ಸ್ವಲ್ಪ ಸ್ವಲ್ಪ ಶಿಲ್ಪ
Team Udayavani, Aug 9, 2017, 2:20 PM IST
ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕತೆಯಿದೆ… ಇಲ್ಲಿರೋದು ಶಿಲ್ಪಾ ಶೆಟ್ಟಿಯ ಕತೆ. ಈ ಶಿಲ್ಪ ಬೇಲೂರು ಹಳೇಬೀಡಿನದ್ದಲ್ಲ, ಮುಂಬೈಯದ್ದೂ ಅಲ್ಲ. ದಕ್ಷಿಣ ಕನ್ನಡದ ಪುತ್ತೂರಿನದ್ದು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಎರಡು ಕನಸು’ ಧಾರಾವಾಹಿಯ ಮುಖ್ಯ ಪಾತ್ರಧಾರಿ ಶಿಲ್ಪಾ. ಆ್ಯಕ್ಟರ್ ಆಗೋಕೆ ಎಂಜಿನಿಯರಿಂಗ್ ಓದಿಗೆ ಅಲ್ಪವಿರಾಮ ನೀಡಿರುವ ಶಿಲ್ಪಾ, ಕನಸುಗಳನ್ನು ಬೆನ್ನಟ್ಟಿ ಬಂದವರು. ಕಂಗಳಲ್ಲಿ ಬೆಟ್ಟದಷ್ಟು ಮಹತ್ವಾಕಾಂಕ್ಷೆಯನ್ನು ಹೊತ್ತುಕೊಂಡು ಗುರುತು ಪರಿಚಯವಿಲ್ಲದ ಊರಿಗೆ ಬಂದು, ತುಂಬಾ ಸರ್ಕಸ್ ಮಾಡಿರುವ ಅವರ ಕತೆಯನ್ನು ಅವರ ಪದಗಳಲ್ಲೇ ಕೇಳಿ.
ಇನ್ನರ್ ಕಾಲಿಂಗ್ ಆ್ಯಕ್ಟರ್ ಆಗು ಅನ್ನುತ್ತಿತ್ತು!
ನನ್ನೂರು ಪುತ್ತೂರು. ನನ್ನ ಸ್ಕೂಲಿಂಗ್ ಎಲ್ಲಾ ಆಗಿದ್ದೂ ಅಲ್ಲೇ. ರಾಮಕೃಷ್ಣ ಪ್ರೌಢಶಾಲೆ, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ. ಚಿಕ್ಕೋಳಿದ್ದಾಗ ಶಾಲೆಯಲ್ಲಿ ನಾಟಕ, ಡ್ಯಾನ್ಸು, ಮ್ಯೂಸಿಕ್ಕು ಅಂತ ಪಠ್ಯೇತರ ಚಟುವಟಿಕೆಗಳಲ್ಲೇ ಬ್ಯುಝಿಯಾಗಿರುತ್ತಿದ್ದೆ. ಕಾಂಪಿಟೀಷನ್ನು, ಪ್ರತಿಭಾ ಕಾರಂಜಿ, ನ್ಪೋರ್ಟ್ಸ್ ಅಂತ ಏನಾದರೊಂದು ನೆಪಗಳಿಂದ ಶಾಲೆಯಿಂದ ಹೊರಗೆ ಇರುತ್ತಿದ್ದಿದ್ದೇ ಹೆಚ್ಚು. ಆಗಿನಿಂದಲೂ ಆ್ಯಕ್ಟಿಂಗ್ ಅಂದ್ರೆ ಏನೋ ಒಂದು ಸೆಳೆತ. ಮನೆಯವರಿಗೆ ಅದು ಗೊತ್ತಿರಲಿಲ್ಲ. ಅದಕ್ಕೇ ನಾನು ಆ್ಯಕ್ಟರ್ ಆಗಬೇಕು ಅಂತ ಬೆಂಗಳೂರಿಗೆ ಬಂದಾಗ ಅವರಿಗೆ ಶಾಕ್ ಆಗಿತ್ತು. ನೆನ್ನೆ ಮೊನ್ನೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಓದಿಕೊಂಡಿದ್ದವಳು ಇವತ್ತು ಏಕಾಏಕಿ ಆ್ಯಕ್ಟಿಂಗ್ ಗೀಕ್ಟಿಂಗ್ ಅಂತ ಹೇಳ್ತಿದ್ದಾಳಲ್ಲಪ್ಪಾ ಅಂತ ಅವರಿಗೆ ಗಾಬರಿಯಾಗಿತ್ತು! ಅವರಿಗೆ ಅದು ಸಡನ್ ಅಂತ ಅನ್ನಿಸಿದ್ದರೂ, ನನಗೆ ಮಾತ್ರ ಸಡನ್ ಆಗಿರಲಿಲ್ಲ. ಆ್ಯಕ್ಟಿಂಗ್‌ನಲ್ಲಿ ಕೆರಿಯರ್ ರೂಪಿಸಿಕೊಳ್ಳಲು ನಿರ್ಧರಿಸುವ ಮೂಲಕ ಮೊದಲ ಬಾರಿಗೆ ನಾನು ನನ್ನ ಇನ್ನರ್ ಕಾಲಿಂಗ್, ನನ್ನೊಳಗಿನ ದನಿ ಹೇಳಿದಂತೆ ನಡೆದುಕೊಂಡಿದ್ದೆ.
ಅಪ್ಪ ಅಮ್ಮನ ಜೊತೆ ಡೀಲ್ ಮಾಡಿದ್ದೆ
ನಾನು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್. ಓದನ್ನು ಅರ್ಧಕ್ಕೇ ನಿಲ್ಲಿಸಿ ಬೆಂಗ್ಳೂರಿಗೆ ಬರುವುದು ಸುಲಭದ ಕೆಲಸವೇನೂ ಆಗಿರಲಿಲ್ಲ. ಅಪ್ಪ ಅಮ್ಮನನ್ನು ನಾನಾ ವಿಧಗಳಲ್ಲಿ ಕನ್ವಿನ್ಸ್ ಮಾಡಬೇಕಾಯಿತು. ಎಷ್ಟರಮಟ್ಟಿಗೆಯೆಂದರೆ ಕಡೆಗೆ ಡೀಲ್ ಮಾಡುವಷ್ಟರಮಟ್ಟಿಗೆ. ಏನಪ್ಪಾ ಡೀಲ್ ಅಂದರೆ ಸುಮಾರು 1 ವರ್ಷವಾದರೂ ಬೆಂಗಳೂರಿನಲ್ಲಿ ಇದ್ದು ಆ್ಯಕ್ಟಿಂಗ್ ಅವಕಾಶಗಳಿಗಾಗಿ ಹುಡುಕಾಟ ನಡೆಸುವುದು. ಅಷ್ಟರೊಳಗೆ ಬ್ರೇಕ್ ಸಿಕ್ಕಿಲ್ಲದಿದ್ದರೆ ಮನೆಗೆ ವಾಪಸ್ ಬಂದು ಸಹ್ಯಾದ್ರಿ ಎಂಜಿನಿಯರಿಂಗ್ ಪದವಿ ಕಂಪ್ಲೀಟ್ ಮಾಡೋದು. ಆದರೆ ನನ್ನ ಅದೃಷ್ಟಾನೋ ಏನೋ ಬಂದ ಕೆಲ ತಿಂಗಳಲ್ಲೇ ಲೀಡ್ ರೋಲ್ ಹುಡುಕ್ಕೊಂಡ್ ಬಂತು. ಆ ಅವಕಾಶ ಸಿಕ್ಕಿದ್ದು ಇನ್ನೊಂದು ಇಂಟರೆಸ್ಟಿಂಗ್ ಕತೆ.
