನ ನಟರಾಗಿ ಅಚ್ಚಳಿಯದೆ ಅವರ ಮನದಲ್ಲಿ ನೆಲೆಸಿದ್ದಾರೆ. ಇಷ್ಟಕ್ಕೂ ಶಂಕರ್‌ನಾಗ್ ಅವರ ಬಗ್ಗೆ ಇಷ್ಟೊಂದು ಪೀಠಿಕೆಗೆ ಕಾರಣ, ನ.9 ರಂದು (ಇಂದು ) ಶಂಕರ್‌ನಾಗ್ ಅವರ ಹುಟ್ಟುಹಬ್ಬ. ಅವರ ಅಪಾರ ಅಭಿಮಾನಿಗಳು ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚರಿಸುತ್ತ ಬಂದಿದ್ದಾರೆ. ಅದರಲ್ಲೂ ಆಟೋಚಾಲಕರ ಪಾಲಿಗೆ ನ.9 ಹಬ್ಬವೇ ಸರಿ.
ಆಟೋ ಚಾಲಕರ ಅಚ್ಚುಮೆಚ್ಚು: ಶಂಕರ್‌ನಾಗ್ ಚಿಕ್ಕವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿ ಮರೆಯಾದವರು. ಅವರಿಲ್ಲದೆ ಮೂರು ದಶಕ ಕಳೆದಿವೆ. ಆದರೆ, ಅವರಿಲ್ಲ ಎಂಬ ಭಾವ ಎಂದಿಗೂ ಬಂದಿಲ್ಲ. ಬರುವುದೂ ಇಲ್ಲ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಯಾವುದೇ ನಗರ, ಪಟ್ಟಣ್ಣ, ಅಷ್ಟೇ ಯಾಕೆ ಗ್ರಾಮೀಣ ಭಾಗದಲ್ಲಿ ಗಮನಿಸಿದರೆ, ಹೆಚ್ಚಾಗಿ ಆಟೋ ಹಾಗು ಕ್ಯಾಬ್ ಚಾಲಕರು ಶಂಕರ್‌ನಾಗ್ ಅವರ ಭಾವಚಿತ್ರದೊಂದಿಗೆ ಅಭಿಮಾನ ಮೆರೆಯುತ್ತಿರುವುದು ಕಾಣಸಿಗುತ್ತೆ. ಬಹುತೇಕ ಆಟೋಗಳಲ್ಲಿ ಶಂಕರ್‌ನಾಗ್ ಅವರ ಭಾವಚಿತ್ರ ಇದ್ದೇ ಇರುತ್ತೆ.
ಅಷ್ಟರಮಟ್ಟಿಗೆ ಆಟೋ ಚಾಲಕರು ಶಂಕರ್‌ನಾಗ್ ಅವರ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಅಷ್ಟಕ್ಕೆಲ್ಲಾ ಕಾರಣ, “ಆಟೋ ರಾಜ’ ಸಿನಿಮಾ. ಹೌದು, 1982 ರಲ್ಲಿ ಬಿಡುಗಡೆಯಾದ “ಆಟೋ ರಾಜ’ ಕನ್ನಡ ಚಿತ್ರರಂಗದಲ್ಲೊಂದು ಬಿರುಗಾಳಿಯನ್ನೇ ಎಬ್ಬಿಸಿದ್ದು ಸುಳ್ಳಲ್ಲ. ಆ ಚಿತ್ರದಲ್ಲಿ ಶಂಕರ್‌ನಾಗ್ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದರು. ಆ ದಿನಗಳಲ್ಲೇ ಅದು ಸೂಪರ್‌ಹಿಟ್ ಸಿನಿಮಾ ಎನಿಸಿಕೊಂಡಿದ್ದಷ್ಟೇ ಅಲ್ಲ, ಅಂಥದ್ದೊಂದು ಸಿನಿಮಾ ಕೊಟ್ಟ ಶಂಕರ್‌ನಾಗ್ ಅವರನ್ನು ಆಟೋ ಚಾಲಕರು ತಮ್ಮ ಹೃದಯದಲ್ಲಿ ಪೂಜಿಸತೊಡಗಿದರು. ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆಯಲ್ಲೇ ರಾತ್ರಿ-ಹಗಲು ದುಡಿಮೆಗೆ ನಿಂತರು.
