ಅದ್ಭುತ ಎನಿಸುವುದಿಲ್ಲ; ಕೆಲವು ದೃಶ್ಯಗಳು ಸರಳವೆನಿಸುವುದೂ ಇಲ್ಲ
ಡಿಸ್ಪೈಟ್ ದಿ ಫಾಗ್-ಗೋವಾ ಚಿತ್ರೋತ್ಸವ ಉದ್ಘಾಟನಾ ಚಿತ್ರ
Team Udayavani, Nov 21, 2019, 9:11 AM IST
ಪಣಜಿ: ಮಾನವ ವಲಸೆ ಎಂಬ ಈ ಶತಮಾನದ ವಿಸ್ತೃತ ಆಯಾಮಕ್ಕೆ ಸರಳ ಉತ್ತರ ಅಥವಾ ಸರಳ ವ್ಯಾಖ್ಯಾನ ಕೊಡಲು ಪ್ರಯತ್ನಿಸಿದರೇ ಎಂದು ಎನಿಸುವುದು ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ 50 ನೇ ವರ್ಷದ ಉತ್ಸವದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾದ ಇಟಾಲಿಯನ್ ನಿರ್ದೇಶಕ ಗೋರನ್ ಪಸ್ಕಲ್ಜೊವಿಕ್‌ರ ಚಿತ್ರ ‘ಡಿಸ್ಪೈಟ್ ದಿ ಫಾಗ್’ದಲ್ಲಿ.
ಮಾನವ ವಲಸೆ ಎಂಬುದು ಆಧುನಿಕ ಸಂದರ್ಭದ ಬಹುದೊಡ್ಡ ವೈರುಧ್ಯ. ಅದನ್ನು ಇನ್ನಷ್ಟು ತೀವ್ರ ವ್ಯಾಖ್ಯಾನಕ್ಕೆ ಒಳಪಡಿಸುವ ಬದಲು ಸರಳವಾಗಿ ಹೇಳಿ ಮುಗಿಸಲು ನಡೆಸಿದ ಪ್ರಯತ್ನವಿದೆಂದರೆ ತಪ್ಪಾಗಲಾರದು. ಕೆಲವು ದೃಶ್ಯಗಳಲ್ಲಿ ತೋರಿಬರುವ ತೀರಾ ನಾಟಕೀಯತೆ ಆ ಚಿತ್ರಕ್ಕೆ ಹೊಂದುವುದಿಲ್ಲ ಎಂದೆನಿಸುವುದೂ ಸಹಜ.
ಚಿತ್ರ ಆರಂಭವಾಗುವುದು ಆವರಿಸಿಕೊಂಡ ಮಂಜಿನಿಂದ. ಅದರ ಮಧ್ಯೆ ರಸ್ತೆಯಲ್ಲಿ ಇಬ್ಬರು ನಡೆದು ಬರುತ್ತಿರುತ್ತಾರೆ. ಒಬ್ಬ ಸಮೀರ್, ಮತ್ತೊಬ್ಬ ಮುಹಮ್ಮದ್. ಮುಹಮ್ಮದ್ ಗೆ 8ರ ಪ್ರಾಯ. ಅವನ ಕುಟುಂಬವೂ ಸೇರಿದಂತೆ ನೂರಾರು ಜನ ರಬ್ಬರ್ ದೋಣಿಯಲ್ಲಿ ಸಮುದ್ರವನ್ನು ದಾಟಿ ಇಟಲಿಗೆ ಬರುತ್ತಿದ್ದಾಗ ದೋಣಿ ಮುಳುಗಿ ಎಲ್ಲರೂ ನೀರುಪಾಲಾಗುತ್ತಾರೆ. ಸಮೀರ್ ಈಜಿ ದಡ ಸೇರುತ್ತಾನೆ. ಅದೃಷ್ಟವೆನ್ನುವೆಂಬಂತೆ ಅವನೊಂದಿಗೆ ಮುಹಮ್ಮದ್ ಸಹ ಪ್ರಾಣಾಪಾಯದಿಂದ ಪಾರಾಗುತ್ತಾನೆ. ಇದು ಕಥೆಯ ಓಘಕ್ಕೆ ಕೊಟ್ಟ ಒಂದು ಹಿನ್ನೆಲೆಯಷ್ಟೇ, ಕಾರಣವೆನ್ನಲೂ ಬಹುದು.
