ನಮ್ಮ ನಡುವೆ ಈಗಲೂ ಮಾತಿಲ್ಲ: ಪ್ರಥಮ್
Team Udayavani, Jun 11, 2017, 11:35 AM IST
“ಬಿಗ್ ಬಾಸ್’ ಮನೆಯಲ್ಲಿ ಸಂಜನಾ ಅವರ ಹಿಂದಿಂದೆ ಓಡಾಡಿ ಲವ್ ಮಾಡು ಅಂತ ಪೀಡಿಸಿದ್ದ ಪ್ರಥಮ್, ಈಗಲೂ ಸಂಜನಾ ಅವರನ್ನು ಅಷ್ಟೇ ಪ್ರೀತಿಸುತ್ತಾರಾ?
ಪ್ರೀತಿಸುವುದು ಬಿಡಿ, ಮಾತಾಡಿಯೇ ಬಹಳಷ್ಟು ದಿನ ಆಗಿದೆ ಎನ್ನುತ್ತಾರೆ ಪ್ರಥಮ್. ಹಾಗಾದರೆ, ಸಂಜನಾ ಮತ್ತು ಪ್ರಥಮ್ ನಡುವೆ ಏನಾದರೂ ಕಿರಕ್ ಆಗಿದೆಯಾ ಎಂಬ ಪ್ರಶ್ನೆ ಬರಬಹುದು. ಈ ಮಾತಿಗೆ ಸ್ವತಃ ಪ್ರಥಮ್ ಹಾಗೊಂದು ಜೋರು ನಗು ಹೊರಹಾಕುತ್ತಾರೆ.
ಹಾಗಾದರೆ, ಸಂಜನಾಗೆ ಐ ಲವ್ ಯೂ ಅಂತ ಹೇಳಿದ್ದು ಸುಳ್ಳಾ? ಇದಕ್ಕೆ ಉತ್ತರಿಸುವ ಪ್ರಥಮ್, “ಬಿಗ್ ಬಾಸ್’ ಮನೆಯಲ್ಲಿ ಪ್ರಥಮ್ ಬರೀ ಕಿರುಚಾಡುತ್ತಾನೆ, ಮಾತು ಮಾತಿಗೂ ಖಂಡಿಸ್ತೀನಿ ಅಂತ ಬೊಬ್ಬೆ ಹಾಕುತ್ತಾನೆ, ಏರು ದನಿಯಲ್ಲೇ ಮಾತು ಹೊರಹಾಕುತ್ತಾನೆ, ಪ್ರಥಮ್‌ಗೆ ಇದಷ್ಟೇನಾ ಗೊತ್ತಿರೋದು, ಅದು ಬಿಟ್ಟರೆ ಲವ್ ಮಾಡೋಕೆ ಬರಲ್ವಾ? ಎಂಬ ಮಾತು ಕೇಳಿಬಂತು. ಹಾಗೆಯೇ, ಅಂಥದ್ದೊಂದು ಟಾಸ್ಕ್ ಕೂಡ ಇತ್ತು.
ಹಾಗಾಗಿಯೇ ನಾನು ಲವ್ ಮಾಡೋ ಟಾಸ್ಕ್ನಲ್ಲಿ ಸಂಜನಾಳ ಹಿಂದಿಂದೆ ಅಲೆದಾಡಿ, ಲವ್ ಮಾಡು ಅಂತ ಪೀಡಿಸಿದ್ದು. ಅದು ಬಿಟ್ಟರೆ ಬೇರೇನೂ ಇಲ್ಲ. ಅದೊಂದು ಟಾಸ್ಕ್ ಅಷ್ಟೇ. ಆದರೆ, ಅದು ಹೊರಬಂದ ಮೇಲೆ ಇಬ್ಬರ ನಡುವೆ ದೊಡ್ಡ ಗಾಸಿಪ್ ಹರಿದಾಡಿತು. ಅಸಲಿಗೆ ಯಾರಿಗೂ ವಿಷಯ ಗೊತ್ತಿಲ್ಲ. ಒಂದು ಸತ್ಯ ಹೇಳ್ತೀನಿ ಕೇಳಿ’ ಎನ್ನುವ ಪ್ರಥಮ್, ಒಂದು ನಿಜವನ್ನು ಬಾಯಿಬಿಟ್ಟರು. “ಈಗಲೂ ನಾನು ಮತ್ತು ಸಂಜನಾ ಮಾತಾಡಿಸುವುದಿಲ್ಲ.
