ಚೂರು “ಪಾರೂ’ ನೀತೂ: ಕರಾವಳಿ “ಥೂ’ಫಾನ್, ಮುಗ್ದೆ ಆಗಿದ್ದೇಕೆ?
Team Udayavani, Aug 16, 2017, 2:44 PM IST
ಮಾತು ಮಾತಿಗೂ ಥೂ ಎನ್ನುವ “ಗಾಳಿಪಟ’ ಚಿತ್ರದ ಬಜಾರಿ ರಾಧಾ ಯಾರೂ ಅಂತ ಕೇಳ್ಳೋ ಹಾಗೇ ಇಲ್ಲ. ಆ ಪಾತ್ರದಿಂದ ಮನೆ ಮಾತಾದ ನೀತೂ 17 ವರ್ಷದವರಿರುವಾಗಲೇ “ಉಯ್ನಾಲೆ’ ಧಾರಾವಾಹಿಯಿಂದ ನಟನೆ ಆರಂಭಿಸಿದ್ದರು. ಈಗ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ರಾಶಿ ರಾಶಿ ಪುಸ್ತಕಗಳನ್ನು ಓದುತ್ತೇನೆ ಎನ್ನುವ ಇವರ ವಿಚಾರಧಾರೆ ಅವರಾಡುವ ಭಾಷೆಯಷ್ಟೇ ಸುಸ್ಪಷ್ಟ. ತುಂಬಾ ಬೇಗ ಆತ್ಮೀಯರಾಗುವ, ಅನಿಸಿದ್ದನ್ನೂ ನೇರವಾಗಿ ಹೇಳುವ ನೀತೂ, ಕನ್ನಡವಷ್ಟೇ ಅಲ್ಲ; ಮಲಯಾಳಂ ಮತ್ತು ತುಳುವಿನಲ್ಲೂ ಮಿಂಚಿದ ಪ್ರತಿಭಾವಂತೆ. ತಮ್ಮ ಬದುಕು, ಕನಸು ಮತ್ತು ಸಿನಿಮಾ ಜರ್ನಿ ಕುರಿತು ಅವರಿಲ್ಲಿ ಮಾತಾಡಿದ್ದಾರೆ…
ದೇಹಕ್ಕಿರೋ ಪ್ರಾಮುಖ್ಯತೆ ನಟನೆಗಿಲ್ಲ!
ಉದ್ಯಮದ ಮಂದಿ ನಟ, ನಟಿಯರ ಮಾನದಂಡ ನಿರ್ಧರಿಸುವುದು ಅವರ ಮುಖ ಮತ್ತು ದೇಹದಿಂದ. ಜನರು ನಾನು ದಪ್ಪಗಿದ್ದೀನಿ ಎಂದು ಕೊಂಕು ಮಾತಾಡುವುದು ಕಿವಿಗೆ ಬಿದ್ದಾಗ ತುಂಬಾ ಬೇಸರ ಪಟ್ಟಿದ್ದೀನಿ. ನನ್ನ ದೇಹದ ಮೇಲೆ ಕೀಳರಿಮೆ ಬೆಳೆಸಿಕೊಂಡು ಸೌಂದರ್ಯ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದೇನೆ. ಅದು ನನ್ನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಮತ್ತೂ ದಪ್ಪಗಾದೆ. ಆದರೆ, ಈಗ ನನ್ನ ಯೋಚನೆಗಳು ಬದಲಾಗಿವೆ. ನಮ್ಮ ದೇಹದ ಮೇಲೆ ಕೀಳರಿಮೆ ಬೆಳೆಸಿಕೊಂಡು ಸೌಂದರ್ಯ ಚಿಕಿತ್ಸೆಗಳಿಗೆ ಮೊರೆಹೋಗುವುದು ತಪ್ಪು.