ಬಾಗಿಲಿಗೆ ಬಂದ ಅದೃಷ್ಟಾನಾ ಒದ್ದು ಬಿಡುತ್ತಿದ್ದೆ. ಅಷ್ಟರಲ್ಲಿ…
ಒಂದಿನ ಸಿನಿಮಾ ಕ್ಷೇತ್ರದ ಗೆಳೆಯರ ಜೊತೆ ಸಿನಿಮಾ ನೋಡೋಕೆ ಅಂತ ಥಿಯೇಟರ್‌ಗೆ ಬಂದಿದ್ದೆ. ಆವಾಗ ಗೆಳತಿಯೊಬ್ಬಳು ನನ್ನನ್ನು ಒಬ್ಬರಿಗೆ ಪರಿಚಯ ಮಾಡಿಕೊಟ್ಟು, ಏನಾದರೂ ಚಾನ್ಸ್ ಇದ್ರೆ ನನಗೆ ಹೇಳು ಅಂದಳು. ಆ ಮಾತು ನಮ್ಮಿಂದ ಸ್ವಲ್ಪ ದೂರ ಕೂತಿದ್ದ ಮ್ಯೂಚುವಲ್ ಫೆಂಡ್ ಒಬ್ಬಳ ಕಿವಿಗೆ ಬಿದ್ದಿತ್ತು. ಎಂಥ ಕೋ ಇನ್ಸಿಡೆನ್ಸ್ ಎಂದರೆ ಆಕೆ ಎಲ್ಲೋ ಕೆಲಸ ಮಾಡುತ್ತಿದ್ದವಳು, ಒಂದು ತಿಂಗಳಲ್ಲಿ ಆ ಕೆಲಸ ಬಿಟ್ಟು ಸುವರ್ಣ ವಾಹಿನಿ ಸೇರಿಕೊಂಡಳು. ಅವಳು ಅಲ್ಲಿ ಸೇರಿಕೊಂಡ ಸ್ವಲ್ಪ ಸಮಯದಲ್ಲೇ ಹೊಸ ಧಾರಾವಾಹಿ “ಎರಡು ಕನಸು’ವಿನ ಕೆಲಸ ಶುರುವಾಗಿತ್ತು. ಪಾತ್ರವೊಂದಕ್ಕೆ ನಟಿಯೊಬ್ಬಳನ್ನು ಹುಡುಕುತ್ತಿದ್ದರು. ಆ ಕಾಮನ್ ಪ್ರಂಡ್ ನನಗೆ ಕರೆ ಮಾಡಿ ಆಡಿಷನ್ ಇದೆ ಬನ್ನಿ ಅಂತ ಕರೆದಳು.
ವಿಷಯವೇನೆಂದರೆ ನನಗೆ ಆಲ್‌ರೆಡಿ ಬೇರೆ ಚಾನೆಲ್‌ನ “ಹಾವಿನ’ ಧಾರಾವಾಹಿಯೊಂದರಲ್ಲಿ ಚಾನ್ಸ್ ಪಕ್ಕಾ ಆಗಿತ್ತು. ಅದಕ್ಕೆ ಇವರಿಗೆ ಬರಲ್ಲ ಅಂದುಬಿಟ್ಟೆ. ಆಮೇಲೆ ನಿರ್ಮಾಪಕರಾದ ಪ್ರದೀಪ್ ಬೆಳವಾಡಿ ಸರ್ ಕಾಲ್ ಮಾಡಿ ಆಡಿಷನ್‌ಗೆ ಕರೆದರು. ಅವರು ಕರೆದ ಮೇಲೆ ನನಗೆ ಹೋಗದೇ ಇರೋಕೆ ಮನಸ್ಸಾಗಲಿಲ್ಲ. ಅಲ್ಲಿ ಅಡಿಷನ್ ಕೊಟ್ಟಮೇಲೆ, ವರ್ಕ್ ಮಾಡಿದರೆ ಇಂಥಾ ಟೀಮ್ ಜೊತೆ ವರ್ಕ್ ಮಾಡಬೇಕು ಅಂತ ಅನ್ನಿಸಿತು. ಆಗ ನನಗೆ ಅದು ಮುಖ್ಯಪಾತ್ರಕ್ಕೆ ನಡೆದ ಆಡಿಷನ್ ಅಂತ ಗೊತ್ತಿರಲಿಲ್ಲ. ಸೆಲೆಕ್ಟ್ ಆದಾಗ ತುಂಬಾನೇ ಖುಷಿಯಾಯಿತು. ಎಂಥಾ ಒಳ್ಳೆ ಚಾನ್ಸ್ ಜಸ್ಟ್ ಮಿಸ್ ಆಗಿಬಿಡುತ್ತಿತ್ತಲ್ಲಾ ಎಂದು ನಿಟ್ಟುಸಿರಿಟ್ಟೆ. ಮಿಸ್ ಆಗದಿದ್ದುದು ನನ್ನ ಪುಣ್ಯ!
