ಜಾತ್ರೆಯಲ್ಲಿ ಕಳೆದು ಹೋಗಿದ್ದೇವೆ
Team Udayavani, Apr 3, 2018, 11:42 AM IST
ಕಳೆದ ವಾರ ಬಿಡುಗಡೆಯಾದ ಎರಡು ಚಿತ್ರಗಳು ಎಲ್ಲಾ ಕಡೆಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿವೆ. ಹೊಸಬರ “ಗುಳ್ಟು’ ಹಾಗೂ “ಇದೀಗ ಬಂದ ಸುದ್ದಿ’ ಚಿತ್ರಗಳು ತಮ್ಮ ಕಾನ್ಸೆಪ್ಟ್ ಹಾಗೂ ನಿರೂಪಣೆಯಿಂದ ಮೆಚ್ಚುಗೆ ಪಡೆಯುತ್ತಿವೆ. ಆದರೆ, ಈ ಎರಡೂ ಚಿತ್ರಗಳು ಹೊಸಬರದ್ದು. ಸಹಜವಾಗಿಯೇ ಥಿಯೇಟರ್ ಸಮಸ್ಯೆ, ಪ್ರೇಕ್ಷಕರ ಕೊರತೆ, ಚಿತ್ರರಂಗದ ಬೆಂಬಲದ ಕೊರತೆ …
ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಎರಡೂ ಚಿತ್ರಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ, ಎದುರಾಗಿರುವ ಸಮಸ್ಯೆ, ಮುಂದಿನ ಆಲೋಚನೆ ಸೇರಿದಂತೆ ಅನೇಕ ವಿಷಯಗಳ ಕುರಿತು “ಗುಳ್ಟು’ ಚಿತ್ರದ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಹಾಗೂ “ಇದೀಗ ಬಂದ ಸುದ್ದಿ’ ನಿರ್ದೇಶಕ ಎಸ್.ಆರ್.ಪಾಟೀಲ್ ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ …
ಪ್ರತಿಕ್ರಿಯೆ: ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫೋನ್ ಮಾಡಿದವರೆಲ್ಲಾ ಒಳ್ಳೆಯ ಕಥೆ ಮಾಡಿದ್ದೀಯ, ಚಿತ್ರದಲ್ಲೊಂದು ಸಂದೇಶವಿದೆ ಎನ್ನುತ್ತಿದ್ದಾರೆ. ಆದರೆ, ನಮ್ಮ ಸಿನಿಮಾಕ್ಕೆ ಮುಖ್ಯ ಸಮಸ್ಯೆಯಾಗಿರೋದು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಸಿಗದಿರುವುದು. ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಇದೆ. ಅದು ಕೂಡಾ ಮಧ್ಯಾಹ್ನದ ಶೋ. ಆರಂಭದಲ್ಲಿ ಆರು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾವಿತ್ತು. ಆದರೆ, ಈಗ ಮೂರರಲ್ಲಿದೆ. ದಿನಕ್ಕೊಂದು ಶೋ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಜನ ಸಿನಿಮಾಕ್ಕೆ ಬರೋದು ಸಂಜೆ.
ಆದರೆ ನಮಗೆ ಮಧ್ಯಾಹ್ನ ಶೋ ಕೊಟ್ಟಿರೋದರಿಂದ ಸಿನಿಮಾಕ್ಕೆ ಪ್ರೇಕ್ಷಕರ ಕೊರತೆ ಕಾಡಿದೆ. ಇಂತಹ ಸಿನಿಮಾಗಳು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿರಬೇಕೆಂಬುದು ಅನೇಕರ ಬೇಡಿಕೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ನವರನ್ನು ಕೇಳಿದರೆ ಬಾಡಿಗೆ ಕಟ್ಟಿ ಅನ್ನುತ್ತಾರೆ. ನಮ್ಮಲ್ಲಿ ಆ ಶಕ್ತಿ ಇಲ್ಲ. ನಮ್ಮ ಸಿನಿಮಾ ಚೆನ್ನಾಗಿದೆ, ಒಂದು ಅವಕಾಶ ಕೊಡಿ ಎಂದು ಕೇಳಿದರೆ, ಸಿನಿಮಾ ಚೆನ್ನಾಗಿರಬಹುದು. ಆದರೆ, ಯಾರೂ ಸ್ಟಾರ್ ಇಲ್ವಲ್ಲಾ. ಈ ತರಹ ಆದರೆ ನಾವೆಲ್ಲಿ ಹೋಗಬೇಕು. ಇಲ್ಲಿ ಹೊಸಬರನ್ನು ಬೆಂಬಲಿಸುವವರು ಯಾರೂ ಇಲ್ಲ. ಆ ಕಾರಣದಿಂದ ನಾವೇ ಸುಚಿತ್ರಾ ಫಿಲಂ ಸೊಸೈಟಿ ಅಥವಾ ಕಲಾಸೌಧದಲ್ಲಿ ಶೋ ಹಾಕಿ ಸಿನಿಮಾವನ್ನು ಜನರಿಗೆ ತಲುಪಿಸುವ ಬಗ್ಗೆ ಆಲೋಚಿಸುತ್ತಿದ್ದೇವೆ.