ನಾನು ಅಪ್ಪಿತಪ್ಪಿಯೂ ಯಾರನ್ನೂ ಹೀಯಾಳಿಸುವುದಿಲ್ಲ
ಮತ್ತೂಬ್ಬರ ಬಣ್ಣ, ಎತ್ತರ, ತೂಕದ ಬಗ್ಗೆ ಜನ ಗೇಲಿ ಮಾಡುವುದು ಸಾಮಾನ್ಯ. ನಾನೂ ಅದನ್ನು ಮಾಡುತ್ತಿದ್ದೆ. ನಮಗೆ ಅದು ತಮಾಷೆಯಾಗಿ ಕಾಣುತ್ತದೆ. ಆದರೆ, ಹಾಗೆ ಗೇಲಿಗೊಳಗಾಗುವ ವ್ಯಕ್ತಿ ಒಳಗೇ ಎಷ್ಟು ನೋಯುತ್ತಾನೆ ಎಂದು ಆತನಿಗೆ ಮಾತ್ರ ತಿಳಿದಿರುತ್ತದೆ. ಇದೆಲ್ಲಾ ನನ್ನ ಅನುಭವಕ್ಕೆ ಬಂದಿದ್ದು ನಾನು ದಪ್ಪಗಾದ ಬಳಿಕವೇ. ಈಗ ನಾನು ತಮಾಷೆಗೂ ಯಾರ ದೈಹಿಕ ಆಕಾರದ ಬಗ್ಗೆಯೂ ಅಪಹಾಸ್ಯ ಮಾಡುವುದಿಲ್ಲ. ಸಾಧ್ಯವಾದಷ್ಟೂ ಸ್ಪೂರ್ತಿ ತುಂಬುವ ಮಾತುಗಳನ್ನಾಡುತ್ತೇನೆ. ಯಾರಾದರೂ ಬೇರೊಬ್ಬರನ್ನು ಗೇಲಿ ಮಾಡಿದರೆ, ಅದನ್ನು ಸ್ಥಳದಲ್ಲೇ ಖಂಡಿಸುತ್ತೇನೆ.
ನೀವು ಅಭಿನಯಿಸಿರುವ “ಪಾರೂ ಐ ಲವ್ ಯೂ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ದೊಡ್ಡ ಬ್ರೇಕ್ ಬಳಿಕ ನಿಮ್ಮ ಚಿತ್ರವೊಂದು ತೆರೆ ಕಾಣುತ್ತಿರುವ ಬಗ್ಗೆ ಏನನ್ನಿಸುತ್ತಿದೆ?
“ಪಾರು ಐ ಲವ್ ಯೂ’ ದೊಡ್ಡ ಬ್ರೇಕ್ ಬಳಿಕ ಬಿಡುಗಡೆಯಾಗುತ್ತಿರುವ ಚಿತ್ರ ಮಾತ್ರವಲ್ಲ. ದೊಡ್ಡ ಗ್ಯಾಪ್ ಬಳಿಕ ನಾನು ರೊಮ್ಯಾಂಟಿಕ್ ಪಾತ್ರದಲ್ಲಿ ನಟಿಸಿರುವ ಚಿತ್ರವೂ ಹೌದು. “ಪೂಜಾರಿ’ ಚಿತ್ರದ ಬಳಿಕ ನನಗೆ ರೊಮ್ಯಾಂಟಿಕ್ ಪಾತ್ರವೇ ಸಿಕ್ಕಿರಲಿಲ್ಲಿ. ಬರೀ ಬಜಾರಿ, ಗಂಡುಬೀರಿ ಪಾತ್ರಗಳನ್ನು ಮಾತ್ರ ಮಾಡಿದ್ದೆ. ಈ ಚಿತ್ರದಲ್ಲಿ ಬಿ.ಎಡ್ ಓದುವ ಮುಗ್ಧ ಹುಡುಗಿಯ ಪಾತ್ರ ಮಾಡಿದ್ದೇನೆ. ಅದ್ದರಿಂದ ಪಾತ್ರ ಹೇಗೆ ಮೂಡಿಬಂದಿದೆ ಎಂದು ನೋಡಲು ನನಗೂ ಕುತೂಹಲ ಇದೆ.