ಅಂದಿನಿಂದ ಇಂದಿನವರೆಗೂ ಆಟೋ ಚಾಲಕರು, ಕ್ಯಾಬ್ ಡ್ರೈವರ್‌ಗಳ ಪಾಲಿಗೆ ಶಂಕರ್‌ನಾಗ್ ರಿಯಲ್ ಹೀರೋ ಆಗಿಯೇ ಕಂಡರು. ಹಾಗಾಗಿ, ಯಾವುದೇ ಆಟೋ, ಕಾರು ಇನ್ನಿತರೆ ಮಿನಿ ಲಾರಿಗಳಿರಲಿ, ಅದರ ಗ್ಲಾಸ್ ಮುಂದೆ ಹಾಗೂ ಹಿಂಬದಿಯಲ್ಲಿ ಶಂಕರ್‌ನಾಗ್ ಅವರ ಭಾವಚಿತ್ರ ರಾರಾಜಿಸುತ್ತಿರುತ್ತೆ. ಅದೆಷ್ಟೋ ಆಟೋಗಳು ಕನ್ನಡ ಬಾವುಟದ ಜೊತೆಗೆ ಶಂಕರ್‌ನಾಗ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಅಭಿಮಾನದಲ್ಲಿ ಮಿಂದೇಳುತ್ತಿವೆ. ಇನ್ನು, ಅವರ ಅಭಿನಯದ ಚಿತ್ರಗಳ ಹೆಸರುಗಳು ಕೂಡ ಇಡೀ ಆಟೋ ತುಂಬ ರಾರಾಜಿಸುತ್ತವೆ.
ಅದೆಷ್ಟೋ ಆಟೋ ಚಾಲಕರು, ಕಾರು ಚಾಲಕರು ಪ್ರೀತಿಯಿಂದಲೇ ಶಂಕರ್‌ನಾಗ್ ಅವರ ಭಾವಚಿತ್ರ ಹಾಗು ಹೆಸರನ್ನು ತಮ್ಮ ಎದೆಯ ಮೇಲೆ, ಕೈಗಳ ಮೇಲೆ ಹಚ್ಚೆಹಾಕಿಸಿಕೊಂಡು ಪ್ರೀತಿಯ ಅಭಿಮಾನ ಮೆರೆಯುತ್ತಿದ್ದಾರೆ. ಗಲ್ಲಿ ಗಲ್ಲಿಯಲ್ಲೂ ಇರುವ ಆಟೋ ಚಾಲಕರ ಸಂಘ, “ಶಂಕ್ರಣ್ಣ ಆಟೋ ನಿಲ್ದಾಣ’, “ಶಂಕರ್‌ನಾಗ್ ಆಟೋ ಸ್ಟಾಂಡ್’, “ಆಟೋರಾಜನ ನಿಲ್ದಾಣ’ ಹೀಗೆ ನಾನಾ ರೀತಿಯಲ್ಲಿ ಪ್ರೀತಿಯಿಂದಲೇ ಬಿರುದುಗಳನ್ನು ನೀಡಿ ತಮ್ಮ ಆಟೋ ನಿಲ್ದಾಣಕ್ಕೆ ಹೆಸರಿಟ್ಟಿದ್ದಾರೆ. ಅದರಲ್ಲೂ ಕನ್ನಡ ರಾಜ್ಯೋತ್ಸವ ಬಂತೆಂದರೆ, ನಾಡ ಧ್ವಜದ ಜೊತೆಯಲ್ಲಿ ಶಂಕರ್‌ನಾಗ್ ಅವರ ಭಾವಚಿತ್ರವೂ ವಿಜೃಂಭಿಸುತ್ತಿರುತ್ತದೆ. ಇದು ಎಲ್ಲೆಡೆ ಕಾಣುವ ಆಟೋ ಚಾಲಕರ ಪ್ರೀತಿ.
