ಆ್ಯಕ್ಷನ್ ಅನ್ನುವ ಮುನ್ನ ಮೇಷ್ಟ್ರು ಹೇಳಿದ್ದು
Team Udayavani, Oct 18, 2017, 1:00 PM IST
“ಆರೋಗ್ಯ ಹೇಗಿದೆ ಅಂತ ಕೇಳಬಾರದು. ಅನಾರೋಗ್ಯ ಹೇಗಿದೆ ಎಂದು ಕೇಳಬೇಕು …’ ಎಂದು ನಕ್ಕರು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ. ಈ ಮಾತು ಅವರದ್ದಲ್ಲ. ಅವರ ಗುರುಗಳಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರದ್ದು. ಜಿ.ಎಸ್.ಎಸ್. ಅವರನ್ನು ಯಾರಾದರೂ, ಆರೋಗ್ಯ ಹೇಗಿದೆ ಎಂದು ಕೇಳಿದರೆ, ಅವರು ಇದೇ ಮಾತನ್ನು ಹೇಳುತ್ತಿದ್ದರಂತೆ. ಅದೇ ನಾತನ್ನು ಈಗ ಅವರ ಶಿಷ್ಯ ಎಚ್.ಎಸ್.ವಿ ಸಹ ಮುಂದುವರೆಸಿದ್ದಾರೆ.
“ಈ ಬಿ.ಪಿ, ಶುಗರ್‌ಗಳನ್ನೆಲ್ಲಾ ಕಾಯಿಲೆ ಅಂತಂದುಕೊಂಡರೆ ಸಮಸ್ಯೆ. ಅದರ ಬದಲು ಅವೆಲ್ಲಾ ನಮ್ಮ ಫ್ರೆಂಡ್ಸ್ ಅಂದುಕೊಂಡುಬಿಟ್ಟರೆ ತಲೆ ನೋವು ಇರೋಲ್ಲ’ ಎಂದು ಮತ್ತೂಮ್ಮೆ ನಕ್ಕರು ಎಚ್.ಎಸ್.ವಿ. ಈಗ ಅವರು ತಮ್ಮ ಅದೇ ಸ್ನೇಹಿತರ (ಬಿ.ಪಿ, ಶುಗರ್) ಜೊತೆಗೆ ಸೇರಿಕೊಂಡು ಒಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಈ ವಯಸ್ಸಲ್ಲಿ ಅವರಿಗೆ ಇಂಥ ಉಮೇದು ಯಾಕೆ ಬಂತು ಎಂಬ ಪ್ರಶ್ನೆ ಬರಬಹದು. ಏಕೆಂದರೆ, ವೆಂಕಟೇಶಮೂರ್ತಿಗಳಿಗೆ ಈಗ 73.
ಮೊಮ್ಮಕ್ಕಳ ಜೊತೆಗೆ ಆಟ ಆಡಿಕೊಂಡಿರಬೇಕಾದ ಸಮಯದಲ್ಲಿ, ನಿರ್ದೇಶನದಂತಹ ದೊಡ್ಡ ಜವಾಬ್ದಾರಿ ಹೊರುವುದು ಬೇಕಾ ಎಂಬ ಸಹಜ ಕಳಕಳಿ ಎಲ್ಲರದು. ಆದರೆ, ವೆಂಕಟೇಶಮೂರ್ತಿಗಳು ಒಂದು ಕೈ ನೋಡೇಬಿಡುವ ಎಂದು ಹೊರಟಿದ್ದಾರೆ. ತಮ್ಮ ನಿರ್ದೇಶನದ “ಹಸಿರು ರಿಬ್ಬನ್’ ಎಂಬ ಮೊದಲ ಚಿತ್ರವನ್ನು ಕಳೆದ ತಿಂಗಳು ಶುರು ಮಾಡಿದ್ದಾರೆ. ಹಿರಿಯ ವಯಸ್ಸಿನಲ್ಲಿ ನಟರಾದವರು ಹಲವು ಮಂದಿ ಸಿಗುತ್ತಾರೆ.
ಆದರೆ, 73ರ ವಯಸ್ಸಿನಲ್ಲಿ ನಿರ್ದೇಶಕರಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸದು ಮತ್ತು ಅಂಥದ್ದೊಂದು ಸಾಹಸ ಮತ್ತು ದಾಖಲೆಯನ್ನು ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಇಷ್ಟು ವರ್ಷ ದುಡಿದವರಿಗೆ ಹಿರಿಯರು ಎನ್ನುತ್ತಾರೆ. ಆದರೆ, ಎಚ್.ಎಸ್.ವಿ ಅವರು ಹಿರಿಯರಾಗಿಯೇ (ಅವರಿಗೆ 73 ವರ್ಷ ನೆನಪಿರಲಿ!) ನಿರ್ದೇಶನಕ್ಕೆ ಬಂದಿದ್ದಾರೆ. ಹಾಗಾಗಿ ಮೊದಲ ಪ್ರಯತ್ನದಲ್ಲೇ ಹಿರಿಯ ನಿರ್ದೇಶಕರಾಗಿದ್ದಾರೆ. ಈ ಹಿರಿಯ ನಿರ್ದೇಶಕರ ಜೊತೆಗೆ ಒಂದು ಸಣ್ಣ ಮಾತುಕತೆ “ರೂಪತಾರಾ’ಗಾಗಿ …
“ಐ ಹ್ಯಾವ್ ವಕ್ಡ್ ವಿಥ್ ದಿ ಬೆಸ್ಟ್ ಮೈಂಡ್ಸ್ …’
ಬಹುಶಃ ಅವರೆಲ್ಲರ ಹೆಸರುಗಳನ್ನು ನೆನಪಿಸಿಕೊಳ್ಳುವುದಕ್ಕೆ ಒಂದೆರೆಡು ಕ್ಷಣ ಕಾದರು ಅನಿಸುತ್ತದೆ. ಮರುಕ್ಷಣವೇ, “ಬಿ.ವಿ. ಕಾರಂತರು, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಎಂ.ಎಸ್. ಸತ್ಯು, ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್. ಸೀತಾರಾಂ … ಹೀಗೆ ಒಂದಿಷ್ಟು ಪ್ರತಿಭೆಗಳ ಜೊತೆಗೆ ಕೆಲಸ ಮಾಡಿದ್ದೀನಿ. ಅವರಿಂದ ಸಾಕಷ್ಟು ಕಲಿತಿದ್ದೀನಿ. ಅವರೆಲ್ಲಾ ನನಗೆ ಪರೋಕ್ಷ ಗುರುಗಳಿದ್ದಂತೆ. ಕಲಿತಿದ್ದನ್ನೆಲ್ಲಾ ತೋರಿಸಬೇಕು ಅಂತಲ್ಲ.
ಆದರೆ, ಎರಡು ವರ್ಷಗಳ ಹಿಂದೆ “ಒಂದೂರಲ್ಲಿ’ ಎಂಬ ಸಿನಿಮಾಗೆ ಕೆಲಸ ಮಾಡಿದ್ದೆ. ನಮ್ಮ ನಿಖೀಲ್ ಮಂಜು ನಿರ್ದೇಶನದ ಚಿತ್ರ ಅದು. ಆಗ ಅವರು, ನೀವ್ಯಾಕೆ ಒಂದು ಸಿನಿಮಾದ ನಿರ್ದೇಶನ ಮಾಡಬಾರದು ಅಂತ ಕೇಳಿದ್ದರು. ಅವೆಲ್ಲಾ ನನ್ನಿಂದ ಸಾಧ್ಯವೇನಪ್ಪಾ ಎಂದಿದ್ದೆ. ಅವರು ಯಾಕೆ ಸಾಧ್ಯವಿಲ್ಲ ಎಂದರು. ಅವರು ನೈತಿಕವಾಗಿ ಒತ್ತಾಸೆಯಾಗಿ ನಿಂತಿದ್ದರಿಂದ ನಾನು ನಿರ್ದೇಶಕನಾಗುತ್ತಿದ್ದೇನೆ ಮತ್ತು “ಹಸಿರು ರಿಬ್ಬನ್’ ಚಿತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ವೆಂಕಟೇಶಮೂರ್ತಿ.