ನೀವು ಸುಮಾರು ಸಮಯ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆ ಸಮಯದಲ್ಲಿ ಏನು ಮಾಡುತ್ತಿದ್ದಿರಿ?
ಮನೆಯಲ್ಲೇ ಇದ್ದೆ ಸ್ವಯಂ ವಿಮರ್ಶೆ ಮಾಡಿಕೊಳ್ಳುತ್ತಿದ್ದೆ.
ಒಮ್ಮೆ ಬೇಡಿಕೆಯಲ್ಲಿದ್ದ ನೀವು ಅವಕಾಶ ಕಡಿಮೆಯಾದ ಸಂದರ್ಭವನ್ನು ಹೇಗೆ ಮ್ಯಾನೇಜ್ ಮಾಡುತ್ತಿದ್ದಿರಿ?
ಯಾವುದೇ ಕ್ಷೇತ್ರವಾದರೂ ಏಳು ಬೀಳು ಇದ್ದಿದ್ದೇ. ಲೈಫಲ್ಲಿ ಯಾವತ್ತೂ ಸ್ಥಿತಪ್ರಜ್ಞರಾಗಿರಬೇಕು ಅನ್ನೋದು ನನ್ನ ಪಾಲಿಸಿ. ಈ ಮಧ್ಯೆ ಬಿಗ್‌ಬಾಸ್, ಬೆಂಗಳೂರು ಬೆಣ್ಣೆದೋಸೆ, ಐಟಂ ಸಾಂಗ್ ಮಾಡಿದ್ದೀನಿ. ಚಿತ್ರರಂಗದ ಟಚ್ ಯಾವತ್ತೂ ಬಿಟ್ಟಿಲ್ಲ. ನಾನು ತುಂಬಾ ಸ್ಟ್ರಾಂಗ್ ಹುಡುಗಿ. ಜೀವನ ಏನೇ ಸಮಸ್ಯೆ ಬಂದರೂ ಎದುರಿಸುವ ಛಾತಿ ಉಳ್ಳವಳು.
“ಗಾಳಿಪಟ’ ಚಿತ್ರದ ರಾಧಾಳ ಪಾತ್ರ ನಿಮಗೆ ಸಿಕ್ಕಿದ್ದು ಹೇಗೆ? ತಯಾರಿ ಹೇಗೆ ಮಾಡಿಕೊಂಡಿರಿ?
ಯೋಗರಾಜ್ ಭಟ್ ಸರ್ ಯಾರದೋ ಮದುವೆಗೆ ಹೋಗಿದ್ದಾಗ ಅಲ್ಲೊಬ್ಬಳು ಹುಡುಗಿಯನ್ನು ನೋಡಿದ್ದರಂತೆ. ಆಕೆ ಸ್ತ್ರೀ ಸಹಜವಾದ ಯಾವ ನಾಜೂಕನ್ನೂ ವ್ಯಕ್ತಪಡಿಸದೇ, ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಾ, ಚಿಕ್ಕ ಪುಟ್ಟ ವಿಷಯಗಳಿಗೆಲ್ಲಾ ಜಗಳ ತೆಗೆಯುತ್ತಾ ಓಡಾಡಿಕೊಂಡಿದ್ದಳಂತೆ. ಅದೇ ಥರಾ “ರಾಧಾ’ ಪಾತ್ರ ಬರಬೇಕು ಎಂದು ಅವರು ನನಗೆ ಹೇಳಿದ್ದರು. ನಾನು ಅವರೇನು ನಿರೀಕ್ಷಿಸಿದ್ದರೋ ಹಾಗೇ ಅಭಿನಯಿಸಿದೆ. ಆ ಪಾತ್ರ ನನಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.
ತಂಗಿ ಜೊತೆ ತುಂಬಾ ಜಗಳ ಆಡ್ತೀರಂತೆ?
