ಉಪ್ಪಿ ಹೋಮ್ ಮಿನಿಸ್ಟರ್: ಜನ ಸೇವೆಯೇ ನಮಗೆ ಚೌತಿ!
Team Udayavani, Aug 23, 2017, 11:01 AM IST
ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಹೆಜ್ಜೆಯಿಟ್ಟ ನಟ ಉಪೇಂದ್ರ ಹಲವು ಕನಸುಗಳನ್ನು ಕನ್ನಡಿಗರ ಮುಂದೆ ಇಡುತ್ತಲೇ ಇದ್ದಾರೆ. ಈ ಎಲ್ಲ ಕನಸುಗಳನ್ನು ನಾವೆಲ್ಲ ಕೇಳ್ಳೋ ಮೊದಲು ಕಿವಿಗೆ ಬಿದ್ದಿದ್ದು ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಅವರಿಗೆ! ರಾಜಕೀಯಕ್ಕೆ ಬರುವ ಮೊದಲು ಉಪೇಂದ್ರ ತಮ್ಮ ಪತ್ನಿ ಜೊತೆ ಏನೆಲ್ಲ ಚರ್ಚೆ ಮಾಡಿದ್ರು? ಪ್ರಿಯಾಂಕಾ ಅವರೂ ರಾಜಕೀಯಕ್ಕೆ ಬರುತ್ತಾರಾ? ಬೆಂಗಾಳಿ ಚೆಲುವೆ ಮನದ ಮಾತು ಇಲ್ಲಿದೆ…
ಉಪೇಂದ್ರ ರಾಜಕಾರಣಿ ಆಗ್ತಿದ್ದಾರಲ್ಲಾ… ಮನೇಲೂ ದೇಶದ ಬಗ್ಗೆಯೇ ಮೂರ್ ಹೊತ್ತೂ ಮಾತಾಡ್ತಿರ್ತಾರಾ?
ಅವರು ಈ ದೇಶ, ವ್ಯವಸ್ಥೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅವರ ಕನಸುಗಳ ಬಗ್ಗೆ ನನ್ನ ಜೊತೆ ಯಾವಾಗಲೂ ಚರ್ಚಿಸುತ್ತಾ ಇರ್ತಾರೆ. ನಾವು ಎಲ್ಲಿಗಾದ್ರೂ ಟ್ರಾವೆಲ್ ಮಾಡೋವಾಗ ಹಾಳಾಗಿರೋ ರಸ್ತೆ ನೋಡಿದ್ರೆ, ಟ್ರಾಫಿಕ್ ಜಾಮ್ ಅನ್ನು ಕಂಡಾಗ, ಈ ಸಮಸ್ಯೆಗಳನ್ನೆಲ್ಲ ಕಂಟ್ರೋಲ್ ಮಾಡೋ ಬಗ್ಗೆ ಹತ್ತಾರು ಐಡಿಯಾಗಳನ್ನು ಹೇಳ್ತಾರೆ. ಅದೆಲ್ಲವನ್ನೂ ಅವರೇ ನಿಮಗೆ ಮುಂದೆ ಹೇಳ್ತಾರೆ. ಜನರಿಗೆ ಏನಾದ್ರೂ ಒಳ್ಳೇದನ್ನು ಮಾಡ್ಬೇಕು ಅನ್ನೋದೇ ಉಪೇಂದ್ರ ಅವರ ಕನಸು. ಮನೆಯಲ್ಲಿ ಇದ್ದಷ್ಟು ಹೊತ್ತು ನ್ಯೂಸ್‌ಗಳನ್ನು ನೋಡ್ತಾ, ಅಪ್‌ಡೇಟ್ ಆಗುತ್ತಾ ಇರ್ತಾರೆ. ನಾನು ಪಕ್ಕದಲ್ಲಿದ್ದರೆ, ಆ ನ್ಯೂಸ್‌ನ ಹಿನ್ನೆಲೆ- ಮುನ್ನೆಲೆ ಬಗ್ಗೆ ಏನಾದ್ರೂ ಹೇಳ್ತಾರೆ.
ಉಪೇಂದ್ರ ಮೊನ್ನೆ ಖಾಕಿ ಅಂಗಿ ತೊಟ್ಟಿದ್ದರು. ಅದನ್ನು ಮೊನ್ನೆಯ ಪ್ರಸ್‌ಮೀಟ್‌ಗೆ ಧರಿಸಲೆಂದೇ ತಂದಿದ್ದಾ?