ಬಳಿಕದ ದೃಶ್ಯ ಮಂಜು ಆವರಿಸಿದ ರಸ್ತೆಯ ಮೇಲೆ ಸಮೀರ್ ಸ್ವೀಡನ್‌ಗೆ ಹೊರಟಿದ್ದಾನೆ, ನಡೆದು ನಡೆದು ಹೋಗುತ್ತಿದ್ದಾನೆ. ಅವನನ್ನು ಹಿಂಬಾಲಿಸುತ್ತಿದ್ದಾನೆ ಮುಹಮ್ಮದ್. ನಡೆಯಲಾಗದೇ ಸುಸ್ತಾದ ಮುಹಮ್ಮದ್‌ನ್ನು ಹೊತ್ತು ಸಾಗಲಾಗದೇ ಸಮೀರ್ ಒಬ್ಬನೇ ಹೊರಟು ಹೋಗುತ್ತಾನೆ. ಮುಹಮ್ಮದ್ ಮಳೆ ಸುರಿಯುವ ಮಧ್ಯೆಯೇ ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತುಕೊಳ್ಳುತ್ತಾನೆ.
ರೋಮ್‌ನಲ್ಲಿ ಹೊಟೇಲ್ ಹೊಂದಿದ್ದ ಪೌಲೋ ಮನೆಗೆ ಸಾಗುವಾಗ ಈ ಮುಹಮ್ಮದ್‌ನನ್ನು ಕಂಡು, ಮನೆಗೆ ಕರೆದೊಯ್ಯುತ್ತಾನೆ. ತನ್ನ ಪುಟ್ಟ ಮಗ ಮಾರ್ಕೋವನ್ನು ಕಳೆದುಕೊಂಡು ಕಂಗಾಲಾಗಿದ್ದ ಪೌಲೋವಿಗೂ ಈ ಮುಹಮ್ಮದ್ ನಕ್ಷತ್ರದಂತೆ ತೋರುತ್ತಾನೆ. ಮನೆಯಲ್ಲಿ ಯಾರಿವನು, ಎಲ್ಲಿಂದ ತಂದಿರಿ? ಇದು ಸಮಸ್ಯೆಯಲ್ಲವೇ? ಪೊಲೀಸರಿಗೆ ತಿಳಿಸುವುದಿಲ್ಲವೇ? ಅಕ್ರಮ ವಲಸಿಗನನ್ನು ಮನೆಯಲ್ಲಿ ಹೀಗೆ ಇಟ್ಟುಕೊಳ್ಳುವುದು ಎಷ್ಟು ಸರಿ? ಎಂದೆಲ್ಲಾ ಪ್ರಶ್ನೆಗಳನ್ನು ಮನೆಯೊಳಗೆ ಪೌಲೋ ಕಾಲಿಡುತ್ತಿದ್ದಾಗಲೇ ಕೇಳುವ ಅವನ ಪತ್ನಿ ವಲೇರಿಯಾಳ ಮನಸ್ಸಿನೊಳಗೆ, ತನ್ನ ಮಾರ್ಕೋ ಈ ರೂಪದಲ್ಲಿ ಬಂದಿದ್ದಾನೆ ಎಂದೇ ಇರುತ್ತದೆ.
ಆ ಬಳಿಕ ಮನಸ್ಸಿನೊಳಗೆ ಏಳುವ ತುಮುಲ, ಗೊಂದಲ, ಕಾನೂನು-ಮಾನವೀಯತೆ, ಸಂಬಂಧಗಳು-ಎಲ್ಲವೂ ಸಂದರ್ಭದ ಮೂಸೆಯಲ್ಲಿ ಹೊಕ್ಕು ಪರಿಸ್ಥಿತಿಯ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಪೌಲೋವಿನ ಸೋದರ ಕೊಡುವ ಪುಕ್ಕಟೆ ಸಲಹೆಗಳು [ಪೊಲೀಸರಿಗೆ ತಿಳಿಸಿ ನಿರಾಳವಾಗು, ಮೊದಲೇ ಸಮಸ್ಯೆಯಿಂದ ಬಳಲುತ್ತಿದ್ದೀಯ, ವಲೇರಿಯಾಳು ಮಾರ್ಕೋವಿನ ನಿಧನದಿಂದ ಸೋತಿದ್ದಾಳೆ, ಹೊಸ ಸಮಸ್ಯೆ ಸೃಷ್ಟಿಸಿಕೊಳ್ಳಬೇಡ, ಅದರಲ್ಲೂ ಅವನು ಮುಸ್ಲಿಂ. ಅನಗತ್ಯ ಸಮಸ್ಯೆಗಳು ಉದ್ಭವಿಸಿಯಾವು ಇತ್ಯಾದಿ], ಆ ಸೋದರನ ಮಗ ಪೀಟ್ರೋವಿನ ವರ್ತನೆ, ವಲೇರಿಯಾನ ಅಮ್ಮ ಒಬ್ಬ ವಲಸಿಗ ಮತ್ತು ಸಮುದಾಯದ ಬಗ್ಗೆ ಹೊಂದಿದ್ದ ಭಾವನೆ ಎಲ್ಲವೂ ಈ ಹೊತ್ತಿನ ಸಮಾಜದ ಒಂದೇ ಮುಖಕ್ಕೆ ಹೋಲುತ್ತವೆ. ಆದರೆ ಪುಟ್ಟ ಬಾಲಕ ಮುಹಮ್ಮದ್ ನನ್ನು ತಮ್ಮ ಮಾರ್ಕೋವಿನಂತೆ ಭಾವಿಸಿ ಅಗಾಧವಾಗಿ ಪ್ರೀತಿಸುವ ಪೌಲೋ ಮತ್ತು ವಲೇರಿಯಾರಿಗೆ ಇವರಾರ ಪುಕ್ಕಟೆ ಸಲಹೆಗಳೂ ತಮ್ಮ ಸಮಸ್ಯೆಯಿಂದ ಹೊರಬರುವ ಪರಿಹಾರವಾಗಿ ತೋರುವುದಿಲ್ಲ. ಅಂತಿಮವಾಗಿ ಮುಹಮ್ಮದ್‌ನನ್ನು ತನ್ನೊಳಗೆ ತಂದುಕೊಂಡ ವಲೇರಿಯಾಳಿಗೂ ತನ್ನ ಪತಿಯ ಕೆಲವು ಕ್ರಮಗಳು ಪರಿಹಾರವಾಗಿ ತೋರುವುದಿಲ್ಲ. ಹಾಗಾಗಿ ತನ್ನ ತಂದೆ ತಾಯಿ ಸ್ವೀಡನ್ ನಲ್ಲಿದ್ದಾರೆಂದು ಭಾವಿಸಿದ ಮುಹಮ್ಮದ್‌ನನ್ನು ದಟ್ಟವಾಗಿ ಆವರಿಸಿಕೊಂಡ ಮಂಜಿನ ಮಧ್ಯೆಯೂ ತನ್ನ ಕಾರಿನಲ್ಲಿ ಸ್ವೀಡನ್‌ನತ್ತ ಕರೆದೊಯ್ಯುತ್ತಾಳೆ ವಲೇರಿಯಾ.
ಕಥೆಯನ್ನು ಕರೆದುಕೊಂಡು ಹೋಗಲು ಬಳಸಿದ ಹಲವು ದೃಶ್ಯಗಳಲ್ಲಿ-ವಿಶೇಷವಾಗಿ ಪೌಲೋ ಮತ್ತು ವಲೆರಿಯಾರಿಗೆ ಸಂಬಂಧಿಸಿದಂತೆ-ಇಬ್ಬರ ಅಭಿನಯವೂ ಮೆಚ್ಚುವಂತಿದೆ. ನಿರ್ದೇಶಕನಿಗೆ ಕಥೆ ಹೇಳಲು ಬರುವುದಿಲ್ಲವೆಂದಲ್ಲ ; ಕೆಲವು ಕಡೆ ಆವರಿಸಿಕೊಂಡ ನಾಟಕೀಯತೆ ಎಚ್ಚರ ತಪ್ಪಿಯೋ ಅಥವಾ ಜನಪ್ರಿಯ ವ್ಯಾಖ್ಯಾನದಲ್ಲಿ ಸರಳ ಪರಿಹಾರ ಕಂಡುಕೊಳ್ಳಲು ನಡೆಸಿದ ಪ್ರಯತ್ನವೋ ಎಂದು ತಿಳಿಯಲಾರದು. ಹಲವು ಬಾರಿ ಎರಡನೆಯದೇ ಸರಿ ಎಂದೆನಿಸುವುದುಂಟು.