ನನ್ನ ತಂಗಿ ಲಂಡನ್‌ನಲ್ಲಿ ಪಿ.ಎಚ್.ಡಿ ಮಾಡುತ್ತಿದ್ದಾಳೆ. ಈಗ ರಜೆ ಕಳೆಯಲು ಮನೆಗೆ ಬಂದಿದ್ದಾಳೆ. ಆಕೆ ಬಂದ 3 ದಿನಗಳು ತಂಗಿ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ನಂತರ ಆಕೆ ನನ್ನ ಹಾಸಿಗೆ ಮೇಲೆ ಮಲಗಿದಳು, ನನ್ನ ರೂಂ ಗಲೀಜು ಮಾಡಿದಳು ಎಂದು ಜಗಳ ಶುರು ಆಗುತ್ತದೆ. ಸಂಧಾನಕ್ಕೆ ಅಮ್ಮ ಬರುತ್ತಾರೆ. ಆಗ ಮೂವರ ಮಧ್ಯೆಯೂ ಮತ್ತೂಂದು ರೌಂಡ್ ಜಗಳ ಆಗುತ್ತದೆ. 3 ಜಡೆಗಳು ಒಟ್ಟಿಗೇ ಸೇರಿದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ನೀವೇ ಊಹಿಸಿ…!
ನಿಮ್ಮ ನೆಚ್ಚಿನ ಹವ್ಯಾಸಗಳು ಯಾವುವು?
ಕಾಡು ಮೇಡು ಸುತ್ತುತ್ತೇನೆ. ಒಬ್ಬಳೇ ಆಗುಂಬೆ, ಮೆಣಸಿನ ಗುಡಿ, ಊಟಿಗೆ ಹೋಗಿದ್ದೀನಿ…
ರೆಸ್ಟೊರೆಂಟ್‌ಗೆ ಹೋದರೆ, ನೀವು ತಪ್ಪದೇ ಆರ್ಡರ್ ಮಾಡುವ ಖಾದ್ಯ ಯಾವುದು?
ನಾನು ಹೆಚ್ಚಾಗಿ “ಮಂಗಳೂರು ಪರ್ಲ್’ ಅಥವಾ “ಕೋಸ್ಟ್ ಟು ಕೋಸ್ಟ್’ ಹೋಟೆಲ್‌ಗಳಿಗೆ ಹೋಗುತ್ತೇನೆ. “ಬಂಗುಡೆ ಸಾರು’ ನನ್ನ ಫೇವರಿಟ್. ಅದನ್ನು ಮಿಸ್ ಮಾಡದೇ ಆರ್ಡರ್ ಮಾಡುತ್ತೇನೆ. ಮಂಗಳೂರು ಶೈಲಿ ಆಹಾರ ಯಾವುದಾದರೂ ಇಷ್ಟ.
ನೀತು ಅಡುಗೆಮನೆಗೆ ಹೋದ್ರೆ…
ಕಾಫೀ, ಟೀ ಅಷ್ಟೇ. ನಾನು ಅಡುಗೆ ಮಾಡೋದನ್ನು ಕಲಿತೇ ಇಲ್ಲ. ಅದಕ್ಕೇ ನನ್ನ ಗಂಡನಾಗುವವನಿಗೆ ಅಡುಗೆ ಮಾಡಲು ಕಡ್ಡಾಯವಾಗಿ ಬರಬೇಕು ಎಂಬ ಕಂಡೀಷನ್ ಹಾಕಬೇಕೂಂತಿದ್ದೀನಿ.
ನಿಮಗೆ ಅತಿ ಕಿರಿಕಿರಿ ಎನಿಸುವ ಸಂಗತಿ…
ಗಂಟೆಗಟ್ಟಲೆ ಕೂತು ಮೇಕಪ್ ಮಾಡಿಸಿಕೊಳ್ಳುವ ವ್ಯವಧಾನ ನನಗೆ ಇಲ್ಲ. ಮೇಕಪ್ ಅತಿಯಾದರೆ ನಾನು ಚಂದ ಕಾಣುವುದಿಲ್ಲ ಎಂಬ ನಂಬಿಕೆ ನನ್ನದು. ಪಾತ್ರಕ್ಕಾಗಿ ಗಾಢವಾದ ಮೇಕಪ್ ಮಾಡಲೇ ಬೇಕು ಎಂದು ಪಟ್ಟು ಹಿಡಿದರೆ ತುಂಬಾ ಕಿರಿಕಿರಿಯಾಗುತ್ತದೆ.
“ಬೆಂಗಳೂರು ಬೆಣ್ಣೆ ದೋಸೆ’ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ವಿವಾದ ಮಾಡಿಕೊಂಡ್ರಿ?
ವಿವಾದ ಆಗಿದ್ದು ನಿಜ. ಆದರೆ, ಅದಕ್ಕೆ ಕಾರಣ ಇದೆ. ನಾನು ಆ ಕಾರ್ಯಕ್ರಮ ಒಪ್ಪಿಕೊಳ್ಳುವಾಗ ನಿರ್ದೇಶಕರ ಜೊತೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದ್ದೆ. ನನ್ನ ತೂಕದ ಬಗ್ಗೆಯಾಗಲೀ ಅಥವಾ ಬೇರೆ ಯಾವ ಪಾತ್ರದ ದೇಹ, ಮೈಬಣ್ಣವನ್ನು ಹಾಸ್ಯ ಮಾಡುವಂಥ ದೃಶ್ಯಗಳು ಇರುವಂತಿಲ್ಲ ಎಂದಿದ್ದೆ. ಕೆಲ ಎಪಿಸೋಡುಗಳಾದ ಬಳಿಕ ನಾನು ಯಾವುದನ್ನು ಆಕ್ಷೇಪಿಸಿದ್ದೆನೋ ಅಂಥ ಕೀಳು ಮಟ್ಟದ ಹಾಸ್ಯ ಕಾರ್ಯಕ್ರಮದಲ್ಲಿ ನುಸುಳಲು ಶುರುವಾಯಿತು. ಅದಕ್ಕೆ ನಾನು ಕಾರ್ಯಕ್ರಮದಿಂದ ಹೊರಬಿದ್ದೆ.
ಚಂದ ಕಾಣಲು ಏನು ಮಾಡಬೇಕು?
ಮನಸ್ಸಿನಲ್ಲಿ ದುಗುಡ, ಆತಂಕ, ಗೊಂದಲಗಳು ಇದ್ದರೆ ಮುಖದಲ್ಲಿ ಅದು ಕಾಣುತ್ತದೆ. ಮನಸ್ಸಿನಲ್ಲಿರುವುದನ್ನು ಮಾತಿನ ಮೂಲಕ ಹೊರಹಾಕಿ ನಿರಾಳವಾಗಬೇಕು. ಆದಷ್ಟೂ ಮುಕ್ತವಾಗಿರಬೇಕು. ಆಗ ಮಾತ್ರ ನಮ್ಮ ಮುಖ ಶಾಂತವಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಡಯಟ್ ಮಾಡ್ತೀವಿ ಅಂತ ಎಣ್ಣೆ , ತುಪ್ಪವನ್ನೂ ಚೂರೂ ತಿನ್ನದೇ ಇರುವುದು ತಪ್ಪು. ಸ್ವಲ್ಪವಾದರೂ ಕಡ್ಲೆ, ತುಪ್ಪ ತಿನ್ನಬೇಕು ಮುಖದಲ್ಲಿ ಆರೋಗ್ಯಕರ ಕಳೆ ಇರುತ್ತದೆ.
ಮದ್ವೆ ಊಟ ಯಾವಾಗ ಹಾಕಿಸ್ತೀರ? ಬಾಯ್‌ಫ್ರೆಂಡ್ ಇದ್ದಾನಾ?
ನನಗೆ ಸರಿಯಾಗಿ ಹೊಂದಿಕೆ ಆಗುವ ಸಂಗಾತಿ ಸಿಕ್ಕಾಗ. ಹುಡುಗ ಏನೋ ಸಿಕ್ಕಿದ್ದಾನೆ. ಅವನು ನನಗೆ ಒಪ್ಪುತ್ತಾನಾ, ಇಲ್ಲವಾ ಎಂದು ತಿಳಿದ ಬಳಿಕ ಮದ್ವೆ ಕಾರ್ಡನ್ನು ನಿಮ್ಗೆ ಕೊಡ್ತೀನಿ.