ಸಿನಿಮಾ ನಿರ್ದೇಶನಕ್ಕಿರುವ ಸಾಕಷ್ಟು ಸವಾಲುಗಳ ಬಗ್ಗೆ ವೆಂಕಟೇಶಮೂರ್ತಿ ಅವರಿಗೆ ಚೆನ್ನಾಗಿ ಅರಿವಿದೆ. “ಇಲ್ಲಿಯವರೆಗೂ ಇದು ನನ್ನ ಮಾಧ್ಯಮವಾಗಿತ್ತು. ಯಾವುದೇ ಬಾಧ್ಯತೆಗಳಿರಲಿಲ್ಲ. ಸಂಪೂರ್ಣ ಸ್ವಾತಂತ್ರ್ಯವಿತ್ತು. ನನ್ನ ಕೈಯಲ್ಲಿ ಪೇಪರ್ ಮತ್ತು ಪೆನ್ ಇತ್ತು. ಅನಿಸಿದ್ದನ್ನು ಬರೆಯಬಹುದಿತ್ತು. ಆದರೆ, ಸಿನಿಮಾ ಅನ್ನೋದು ಒಂದು ಟೀಮ್ ವರ್ಕ್. ಇಲ್ಲಿ ಬರೀ ಬರವಣಿಗೆ ಇದ್ದರೆ ಸಾಲದು. ನಾವು ಬರೆದಿದ್ದು ಸಮರ್ಥವಾಗಿ ತೆರೆಯ ಮೇಲೆ ಬರಬೇಕೆಂದರೆ, ಒಳ್ಳೆಯ ಕಲಾವಿದರು ಬೇಕು.
ನಾವು ಕಾಣೋದನ್ನು ಅವರು ತೋರಿಸಬೇಕು. ಹಾಗಾದಾಗಲಷ್ಟೇ ಅದಕ್ಕೊಂದು ಬೆಲೆ. ಬರೀ ಕಲಾವಿದರಷ್ಟೇ ಅಲ್ಲ. ಬೇರೆಯ ವಿಷಯಗಳು ಸಹ ಮುಖ್ಯವಾಗುತ್ತವೆ ಮತ್ತು ಹಲವು ಕಲೆಗಳ ನಿಪುಣರು ಇಲ್ಲಿ ಒಟ್ಟಾಗಿ ಒಂದು ಕೆಲಸ ಮಾಡಬೇಕಾಗುತ್ತದೆ. 10 ಜನರು ಇಲ್ಲಿ ಒಂದು ಕೆಲಸ ಮಾಡೋದೇ, ಈ ಮಾಧ್ಯಮದ ಸೊಗಸು. ಇದಕ್ಕೂ ಮುನ್ನ ನಾಟಕದಲ್ಲಿ ಕೆಲಸ ಮಾಡಿರುವುದರಿಂದ ಕಷ್ಟವೇನಿಲ್ಲ. ಈ ಮಾಧ್ಯಮದ ಸಂಬಂಧ ಮತ್ತು ಸ್ನೇಹ ಬಹಳ ವರ್ಷಗಳಿಂದ ಇರುವುದರಿಂದ ಸಿನಿಮಾ ನಿರ್ದೇಶನ ಕಷ್ಟವಾಗಲಿಕ್ಕಿಲ್ಲ’ ಎನ್ನುವುದು ಅವರ ಭಾವನೆ.
ಆದರೂ ಶಾಟ್ ಡಿವಿಷನ್ ಆಗಲೀ ಅಥವಾ ಇನ್ನಾéವುದೇ ತಾಂತ್ರಿಕ ಅಂಶವನ್ನು ವೆಂಕಟೇಶಮೂರ್ತಿ ಅವರು ಹೇಗೆ ನಿರ್ವಹಿಸಬಹುದು? ಅದು ಅಷ್ಟು ಕಷ್ಟ ಆಗಲಿಕ್ಕಿಲ್ಲ ಎನ್ನುವುದು ಅವರ ಅಭಿಪ್ರಾಯ. “ಕಥೆ ಬರೆಯುವಾಗಲೇ ಗೊತ್ತಾಗಿ ಬಿಡುತ್ತದೆ. ಇಲ್ಲಿ ಮಾಧ್ಯಮ ಬೇರೆ ಇರಬಹುದು. ಆದರೆ, ಒಬ್ಬ ಕಥೆಗಾರನಾಗಿ ನೋಡೋದು ಒಂದೇ ತರಹ ಇರತ್ತೆ. ನಾನು ಬರೆಯುವಾಗಲೇ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯ. ಅದು ತೆರೆಯ ಮೇಲೆ ಅಲ್ಪಸ್ವಲ್ಪ ಬದಲಾವಣೆಗಳಾಗಬಹುದು.
