ಇದು ನನ್ನ ಚಿತ್ರವಲ್ಲ, ಒಳ್ಳೇ ಚಿತ್ರದಲ್ಲಿ ನಾನಿದ್ದೇನೆ
Team Udayavani, Aug 16, 2018, 11:56 AM IST
ರಾಘವೇಂದ್ರ ರಾಜಕುಮಾರ್ ಅಭಿನಯದ “ಅಮ್ಮನ ಮನೆ’ ಚಿತ್ರಕ್ಕೆ ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿತು. ಶಿವರಾಜಕುಮಾರ್, ಪುನೀತ್‌ರಾಜಕುಮಾರ್ ಆಗಮಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಹೇಳಿಕೊಂಡ ರಾಘವೇಂದ್ರ ರಾಜಕುಮಾರ್, “ನಾನು 15 ವರ್ಷಗಳ ಬಳಿಕ ಬರುತ್ತಿದ್ದೇನೆ ನಿಜ. ಹಾಗಂತ, ಇದು ನನ್ನ ಸಿನಿಮಾವಲ್ಲ. ಒಳ್ಳೇ ಕಥೆಯಲ್ಲಿ ನಾನಿದ್ದೇನೆ.
ನಿರ್ದೇಶಕ ನಿಖಿಲ್ ಮಂಜು ಒಳ್ಳೆಯ ಕಥೆ ತಂದರು. ಇಷ್ಟವಾಯ್ತು ಮಾಡುತ್ತಿದ್ದೇನೆ. ಮೊದಲ ಚಿತ್ರದ ವೇಳೆ ಅಪ್ಪ, ಅಮ್ಮ ಇದ್ದರು. ಅವರ ದೊಡ್ಡ ಸಹಕಾರವಿತ್ತು. ಈಗ ಅವರಿಲ್ಲ. ಅವರನ್ನು ಈ ತಂಡದಲ್ಲಿ ನೋಡುತ್ತಿದ್ದೇನೆ. ಎಲ್ಲರಿಗೂ ಒಂದು ಪ್ರಶ್ನೆ ಕಾಡುತ್ತೆ. ರಾಘಣ್ಣನಿಗೆ ಅನಾರೋಗ್ಯವಿದೆ. ಹೇಗೆ ನಟಿಸುತ್ತಾರೆ ಎಂಬುದು. ನಿರ್ದೇಶಕರು ಕಥೆ ಹಿಡಿದು ಬಂದಾಗ, ನಾನೂ ಈ ಪ್ರಶ್ನೆಯನ್ನೇ ಮುಂದಿಟ್ಟೆ. ಆಗ, ನಿರ್ದೇಶಕರು ಹೇಳಿದ್ದೇನು ಗೊತ್ತಾ?
“ನಮಗೆ “ನಂಜುಂಡಿ ಕಲ್ಯಾಣ’, “ಗಜಪತಿ ಗರ್ವಭಂಗ’ ಚಿತ್ರದ ರಾಘಣ್ಣ ಬೇಡ. ನಾವು ನೋಡಿರುವ ರಾಘಣ್ಣ ಬೇಕು. ಕಳೆದ 15 ವರ್ಷಗಳಿಂದ ಜವಾಬ್ದಾರಿ ಹೊತ್ತು ಫ್ಯಾಮಿಲಿಯನ್ನು ತೂಗಿಸಿಕೊಂಡು ಸಹೋದರನ ಕೆರಿಯರ್ ಮತ್ತು ಮಕ್ಕಳ ಭವಿಷ್ಯ ರೂಪಿಸಿದ ಪರಿ ಇಷ್ಟವಾಯ್ತು. ಅನಾರೋಗ್ಯದಲ್ಲೂ ಬ್ಯಾಲೆನ್ಸ್ ಮಾಡುತ್ತಿರುವ ರಾಘಣ್ಣ ಬೇಕು. ನೀವೇ ಈ ಪಾತ್ರಕ್ಕೆ ಸರಿ ಅಂತ’ ಹೇಳಿಕೊಂಡರು. ಅವರ ಸ್ಕ್ರಿಪ್ಟ್ನಲ್ಲಿ ನನ್ನ ತಾಯಿ ಕಂಡೆ.
ಅನಾರೋಗ್ಯದಲ್ಲಿದ್ದಾಗ, ನನ್ನ ಹೆಂಡ್ತಿ ಡಾಕ್ಟರ್ ಬಳಿ, ಅವರು ಆ್ಯಕ್ಟ್ ಮಾಡಬಹುದಾ ಅಂತ ಹೇಳುವುದನ್ನು ಕೇಳಿಸಿಕೊಂಡೆ. ಇವತ್ತು ಅವಕಾಶ ಬಂದಿದೆ. ಈ ಪಾತ್ರಕ್ಕೆ ಯಾವ ತಯಾರಿ ಇಲ್ಲ. ಖಾಲಿ ಹಾಳೆ ತರ ಹೋಗ್ತಿನಿ. ನಿರ್ದೇಶಕರು ಬರೆದಂಗೆ ಬರೆಸಿಕೊಳ್ತೀನಿ. ನಾನು ಸಿನಿಮಾದಲ್ಲಿ ಇದೀನಿ ಅನ್ನೋದು ಬಿಟ್ಟರೆ, ಇದು ರಾಘವೇಂದ್ರ ರಾಜ್‌ಕುಮಾರ್ ಸಿನಿಮಾ ಅಲ್ಲ. ನಿರ್ದೇಶಕರು ಹೇಳಿದ್ದನ್ನು ಒಪ್ಪಿಸೋದಷ್ಟೇ ನನ್ನ ಕೆಲಸ.
