ಆ ನಾಲ್ವರು ಸೋಲಬೇಕು; ಯತೀಂದ್ರ ಗೆಲ್ಲಬೇಕು
Team Udayavani, Jan 31, 2018, 10:45 AM IST
ಎಲ್ಲಾ ಅಂದುಕೊಂಡಂತೆ ಆಗಿಬಿಟ್ಟರೆ, ಇನ್ನೊಂದೆರೆಡು ದಿನಗಳಲ್ಲಿ “ಬಿಗ್ ಬಾಸ್’ ಪ್ರಥಮ್ ದೆಹಲಿಯ ಫ್ಲೈಟು ಹತ್ತಲಿದ್ದಾರೆ. ಅಲ್ಲಿ ಯಾರೋ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದಾರಂತೆ. ಅಷ್ಟೇ ಅಲ್ಲ, ಪ್ರಥಮ್ ಬಗ್ಗೆ ಮತ್ತು ಅವರು ಮಾಡುತ್ತಿರುವ ಒಂದಿಷ್ಟು ಕೆಲಸಗಳ ಬಗ್ಗೆಯೂ ಅಮಿತ್ ಶಾ ಅವರಿಗೆ ಹೇಳಿದ್ದಾರಂತೆ.
ಪ್ರಥಮ್ ಅವರನ್ನು ಭೇಟಿ ಮಾಡುವ ಆಸಕ್ತಿ ತೋರಿಸಿರುವ ಅಮಿತ್ ಶಾ, ಯಾವುದೇ ಕ್ಷಣದಲ್ಲೂ ಪ್ರಥಮ್‌ರನ್ನು ಹೇಳಿ ಕಳುಹಿಸಬಹುದು. ಹಾಗೇನಾದರೂ ಆದರೆ, ಪ್ರಥಮ್ ದೆಹಲಿಗೆ ಹಾರಬಹುದು, ಅಲ್ಲಿ ಅಧಿಕೃತವಾಗಿ ಪಕ್ಷ ಸೇರುವ ಮಾತಾಗಬಹುದು ಮತ್ತು ಇನ್ನೂ ಅದೃಷ್ಟವಿದ್ದರೆ ಚಾಮರಾಜನಗರ ಅಥವಾ ಚಾಮರಾಜಪೇಟೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ಸಿಕ್ಕರೂ ಸಿಗಬಹುದು.
ಕೋತ್ನನ್ಮಗ ಇರಬಹುದು; ಕಳ್ನನ್ಮಗ ಅಲ್ಲ: “ನಿಜ ಹೇಳಬೇಕೆಂದರೆ, ನನಗೆ ಸಿನಿಮಾಗಿಂತ ರಾಜಕೀಯದಲ್ಲೇ ಆಸಕ್ತಿ ಜಾಸ್ತಿ. ನಾನು ಕೋತ್ನನ್ಮಗ ಇರಬಹುದು; ಕಳ್ನನ್ಮಗ ಅಲ್ಲ’ ಅಲ್ಲ ಎನ್ನುತ್ತಾರೆ ಪ್ರಥಮ್. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಿದೆ. ಅದೇ ಕಾರಣಕ್ಕೆ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿ ರಾಜಕೀಯ ಮಾಡುವ ಉತ್ಸಾಹದಲ್ಲಿದ್ದಾರೆ.
ಅವಕಾಶ ಸಿಕ್ಕರೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅವಕಾಶ ಸಿಗಲಿಲ್ಲ ಎಂದರೂ ರಾಜಕೀಯ ಮುಂದುವರೆಸಬಹುದು. ಅದ್ಹೇಗೆ ಎಂದರೆ, ನಾಲ್ವರು ಪ್ರಮುಖ ರಾಜಕಾರಣಿಗಳನ್ನು ಸೋಲಿಸುವುದಕ್ಕೆ, ಅವರ ವಿರುದ್ಧ ಸ್ಪರ್ಧಿಸುತ್ತಿರುವವರಿಗೆ ಪ್ರಚಾರ ಮಾಡುವುದು. ಇಷ್ಟಕ್ಕೂ ಆ ನಾಲ್ವರು ರಾಜಕಾರಣಿಗಳಾರು ಎಂದರೆ ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ, ರಮಾನಾಥ ರೈ ಮತ್ತು ಜಮೀರ್ ಅಹ್ಮದ್ ಖಾನ್ ಎಂಬ ಉತ್ತರ ಅವರಿಂದ ಬರುತ್ತದೆ.