ತುಂಬಾ ಸರ್ಕಸ್ ಮಾಡಿದ್ದೀನಿ
ಕೇಳ್ಳೋದಕ್ಕೆ ತುಂಂಬಾ ಸಿಂಪಲ್ ಅನ್ನಿಸುತ್ತೆ. ಎಂಜಿನಿಯರಿಂಗ್ ಓದುತ್ತಿದ್ದ ಹುಡುಗಿ ಬೆಂಗ್ಳೂರಿಗೆ ಬಂದು ಅವಕಾಶಗಳಿಗಾಗಿ ಹುಡುಕಾಡುತ್ತಿದ್ದ ಪ್ರಾರಂಭದ ದಿನಗಳಲ್ಲೇ ಸುಲಭವಾಗಿ ಚಾನ್ಸ್ ಸಿಕು¤. ಇಲ್ಲಿಯ ತನಕದ್ದು ನನ್ನದು ಪುಟ್ಟ ಪಯಣ, ಇನ್ನೂ ಹೋಗಬೇಕಾಗಿರುವ ಹಾದಿ ತುಂಬಾ ಇದೆ ಅನ್ನೋದೆಲ್ಲವೂ ನಿಜ. ಆದರೆ ಒನ್‌ಲೈನಲ್ಲಿ ಹೇಳಿಬಿಡುವಷ್ಟು ಸುಲಭದ್ದಾಗಿರಲಿಲ್ಲ ನನ್ನ ಪಯಣ. ಮಂಗಳೂರಲ್ಲಿದ್ದಾಗ ಫ್ಯಾಷನ್ ಶೋಗಳಲ್ಲಿ ರ್‍ಯಾಂಪ್ ವಾಕ್ ಮಾಡಿದ್ದೀನಿ, ಜುವೆಲ್ಲರಿ, ಸಾರೀ ಮುಂತಾದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೀನಿ. ಗಾಂಧಿನಗರದಲ್ಲಿ ನಂದೊಂದು ಕಟೌಟ್ ಏಳುತ್ತೋ ಇಲ್ವೋ ಗೊತ್ತಿಲ್ಲ ಆದರೆ ಮಂಗ್ಳೂರಿನಲ್ಲಿ ಬೃಹತ್ ಗಾತ್ರದ ನನ್ನ ಅಡ್ವಟೈìಸ್‌ಮೆಂಟ್ ಹೋರ್ಡಿಂಗ್‌ಗಳು ಎದ್ದಿವೆ. ಇವೆಲ್ಲವನ್ನೂ ನಾನು ಮೆಟ್ಟಿಲುಗಳೆಂದೇ ಪರಿಗಣಿಸುತ್ತೀನಿ. ಅಂದ ಹಾಗೆ ಅಂತಾರಾಷ್ಟ್ರೀಯ ಆಟೋಮೊಬೈಲ್ ಬ್ರ್ಯಾಂಡ್ಗಳಾದ ಬೆಂಝ್, ಆಡಿ ಮುಂತಾದ ಕಾರುಗಳ ಎಕ್ಸ್‌ಪೋಗಳಲ್ಲಿ, ಕಾರುಗಳಿಗೆ ಮಾಡೆಲ್ ಆಗಿದ್ದೂ ಇದೆ.