ಜನರನ್ನು ಒಪ್ಪಿಸುವ ಕೆಲಸ ನಿರ್ದೇಶಕರು ಮಾಡುತ್ತಾರೆ. ನೋಡುಗರನ್ನು ತೃಪ್ತಿ ಪಡಿಸುತ್ತಾರೆ ಎಂಬ ನಂಬಿಕೆ ಇದೆ. ಈ ಚಿತ್ರ ಹೇಗೆ ಬರುತ್ತೋ ಗೊತ್ತಿಲ್ಲ. ಉತ್ಸಾಹಿ ತಂಡವಿದೆ. ಈ ರೀತಿಯ ಚಿತ್ರಗಳು ಜನರಿಗೆ ತಲುಪಬೇಕೆಂಬ ಆಸೆ ನನ್ನದು’ ಎನ್ನುತ್ತಾರೆ ಅವರು. ನನ್ನ ಎರಡನೇ ಇನ್ನಿಂಗ್ಸ್ ಇದು. ಒಳ್ಳೆಯ ಕಥೆಯೊಂದಿಗೆ ಬರುತ್ತಿದ್ದೇನೆ. ಹಿಂದೆ ಒಮ್ಮೆ ನನ್ನ ಬಳಿ ಅಮ್ಮ ಬಂದು “ನಾನೇ ನಿನ್ನ ಅನ್ಯಾಯವಾಗಿ ಹಾಳು ಮಾಡಿಬಿಟ್ಟೆ.
ನಿನ್ನ ಮೇಲೆ ಫ್ಯಾಮಿಲಿ ಜವಾಬ್ದಾರಿ ಕೊಟ್ಟೆ. ನೀನಿನ್ನು ಚಿತ್ರಗಳನ್ನು ಮಾಡಬೇಕಿತ್ತು’ ಅಂದಿದ್ದರು. ಆಗ ನಾನೇ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಮುಂದೆ ಮಾಡೋಣ ಅಂದಿದ್ದೆ. ಆಗಲೇ ಬಂದಿದ್ದ ಕಥೆ ಇದು. ಆಮೇಲೆ ಅನಾರೋಗ್ಯ ಕೈಕೊಟ್ಟಿತ್ತು. ನಿರ್ದೇಶಕರನ್ನು ಕರೆದು, ನಿಮಗೆ ಯಾರು ಸರಿಹೊಂದುತ್ತಾರೋ, ಅವರನ್ನು ಹಾಕಿ ಸಿನಿಮಾ ಮಾಡಿ ಅಂದಿದ್ದೆ. ಅವರು ನನಗಾಗಿ ಒಂದು ವರ್ಷ ಕಾದು. ಈ ಚಿತ್ರ ಮಾಡುತ್ತಿದ್ದಾರೆ.
ಆ ಮೂಲಕ ಬಣ್ಣ ಹಚ್ಚುತ್ತಿದ್ದೇನೆ. ಈಗಾಗಲೇ ಚಿತ್ರದ ಶೀರ್ಷಿಕೆ ರೀಚ್ ಆಗಿದೆ. ನನಗೆ ವರ್ಕ್‌ಶಾಪ್ ಬೇಕಿದೆ. ಪಾತ್ರದಲ್ಲಿ ಹೇಗೆ ತೊಡಗಿಕೊಳ್ಳಬೇಕೆಂಬ ಕುರಿತು ಚರ್ಚೆ ನಡೆಸಬೇಕಿದೆ. ನಾನೀಗ ಹಳೆಯ ರಾಘಣ್ಣನನ್ನು ತೆಗೆದುಹಾಕಿ ಹೊಸದಾಗಿ ಕಾಣಿಸಿಕೊಳ್ಳಲು ಬಯಸುತ್ತೇನೆ ಎನ್ನುವ ಅವರಿಲ್ಲಿ ದೈಹಿಕ ಶಿಕ್ಷಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ನಿಖಿಲ್, “ಇದೊಂದು ತಾಯಿ ಮಗನ ಕಥೆ. ತಾಯಿ ಮಗನನ್ನು ಒಬ್ಬಂಟಿಯಾಗಿ ಬೆಳೆಸುತ್ತಾಳೆ.
ಮಗನಿಗೂ ತಾಯಿ ಅಂದರೆ ದೈವ. ಕ್ರಮೇಣ ಮಗನಿಗೂ ಮದುವೆಯಾಗಿ, ಮಕ್ಕಳಾಗಿ ಅವನದೇ ಸಂಸಾರ ಆಗುತ್ತೆ. ಆ ಸಂಸಾರಕ್ಕೆ ಅವನ ತಾಯಿ ಬೇಡ. ಆದರೆ, ಅವನಿಗೆ ತಾಯಿ ಬಿಡಲು ಇಷ್ಟವಿಲ್ಲ. ಹೇಗೆ ಎಲ್ಲವನ್ನು ಬ್ಯಾಲೆನ್ಸ್ ಮಾಡಿ ಒಬ್ಬ ಆಮೋಘ ನಾಯಕನಾಗಿ ಹೊರಹೊಮ್ಮುತ್ತಾನೆ ಎಂಬುದು ಕಥೆ ಚಿತ್ರದ ಎಳೆ’ ಎನ್ನುತ್ತಾರೆ ನಿಖಿಲ್ ಮಂಜು. ಚಿತ್ರಕ್ಕೆ ಕುಮಾರ್ ನಿರ್ಮಾಪಕರು. ಬಹುತೇಕ ಬೆಂಗಳೂರಲ್ಲೇ ಒಂದು ತಿಂಗಳು ಚಿತ್ರೀಕರಣ. ಸೆಪ್ಟೆಂಬರ್ ಮೊದಲ ವಾರದಿಂದ ಚಿತ್ರೀಕರಣ ಶುರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.