ನಾನು ಪುಸ್ತಕದ ಹುಳು!
ಚಿಕ್ಕಂದಿನಿಂದಲೂ ನಾನು ಪುಸ್ತಕ ಪ್ರಿಯೆ. ನಮ್ಮಮ್ಮ ರಾಶಿ ರಾಶಿ ಪುಸ್ತಕಗಳನ್ನು ತಂದುಕೊಟ್ಟು ಓದಲು ಪ್ರೇರೇಪಿಸುತ್ತಿದ್ದರು. ಚಿಕ್ಕ ಹುಡುಗಿಯಾಗಿದ್ದಾಗ ಡಾ.ಅನುಪಮಾ ನಿರಂಜನ ಅವರ “ದಿನಕ್ಕೊಂದು ಕಥೆ’ ಪುಸ್ತಕ ಓದುತ್ತಿದ್ದೆ. ಆಗ ಓದಿದ ಕಥೆಗಳ ಪಾತ್ರಗಳು ಇನ್ನೂ ಕಾಡುತ್ತವೆ. ಪೂರ್ಣಚಂದ್ರ ತೇಜಸ್ವಿ ನನ್ನ ಅಚ್ಚುಮೆಚ್ಚಿನ ಲೇಖಕರು. ಅವರ “ಕರ್ವಾಲೊ’ ನನ್ನ ಆಲ್ ಟೈಮ್ ಫೇವರಿಟ್ ಪುಸ್ತಕ. ಇತ್ತೀಚೆಗೆ “ಮುನಿಶಾಮಿ ಮತ್ತು ಮಾಗಡಿ ಚಿರತೆ’ ಓದಿದೆ. ಸದ್ಯ ಡಾ. ಝೀ ಗಾಂಗ್ ಶಾ ಅವರ “ಪವರ್ ಆಫ್ ದ ಸೋಲ್’ ಎಂಬ ಪುಸ್ತಕ ಕೈಯಲ್ಲಿದೆ. ಕಲಾವಿದರಿಗೆ ಎಲ್ಲಾ ಬಗೆಯ ಸಾಹಿತ್ಯವನ್ನೂ ಓದುವ ಹವ್ಯಾಸ ಇರಬೇಕು. ಆಗ ಮಾತ್ರ ಎಲ್ಲಾ ರೀತಿಯ ಜನರ ಬದುಕು, ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪಾತ್ರವನ್ನು ಅನುಭವಿಸಿ ನಟಿಸಲು ಓದು ಸಹಾಯ ಮಾಡುತ್ತದೆ.
ದೆವ್ವಕ್ಕೆ ಹೆದರಿ ಅಮ್ಮನ ಪಕ್ಕ ಮಲಗುತ್ತೇನೆ…
ನಾನು ಮಂಗಳೂರಿನಲ್ಲಿ ಬೆಳೆದಿದ್ದು. ಆ ಕಾರಣದಿಂದಾಗಿ ದೆವ್ವ ಭೂತಗಳ ಬಗ್ಗೆ ಭಯವೂ ತುಸು ಹೆಚ್ಚೇ ಇದೆ. ನಾವು ಚಿಕ್ಕವರಿದ್ದಾಗ ಭೂತ, ಪ್ರೇತದ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದೆವು. ಈಗಲೂ ರಾತ್ರಿ ಮನೆಯಲ್ಲಿ ಒಬ್ಬಳೇ ಇರಲು ಭಯವಾಗುತ್ತದೆ. ರಾತ್ರಿ ಒಬ್ಬಳೇ ಮಲಗಿದರೆ ಭಯದಿಂದ ನಿದ್ದೆ ಹತ್ತಿರವೂ ಸುಳಿಯುವುದಿಲ್ಲ. ಅದಕ್ಕೆ ನಾನು ಈಗಲೂ ಅಮ್ಮನ ಪಕ್ಕವೇ ಮಲಗುವುದು.
ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.