ಸಿನಿಮಂದಿಯ ಪ್ರೀತಿಯ ಶಂಕ್ರಣ್ಣ: ಶಂಕರ್‌ನಾಗ್ ಅವರನ್ನು ಪ್ರೀತಿಸುವ ಮನಸ್ಸುಗಳಿಗೆ ಲೆಕ್ಕವೇ ಇಲ್ಲ. ಒಬ್ಬ ನಟನಿಂದ ಹಿಡಿದು, ತಂತ್ರಜ್ಞರವರೆಗೂ, ನಿರ್ದೇಶಕನಾಗುವ ಕನಸು ಕಾಣುವ ಯುವ ಪ್ರತಿಭೆಗಳು ಶಂಕರ್‌ನಾಗ್ ಅವರನ್ನು ನೆನಪಿಸಿಕೊಳ್ಳದ ದಿನಗಳೇ ಇಲ್ಲ. ಕಡಿಮೆ ಅವಧಿಯಲ್ಲೇ ಚಿತ್ರರಂಗದ ಗಮನ ಸೆಳೆದ ಶಂಕರ್ ನಾಗ್, ಸಿನಿಮಾ ಮಂದಿಯ ಪ್ರೀತಿಯ ನಟರಾದರು. ಅವರ ಹೆಸರಲ್ಲೇ ಅನೇಕ ಚಿತ್ರಗಳು ಬಂದವು. ಅದೆಷ್ಟೋ ಹೀರೋಗಳು ಸಹ ಶಂಕರ್‌ನಾಗ್ ನೆನಪಿಸುವ ಚಿತ್ರ ಕೊಟ್ಟರು. “ಆಟೋರಾಜ’ ಚಿತ್ರದ ಹೆಸರನ್ನೇ ಇಟ್ಟುಕೊಂಡು ಬಂದ ಚಿತ್ರದಲ್ಲಿ ನಟ ಗಣೇಶ್ ನಟಿಸಿದರು.
ಆ ಚಿತ್ರದಲ್ಲಿ “ರಾಜಾ ಆಟೋರಾಜ ರಾಜ ರಾಜ ಆಟೋರಾಜ ಶಂಕ್ರಣ್ಣ ಆಟೋರಾಜ….’ ಎಂಬ ಹಾಡನ್ನು ಬಳಸಿಕೊಂಡರು. ದರ್ಶನ್ ಕೂಡ “ಸಾರಥಿ’ ಚಿತ್ರದಲ್ಲಿ ಆಟೋ ಚಾಲಕರಾಗಿ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ಶಂಕರ್‌ನಾಗ್ ಅವರನ್ನೂ “ಕೈ ಮುಗಿದು ಏರು, ಇದು ಕನ್ನಡದ ತೇರು’ ಹಾಡಲ್ಲಿ ಕಾಣಿಸುವಂತೆ ಮಾಡಿದರು. ಉಪೇಂದ್ರ ಕೂಡ “ಆಟೋ ಶಂಕರ್’ ಹೆಸರಿನ ಚಿತ್ರ ಮಾಡಿ ನೆನಪಿಸಿಕೊಂಡರು. ಅವರಷ್ಟೇ ಅಲ್ಲ, ಅದೆಷ್ಟೋ ಹೊಸ ನಿರ್ದೇಶಕರು, ಯುವ ನಟರುಗಳು ಕೂಡ ಶಂಕರ್‌ನಾಗ್ ಅವರನ್ನು ನೆನಪಿಸುವ ಚಿತ್ರ ಕೊಟ್ಟರು. “ಫ್ಯಾನ್’ ಎಂಬ ಚಿತ್ರದಲ್ಲಿ ಶಂಕರ್‌ನಾಗ್ ಅಭಿಮಾನಿ ಪಾತ್ರದಲ್ಲಿ ಯುವ ನಟ ಕಾಣಿಸಿಕೊಂಡರು.