ಆದರೆ, ಕಲ್ಪನೆಗೆ ಚೌಕಟ್ಟು ಇರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ಕಾರಣಕ್ಕೆ ಕುವೆಂಪು ಅವರು, “ಅಂಗೈ ರಂಗಭೂಮಿ’ ಎಂದು ಕರೆದಿದ್ದರು. ಸಿನಿಮಾ ಆಗಲೀ, ನಾಟಕವಾಗಲೀ ಒಮ್ಮೆ ಮುಗಿದ ನಂತರ ಕೊನೆಯಾಗುತ್ತದೆ. ಆದರೆ, ಬರವಣಿಗೆ ಅಥವಾ ಕಲ್ಪನೆ ಎನ್ನೋದು ನೆವರ್‌ಎಂಡಿಂಗ್. ಒಂದು ಪುಸ್ತಕವನ್ನು ಓದುತ್ತಾ, ಪಾತ್ರಗಳನ್ನು, ಪರಿಸರವನ್ನು ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಬಹುದು. ಹಾಗಾಗಿ ಪುಸ್ತಕಕ್ಕಿಂತ ದೊಡ್ಡ ಕಲೆ ಬೇರೊಂದಿಲ್ಲ.
ಆದರೆ, ಎಲ್ಲರೂ ಪುಸ್ತಕವನ್ನು ಓದುವುದಿಲ್ಲ. ಹಾಗಾಗಿ ಒಂದು ಕಥೆಯನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ಹೇಳುವ ಪ್ರಯತ್ನವಾಯಿತು. ನಾಟಕ, ಹರಿಕಥೆ, ಸಿನಿಮಾ … ಇವೆಲ್ಲವೂ ಆ ತರಹದ ಮಾಧ್ಯಮಗಳು. ಈ ಮಾಧ್ಯಮಗಳೆಲ್ಲವೂ ಹೊಸ ಜನರನ್ನು ಆಕರ್ಷಿಸಿದವು’ ಎನ್ನುತ್ತಾರೆ ವೆಂಕಟೇಶಮೂರ್ತಿ. ಒಂದು ಚಿತ್ರ ಹೇಗಿರಬೇಕು ಅಥವಾ ವೆಂಕಟೇಶಮೂರ್ತಿ ಅವರ ಕಲ್ಪನೆಯ ಚಿತ್ರ ಹೇಗಿರುತ್ತದೆ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, 10 ಜನರ ಕಣ್ಣಲ್ಲಿ ನೀರು ಬರುವಂತಿರಬೇಕು ಎನ್ನುತ್ತಾರೆ ಅವರು.
“ನನ್ನ ಪ್ರಕಾರ ಒಂದು ಚಿತ್ರ ನೋಡಿದರೆ, ಅದು ಜನ ಮನಸ್ಸಿನಲ್ಲಿ ಉಳಿಯುವಂತಿರಬೇಕು. 10 ಜನರ ಕಣ್ಣಲ್ಲಾದರೂ ನೀರು ಬರಬೇಕು, ಹೃದಯ ತುಂಬಬೇಕು. ಇನ್ನೂ ಸರಿಯಾಗಿ ಹೇಳಬೇಕೆಂದರೆ, ಚಿತ್ರ ನೋಡಿದವರಿಗೆ ಬದುಕಿಕೊಂದು ಅರ್ಥ ಇದೆ ಎಂದು ಗೊತ್ತಾಗಬೇಕು. ಅದರಿಂದ ನಮ್ಮ ಜ್ಞಾನ ಹೆಚ್ಚುವುದರ ಜೊತೆಗೆ, ಹೊಸದೇನೋ ಅವರಲ್ಲಿ ಸೇರಬೇಕು. ಆಗ ಒಂದು ಚಿತ್ರ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂಬುದು ವೆಂಕಟೇಶಮೂರ್ತಿ ಅವರ ಅಭಿಪ್ರಾಯ.