ಕಲೆಕ್ಷನ್: ಕಲೆಕ್ಷನ್ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ವಿತರಕರಲ್ಲಿ ಆ ಬಗ್ಗೆ ಮಾತನಾಡಿಲ್ಲ. ನಮಗೆ ಈಗ ಕಲೆಕ್ಷನ್‌ಗಿಂತ ಸಿನಿಮಾವನ್ನು ಉಳಿಸಿಕೊಳ್ಳೋದು ಮುಖ್ಯವಾಗಿದೆ. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ. ಕುಡಿತದ ಚಾಲನೆಯಿಂದ ಏನೆಲ್ಲಾ ಆಗುತ್ತದೆ ಎಂಬ ವಿಷಯವನ್ನು ಇಲ್ಲಿ ಹೇಳಿದ್ದೇವೆ. ಮುಖ್ಯವಾಗಿ ಡ್ರೈವರ್‌ಗಳು ಈ ಸಿನಿಮಾವನ್ನು ನೋಡಬೇಕು. ನಾವು ಈಗ ಕೈ ಕಟ್ಟಿ ಕೂತರೆ ಸಿನಿಮಾ ಸತ್ತು ಹೋಗುತ್ತದೆ. ನಮ್ಮ ಶ್ರಮವನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ.
ಚಿತ್ರರಂಗದ ಬೆಂಬಲ: ನಿಜ ಹೇಳಬೇಕೆಂದರೆ ನಮಗೆ ಇಲ್ಲಿವರೆಗೆ ಚಿತ್ರರಂಗದಿಂದ ಯಾರ ಬೆಂಬಲವೂ ಸಿಕ್ಕಿಲ್ಲ. ಎಲ್ಲರೂ ಗೆದ್ದಿರೋರ ಕಡೆಗೇ ಇದ್ದಾರೆ. ನಿಜ ಹೇಳಬೇಕೆಂದರೆ ನಮ್ಮ ಪರಿಸ್ಥಿತಿ ಜಾತ್ರೆಯಲ್ಲಿ ಕಳೆದು ಹೋದವರು ತರಹ ಆಗಿದೆ. ಆದರೆ, ಒಂದಂತೂ ಖುಷಿ ಇದೆ. ನಾವು ಕೆಟ್ಟ ಸಿನಿಮಾ ಮಾಡಿಲ್ಲ. ನೋಡಿದವರು ಚೆನ್ನಾಗಿದೆ ಅನ್ನುವ ಜೊತೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿರಬೇಕಿತ್ತು ಎನ್ನುತ್ತಾರೆ. ಅದೇ ಕಾರಣದಿಂದ ಮುಂದಿನ ವಾರ (ಏ.13)ಕ್ಕೆ ಬೀದರ್ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ಪ್ರಚಾರದ ಕೊರತೆ: ಸಿನಿಮಾ ಬಿಡುಗಡೆಗೆ ಮುನ್ನ ಹಾಗೂ ನಂತರ ನಮ್ಮ ಸಿನಿಮಾಕ್ಕೆ ಪ್ರಚಾರದ ಕೊರತೆ ಇತ್ತು ಎಂಬ ಮಾತು ಅನೇಕರಿಂದ ಬರುತ್ತಿದೆ. ಅದು ನಿಜ ಕೂಡಾ. ಅದಕ್ಕೆ ಕಾರಣ ಆರ್ಥಿಕ ಸಮಸ್ಯೆ. ನಮಗೆ ಯಾರೂ ನಿರ್ಮಾಪಕರೆಂದು ಇರಲಿಲ್ಲ. ನಾವೇ ಹುಡುಗರು ಸೇರಿಕೊಂಡು ಈ ಸಿನಿಮಾ ಮಾಡಿದ್ದು. ಪತ್ರಿಕೆ, ಟಿವಿ ಹಾಗೂ ಇತರ ಮಾಧ್ಯಮಗಳಿಗೆ ಜಾಹೀರಾತು ಕೊಡುವಷ್ಟು ಕಾಸು ನಮ್ಮಲ್ಲಿರಲಿಲ್ಲ. ಸಿನಿಮಾವನ್ನೇ ನಾವು ತುಂಬಾ ಕಷ್ಟಪಟ್ಟು ಮುಗಿಸಿದ್ದು. ಹಾಗಾಗಿ, ಸಿನಿಮಾಕ್ಕೆ ಪ್ರಚಾರದ ಕೊರತೆ ಕಾಡಿತು. ಈಗಲೂ ಅಷ್ಟೇ ನಾವು ಸಿನಿಮಾವನ್ನು ಪ್ರಚಾರ ಮಾಡಿ, ಜನರಿಗೆ ತಲುಪಿಸುವಷ್ಟು ಸಾಮರ್ಥ್ಯ ಹೊಂದಿಲ್ಲ.
ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ: ಎಲ್ಲಾ ಮಾಧ್ಯಮಗಳಿಂದಲೂ ನಮ್ಮ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳೇ ಕೇಳಿಬರುತ್ತಿದೆ. ನನಗೆ ಒಂದು ನಂಬಿಕೆ ಇತ್ತು, ಅದೇನೆಂದರೆ ಚಿತ್ರದಲ್ಲಿ ಯಾವುದೇ ಕೆಟ್ಟ ಅಂಶಗಳಿಲ್ಲ, ಹೇಳುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಹಾಗಾಗಿ, ಇದು ಕೆಟ್ಟ ಸಿನಿಮಾ ಎಂಬ ಹಣೆಪಟ್ಟಿಯಿಂದ ಮುಕ್ತವಾಗಿರುತ್ತದೆ ಎಂದು. ಜೊತೆಗೆ ಕಥೆ, ಚಿತ್ರಕಥೆಯ ಮೇಲೆ ನಿರೀಕ್ಷೆ ಇತ್ತು. ಈಗ ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕೂಡಾ ನಮ್ಮ ಬೆನ್ನುತಟ್ಟಿವೆ.
ಸಿನಿಮಾದ ಹಿಂದಿನ ಶ್ರಮ: ಈ ಸಿನಿಮಾದ ಹಿಂದೆ ನನ್ನ ಹಾಗೂ ತಂಡದ ಒಂದೂವರೆ ವರ್ಷದ ಶ್ರಮವಿದೆ. 10 ರಿಂದ 12 ಜನರ ತಂಡ ಈ ಸಿನಿಮಾಕ್ಕಾಗಿ ಒಂದೂವರೆ ವರ್ಷದಿಂದ ಶ್ರಮಿಸಿದೆ.
ಬಜೆಟ್: ಇದು ತುಂಬಾ ಕಡಿಮೆ ಬಜೆಟ್‌ನಲ್ಲಿ ಮಾಡಿದ ಸಿನಿಮಾ. ಮೊದಲೇ ಹೇಳಿದಂತೆ ನಮಗೆ ಯಾರೂ ನಿರ್ಮಾಪಕರಿರಲಿಲ್ಲ. ಹಾಗಾಗಿ, ನಾವೇ ಸೇರಿಕೊಂಡು ಮಾಡಿದ್ದು, 32 ಲಕ್ಷ ರೂಪಾಯಿ ಖರ್ಚಾಗಿದೆ.
ಕಮರ್ಷಿಯಲ್ ಸಿನಿಮಾ ಮಾಡಬೇಕು: ಕೆಲವರು ಫೋನ್ ಮಾಡಿ, ಮುಂದೆ ಸಿನಿಮಾ ಮಾಡುವ ಎಂದಿದ್ದಾರೆ. ಜೊತೆಗೆ ಈ ತರಹದ ಸಂದೇಶವಿರುವ ಸಿನಿಮಾಬಿಟ್ಟು, ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುವಂತೆ ಹೇಳಿದ್ದಾರೆ. ಬರೀ ಸಂದೇಶದ ಸಿನಿಮಾ ಮಾಡಿಕೊಂಡು ಇದ್ದರೆ ನೀನು ಕೂಡಾ ಚಿತ್ರರಂಗದಲ್ಲಿ ಒಂದು ಸಂದೇಶವಾಗಿದ್ದು ಬಿಡುತ್ತೀಯಾ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.