ನೆಂಟರಿಷ್ಟರಿಂದ ಜೀವನ ಅರ್ಥ ಆಯ್ತು
ನಾನು ಬೆಂಗಳೂರಿಗೆ ಬಂದು ಆಡಿಷನ್ ಮೇಲೆ ಆಡಿಷನ್ ಕೊಡುತ್ತಿದ್ದೆ. ದಾರಾವಾಹಿ, ಸಿನಿಮಾ ಯಾವುದಾದರೂ ಸರಿ. ಆಡಿಷನ್‌ಗಳಲ್ಲಿ ನನ್ನಂತೆಯೇ ಕನಸುಗಳನ್ನಿಟ್ಟುಕೊಂಡು ಬರುತ್ತಿದ್ದ ಸಾವಿರಾರು ಜನರನ್ನು ನೋಡುತ್ತಿದ್ದೆ. ಅವರಿಂದ ಕಲಿಯುತ್ತಿದ್ದೆ. ಅದಕ್ಕೋಸ್ಕರಾನೇ ನಾನು ಅವಕಾಶ ಖಂಡಿತ ಸಿಗೋದಿಲ್ಲ ಅಂತ ಗೊತ್ತಿದ್ರೂ ಹೋಗುತ್ತಿದ್ದೆ. ಈ ನ‚ಡುವೆ ಒಂದು ಸಿನಿಮಾ ಚಾನ್ಸ್ ಸಿಕ್ಕಿತ್ತು. ಅಪ್ಪ ಅಮ್ಮಂದಿರಿಗೆ ಮಗಳು ಏನೋ ಸಾಧಿಸಿದ ಸಂತಸ. ನೆಂಟರಿಷ್ಟರೆಲ್ಲಾ ವಿಷಯ ತಿಳಿದು ಅಭಿನಂದಿಸಿದ್ದರು. ಆದರೆ ಆಮೇಲೆ ಕೆಲ ಕಾರಣಗಳಿಂದ ಆ ಸಿನಿಮಾ ನಿಂತುಹೋಯಿತು. ಯಾರು ನನ್ನನ್ನು ಅಬಿನಂದಿಸಿದ್ದರೋ ಅವರೇ ಒಂದು ರೀತಿ ಹಗುರವಾಗಿ ಮಾತಾಡಿದರು. ಬೇಜಾರಾಯ್ತು. ಜೀವನ ಏನು ಅಂತ ಆಗ ಅರ್ಥ ಆಯ್ತು.
ಮಂಗಳೂರು ಭಾಷೆಯ ಪ್ರಾಬ್ಲೆಂ
ಧಾರಾವಾಹಿ ಶೂಟಿಂಗ್ ಟೈಮಲ್ಲಿ ಎದುರಾದ ಮೊದಲ ಸವಾಲೆಂದರೆ ಭಾಷೆಯದ್ದು. ನಿಮಗೇ ಗೊತ್ತು ನಮ್ಮ ಮಂಗಳೂರು ಕಡೆಯ ಕನ್ನಡ ಮಿಕ್ಕ ಪ್ರಾಂತ್ಯದಲ್ಲಾಡುವ ಕನ್ನಡಕ್ಕಿಂತ ಎಷ್ಟು ಭಿನ್ನ ಅಂತ. ಸ್ಪಷ್ಟ ಮತ್ತು ಬಿಡಿಬಿಡಿಯಾದ ಉಚ್ಚಾರಣೆಯಿಂದ ಡೈಲಾಗ್ ಡೆಲಿವರಿ ನಿರ್ದೇಶಕರು ಅಂದುಕೊಂಡಂತೆ ಬರುತ್ತಿರಲಿಲ್ಲ. ಶಾಟ್ ಓಕೆ ಆಗದೇ ಹಲವಾರು ಟೇಕ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಸಹನಟಿ ಅದ್ವಿತಿ ಶೆಟ್ಟಿಯದೂ ಅದೇ ಸಮಸ್ಯೆಯಾಗಿತ್ತು. ಡಬ್ಬಿಂಗ್ ಮಾಡಿಸೋಕೆ ನಮಗಿಷ್ಯವಿರಲಿಲ್ಲ. ಅದಕ್ಕೆ ನಾವಿಬ್ಬರೂ ಹೇಗಾದರೂ ಮಾಡಿ ಈ ಸಮಸ್ಯೆಯಿಂದ ಪಾರಾಗಬೇಕೆಂದು ತುಂಬಾ ಪ್ರಯತ್ನ ಪಟ್ಟೆವು. ನಾನು ಪುಸ್ತಕಗಳನ್ನು ಓದಲು ಶುರುಮಾಡಿದೆ. ಮಾತಾಡೋವಾಗ ತುಂಬಾ ಕಾನ್ಷಿಯಸ್ ಆಗಿರುತ್ತಿದ್ದೆ. ಇನ್ನೊಬ್ಬರು ಮಾತಾಡೋವಾಗ ಅವರ ಪದಗಳು ಮತ್ತು ಶೈಲಿಯನ್ನು ತುಂಬಾ ಗಮನಿಸುತ್ತಿದ್ದೆ. ಶೂಟಿಂಗ್ ಸಮಯದಲ್ಲಿ ಭಾರ್ಗವಿ ನಾರಾಯಣ್ ಮೇಡಂ ಅಂತೂ ಅವರು ಬರೆದ ಕೆಲ ಕನ್ನಡ ಪುಸ್ತಕಗಳನ್ನು ಕೊಟ್ಟು ಓದು ಅಂತ ಹೇಳಿದರು. ಈಗಲೂ ಅಭ್ಯಾಸ ಮುಂದುವರಿದಿದೆ. ಹಿರಿಯ ನಟ ಶ್ರೀನಾಥ್ ಸರ್, ನಾಗೇಶ್ ಸರ್ ಎಲ್ರೂ ತುಂಬಾನೇ ಸಪೋರ್ಟ್ ಮಾಡ್ತಾರೆ ಇಂಪ್ರೂವ್ ಮಾಡಿಕೊಳ್ಳೋಕೆ.
ನಿರ್ದೇಶಕರಿಂದ ಸೆಟ್‌ನಲ್ಲಿ ಸುತ್ತೋಲೆ
ನಿಮೊತ್ತಾ ನನ್ನ ಕನ್ನಡ ಇಂಪ್ರೂವ್ ಆಗಬೇಕು ಅಂತ ಧಾರಾವಾಹಿ ನಿರ್ದೇಶಕಿ ಮೊಹಿನಾ ಸಿಂಗ್ ಒಂದು ಸುತ್ತೋಲೆಯನ್ನೂ ಹೊರಡಿಸಿಬಿಟ್ಟಿದ್ದರು. ಸೆಟ್‌ನಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಕನ್ನಡದಲ್ಲೇ ಮಾತಾಡಬೇಕು ಅಂತ. ಕನ್ನಡ ಗೊತ್ತಿಲ್ಲದಿದ್ದರೆ ಕಲಿಯಬೇಕು ಅಂತ. ನಮ್ಮ ನಿರ್ದೇಶಕಿ ಮೂಲತಃ ಪಂಜಾಬಿ. “ಪಂಜಾಬಿಯಾದ ನಾನೇ ಕನ್ನಡದಲ್ಲಿ ಮಾತಾಡ್ತಿದ್ದೀನಿ ನೀವೂ ಮಾತಾಡಿ’ ಅಂದಿದ್ದರು ಅವರು.