“ಹಸಿರು ರಿಬ್ಬನ್’ ಚಿತ್ರದಲ್ಲಿ ಸಮಾಜದಲ್ಲಿ ಅಮಾಯಕ ಹೆಣ್ಮಕ್ಕಳನ್ನು ಹೇಗೆ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. “ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ ಮತ್ತು ಪ್ರತಿನಾಯಕ ಅಂತಿರುತ್ತಾರೆ. ಒಬ್ಬ ಒಳ್ಳೆಯದಕ್ಕೆ ಸಂಕೇತವಾದರೆ, ಇನ್ನೊಬ್ಬ ಕೆಟ್ಟದಕ್ಕೆ ಸಂಕೇತ. ನನ್ನ ಪ್ರಕಾರ, ಯಾರೂ ಒಳ್ಳೆಯವರಲ್ಲ. ಹಾಗೆಯೇ ಯಾರೂ ಕೆಟ್ಟವರೂ ಆಗಿರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕಾಗುತ್ತದೆ.
ಈ ಚಿತ್ರದಲ್ಲಿ ವ್ಯಕ್ತಿ ಮತ್ತು ಸಮಾಜವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೀನಿ. ಇಲ್ಲಿ ಭಾಷೆಯನ್ನು ಸರಳವಾಗಿ ಮತ್ತು ಚೆನ್ನಾಗಿ ಬಳಸಿಕೊಳ್ಳುವ ಯೋಚನೆ ಇದೆ. ಈ ಹಿಂದೆ ಕವಿತೆಗಳಲ್ಲಿ ಏನು ಮಾಡಿದ್ದೆನೋ, ಅದನ್ನೇ ಈಗ ದೃಶ್ಯ ಮಾಧ್ಯಮದಲ್ಲಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಇಲ್ಲಿ ಭಾಷಾ ಸೂಕ್ಷ್ಮತೆ, ಸಂಬಂಧಗಳ ಸೂಕ್ಷ್ಮತೆ ಮತ್ತು ಅನುಭವಗಳ ಸೂಕ್ಷ್ಮತೆ ಇರುತ್ತದೆ’ ಎನ್ನುತ್ತಾರೆ ಎಚ್.ಎಸ್. ವೆಂಕಟೇಶಮೂರ್ತಿ.
“ಹಸಿರು ರಿಬ್ಬನ್’ ಚಿತ್ರಕ್ಕೆ ಉಪಾಸನಾ ಮೋಹನ್ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ ಮಾಡಿದರೆ, ಶ್ರೀಧರ್ ಹೆಗಡೆ ಅವರ ಸಂಕಲನವಿದೆ. ಚಿತ್ರದಲ್ಲಿ ನಿಖೀಲ್ ಮಂಜು, ಗಿರಿಜಾ ಲೋಕೇಶ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಎರಡು ಹಂತಗಳಲ್ಲಿ ಕನಕಪುರ ಸುತ್ತಮುತ್ತ ಚಿತ್ರೀಕರಿಸುವ ಯೋಚನೆ ಇದ್ದು, ಅಕ್ಟೋಬರ್ ಕೊನೆಯ ಹೊತ್ತಿಗೆ ಚಿತ್ರೀಕರಣ ಮುಕ್ತಾಯವಾಗಲಿದೆ.
ಸಿಂಪಲ್ ಮತ್ತು ಎಮೋಷನಲ್
ವೆಂಕಟೇಶಮೂರ್ತಿ ಅವರು ದಿಗ್ಗಜರೊಂದಿಗೆ ಕೆಲಸ ಮಾಡಿದವರು. ಅವರ ಯೋಚನೆ, ಕಲ್ಪನೆಗಳೆಲ್ಲಾ ಬೇರೆ ತರಹ. ಹಾಗಿರುವಾಗ ಅವರಿಗೆ ಹೊಸ ಸಿನಿಮಾಗಳ ಶೈಲಿ ಒಪ್ಪಿಗೆಯಾಗುತ್ತದಾ? ಖಂಡಿತಾ ಇಲ್ಲ ಎನ್ನುತ್ತಾರೆ ಅವರು. ಹಾಗಂತ ಅದು ತಪ್ಪಲ್ಲ ಎನ್ನುವುದು ಅವರ ಅಭಿಪ್ರಾಯ. “ಅದು ಅವರ ಸ್ಟೈಲ್. ಆ ಬಗ್ಗೆ ನಾನು ಮಾತಾಡುವುದು ತಪ್ಪಾಗುತ್ತದೆ. ನನ್ನ ಸ್ಟೈಲ್ ಬೇರೆಯೇ ಇದೆ. ನನ್ನ ಕವಿತೆಗಳು ಹೇಗಿರುತ್ತವೋ?
