ಪ್ರಾಣಿಗಳು ಊರಿಗೆ ನುಗ್ಗದೆ ಎಲ್ಲಿ ಹೋಗಬೇಕು ಸ್ವಾಮಿ?
Team Udayavani, Feb 26, 2019, 5:35 AM IST
“ಇನ್ನು ಈ ತರಹದ ಗ್ರೀನರಿ ಎಲ್ಲಿ ಸಿಗುತ್ತೆ ಎಲ್ಲಿ. ನಿಜಕ್ಕೂ ಬೇಜಾರಾಗುತ್ತೆ …’ ಮೊನ್ನೆ ಮೊನ್ನೆಯಷ್ಟೇ ಬಂಡೀಪುರಕ್ಕೆ ಹೋಗಿ ತಾವು ತೆಗೆದ ಫೋಟೋಗಳನ್ನು ತೋರಿಸುತ್ತಾ ದರ್ಶನ್ ಹೀಗೆ ಹೇಳುತ್ತಿದ್ದರೆ, ಕಾಡ್ಗಿಚ್ಚಿನಲ್ಲಿ ನಶಿಸಿ ಹೋದ ಕಾಡು ಹಾಗೂ ಪ್ರಾಣಿಗಳ ಬಗೆಗಿನ ನೋವು ಅವರ ಮಾತಲ್ಲಿ ಎದ್ದು ಕಾಣುತ್ತಿತ್ತು. ಕಾಡ್ಗಿಚ್ಚು ಬಿದ್ದ ಸುದ್ದಿ ಕೇಳುತ್ತಿದ್ದಂತೆ ಬೆಂಕಿ ನಂದಿಸಲು ಆಸಕ್ತಿಯುಳ್ಳ ಸ್ವಯಂ ಸೇವಕರು ಅಭಿಯಾನದಲ್ಲಿ ಕೈ ಜೋಡಿಸಬೇಕಾಗಿ ಮನವಿ ಮಾಡಿದ್ದರು ದರ್ಶನ್.
ಕಾಡು, ಪ್ರಾಣಿ, ಪಕ್ಷಿಗಳ ಬಗ್ಗೆ ಕಾಳಜಿ ಹೊಂದಿರುವ ದರ್ಶನ್, ಬಂಡೀಪುರಕ್ಕೆ ಬಿದ್ದ ಬೆಂಕಿಯಿಂದ ಸಾಕಷ್ಟು ನೊಂದುಕೊಂಡಿದ್ದಾರೆ. ಇತ್ತೀಚೆಗೆ ಹಲವು ಬಾರಿ ಕಾಡು ಸುತ್ತಿ ವೈಲ್ಡ್ ಲೈಫ್ ಫೋಟೋಗ್ರಫಿ ಆಸಕ್ತಿ ಬೆಳೆಸಿಕೊಂಡಿರುವ ದರ್ಶನ್, ಕಾಡಿನ ಸೌಂದರ್ಯವನ್ನು ಸವಿದಿದ್ದಾರೆ. ಈಗ ಇಡೀ ಕಾಡು ಬೆಂಕಿ ಬಿದ್ದು ಬಿಕೋ ಎನ್ನುತ್ತಿದೆ. “ಎಲ್ಲವೂ ಮುಗಿದು ಹೋಯಿತು. ಪ್ರಾಣಿಗಳು ಸತ್ತು ಹೋಗಿವೆ, ಇನ್ನೊಂದಿಷ್ಟು ಪ್ರಾಣಿಗಳು ಓಡಿ ಹೋಗಿವೆ.