ಆ ನಾಲ್ವರು ಸೋಲಬೇಕು: “ಆ ನಾಲ್ವರು ಸೋಲಬೇಕು ಎಂಬುದು ನನ್ನಾಸೆ. ಹಾಗಾಗಿ ಅವರ ವಿರುದ್ಧ ನಿಲ್ಲುವವರ ಪ್ರಚಾರ ಮಾಡುತ್ತೇನೆ. ಮೊದಲಿಗೆ ಅಖಂಡ ಹಿಂದೂ ಧರ್ಮವನ್ನು ಒಡೆಯುವುದಕ್ಕೆ ಹೊರಟಿರುವ ಎಂ.ಬಿ. ಪಾಟೀಲ್ ಮತ್ತು ವಿನಯ್ ಕುಲಕರ್ಣಿ. ಎರಡನೆಯದಾಗಿ, ಕರಾವಳಿ ಭಾಗದಲ್ಲಿ ಕೋಮುಗಲಭೆಯನ್ನು ತಡೆಯುವುದಕ್ಕೆ ವಿಫಲರಾಗಿರುವ ಸಚಿವ ರಮಾನಾಥ ರೈ ಮತ್ತು ಮೂರನೆಯದಾಗಿ ದೇವೇಗೌಡರ ವಿರುದ್ಧ ಕೆಟ್ಟದಾಗಿ ಮಾತನಾಡುತ್ತಿರುವ ಜಮೀರ್ ಅಹ್ಮದ್ ಖಾನ್ ಅವರು ಸೋಲಬೇಕು.
ಇನ್ನು ಮುಖ್ಯಮಂತ್ರಿಗಳು ಕರೆಯದಿದ್ದರೂ, ಅವರ ಮಗ ಯತೀಂದ್ರ ಪರ ಪ್ರಚಾರ ಮಾಡಿ ಬರುತ್ತೀನಿ. ಏಕೆಂದರೆ, ಅವರು ರಾಜಕೀಯಕ್ಕೆ ಬಹಳ ಮೃದುವಾದ ವ್ಯಕ್ತಿ. ಬಹಳ ಅಪರೂಪದ ವ್ಯಕ್ತಿ. ಅಂಥವರನ್ನು ಕಳೆದುಕೊಳ್ಳಬಾರದು. ಅವರನ್ನು ಬಲಪಡಿಸಿಕೊಳ್ಳಬೇಕು. ಹಾಗಾಗಿ ಅವರ ಪ್ರಚಾರ ಮಾಡಿಯೇ ಮಾಡುತ್ತೀನಿ’ ಎನ್ನುತ್ತಾರೆ ಪ್ರಥಮ್.
ಅಂಬೇಡ್ಕರ್ ನಿಂತ್ರೂ ಗೆಲ್ಲುವುದಿಲ್ಲ: ಇನ್ನು ಪ್ರಥಮ್ ಈ ಬಾರಿ ಚಾಮರಾಜಪೇಟೆ ಅಥವಾ ಚಾಮರಾಜನಗರದಲ್ಲಿ ಸ್ಪರ್ಧಿಸುವ ಯೋಜನೆ ಹಾಕಿಕೊಂಡಿದ್ದಾರೆ. “ನನಗೆ ಆ ಎರಡರಲ್ಲಿ ಒಂದು ಕ್ಷೇತ್ರದಲ್ಲಿ ನಿಲ್ಲುವ ಯೋಚನೆ ಇದೆ. ಒಂದು ಪಕ್ಷ ಚುನಾವಣೆಗೆ ನಿಲ್ಲದಿದ್ದರೆ, ಅರ್ಹರಿಗೆ ಸಪೋರ್ಟ್ ಮಾಡುತ್ತೇನೆ. ಕರ್ನಾಟಕದ 224 ಕ್ಷೇತ್ರಗಳಲ್ಲಿ ಕೆಲವರಾದರೂ ಒಳ್ಳೆಯವರು ಇರುವುದಿಲ್ಲವೇ. ಅಂತಹವರ ಪ್ರಚಾರ ಮಾಡುವುದು ನನ್ನ ಉದ್ದೇಶ.
ಏಕೆಂದರೆ, ಇವತ್ತು ವ್ಯವಸ್ಥೆ ಹಾಳಾಗಿದೆ. ಅಂಬೇಡ್ಕರ್ ನಿಂತರೂ ಗೆಲ್ಲುವುದು ಕಷ್ಟ. ಏಕೆಂದರೆ, ದುಡ್ಡು ಖರ್ಚು ಮಾಡದೆ ವೋಟು ಪಡೆಯುವುದೇ ಕಷ್ಟ ಎನ್ನುವಂತಾಗಿದೆ. ಹಾಗಾಗಿ ಒಳ್ಳೆಯವರಿಗೆ ಯಾವತ್ತೂ ನನ್ನ ಸಹಕಾರ ಇದ್ದೇ ಇರುತ್ತದೆ’ ಎನ್ನುತ್ತಾರೆ ಪ್ರಥಮ್. ಇನ್ನು ಪ್ರಥಮ್ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ “ದೇವ್ರಂಥ ಮನುಷ್ಯ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಇನ್ನು “ಎಂ.ಎಲ್.ಎ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ “ಬಿಲ್ಡಪ್’ ಎನ್ನುವ ಚಿತ್ರ ಶುರುವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.