ಸಿನಿಮಾ ಸಹ ಅದೇ ತರಹ ಇರುತ್ತದೆ. ಸಿಂಪಲ್ ಮತ್ತು ಎಮೋಷನಲ್. ಜೊತೆಗೆ ಸುಲಭವಾಗಿ ಜನರಿಗೆ ತಲುಪುವಂತಿರಬೇಕು. ಅದಕ್ಕೆ ಹೆಚ್ಚು ಒತ್ತು ಕೊಡುತ್ತೀನಿ ನಾನು. ಪು.ತಿ.ನ ಅವರು ಹೇಳುತ್ತಿದ್ದರು. ನಮ್ಮ ಬರವಣಿಗೆಯಲ್ಲಿ “ವಿ’ಕಾರವಿರಬೇಕು ಎಂದು. “ವಿ’ಕಾರ ಎಂದರೆ ತಪ್ಪಾಗಿ ಅರ್ಥೈಸಬಾರದು. ಹಾಗೆಂದರೆ, ವಿನಯ, ವೈಖರಿ ಮತ್ತು ವಿಷಧತೆ ಎಂದರ್ಥ’ ಎಂದು ಅರ್ಥ ಮಾಡಿಸುತ್ತಾರೆ ಅವರು.
“ಬಾಳೊಂದು ಭಾವಗೀತೆ’ಯಿಂದ …
ಎಚ್.ಎಸ್. ವೆಂಕಟೇಶಮೂರ್ತಿ ಅವರು ನಿರ್ದೇಶನಕ್ಕಿಳಿದಿರುವುದು ಇದೇ ಮೊದಲಾದರೂ, ಕನ್ನಡ ಚಿತ್ರರಂಗ ಅವರಿಗೆ ಹೊಸದೇನಲ್ಲ, ಬರೀ ನಿರ್ದೇಶನವಷ್ಟೇ ಹೊಸದು. ಸುಮಾರು ಎರಡು ದಶಕಗಳ ಹಿಂದೆಯೇ “ಬಾಳೊಂದು ಭಾವಗೀತೆ’ ಎಂಬ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಗೀತಸಾಹಿತಿಯಾಗಿ ಬಂದರು. “ಸಿಂಹ ಮತ್ತು ಶ್ರೀನಾಥ್ ಇಬ್ಬರೂ ನನಗೆ ಬಹಳ ಆಪ್ತರು. ಒಂದು ಹಾಡು ಬರೆಯಬೇಕು ಅಂತ ಕರೆತಂದರು. ಅವರ ಒತ್ತಾಸೆಯಿಂದಾಗಿ ನಾನು ಚಿತ್ರರಂಗಕ್ಕೆ ಬಂದೆ.
ಈ ರಂಗದಲ್ಲಿ ಪೂರ್ಣಪ್ರಮಾಣವಾಗಿ ತೊಡಗಿಸಿಕೊಂಡಿದ್ದು, “ಚಿನ್ನಾರಿ ಮುತ್ತ’ ಚಿತ್ರದ ಮೂಲಕ. ನಮ್ಮ ಅಶ್ವತ್ಥ್, ನಾಗಾಭರಣ ಮತ್ತು ದತ್ತಣ್ಣ ನೀವೇ ಬರೀಬೇಕು ಎಂದರು. ಆ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ಹಾಡುಗಳನ್ನು ಸಹ ಬರೆದೆ. ಆ ಚಿತ್ರವನ್ನು ಜನ ಚೆನ್ನಾಗಿ ಸ್ವೀಕರಿಸಿದರು. ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ “ಕೊಟ್ರೇಶಿ ಕನಸು’ಗೆ ಹಾಡುಗಳನ್ನು ಬರೆದೆ. ನಂತರ “ಅಮೇರಿಕಾ ಅಮೇರಿಕಾ’, “ಕ್ರೌರ್ಯ’, “ಕೊಟ್ಟ’ ಮುಂತಾದ ಹಲವು ಚಿತ್ರಗಳಿಗೆ ಕೆಲಸ ಮಾಡಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ವೆಂಕಟೇಶಮೂರ್ತಿ.