ಇಲ್ಲ ಅದು, ನಿನ್ನೆ ಮೊನ್ನೆ ತಂದಿದ್ದಲ್ಲ. ಅವರ ಬಳಿ ಖಾಕಿ ಅಂಗಿ ಬಹಳ ಹಿಂದಿನಿಂದಲೇ ಇದೆ. ಅವರ ಅನೇಕ ಸಿನಿಮಾಗಳಲ್ಲಿ ಖಾಕಿ ಅಂಗಿ ಹಾಕಿರೋದನ್ನು ನೀವೂ ನೋಡಿರಬಹುದು. ಖಾಕಿ ಬಟ್ಟೆ ಅನ್ನೋದು ಕಾರ್ಮಿಕರನ್ನು ರೆಪ್ರಸೆಂಟ್ ಮಾಡುವ ಸಂಗತಿ. ಉಪೇಂದ್ರ ಅವರು ರಾಜಕಾರಣವನ್ನು ನೋಡೋ ರೀತಿ ಅದು. ನಮಗೆ ಕೆಲಸ ಮಾಡೋರು ಬೇಕೇ ಹೊರತು, ನಾಯಕರಲ್ಲ. ಪ್ರಸ್‌ಮೀಟ್ ಮುಗಿದ ಮೇಲೂ ಆ ಖಾಕಿ ಅಂಗಿಗೆ ಗೌರವ ಸ್ಥಾನ ನೀಡಿ ಮನೆಯಲ್ಲಿಯೇ ಇಟ್ಟಿದ್ದಾರೆ.
ಉಪೇಂದ್ರರಂತೆ ನಿಮಗೆ ರಾಜಕೀಯದ ಆಸೆ ಇಲ್ವಾ?
ಸದ್ಯಕ್ಕೆ ನನಗೆ ಅಂಥ ಯಾವುದೇ ಆಸೆ ಇಲ್ಲ. ಅಂಥ ಯೋಚನೆಯೂ ನನ್ನಲ್ಲಿಲ್ಲ. ಉಪೇಂದ್ರ ಅವರ ಪ್ರಜಾಕೀಯಕ್ಕೆ ಸಪೋರ್ಟ್ ಮಾಡ್ತೀನಿ. ಸದ್ಯಕ್ಕೆ ಅದೇ ನನ್ನ ಆದ್ಯತೆ. ಇನ್‌ಫ್ಯಾಕ್ಟ್, ಅಷ್ಟೊಂದು ಟೈಂ ಕೂಡ ಇಲ್ಲ. ಮಕ್ಕಳ ಕಡೆ ಗಮನ ಕೊಡಬೇಕು. ಒಂದೆರಡು ಸಿನಿಮಾಗಳ ಶೂಟಿಂಗ್ ಬೇರೆ ನಡೀತಿದೆ. ಜೊತೆಗೆ ಉಪೇಂದ್ರ ಹಾಗೂ ಉಪ್ಪಿ ಫೌಂಡೇಶನ್‌ಗಳ ಕೆಲಸಗಳು, ಕನಸುಗಳು ಬೆಟ್ಟದಷ್ಟಿವೆ. ಚಿತ್ರರಂಗದ ಒಂದಷ್ಟು ಜನ ಸೇರಿಕೊಂಡು “ಫೈರ್’ ಅಂತ ಒಂದು ಸಂಸ್ಥೆ ಪ್ರಾರಂಭಿಸಿದ್ದೇವೆ.
ಹೋಗಲಿ… ರಾಜಕೀಯದಲ್ಲಿ ನಿಮ್ಮ ಇಷ್ಟದ ಮಹಿಳಾ ಲೀಡರ್ ಯಾರು?