ಬಂಡೀಪುರದಿಂದ ಓಡಿ ಹೋದ ಪ್ರಾಣಿಗಳು ಕಬಿನಿಗೆ ಬರುತ್ತವೆ. ಅಲ್ಲಿ ಮತ್ತೆ ಪ್ರಾಣಿಗಳ ಮಧ್ಯೆ ಟೆರಿಟರಿ ಜಗಳ ನಡೆದು, ಅಲ್ಲೊಂದಿಷ್ಟು ಪ್ರಾಣಿಗಳು ಸಾಯುತ್ತವೆ. ನಷ್ಟ ಯಾರಿಗೆ?’ ಹೀಗೆ ಹೇಳಿ ಒಂದು ಕ್ಷಣ ಮೌನಕ್ಕೆ ಜಾರಿದರು ದರ್ಶನ್. ದರ್ಶನ್ ತಮ್ಮ ಹುಟ್ಟುಹಬ್ಬ ಮುಗಿಸಿಕೊಂಡು ಫೆ.17ನೇ ತಾರೀಕಿಗೆ ಕಾಡಿಗೆ ಹೋಗಿ ಅಲ್ಲೊಂದಿಷ್ಟು ಸುಂದರ ಫೋಟೋಗಳನ್ನು ಸೆರೆಹಿಡಿದುಕೊಂಡು ಬಂದಿದ್ದಾರೆ. ಹಚ್ಚ ಹಸಿರಿನ ನಡುವೆ ಓಡಾಡುವ ಹುಲಿ, ಚಿರತೆ, ಕಾಡು ಕೋಣ …
ಹೀಗೆ ಸಾಕಷ್ಟು ಫೋಟೋಗಳು ಅವರ ಕ್ಯಾಮರಾದಲ್ಲಿ ಸೆರೆಯಾಗಿವೆ. ಈಗ ನೋಡಿದರೆ ಆ ಸುಂದರ ಕಾಡೇ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದೆ. “ನಾವೇನೋ ವೈಲ್ಡ್ ಲೈಫ್ ಫೋಟೋಗ್ರಫಿ ಅಂದುಕೊಂಡು ಹೋಗ್ತಾ ಇದ್ವಿ. ಇನ್ನು ಅಷ್ಟೊಂದು ಸುಂದರವಾದ ಗ್ರೀನರಿನ ಎಲ್ಲಿಂದ ಹುಡುಕ್ತೀರಾ. ಸಾವಿರಾರು ಎಕರೆಯಷ್ಟು ಕಾಡು ಬೆಂಕಿಗೆ ಆಹುತಿಯಾಗಿದೆ. ಇಷ್ಟೊಂದು ಕಾಡನ್ನು ಬೆಳೆಸಲು ಎಷ್ಟು ವರ್ಷ ಬೇಕು ಹೇಳಿ.
ಪ್ರಾಣಿಗಳು ಎಲ್ಲಿ ಹೋಗಬೇಕು. ಈಗಷ್ಟೇ ಬೇಸಿಗೆ ಶುರುವಾಗಿದೆ. ಇನ್ನೂ ಮೂರು ತಿಂಗಳು ಬೇಸಿಗೆ ಇದೆ. ಪ್ರಾಣಿಗಳಿಗೆ ಮೇವು, ನೀರು ಎಲ್ಲಿ ಸಿಗುತ್ತದೆ. ಹೀಗಾದಾಗಲೇ ಪ್ರಾಣಿಗಳು ಊರಿಗೆ ನುಗ್ಗೊàದು. ಇನ್ನೊಂದು ಸ್ವಲ್ಪ ಸಮಯ ನೋಡಿ, ಊರಿಗೆ ಆನೆ ಬಂತು, ಚಿರತೆ ನುಗ್ಗಿತು ಎಂಬ ಸುದ್ದಿಗಳು ಬರಲಾರಂಭಿಸುತ್ತವೆ. ಪ್ರಾಣಿಗಳು ರೊಚ್ಚಿಗೇಳದೇ ಇರುತ್ತವಾ? ಅವುಗಳಾದರೂ ಎಲ್ಲಿ ಹೋಗಬೇಕು ಹೇಳಿ?’ ಎಂದು ಬೇಸರಿಸಿಕೊಳ್ಳುತ್ತಾರೆ.