ವ್ಯಾಸ ಮತ್ತು ವಾಲ್ಮೀಕಿ ಇಷ್ಟ
ಎಚ್.ಎಸ್. ವೆಂಕಟೇಶಮೂರ್ತಿ ಹೇಳುವಂತೆ ಯಾರೂ ಸಹ ಒಳ್ಳೆಯವರಲ್ಲ, ಹಾಗೆಯೇ ಯಾರೂ ಕೆಟ್ಟವರೂ ಅಲ್ಲ. “ನಮ್ಮೆಲ್ಲರಲ್ಲೂ ಮೋಹ, ಪ್ರೀತಿ ಎಷ್ಟಿದೆಯೋ, ಎವಿಲ್ ಸಹ ಅಷ್ಟೇ ಇದೆ. ಎಲ್ಲರಿಗೂ ಕೆಟ್ಟ ಯೋಚನೆ ಅನ್ನೋದು ಬಂದೇ ಬರುತ್ತದೆ. ಒಮ್ಮೊಮ್ಮೆ ಈ ಯೋಚನೆ ನಮಗೆ ಹೇಗೆ ಬಂತು ಅಂತ ನಮಗೇ ಆಮೇಲೆ ಆಶ್ಚರ್ಯವಾಗುತ್ತದೆ. ವಾಲ್ಮೀಕಿ ಋಷಿ ಇರಬಹುದು. ರಾಮನನ್ನು ಸೃಷ್ಟಿಸಿರಬಹುದು.
ಅವರೇ ರಾವಣನನ್ನೂ ಸೃಷ್ಟಿಸಿದ್ದಾರೆ. ರಾಮಾಯಣದಲ್ಲಿ ರಾಕ್ಷಸತೆ ಇಲ್ಲದಿದ್ದರೆ, ರಾಮನ ಗುಣಗಳಾಗಲೀ, ಸೀತೆಯ ಮಹತ್ವವಾಗಲೀ ಗೊತ್ತಾಗುವುದಿಲ್ಲ. ಮಹಾಭಾರತದಲ್ಲೂ ಈ ರೀತಿಯ ಹಲವು ಉದಾಹರಣೆಗಳನ್ನು ಕೊಡಬಹುದು. ಕೆಟ್ಟವರಿಲ್ಲದೆ ಕಥೆಗೆ ಅಥೆಂಟಿಸಿಟಿ ಇರುವುದಿಲ್ಲ. ಕೆಟ್ಟತನವಿದ್ದಾಗಲಷ್ಟೇ, ಒಳ್ಳೆಯತನ ಗೆಲ್ಲುವುದಕ್ಕೆ ಸಾಧ್ಯ. ಆ ನಿಟ್ಟಿನಲ್ಲಿ ನನಗೆ ವ್ಯಾಸ ಮತ್ತು ವಾಲ್ಮೀಕಿ ಬಹಳ ಇಷ್ಟ’ ಎನ್ನುತ್ತಾರೆ ವೆಂಕಟೇಶಮೂರ್ತಿ.