ರಾಜಕೀಯದಲ್ಲಿ ನನಗೆ ಅಂಥ ಯಾವುದೇ ಹೆಸರುಗಳೂ ಕಣ್ಮುಂದೆ ಸುಳಿಯುವುದಿಲ್ಲ. ಯಾಕಂದ್ರೆ, ನಾನು ಯಾರ ಫ್ಯಾನ್ ಕೂಡ ಅಲ್ಲ. ಆದರೆ, ನಂಗೆ ಮದರ್ ಥೆರೇಸಾ ಅಂದ್ರೆ ತುಂಬಾ ಗೌರವ, ಪ್ರೀತಿ. ಕೋಲ್ಕತ್ತಾದಲ್ಲಿ ಅವರು, ನಮ್ಮ ತಾಯಿಗೆ ಟೀಚರ್ ಆಗಿದ್ರು. ಅವರಷ್ಟು ನಿಸ್ವಾರ್ಥವಾಗಿ ಜನರ ಸೇವೆ ಮಾಡೋಕೆ ಬೇರೆ ಯಾರಿಂದಲೂ ಸಾಧ್ಯವಿಲ್ಲ ಅನ್ಸುತ್ತೆ. ಜಾತಿ- ಧರ್ಮಗಳನ್ನು ಮೀರಿ, ಪ್ರೀತಿಯೊಂದೇ ಎಲ್ಲಕ್ಕಿಂತ ದೊಡ್ಡ ಧರ್ಮ ಅಂತ ಕಲಿಸಿದವರು ಅವರು. ಅಂಥವರು ಈಗ ಯಾರಿದ್ದಾರೆ ಹೇಳಿ? ವಿವೇಕಾನಂದ ಅವರೂ ನನಗೆ ಇಷ್ಟ. ರಾಜಕೀಯಕ್ಕಿಂತ ಅಧ್ಯಾತ್ಮ, ಫಿಲಾಸಫಿ ಕಡೆ ನನಗೆ ಒಲವು ಜಾಸ್ತಿ.
ಕೋಲ್ಕತ್ತಾದ ತವರು ಮನೆಗೆ ಆಗಾಗ್ಗೆ ಹೋಗ್ತಿರ್ತೀರಾ? ಕೋಲ್ಕತ್ತಾಗೂ, ಬೆಂಗ್ಳೂರಿಗೂ ನೀವು ಕಂಡಂತೆ ಇರೋ ವ್ಯತ್ಯಾಸದ ಗೆರೆ?
ಅಯ್ಯೋ ನಿಮೊYತ್ತಾ? ತವರಿಗೆ ಹೋಗಿ ಮೂರು ವರ್ಷಗಳೇ ಆದವೇನೋ. ಮಕ್ಕಳ ಸ್ಕೂಲ್, ಶೂಟಿಂಗ್ ಅಂತ ಹೋಗೋದಿಕ್ಕೆ ಆಗಲೇ ಇಲ್ಲ. ಅಕ್ಟೋಬರ್‌ನಲ್ಲಿ ಶೂಟಿಂಗ್‌ಗೆ ಕೋಲ್ಕತ್ತಾ ಹೋಗ್ತಿದ್ದೀನಿ. ಕೋಲ್ಕತ್ತಾ- ಬೆಂಗ್ಳೂರಿನ ಮಧ್ಯೆ ತುಂಬಾ ವ್ಯತ್ಯಾಸ ಇದೆ. 14-15 ವರ್ಷದಿಂದ ಬೆಂಗಳೂರೇ ನನ್ನ ಮನೆ. ಇಲ್ಲಿನ ಸೆಳೆತಾನೇ ಬೇರೆ, ತವರಿನ ಸೆಳೆತಾನೇ ಬೇರೆ. ಊಟ- ತಿಂಡಿ, ಹಬ್ಬಗಳು, ಲೈಫ್‌ಸ್ಟೆçಲ್ ಎಲ್ಲಾ ಬೇರೆ ಬೇರೆ. ಆದರೆ, ಎರಡೂ ಕಡೆ ಚಿತ್ರರಂಗ ಒಂದೇ ರೀತಿ ಇದೆ.
ಮನೆಯಲ್ಲಿ ಯಾವ ಸಂಪ್ರದಾಯದ ಪ್ರಕಾರ ಹಬ್ಬಗಳನ್ನು ಆಚರಿಸ್ತೀರಿ?
ಇಲ್ಲಿ ನಾವು ಗಣೇಶ ಚತುರ್ಥಿ, ಯುಗಾದಿ, ನವರಾತ್ರಿ, ವರಮಹಾಲಕ್ಷ್ಮಿಹಬ್ಬಗಳನ್ನು ಆಚರಿಸ್ತೀವಿ. ಅದೇ ಬಂಗಾಳದಲ್ಲಿ ದುರ್ಗಾಪೂಜೆ, ಕಾಳಿ ಪೂಜೆ ಮಾಡ್ತಾರೆ. ನಾನು ಎರಡೂ ಸಂಪ್ರದಾಯಗಳನ್ನು ಆಚರಿಸ್ತೀನಿ.
ಉಪೇಂದ್ರ ಜತೆ ಸಾಕಷ್ಟು ಫ್ಯಾಮಿಲಿ ಟ್ರಿಪ್ ಹೋಗಿದ್ದೀರಿ. ಯಾವ ಪ್ರದೇಶ ನಿಮಗೆ ಈಗಲೂ ಕಾಡುತ್ತೆ?