ಶಂಕರ್‌ನಾಗ್ ಅಭಿನಯದ ಸೂಪರ್‌ಹಿಟ್ ಚಿತ್ರಗಳಾದ “ಆ್ಯಕ್ಸಿಡೆಂಟ್’ ಹೆಸರಿನ ಚಿತ್ರದಲ್ಲಿ ರಮೇಶ್ ಅರವಿಂದ್ ನಟಿಸಿದರೆ, “ಮಿಂಚಿನ ಓಟ’ ಚಿತ್ರದಲ್ಲಿ ವಿಜಯ ರಾಘವೇಂದ್ರ, ಶ್ರೀಮುರಳಿ ಸಹೋದರರು ಕಾಣಿಸಿಕೊಂಡರು. ಎವರ್‌ಗ್ರೀನ್ ಸಿನಿಮಾ ಎನಿಸಿಕೊಂಡ “ಗೀತಾ’ ಹೆಸರಿನ ಚಿತ್ರದಲ್ಲಿ ಇತ್ತೀಚೆಗೆ ಗಣೇಶ್ ಕೂಡ ನಟಿಸಿದ್ದರು. ಇನ್ನು, ಅವರ “ಮಾಲ್ಗುಡಿ ಡೇಸ್’ ಅದ್ಭುತ ಯಶಸ್ಸು ಕಂಡ ಧಾರಾವಾಹಿ. ಅದೇ ಹೆಸರಿನ ಚಿತ್ರವೀಗ ರೆಡಿಯಾಗುತ್ತಿದೆ ಎಂಬುದು ಇನ್ನೊಂದು ವಿಶೇಷ. ಅದೇನ ಇರಲಿ, ಒಂದಲ್ಲ, ಒಂದು ಚಿತ್ರಗಳಲ್ಲಿ ಶಂಕರ್‌ನಾಗ್ ಅವರ ನೆನಪಿಸಿಕೊಳ್ಳುತ್ತಿರುವ ಚಿತ್ರರಂಗ ಮಾತ್ರವಲ್ಲ, ಅದಕ್ಕಿಂತ ಹೆಚ್ಚು ಪ್ರೀತಿ, ಅಭಿಮಾನ ಆಟೋ ಚಾಲಕರಲ್ಲಿದೆ ಎಂಬುದು ವಿಶೇಷ. ಕಣ್ಣಿಗೆ ಕಾಣುವ ಒಂದಷ್ಟು ಆಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ,
ಅಲ್ಲಿ ಶಂಕರ್‌ನಾಗ್ ಭಾವಚಿತ್ರ, ಅವರ ಹೆಸರು ಕಾಣುವ ಆಟೋ ಸಿಕ್ಕೇ ಸಿಗುತ್ತೆ. ಅಷ್ಟರಮಟ್ಟಿಗೆ ಶಂಕರ್‌ನಾಗ್ ಆಟೋ ಚಾಲಕರ ಹೃದಯದಲ್ಲಿ ನೆಲೆಸಿದ್ದಾರೆ. ಹಾಗಾಗಿ, ಪ್ರತಿ ವರ್ಷವೂ ಶಂಕರ್‌ನಾಗ್ ಅವರ ಬರ್ತ್‌ಡೇ ಬಂದರೆ ಸಾಕು, ತಮ್ಮ ಆಟೋ ನಿಲ್ದಾಣದಲ್ಲಿ ಶಂಕರ್‌ನಾಗ್ ಅವರ ಭಾವಚಿತ್ರಕ್ಕೆ ಪೂಜಿಸುವ ಅಭಿಮಾನಿಗಳು, ಈಗಾಗಲೇ ಎಷ್ಟೋ ಕಡೆ, ಶಂಕರ್‌ನಾಗ್ ಅವರ ಪುತ್ಥಳಿಯನ್ನೂ ತಮ್ಮ ಸ್ವಂತ ಖರ್ಚಲ್ಲೇ ನಿರ್ಮಿಸಿ ಪ್ರತಿಷ್ಠಾಪಿಸಿರುವ ಉದಾಹರಣೆಗಳು ಸಾಕಷ್ಟಿವೆ. ಇಂದು ಶಂಕರ್‌ನಾಗ್ ಅವರ 66ನೇ ಹುಟ್ಟುಹಬ್ಬ. ಅಷ್ಟೇ ಅಭಿಮಾನದಿಂದ ಆಟೋ ಚಾಲಕರು ಆಚರಣೆಗೆ ಮುಂದಾಗಿದ್ದಾರೆ. ಆಟೋ ಅಂದ್ರೆ, ಶಂಕರ್‌ನಾಗ್ ನೆನಪಾಗುತ್ತಾರೆ ಅಂದರೆ, ಅವರು ಆಟೋ ಚಾಲಕರ ಮೇಲಿಟ್ಟಿದ್ದ ಅತಿಯಾದ ಪ್ರೀತಿ ನಂಬಿಕೆ ಇದಕ್ಕೆ ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.