ನಮ್ಮಿಬ್ಬರ ನಡುವೆ ಯಾವುದೇ ಮಾತಿಲ್ಲ . ನಾನಷ್ಟೇ ಅಲ್ಲ, ಭುವನ್ ಮತ್ತು ಸಂಜನಾ ಕೂಡ ಮಾತಾಡಿಸುವುದಿಲ್ಲ. ಆದರೂ, “ಸಂಜು ಮತ್ತು ನಾನು’ ಷೋ ಮಾಡುತ್ತಿದ್ದೇವೆ. ಅದಕ್ಕೆ ಕಾರಣ, “ಕಲರ್’. ಆ ವಾಹಿನಿ ನನ್ನಂತಹ ಸಾಮಾನ್ಯ ಹುಡುಗನನ್ನು ಗುರುತಿಸಿಕೊಳ್ಳುವಂತೆ ಮಾಡಿದೆ. ಮೊದಲು ಸಂಜನಾ, ಭುವನ್ ಮತ್ತು ನೀನು ಒಂದು ಷೋ ಮಾಡಬೇಕು ಅಂದಾಗ, ನಾನು ಒಪ್ಪಲಿಲ್ಲ. ನಮ್ಮ ನಡುವೆ ಮಾತೇ ಇಲ್ಲದ ಮೇಲೆ ಜತೆಯಲ್ಲಿ ನಟಿಸುವುದರೆ ಏನರ್ಥ ಇರುತ್ತೆ ಹೇಳಿ?
ಕೊನೆಗೆ ಪರಮೇಶ್ವರ್ ಗುಂಡ್ಕಲ್ ಹೇಳಿದ ಮೇಲೆ ಒಪ್ಪಿಕೊಂಡೆ. ಈಶ್ವರನ ಮೇಲಾಣೆ ಮೂವರು ಒಬ್ಬೊರನೊಬ್ಬರು ಮಾತಾಡಿಸಲ್ಲ. ಆದರೆ, ನಾನು ಭುವನ್ ಚೆನ್ನಾಗಿದ್ದೇವೆ. ಎಷ್ಟೋ ಜನ ಕೇಳ್ತಾರೆ, ನಿಮ್ಮ ಚಿತ್ರದಲ್ಲಿ ಸಂಜನಾ ನಾಯಕಿಯಾದರೆ ಚೆನ್ನಾಗಿರುತ್ತೆ ಅಂತ. “ಬಿಗ್ ಬಾಸ್’ ಮನೆಯಲ್ಲಿ ಆಗಿದ್ದೇ ಸಾಕು, ಹೊರಬಂದಾಗ ನಡೆದಿದ್ದೇ ಸಾಕು. ನಾನು ದುರಂಹಕಾರದಲ್ಲಿ ದುರ್ಯೋಧನನಿಗಿಂತ ಜಾಸ್ತಿ. ಹಾಗಾಗಿ ನಾನು ಸಂಜನಾಳನ್ನು ಮಾತನಾಡಿಸಲ್ಲ.
“ಸಂಜು ಮತ್ತು ನಾನು’ ಶೂಟಿಂಗ್ ವೇಳೆ ಜತೆಗೆ ಕೂತರೂ ಮಾತಾಡಿಸಲ್ಲ. ನನ್ನ ಪಾಡಿಗೆ ನಾನಿದ್ದರೆ, ಅವರ ಪಾಡಿಗೆ ಅವರಿರುತ್ತಾರೆ. ಕ್ಯಾಮೆರಾ ಮುಂದೆ ಮಾತ್ರ ನಟನೆ ಮಾಡ್ತೀವಿ. ಸಂಜನಾ ಒಳ್ಳೇ ಹುಡುಗಿ, ಆಕೆಗೆ ಒಳ್ಳೇದಾಗ್ಲಿ. ಹಾಗಂತ ಇಬ್ಬರೂ ಮಾತಾಡ್ತೀವಿ ಅನ್ನೋದೆಲ್ಲಾ ಸುಳ್ಳು. ಮನರಂಜನೆಗೆ ಏನು ಬೇಕೋ ಅದನ್ನು ಕ್ಯಾಮೆರಾ ಮುಂದೆ ಮಾಡ್ತೀನಷ್ಟೇ. ಷೋಗಾಗಿ ಮಾತ್ರ ನಾವು ಕ್ಯಾಮೆರಾ ಮುಂದೆ ನಿಂತು ನಟಿಸ್ತೀವಿ. ಅದು ಬಿಟ್ಟರೆ ಬೇರೇನೂ ಇಲ್ಲ’ ಎನ್ನುತ್ತಾರೆ ಪ್ರಥಮ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.