ಮೊದಲೆಲ್ಲಾ ಟ್ರಿಪ್ ಹೋಗ್ತಿದ್ವಿ. ಈಗ ಅದಕ್ಕೂ ಟೈಂ ಸಿಗ್ತಾ ಇಲ್ಲ. ನನಗೆ ಅಮೆರಿಕ, ಯುರೋಪ್‌ನ ಕೆಲವು ಸ್ಥಳಗಳು ತುಂಬಾ ಇಷ್ಟ. ಉಪೇಂದ್ರ ಜೊತೆ ಹೊರನಾಡು, ಕಳಸ, ಕುದುರೆಮುಖ ಸುತ್ತಾಡಿದ್ದೇನೆ. ಅವರು ಆಗಾಗ್ಗೆ ಕಥೆ ಬರೆಯೋಕೆ ಅಂತ ಆ ಜಾಗಗಳಿಗೆ ಹೋಗ್ತಾರೆ. ಪ್ರಶಾಂತ ವಾತಾವರಣ ಇರೋದ್ರಿಂದ ನಂಗೂ ಇಷ್ಟ ಆಗುತ್ತೆ.
ಉಪೇಂದ್ರ ಕಲ್ಪನೆಯ ಭಾರತವೇ ತುಂಬಾ ವಿಭಿನ್ನ. ಒಂದು ವೇಳೆ ಅವರು ಒಂದು ದಿನದ ಮಟ್ಟಿಗೆ ಸಿಎಂ ಆದ್ರೆ, ಮೊದಲು ಮಾಡುವ ಮೂರು ಕೆಲಸಗಳು ಯಾವುವು?
ಹ್ಹಹ್ಹಹ್ಹ ಒಂದೇ ದಿನದಲ್ಲಿ ದೇಶ ಬದಲಾಯಿಸೋಕೆ ಹೇಗೆ ಸಾಧ್ಯ? ಎಲ್ಲದಕ್ಕೂ ಟೈಂ ಹಿಡಿಯುತ್ತೆ. ಉಪ್ಪಿಗೆ ವ್ಯವಸ್ಥೆಯನ್ನ ಬದಲಾಯಿಸೋ ಬಯಕೆ ಇದೆ. ಮೊದಲಿಗೆ ಬಡತನ ನಿವಾರಣೆಯಾಗಬೇಕು. ಯಾರೂ ಊಟ ಇಲ್ಲದೇ ಇರಬಾರದು. ಎರಡನೆಯದು, ಎಲ್ಲರಿಗೂ ಉಚಿತ ಶಿಕ್ಷಣ ಕೊಡಬೇಕು. ಮೂರನೆಯದು ಒಳ್ಳೆಯ ರಸ್ತೆ, ಇನ್‌ಫ್ರಾಸ್ಟ್ರಕ್ಚರ್ ಇರಬೇಕು. ಮತ್ತೆ ಕ್ರೈಂ ರೇಟ್ ಕಡಿಮೆಯಾಗಬೇಕು ಅನ್ನೋ ಕನಸುಗಳು ಅವರದು.
ಇವೆಲ್ಲ ಒಂದೇ ದಿನದಲ್ಲಿ ಅವರು ಮಾಡ್ತಾರಾ?
ಅದನ್ನೇ ಹೇಳಿದ್ದು, ಒಂದೇ ದಿನದಲ್ಲಿ ಆಗಲ್ಲ. ಈ ಮೂರೂ ಸಂಗತಿಗಳು ನೆರವೇರೋವಂಥ ಒಂದು ಬಲವಾದ ಕಾನೂನು ಜಾರಿ ಮಾಡಿದ್ರೆ ಹೇಗೆ?
ಓಕೆ… ರಾಜಕೀಯ, ಪ್ರಜಾಕೀಯ ಬಿಡಿ. ಸಿನಿಮಾ ಬಗ್ಗೆ ಹೇಳಿ… ಇತ್ತೀಚೆಗೆ ನೀವು ನೋಡಿ ಇಷ್ಟಪಟ್ಟ ಚಿತ್ರ?