ಟಿಕೆಟ್‌ನಲ್ಲಿ ಬರೆದ ಹಾಡು
ಎಚ್.ಎಸ್.ವಿ ಅವರ ಜನಪ್ರಿಯ ಕವಿತೆಗಳಲ್ಲಿ “ಇಷ್ಟುಕಾಲ ಒಟ್ಟಿಗಿದ್ದು …’ ಸಹ ಒಂದು. ಈ ಹಿಂದೆ ಈ ಕವಿತೆಗೆ ರಾಗ ಸಂಯೋಜಿಸಲಾಗಿದೆ. ಈಗ ಪುನಃ ಸಂಗೀತ ನಿರ್ದೇಶಕ ಬಿ.ಜೆ. ಭರತ್ ಅವರು ಈ ಕವಿತೆಗೆ ಹೊಸದಾಗಿ ರಾಗ ಸಂಯೋಜಿಸಿ, “ಏಪ್ರಿಲ್‌ನ ಹಿಮಬಿಂದು’ ಎನ್ನುವ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಈ ಕವಿತೆಯನ್ನು ಬಹಳ ವಿಲಕ್ಷಣ ಸಂದರ್ಭದಲ್ಲಿ ಬರೆದಿದ್ದಾಗಿ ನೆನಪಿಸಿಕೊಳ್ಳುತ್ತಾರೆ ವೆಂಕಟೇಶಮೂರ್ತಿ ಅವರು.
“ನಾನು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಸ್‌ನಲ್ಲಿ ಹೊರಟಿದ್ದೆ. ಆಗ ಯಾಕೋ ಈ ಸಾಲುಗಳು ಹೊಳೆದವು. ಹೊಳೆದಿದ್ದನ್ನು ಟಿಕೆಟ್ ಮೇಲೆ ಬರೆದಿಟ್ಟುಕೊಂಡೆ. ಬರೆಯುತ್ತಾ ಬರೆಯುತ್ತಾ, ಹೊಳಲ್ಕೆರೆ ಬರುವಷ್ಟರಲ್ಲಿ ಇಡೀ ಪದ್ಯ ಮುಗಿದಿತ್ತು. ಈ ಕವಿತೆಗೆ ಚಂದ್ರು ರಾಗ ಸಂಯೋಜಿಸಿದ್ದರು. ಸಿ. ಅಶ್ವತ್ಥ್ ಮತ್ತು ರತ್ನಮಾಲ ಪ್ರಕಾಶ್ ಅವರು ಹಾಡಿದ್ದರು. ಹಾಡು ಜನಪ್ರಿಯವಾಗಿತ್ತು. ಈಗ ಆ ಕವಿತೆ ಮತ್ತೆ ಭರತ್ ಕೈಗೆ ಸಿಕ್ಕಿ ಹೊಸದಾಗಿ ಬಂದಿದೆ’ ಎನ್ನುತ್ತಾರೆ ವೆಂಕಟೇಶಮೂರ್ತಿ.
ಎಚ್‌ಎಸ್‌ವಿ ಭರವಸೆ
* ಸಿಂಪಲ್ ಕಥೆ ಇರುತ್ತೆ
* ಎಮೋಷನಲ್ ಸೀನ್ ಇರುತ್ತೆ
* ಜೋಗುಳದಂಥ ಹಾಡಿರುತ್ತೆ
ಸಿನಿಮಾ ಟಿ.ವಿಗಾಗಿ ಎಚ್ಚೆಸ್ವಿ ಬರೆದ ಜನಪ್ರಿಯ ಹಾಡುಗಳು
–ಬಾನಲ್ಲಿ ಓಡೋ ಮೇಘ (ಅಮೇರಿಕಾ ಅಮೇರಿಕಾ)
-ಮಣ್ಣಲ್ಲಿ ಬಿದ್ದನೋ (ಚಿನ್ನಾರಿ ಮುತ್ತ)
-ರೆಕ್ಕೆ ಇದ್ದರೆ ಸಾಕೆ (ಚಿನ್ನಾರಿ ಮುತ್ತ)
-ಕಾಮನ ಬಿಲ್ಲಿನ ಮೇಲೆ (ಬಾಳೊಂದು ಭಾವಗೀತೆ)
-ಇದು ಯಾವ ಲೋಕವೋ (ಮೈತ್ರಿ)
-ಅಮ್ಮ ನಾನು (ಕ್ರೇಜಿ ಕುಟುಂಬ)
-ದೂರದಿಂದಲೇ ಜೀವ ಹಿಂಡುತಿದೆ (ಮುಕ್ತ)
ಬರಹ: ಚೇತನ್ ನಾಡಿಗೇರ್
ಚಿತ್ರಗಳು: ಮನು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.