ಆದರೆ ಪೌಲೋವಿನ ಅಭಿನಯ ನಮ್ಮನ್ನು ಹಲವೆಡೆ ಹಿಡಿದಿಡುತ್ತದೆ. ಜತೆಗೆ ಮುಹಮ್ಮದ್ ಸಹ. ಅದರಲ್ಲೂ ವಲೇರಿಯಾ ತನ್ನೊಳಗಿನ ದುಃಖಕ್ಕೆ ಕೊಡುವ ವಿನ್ಯಾಸಗಳು ಅವಳ ಪಾತ್ರದ ತುಂಬಾ ಕಾಣುತ್ತವೆ. ಮೊದಲಿಗೆ ಹೊಸ ಸಮಸ್ಯೆಯೊಂದು ಮನೆಯೊಳಗೆ ಬಂದಿದೆ ಎಂದು ಎಣಿಸುವ ವಲೇರಿಯಾ ಕ್ರಮೇಣ ಆ ಸಮಸ್ಯೆಯನ್ನು ಒಪ್ಪಿಕೊಂಡು ಪರಿಹಾರ ಹುಡುಕಲು ಹೊರಡುತ್ತಾಳೆ. ಆ ಹೊತ್ತಿನಲ್ಲಿ ಎಲ್ಲರ ಸಲಹೆಗಳೂ [ತನ್ನ ಅಮ್ಮನಂಥವರದ್ದು ವಿಶೇಷವಾಗಿ] ಪರಿಸ್ಥಿತಿಯ ಪಲಾಯನವೇ ಹೊರತು ಪರಿಹಾರವಲ್ಲ ಎಂದೆನಿಸಿ, ಆ ಪರಿಸ್ಥಿತಿಯನ್ನು ತಾನೇ ಎದುರಿಸಲು ಸಜ್ಜಾಗುತ್ತಾಳೆ. ಆ ಕ್ಷಣದ ಅವಳ ಅಚಲತೆ ಒಂದು ನೆಲೆಯಲ್ಲಿಸಮಾಜದಲ್ಲಿನ ಆಶಾವಾದವಾಗಿಯೂ ತೋರುತ್ತದೆ.
ಮುಹಮ್ಮದ್‌ನ ಅರೇಬಿಕ್ ತಿಳಿಯದೇ, ಅವನೊಂದಿಗೆ ಸಂಭಾಷಿಸಲು ಸೋಲುವ ದಂಪತಿ, ಆ ಮೂಲಕವೇ ಪರಸ್ಪರ ಭಾವನೆಗಳ ಮೂಲಕ ಅರಿಯಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಮೂವರೂ ತೊಡಗಿಕೊಳ್ಳುತ್ತಲೇ ಪರಸ್ಪರ ಪರಿಚಿತರಾಗುತ್ತಾರೆ. ವಲೇರಿಯಾ ಮನೆಯಲ್ಲೂ ಹೊಸ ಗಾಳಿ [ಆಶಾವಾದ] ಬೀಸತೊಡಗುತ್ತದೆ.
ಕೆಲವು ದೃಶ್ಯಗಳಲ್ಲಿ ತೀರಾ ಗೊಂದಲವೆನಿಸಿಬಿಡುವ ನಿರ್ದೇಶಕ, ಕೊನೆಗೂ ಪರಿಸ್ಥಿತಿಯ ದಡದಲ್ಲೇ ಉಳಿದು ಬಿಡುತ್ತಾನೆ ಎಂದೆನಿಸುತ್ತದೆ. ಆಧುನಿಕ ಬದುಕಿನ ವೈರುಧ್ಯಗಳನ್ನು ವಿವರಿಸುತ್ತಲೇ ಅದರೊಳಗೆ ಸಿಲುಕಿಕೊಳ್ಳುವುದು, ಅದೇ ಪರಿಹಾರವೋ ಎಂಬ ಭ್ರಮೆಗೂ ಕೆಲವೊಮ್ಮೆ ನಿರ್ದೇಶಕ ಸಿಲುಕುತ್ತಾನೆ ಎಂದೆನಿಸುವುದೂ ಉಂಟು. ಉದಾಹರಣೆಗೆ, ಅರೆಬಿಕ್ ಅರ್ಥವಾಗದ ಮುಹಮ್ಮದ್‌ನ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಹೆಣಗುವ ಪೌಲೋ ದಂಪತಿಗೆ ಅವನ ಸೋದರನ ಮಗ ಪೀಟ್ರೋ ತನ್ನ ಮೊಬೈಲ್‌ನ ಅನುವಾದ ತಂತ್ರ [ಅರೆಬಿಕ್‌ನಲ್ಲಿ ಮಾತನಾಡಿದ್ದನ್ನು ಇಟಲಿಯಲ್ಲಿ ಭಾಷಾಂತರಿಸುವ] ಹೊಸ ಪರಿಹಾರವೆಂದಂತೆ ತೋರುತ್ತದೆ. ಆದರೆ, ಅದಾದ ಬಳಿಕ ಆ ಸೀಮಿತತೆಯನ್ನು ಮೀರಿ ಭಾವನೆಯ ಭಾಷೆಯಲ್ಲಿ ಸಂವಾದಿಸುವುದನ್ನು ಮೂವರೂ ಕಲಿತುಕೊಳ್ಳುತ್ತಾರೆ. ಕೆಲವು ದಿನಗಳ ಬಳಿಕ ಒಂದು ಹಂತದಲ್ಲಿ ಪೌಲೋ, ಅನುವಾದ ಮಾಡಬಲ್ಲ ಮೊಬೈಲ್ ನಮಗೆ ಪರಿಹಾರವಾಗಬಹುದೆಂಬ ದೃಷ್ಟಿಯಲ್ಲಿವಲೇರಿಯಾದೊಂದಿಗೆ ಮಾತನಾಡುತ್ತಾನೆ. ಹಾಗೆಯೇ ಪೊಲೀಸರಿಗೆ ಈ ವಲಸಿಗ ಮುಹಮ್ಮದ್ ಬಗ್ಗೆ ಮಾಹಿತಿ ನೀಡಲು ಮೊದಲು ನಿರಾಕರಿಸುವ ಪೌಲೋ, ಕೊನೆಗೆ ಅವನೇ ಮನೆಗೆ ಪೊಲೀಸರನ್ನು ಕರೆಸುತ್ತಾನೆ. ಈ ಎರಡೂ ಸಂದರ್ಭಗಳಲ್ಲಿ ದ್ವಂದ್ವಗಳಲ್ಲಿ ನಾವು ಆಶಾವಾದಕ್ಕಿಂತಲೂ ಪಲಾಯನವಾದದ ಕಡೆಗೇ ವಾಲುತ್ತೇವೆಯೇ ಎಂಬ ಪ್ರಶ್ನೆಯನ್ನೂ ನಿರ್ದೇಶಕ ಇಡುತ್ತಾನೆ.
ವಲೇರಿಯಾ ಕೊನೆಗೆ ಮುಹಮ್ಮದ್‌ನನ್ನು ಸ್ವೀಡನ್‌ಗೆ ಬಿಟ್ಟು ಬರಲು ಹೊರಡುವ ದೃಶ್ಯ ಮಂಜಿನ ಹೊರತಾಗಿಯೂ ಬೆಳಕು ಇರುತ್ತದೆ, ರಸ್ತೆ ಸಾಗುತ್ತದೆ ಎಂಬುದನ್ನು ಹೇಳುವ ಮುಖೇನ ಬದುಕಿನ ಸಾಧ್ಯತೆಗಳನ್ನು ಎತ್ತಿ ಹಿಡಿಯುವುದು ಸ್ಪಷ್ಟ.
ಒಟ್ಟಿನಲ್ಲಿ ಆಹಾ ಅದ್ಭುತ ಎಂದು ಉದ್ಘಾರ ತೆಗೆಯಲು ಅಸಾಧ್ಯವೆನಿಸಿದರೂ, ನಿರ್ದೇಶಕ ಗೋರನ್ ವಲಸೆಯ ಕುರಿತ ಸಮಸ್ಯೆಯನ್ನು ವಿವರಿಸಲು ನಡೆಸಿದ ಪ್ರಯತ್ನ ಈ ವರ್ತಮಾನದ್ದು. ವಲೇರಿಯಾ, ಪೌಲೋ ಹಾಗೂ ಅವನ ಸೋದರನ ಪಾತ್ರಗಳ ಮೂಲಕ ಸಮಾಜದ ಪ್ರಸ್ತುತ ನೆಲೆಗಳನ್ನು ಗುರುತಿಸುವ ಪ್ರಯತ್ನ ನಿರ್ದೇಶಕನದ್ದು ವಲೇರಿಯಾ ಒಂದು ಆಶಾವಾದದ ನೆಲೆಯಾದರೆ, ಪೌಲೋ ವರ್ತಮಾನಕ್ಕೆ ಶರಣಾದ ಪಲಾಯನವಾದಿಯಂತೆ ತೋರುತ್ತಾನೆ. ಅವನ ಸೋದರ ಸಮಾಜದಲ್ಲಿನ ಯಥಾಸ್ಥಿತಿ ವಾದವನ್ನು [ಈಗಿನ ವರ್ತಮಾನದಲ್ಲಿ ಪ್ರತಿ ದೇಶಗಳಲ್ಲೂ ವಲಸೆ ಎಂಬುದು ಸಮಸ್ಯೆಯಂತೆ ಬಿಂಬಿಸಲಾಗುತ್ತಿದೆ. ಅಮೆರಿಕದಿಂದ ಹಿಡಿದು ಯುರೋಪಿನ ಹಲವು ರಾಷ್ಟ್ರಗಳ ಗಡಿಗಳಲ್ಲಿ ನಿತ್ಯವೂ ಇದೇ ಸಮಸ್ಯೆ ಎಂಬಂತಾಗಿದೆ] ಪ್ರತಿಪಾದಿಸುವವ. ತಮ್ಮ ವೈಯಕ್ತಿಕ ನಂಬಿಕೆ, ಮತಗಳಿಗಿಂತಲೂ ಮಿಗಿಲಾದುದು ಪ್ರೀತಿ, ಮಮತೆ ಎಂಬುದನ್ನು ಹೇಳಲು ಪ್ರಯತ್ನಿಸುವ ನಿರ್ದೇಶಕ, ತನ್ನ ವ್ಯಾಖ್ಯಾನಕ್ಕೆ ಬೆಂಬಲವಾಗಿ ಬಳಸುವ ಕೆಲವು ಸಾಮಾನ್ಯ-ಜನಪ್ರಿಯ ದೃಶ್ಯಗಳು [ಮುಸ್ಲಿಮ್ ಸಮುದಾಯದ ಬಗೆಗಿನ ದ್ವೇಷವನ್ನು, ಭಯವನ್ನು ಪೀಟ್ರೋ ಮತ್ತು ಅವನ ಅಪ್ಪ [ಪೌಲೋ ಸೋದರ]ವಿನ ಮೂಲಕ ಕೊಡಿಸುವುದು ಇತ್ಯಾದಿ] ಇಡೀ ಬಂಧವನ್ನು ಸಡಿಲಗೊಳಿಸುತ್ತದೆ. ಚಿತ್ರ ಮನಸ್ಸಿಗೆ ತಟ್ಟದಂತೆ ಮಾಡಿ, ಮತ್ತೊಂದು ನೆಲೆಯಲ್ಕಿ ಗೆಲ್ಲಬಹುದಾದ ಸಾಧ್ಯತೆಯನ್ನು ಕೊಂದು ಬಿಡುತ್ತದೆ.
ಗೋರನ್ ಇಟಲಿಯ ಸಮಕಾಲೀನ ಸಿನಿಮಾ ಜಗತ್ತಿನ ಮಹತ್ವದ ನಿರ್ದೇಶಕ. ಹದಿನೆಂಟು ಸಿನಿಮಾ, 30 ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದವ. ಹಲವಾರು ಪ್ರಶಸ್ತಿಗಳನ್ನೂ ಪಡೆದವ. ಹೊಸ ಸಂದರ್ಭದ ಸಂಗತಿಗಳನ್ನೇ ಚರ್ಚೆಗೆ ಒಳಪಡಿಸಿದವ.
ಮಾತೇ ಚೆನ್ನಾಗಿತ್ತು
ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಮಾನವ ವಲಸೆ ಕುರಿತು ನಿರ್ದೇಶಕ ಗೋರನ್ ಹೇಳಿದ ಮಾತುಗಳೇ ಕೆಲವೊಮ್ಮೆ ಅವರೇ ನಿರ್ಮಿಸಿದ ಚಿತ್ರಕ್ಕಿಂತಲೂ ಮಹತ್ವದ್ದಾಗಿದ್ದವು ಎಂದೆನಿಸುತ್ತದೆ. ಮಾನವ ವಲಸೆ ಒಂದ ಸಮಸ್ಯೆಯಲ್ಲ ; ಅತ್ಯುತ್ತಮ ಬದುಕನ್ನು ಅರಸಿ ಹೋಗುವ ಹಕ್ಕು ಎಲ್ಲರದ್ದೂ ಎಂಬರ್ಥದಲ್ಲಿ ಗೋರನ್ ಪ್ರತಿಕ್ರಿಯೆ ನೀಡಿದ್ದರು. ಆ ಅಭಿಪ್ರಾಯದ ತೀವ್ರತೆ ಚಿತ್ರದಲ್ಲಿ ಕೆಲವು ಸರಳ ನೆಲೆಗಳಲ್ಲಿ ಕಳೆದು ಹೋಗುತ್ತದೆ.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗೆದ್ದವರು ಯಾರು?
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.