ಕಾಡಿನ ನಾಶಕ್ಕೆ ಮುಖ್ಯವಾಗಿ ನಾಡಿನ ಜನರ ಆಸೆಯೇ ಕಾರಣ ಎಂಬುದು ದರ್ಶನ್ ಮಾತು. “ಮೊದಲು ನಾವು ಕಾಡನ್ನು ಪ್ರೀತಿಸಲು ಕಲಿಯಬೇಕು. ಆಗ ಎಲ್ಲವೂ ಸರಿಯಾಗುತ್ತದೆ. ಇವತ್ತು ನಾವು ಕಾಡಿನ ಜನರನ್ನು, ಆದಿವಾಸಿಗಳನ್ನು ಬಳಸಿಕೊಂಡು ಕಾಡು, ಅಲ್ಲಿನ ಪ್ರಾಣಿಗಳನ್ನು ನಾಶ ಮಾಡುತ್ತಿದ್ದೇವೆ. ಇವೆಲ್ಲ ನಿಂತರೆ ಕಾಡು ಉಳಿಯುತ್ತದೆ’ ಎನ್ನುವುದು ದರ್ಶನ್ ಮಾತು.
ಆನೆ ಲದ್ದಿ ಮೂಲಕ ಬೆಂಕಿ: ಎಲ್ಲಾ ಓಕೆ, ಕಾಡಿಗೆ ಯಾರು ಬೆಂಕಿ ಹಾಕುತ್ತಾರೆ ಮತ್ತು ಯಾಕೆ ಹಾಕುತ್ತಾರೆ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಈ ಪ್ರಶ್ನೆ ದರ್ಶನ್ ಅವರನ್ನು ಕಾಡಿದೆ. ಆದರೆ, ಯಾರು ಮತ್ತು ಯಾಕೆ ಹಾಕುತ್ತಾರೆ ಎಂಬುದಕ್ಕೆ ಅವರಿಗೆ ಉತ್ತರ ಸಿಕ್ಕಿಲ್ಲ. ಆದರೆ, ಹೇಗೆ ಹಾಕುತ್ತಾರೆ ಎಂಬುದರ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದೆ. ಅದು ಆನೆ ಲದ್ದಿ ಮೂಲಕ. “ಆನೆಯ ಲದ್ದಿಯಲ್ಲಿ ಒಂದು ಕಿಡಿ ಇಟ್ಟು ಬಿಟ್ಟರೆ, ಆ ಬೆಂಕಿ ಅದು ಮೂರು ದಿನಗಳವರೆಗೆ ನಂದಲ್ಲ. ಅದನ್ನು ಬಳಸಿಯೇ ಕಾಡಿಗೆ ಬೆಂಕಿ ಇಡುತ್ತಾರೆಂಬ ವಿಷಯ ಕೇಳಿ ನನಗೆ ಶಾಕ್ ಆಯಿತು’ ಎನ್ನುತ್ತಾರೆ.
ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದ ದರ್ಶನ್: ಕಾಡ್ಗಿಚ್ಚನ್ನು ನಂದಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನ ಶ್ರಮಿಸುತ್ತಿದ್ದಾರೆ. ಅವರಿಗೆ ನೀರು, ಗ್ಲುಕೋಸ್ ಸೇರಿದಂತೆ ಅಗತ್ಯವಾಗಿ ಬೇಕಾದುದ್ದನ್ನು ದರ್ಶನ್ ಕಳುಹಿಸಿ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಕಲ್ಯಾಣ ನಿಧಿಗಾಗಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅದರಲ್ಲಿ ಫೋಟೋ ಪ್ರದರ್ಶನ ಕೂಡಾ ಒಂದು. ದರ್ಶನ್ ತೆಗೆದ ಫೋಟೋಗಳನ್ನು ಮಾರಾಟಕ್ಕಿಟ್ಟು ಅದರಿಂದ ಬಂದ ಹಣವನ್ನು ಕಾಡು ಸಂರಕ್ಷಣೆಗೆ ಹಾಗೂ ಅಲ್ಲಿನ ಜನರ ಕಲ್ಯಾಣಕ್ಕಾಗಿ ನೀಡಲು ನಿರ್ಧರಿಸಿದ್ದೆ.
