ದರ್ಬಾರ್ ಗೆ ಉಪೇಂದ್ರ ಗಾನ; ವಿ.ಮನೋಹರ್ ನಿರ್ದೇಶನದ ಚಿತ್ರ
Team Udayavani, Apr 11, 2023, 7:01 PM IST
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಚಿತ್ರ “ದರ್ಬಾರ್’ ತೆರೆಗೆ ಸಿದ್ಧವಾಗಿದೆ. ಸತೀಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿ.ಮನೋಹರ್ ನಿರ್ದೇಶನವಿದೆ. ಇತ್ತೀಚೆಗೆ ನಡೆದ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಹಾಡಿರುವ ಚುನಾವಣೆ ಪ್ರಕ್ರಿಯೆಯನ್ನು ವಿಶ್ಲೇಷಿಸುವ ವಿಶೇಷ ಹಾಡಿನ ಲಿರಿಕಲ್ ವೀಡಿಯೋವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ಅವರು ರಿಲೀಸ್ ಮಾಡಿದರು.
ಈ ವೇಳೆ ಮಾತನಾಡಿದ ನಾಯಕ ನಟ ಸತೀಶ್, “ನಮ್ಮ ಚಿತ್ರದಲ್ಲಿರುವ 3 ಹಾಡುಗಳೂ ವಿಶೇಷವಾಗಿವೆ. ಮೊದಲ ಹಾಡು ಯಾರಿವ ಯಾರಿವ, ನಾಯಕನ ಪಾತ್ರ ಪರಿಚಯ ಹೇಳುವ ಹಾಡು, ಮನೋಹರ್ ಅವರೇ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ಎರಡನೇಯದು ಮೆಲೋಡಿ ಸಾಂಗ್, ಇದಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಇನ್ನು ಮೂರನೇದು ಎಲೆಕ್ಷನ್, ರಾಜಕೀಯದ ಬಗ್ಗೆ ವಿವರಿಸುವ ಹಾಡು… ಇದನ್ನು ನಾನೇ ಬರೆದಿದ್ದೇನೆ. ಅದರಲ್ಲಿ ತುಂಬಾನೇ ವಿಷಯಗಳು ಅಡಗಿವೆ. ನಾನು ಪ್ರತಿ ಲೈನ್ ಬರೆದಾಗಲೂ ಮನೋಹರ್ ಅವರು ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತಾ ಬಂದರು.
ಇರುವ ಸಾಹಿತ್ಯಕ್ಕೆ ಟ್ಯೂನ್ ಹಾಕುವುದು ತುಂಬಾ ಚಾಲೆಂಜಿಂಗ್ ಕೆಲಸ ಅಂತ ನನಗೂ ಗೊತ್ತು. ಅದನ್ನೆಲ್ಲ ಮನೋಹರ್ ಅವರು ನಿಭಾಯಿಸಿದ್ದಾರೆ. ಉಪೇಂದ್ರ ಅವರ ಹಾಡಂತೂ ಅದ್ಭುತವಾಗಿ ಬಂದಿದೆ’ ಎಂದು ಹೇಳಿದರು.
ನಾಯಕಿ ಜಾಹ್ನವಿ ಮಾತನಾಡಿ, “ಈ ಚಿತ್ರದಲ್ಲಿ ನಾನು ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಮಾಡಿದ್ದೇನೆ. ಸೈಕಾಲಜಿ ಸ್ಟೂಡೆಂಟ್. ರಜೆಗೆಂದು ಊರಿಗೆ ಬಂದಾಗ ಹೀರೋ ಜತೆ ಸ್ನೇಹ ಆಗಿ ಪ್ರೀತಿ ಬೆಳೆಯುತ್ತದೆ. ನಾಯಕನ ಗುರಿ ಸಾಧಿಸಲು ಬೆನ್ನೆಲುಬಾಗಿ ನಿಲ್ಲುತ್ತೇನೆ’ ಎಂದು ಹೇಳಿದರು.
ನಿರ್ದೇಶಕ ವಿ.ಮನೋಹರ್ ಮಾತನಾಡುತ್ತಾ, “ಸತೀಶ್ ಅವರು ತಮ್ಮ ಚಿತ್ರವೊಂದಕ್ಕೆ ಹಾಡು ಬರೆಸಲು ಬಂದಾಗ ಸ್ನೇಹಿತರಾದರು. ಇದಕ್ಕೂ ಮುಂಚೆ ನಿರ್ದೇಶನದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆದರೆ ಸಮಯ-ಸಂದರ್ಭ ಕೂಡಿ ಬಂದಿರಲಿಲ್ಲ. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆಯಿದು. ನನಗೂ ಹಳ್ಳಿ ರಾಜಕೀಯದ ಬಗ್ಗೆ ಆಸಕ್ತಿಯಿತ್ತು. ಹಾಗಾಗಿ ನಾನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಈ ಚಿತ್ರಕ್ಕೆ ಶೂಟ್ ಮಾಡಿದಾಗ ಅಲ್ಲಿನ ಜನರೂ ನಮಗೆ ತುಂಬಾ ಸಹಕಾರ ನೀಡಿದರು’ ಎಂದರು.
ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮೀದೇವಿ, ಅಶೋಕ್, ಸಾಧುಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತಿಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಸತೀಶ್ ಅವರ ಪತ್ನಿ ಬಿ.ಎನ್. ಶಿಲ್ಪಾ ನಿರ್ಮಾಣ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.