ಇಂದು ಡಾ.ವಿಷ್ಣುವರ್ಧನ್ ಜನ್ಮದಿನ
ಸಂಭ್ರಮದಲ್ಲಿ ಕುಟುಂಬ-ಅಭಿಮಾನಿ ವರ್ಗ: ಮೈಸೂರಿನಲ್ಲಿ ಪೂಜೆ- ಅನಿರುದ್ಧ್
Team Udayavani, Sep 18, 2019, 3:05 AM IST
ಸೆಪ್ಟೆಂಬರ್ 18. ಇದು ಡಾ. ವಿಷ್ಣುವರ್ಧನ ಅವರ ಅಭಿಮಾನಿಗಳ ಪಾಲಿಗೆ ಹರ್ಷದ ದಿನ. ಯಾಕೆಂದರೆ, ಇಂದು (ಸೆ.18) ವಿಷ್ಣುವರ್ಧನ್ ಅವರ ಜನ್ಮದಿನ. ಹೀಗಾಗಿ ಅವರ ಸಂಭ್ರಮಕ್ಕೆ ಪಾರವೇ ಇಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅವರ ಕುಟುಂಬ ವರ್ಗ, ಅಭಿಮಾನಿವರ್ಗ ಪ್ರೀತಿಯಿಂದ ಅದ್ಧೂರಿಯಾಗಿ ಆಚರಿಸುತ್ತಿದೆ. ವಿಷ್ಣುವರ್ಧನ್ ಅವರ ಕುಟುಂಬ ವರ್ಗ ಇಂದು ಮೈಸೂರಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕ ಬಳಿ ಬೆಳಗ್ಗೆ 11 ಕ್ಕೆ ತೆರಳಿ ಪೂಜೆ ನೆರವೇರಿಸಲಿದೆ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ, “ಸೆ.18 ರ ಬೆಳಗ್ಗೆ ನಮ್ಮ ಕುಟುಂಬದವರೆಲ್ಲರೂ ಮೈಸೂರಿಗೆ ತೆರಳಿ, 11 ಗಂಟೆಯ ಹೊತ್ತಿಗೆ ಅಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಬಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಲಿದ್ದೇವೆ. ಆ ಬಳಿಕ ಅಲ್ಲಿ ಸೇರಿದ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡಿ, ಬಳಿಕ ಒಂದಷ್ಟು ಸಸಿಗಳನ್ನು ನೆಡಲಿದ್ದೇವೆ. ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ಸವಿನೆನಪಿಗೆ ಹಲವು ಕಾರ್ಯಕ್ರಮಗಳು ಸಹ ಜರುಗಲಿವೆ.
ಅಭಿಮಾನಿಗಳ ಜೊತೆ ಸೇರಿ, ಕೆಲ ಕಾರ್ಯಕ್ರಮಗಳಿಗೂ ಚಾಲನೆ ನೀಡಲಾಗುತ್ತದೆ’ ಎಂದು ವಿವರಿಸುತ್ತಾರೆ ಅನಿರುದ್ಧ. ಇನ್ನು, ಈ ವರ್ಷ ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಗಳು ಪುತ್ಥಳಿ ಅನಾವರಣ ಮಾಡಲಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆಯ ಅಹನ್ಯಾ ಎಂಬ ಗಡಿನಾಡು ಗ್ರಾಮದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಗಳು ಪುತ್ಥಳಿ ಅನಾವರಣ ಮಾಡುತ್ತಿದ್ದಾರೆ. ಗಡಿನಾಡಲ್ಲಿ ಇದೇ ಮೊದಲ ಸಲ ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣವಾಗುತ್ತಿರುವುದು ವಿಶೇಷ.
ಇದರೊಂದಿಗೆ ಅಭಿಮಾನಿಗಳು ಮೂರು ದಿನಗಳ ಕಾಲ ರಂಗನಮನ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದಾರೆ. ಬೆಂಗಳೂರಿನಲ್ಲೂ ಸಹ ಅವರ ಅಭಿಮಾನಿಗಳು ಸ್ಮಾರಕ ಬಳಿ ಸೇರಿ ಪೂಜೆ ನಡೆಸುವುದರ ಜೊತೆಗೆ ಅಲ್ಲಿಗೆ ಬರುವ ಜನರಿಗೆ ಸಿಹಿ ವಿತರಿಸಿ, ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ ಇತ್ಯಾದಿ ಕಾರ್ಯಕ್ರಮ ನಡೆಸಲಿದ್ದಾರೆ. ಈ ಬಾರಿ ಅವರ 69ನೇ ಹುಟ್ಟುಹಬ್ಬದಲ್ಲಿ ಹಲವು ವಿಶೇಷತೆಗಳಿವೆ. ಎಂದಿನಂತೆಯೇ, ಅವರ ವಿಭಾ ಚಾರಿಟಬಲ್ ಟ್ರಸ್ಟ್ ಮೂಲಕ ಸಾಕಷ್ಟು ಕಾರ್ಯಕ್ರಮಗಳು ಜರುಗಲಿವೆ.
ಅಭಿಮಾನಿಗಳು ಚಾಲನೆ ಕೊಡಲಿರುವ ನಾಟಕೋತ್ಸವ ಸೆ.20ರ ವರೆಗೆ ಮೂರು ದಿನಗಳಕಾಲ ನಡೆಯಲಿದ್ದು, ಪ್ರತಿ ದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧ ನಾಟಕಗಳು ಪ್ರದರ್ಶನವಾಗಲಿವೆ. ಇನ್ನು “ಡಾ. ವಿಷ್ಣುವರ್ಧನ್ ನಾಟಕೋತ್ಸವ’ದಲ್ಲಿ ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು ರಂಗಭೂಮಿ ತಂಡಗಳು ಭಾಗವಹಿಸಿ ನಾಟಕವನ್ನು ಪ್ರದರ್ಶಿಸಲಿವೆ.
ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ, ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ, ವಿಷ್ಣುವರ್ಧನ್ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳು ನಡೆಯಲಿವೆ. ಹೀಗೆ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿರುವ ಅಭಿಮಾನಿಗಳು, ವಿಷ್ಣುವರ್ಧನ್ ಅವರನ್ನು ನೆನಪುಗಳಲ್ಲಿ ಜೀವಂತವಾಗಿರಿಸಿದ್ದಾರೆ.
ರಾಷ್ಟ್ರೀಯ ಆದರ್ಶ ದಿನವಾಗಿ ಆಚರಣೆ: ಕಳೆದ ಕೆಲ ವರ್ಷಗಳಿಂದ ವಿಷ್ಣುವರ್ಧನ್ ಜನ್ಮದಿನವನ್ನು ರಾಷ್ಟ್ರೀಯ ಆದರ್ಶ ದಿನವಾಗಿ ಆಚರಿಸಿಕೊಂಡು ಬರುತ್ತಿರುವ ವಿಷ್ಣು ಅಭಿಮಾನಿಗಳು, ಈ ಬಾರಿಯೂ ಅದ್ಧೂರಿಯಾಗಿ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದ 23 ಜಿಲ್ಲೆಗಳ ಸುಮಾರು 156 ತಾಲೂಕುಗಳಲ್ಲಿ ವಿಷ್ಣುವರ್ಧನ್ ಜನ್ಮದಿನದ ಆಚರಣೆ ನಡೆಯಲಿದ್ದು, ವಿಷ್ಣು ಜನ್ಮದಿನದ ಅಂಗವಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಸಸಿ ನೆಡುವುದು, ಗ್ರಾಮಗಳ ಸ್ವಚ್ಛತೆ, ಸರ್ಕಾರಿ ಶಾಲೆಗಳ ದುರಸ್ತಿ, ರಕ್ತದಾನ ಶಿಬಿರ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಆಹಾರ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿಷ್ಣುವರ್ಧನ್ ಹೆಸರಿನಲ್ಲಿ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿದ್ದು, ಅಖಂಡ ಕರ್ನಾಟಕವನ್ನು ಪ್ರತಿನಿಧಿಸುವ ಆರು ನಾಟಕ ತಂಡಗಳು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿದಿನ ಎರಡು ನಾಟಕಗಳನ್ನು ಪ್ರದರ್ಶಿಸಲಿವೆ. ಇನ್ನು ಈ ಬಾರಿಯ ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿಗೆ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಆಯ್ಕೆ ಮಾಡಲಾಗಿದ್ದು, ಇಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.