ಮುಂದೆ ಈ ತರಹದ ಫೋಟೋಗಳನ್ನು ಎಲ್ಲಿ ಹುಡುಕಿಕೊಂಡು ಹೋಗೋಣ’ ಎನ್ನುತ್ತಾರೆ ದರ್ಶನ್. ದರ್ಶನ್ ಮಾರ್ಚ್ 1 ರಿಂದ 4 ರವರೆಗೆ ಮತ್ತೆ ಕಾಡಿಗೆ ಭೇಟಿ ನೀಡಲಿದ್ದಾರೆ. ಈ ಸಮಯದಲ್ಲಿ ತಮ್ಮ ಕೈಲಾದ ಸಹಾಯ ಕೂಡಾ ಮಾಡಲಿದ್ದಾರೆ. “ಯಾವುದೋ ಒಂದು ಗಿಡ ನೆಟ್ಟು ನಾವು ಅರಣ್ಯ ಬೆಳೆಸುತ್ತಿದ್ದೇವೆ ಎನ್ನುವುದಲ್ಲ. ಇದ್ದ ಅರಣ್ಯವನ್ನು ನಾವು ಮೊದಲು ರಕ್ಷಿಸಿಕೊಳ್ಳಬೇಕು’ ಎನ್ನುತ್ತಾರೆ.
ಹುಟ್ಟುಹಬ್ಬಕ್ಕೆ ಸಂಗ್ರಹವಾಗಿದ್ದು 23ಸಾವಿರ ಮೂಟೆ ಆಹಾರ ಪದಾರ್ಥ: ಈ ಬಾರಿ ದರ್ಶನ್ ತಮ್ಮ ಹುಟ್ಟುಹಬ್ಬದಂದು ಹಾರ-ಕೇಕ್‌ಗೆ ಖರ್ಚು ಮಾಡುವ ಹಣದಲ್ಲಿ ದವಸ-ಧಾನ್ಯ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡಿದರೆ ಅದನ್ನು ತಾನು ವೃದ್ಧಾಶ್ರಮ ಹಾಗೂ ಅನಾಥಶ್ರಮಗಳಿಗೆ ತಲುಪಿಸುವುದಾಗಿ ಹೇಳಿದ್ದರು. ಅದರಂತೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಹಾರ ಪದಾರ್ಥಗಳನ್ನು ತಂದುಕೊಟ್ಟಿದ್ದಾರೆ.
ಹಾಗಾದರೆ ಸಂಗ್ರಹವಾದ ಆಹಾರ ಪದಾರ್ಥಗಳೆಷ್ಟು ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. ಅದಕ್ಕೆ ಉತ್ತರ 23ಸಾವಿರ ಮೂಟೆ. “ಅಭಿಮಾನಿಗಳಿಂದ ಬರೋಬ್ಬರಿ 23 ಸಾವಿರ ಮೂಟೆ ಸಂಗ್ರಹವಾಗಿತ್ತು. ಅದನ್ನು 30 ಜಿಲ್ಲೆಗಳ ಅನಾಥಶ್ರಮ ಹಾಗೂ ವೃದ್ಧಾಶ್ರಮಗಳಿಗೆ ತಲುಪಿಸಿದ್ದೇವೆ. ಕೆಲವು ಹಳ್ಳಿಗಳಲ್ಲಿ ಯಾರ ಸಂಪರ್ಕದಲ್ಲೂ ಇರದ ಆಶ್ರಮಗಳಿಗೂ ತಲುಪಿಸಿದ್ದೇವೆ’ ಎನ್ನುವುದು ದರ್ಶನ್ ಮಾತು. ಅಂದಹಾಗೆ, ದರ್ಶನ್ ಅವರ “ಯಜಮಾನ’ ಚಿತ್ರ ಮಾರ್ಚ್ 1 ರಂದು ತೆರೆಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.