ಬುಲ್‌ಪೆಲ್ ಶೆಟ್ಟಿ
ನಾನು ಶಾರ್ಟ್ ಟೆಂಪರ್ಡ್ ನಿಜ. ಅದಕ್ಕಿಂತ ಹೆಚ್ಚಾಗಿ ಅಳುಮುಂಜಿ. ಸ್ಕೂಲ್‌ಡೇಸ್‌ನಲ್ಲಿ ನನ್ನ ಅಡ್ಡ ಹೆಸರು “ಬುಲ್‌ಪೆಲ್ ಶೆಟ್ಟಿ’ ಆಗಿತ್ತು. ಅಂದ್ರೆ ಅಳುಮುಂಜಿ ಶೆಟ್ಟಿ ಅಂತ. ನನ್ನ ಹಳೆ ಫೋಟೋಗಳನ್ನು ನೋಡಿದರೆ ನಿಮಗೇ ತಿಳಿಯುತ್ತೆ. ಯಾವುದರಲ್ಲೂ ನಗುವಿಲ್ಲ. ಗಂಭೀರವಾಗಿ ಅಳುವವಳಂತೆ ಪೋಸು ಕೊಡುತ್ತಿದ್ದೆ. ಈಗಲೂ ಯಾರಾದರೂ ಸಿಕ್ಕರೆ “ಮುಂಚೆ ಅಷ್ಟೊಂದು ಅಳ್ತಿದಿಯಲ್ಲಾ. ಈಗಲೂ ಅಳ್ತೀಯಾ?’ ಅಂತ ಕೇಳುತ್ತಾರೆ. ನಾನು ಈಗಲೂ ಅಳುತ್ತೇನೆ. ಇತ್ತೀಚಿಗೆ ಸೆಟ್‌ನಲ್ಲಿ ಅತ್ತಿದ್ದೆ. ಕುಮಾರನ್ ಸ್ಕೂಲ್‌ನಲ್ಲಿ ಶೂಟಿಂಗ್ ನಡೀತಿತ್ತು. ಆವತ್ತು ನನ್ನ ಬರ್ತ್‌ಡೇ. ಶೂಟಿಂಗ್ ಮುಗಿಸಿ ಬೇಗ ಮನೆಗೆ ಹೋಗಿ ಸೆಲಬ್ರೇಟ್ ಮಾಡೋಣ ಅಂದೊRಂಡಿದ್ದೆ. ಆದರೆ ಶೂಟಿಂಗ್ ಮುಗಿತಾನೇ ಇಲ್ಲ. ದುಃಖ ತುದೀಲಿತ್ತು. ಅಷ್ಟರಲ್ಲಿ ಯಾರೋ ನನ್ನ ಶಾಟ್ ಬಗ್ಗೆ ಏನೋ ಅಂದರು ಅಂತ ಜೋರಾಗಿ ಅಳ್ಳೋಕೆ ಶುರುಮಾಡಿದೆ. ಎಲ್ರೂ ಸಮಾಧಾನ ಮಾಡಿದ್ರು.
ಅಪ್ಪ ಅಮ್ಮಂಗೋಸ್ಕರ ಯುದ್ಧ ಬೇಕಾದರೂ ಮಾಡ್ತೀನಿ
ಅಪ್ಪ ಅಮ್ಮನ ಬಗ್ಗೆ ನಾನು ತುಂಬಾ ಪ್ರೊಟೆಕ್ಟಿವ್ ಮನೋಭಾವ ಹೊಂದಿದ್ದೀನಿ. ಅಕ್ಕನ ಬಗ್ಗೆಯೂ ಅಕ್ಕರೆಯಿದೆ. ಆದರೆ ಅಪ್ಪ ಅಮ್ಮನ ಬಗ್ಗೆ ಯಾರಾದರೂ ಏನಾದರೂ ಅಂದರೆ ಅವರ ಮೇಲೆ ಯುದ್ಧಾನೇ ಸಾರಿಬಿಡ್ತೀನಿ. ಅಪ್ಪ ಅಮ್ಮ ಅಂದರೆ ಮುಂಚಿನಿಂದಲೂ ಪ್ರಾಣ. “ದಂಗಲ್’ ಫಿಲಂನಲ್ಲಿ ಅಪ್ಪನ ಕನಸನ್ನು ತನ್ನದಾಗಿಸಿಕೊಂಡು ಕಬಡ್ಡಿ ಮೆಡಲ್ ಗೆಲ್ಲಲು ಹೋರಾಟ ನಡೆಸುವ ಮಗಳ ಥರ ನಾನು ಅನ್ನಬಹುದು.
ಪ್ರಣಯ ರಾಜ ಶ್ರೀನಾಥ್ ಟಿಪ್ಸ್ ಕೊಡ್ತಾರೆ
ಶೂಟಿಂಗ್ ಸೆಟ್‌ನಲ್ಲಿ ಕಲಾವಿದರು ಹೇಗಿರುತ್ತಾರೆಂದು ನನ್ನ ಫ್ರೆಂಡ್ಸ್ ಹೇಳುತ್ತಿರುತ್ತಾರೆ. ಅವರಾಯಿತು, ಅವರ ಕೆಲಸವಾಯಿತು. ಯಾರ ಜೊತೇನೂ, ಒಂದು ಮಾತನ್ನೂ ಹೆಚ್ಚಿಗೆ ಆಡುವುದಿಲ್ಲ. ತಮ್ಮ ಸರದಿ ಆದ ಕೂಡಲೆ ಕುರ್ಚಿಯಲ್ಲಿ ಕೂತುಬಿಡುತ್ತಾರೆ. ಆದರೆ ಎರಡು ಕನಸು ಶೂಟಿಂಗ್‌ನಲ್ಲಿ ಹಾಗಿಲ್ಲವೇ ಇಲ್ಲ. ಇಲ್ಲಿ ಎಲ್ಲರೂ ಮನೆಯವರಂತೆಯೇ ಇದ್ದೇವೆ. ಒಂದು ಘಟನೆ ನೆನಪಾಗುತ್ತಿದೆ. ತಮ್ಮ ಸೀನು ಮುಗಿದ ಮೇಲೆ ಕುರ್ಚಿ ಮೇಲೆ ಕೂತು ಮಾತಾಡುವ ಶ್ರೀನಾಥ್ ಸರ್ ನನ್ನ ಸೀನ್ ಶೂಟ್ ಆಗುತ್ತಿದ್ದಂತೆಯೇ ಮಾನಿಟರ್ ಮುಂದೆ ಬಂದು ಕೂರುತ್ತಿದ್ದರು. ಸೆಟ್‌ನಲ್ಲಿದ್ದವರಿಗೆಲ್ಲಾ ಸಖತ್ ಆಶ್ಚರ್ಯ. ಯಾವತ್ತೂ ಹಾಗೆ ಕೂರದವರು ಯಾಕೆ ಹಾಗೆ ಮಾಡುತ್ತಿದ್ದಾರೆ ಅಂತ. ತುಂಬಾ ದಿನ ಹೀಗೇ ಆದಾಗ ಯಾರೋ ಕೇಳಿದ್ದಾರೆ ಯಾಕೆ ಅಂತ. ಆವಾಗ ಅವರು ಏನ್ ಹೇಳಿದ್ರು ಅಂದ್ರೆ “ಆ ಹುಡುಗಿಗೆ ಇದೆಲ್ಲಾ ಹೊಸದು. ನಮಗೇನೋ ಯಾರೂ ಇರಲಿಲ್ಲ ಹೇಳಿಕೊಡೋಕೆ. ಅವಳಿಗಾದ್ರೂ ಏನಾದ್ರೂ ಟಿಪ್ಸ್ ಕೊಡೋಣ’ ಅಂತ. ಅಷ್ಟು ದೊಡ್ಡ ಕಲಾವಿದರು ನನ್ನ ಬಗ್ಗೆ ಕಾಳಜಿ ತೋರಿಸ್ತಿದ್ದಾರೆ ಅಂದ್ರೆ ನಾನು ಅದೃಷ್ಟವಂತಳೇ ಅಲ್ವಾ?
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.