ತಕ್ಷಣಕ್ಕೆ ನೆನಪಿಗೆ ಬರುತ್ತಿಲ್ಲ. ಹ್ಹಾ, “ಬಾಹುಬಲಿ-2′ ಇಷ್ಟ ಆಯ್ತು. ತುಂಬಾ ಗ್ರ್ಯಾಂಡ್ ಆಗಿ ಮಾಡಿದ್ದಾರೆ. ಕನ್ನಡದಲ್ಲಿ “ಕಿರಿಕ್ ಪಾರ್ಟಿ’ಯನ್ನು ನೋಡಿದೆ. ಸಿನಿಮಾ ತುಂಬಾ ಫ್ರೆಶ್ ಅನ್ನಿಸಿತು.
ಪ್ರಿಯಾಂಕಾ ಉಡೋದು ಮೈಸೂರು ಸಿಲ್ಕಾ, ಬೆಂಗಾಲಿ ಸ್ಯಾರಿನಾ?
ನಾನು ಬೆಂಗಾಲಿ ಕಾಟನ್ ಸೀರೆಗಳನ್ನೇ ಜಾಸ್ತಿ ಉಡೋದು. ಬೆಂಗಳೂರಿನಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಸೆಖೆ ಶುರುವಾಗಿದೆ. ರೇಷ್ಮೆ ಸೀರೆಗಳನ್ನೆಲ್ಲ ಧರಿಸೋಕೆ ಹಿಂಸೆ ಆಗುತ್ತೆ.
“ಮಮ್ಮಿ’ ಎಂಬ ಹಾರರ್ ಚಿತ್ರದಲ್ಲಿ ನಟಿಸಿದ್ದ ನಿಮಗೆ, ನಿಜ ಜೀವನದಲ್ಲಿ ಭೂತ- ಪ್ರೇತ ಏನಾದ್ರೂ ಕಾಣಿಸಿಕೊಂಡಿದ್ದು, ಅದರ ಅನುಭವವಾಗಿದು…?
ನಾನು ಅದನ್ನೆಲ್ಲ ನಂಬುತ್ತೇನೆ. ದೇವರ ದಯೆಯಿಂದ ಅಂಥ ಅನುಭವ ಆಗಿಲ್ಲ. ಹಾಗಂತ ನೆಗೆಟಿವ್ ಎನರ್ಜಿ ಇಲ್ಲ ಅಂತ ಹೇಳ್ಳೋಕಾಗಲ್ಲ. ಒಳ್ಳೆಯದು ಇದ್ದಹಾಗೆ, ಕೆಟ್ಟ ಶಕ್ತಿಗಳೂ ಇರುತ್ತವೆ, ಅಲ್ವಾ?
ಮಕ್ಕಳನ್ನು ಆ್ಯಕ್ಟರ್ ಮಾಡ್ತೀರಾ? ಪೊಲಿಟಿಷಿಯನ್ನಾ?
ಖಂಡಿತಾ ನಾವು ಅವರಿಗೆ ಇದೇ ಆಗಿ, ಹೀಗೇ ಮಾಡಿ ಅಂತೆಲ್ಲ ಹೇಳಲ್ಲ. ಮಕ್ಕಳು ಮಾನವೀಯತೆ, ಒಳ್ಳೆಯ ಸಂಸ್ಕಾರಗಳನ್ನು ಕಲಿಯಬೇಕು. ಮೊದಲು ಒಳ್ಳೆಯ ಮನುಷ್ಯರಾದ್ರೆ ಆಮೇಲೆ ಏನು ಬೇಕಾದ್ರೂ ಆಗಬಹುದು.
ತುಂಬಾ ಡಯಟ್ ಮಾಡ್ತೀರಾ? ಏನಿಷ್ಟ ತಿನ್ನೋದಕ್ಕೆ? ಉಪೇಂದ್ರ ಅವ್ರಿಗೆ ಚಿತ್ರಾನ್ನ ಇಷ್ಟ ಅಂತೆ..?
ಇಲ್ಲಪ್ಪಾ, ಡಯಟ್ ಎಲ್ಲ ಮಾಡೋ “ಒಳ್ಳೇ ಗುಣ’ ನಂಗಿಲ್ಲ. ನಂಗೆ ಸ್ವೀಟ್ಸ್ ಅಂದ್ರೆ ತುಂಬಾ ಇಷ್ಟ. ಬಾದಷಾ, ಬೆಂಗಾಲಿ ಸ್ವೀಟ್ಸ್ ಇಷ್ಟ. ಹೌದು, ಉಪೇಂದ್ರ ಅವರಿಗೆ ಚಿತ್ರಾನ್ನ ಇಷ್ಟ. ರೈಸ್ ಐಟಂ ಏನಿದ್ರೂ ಇಷ್ಟಪಡ್ತಾರೆ.
ಗಣೇಶ (ದೇವರು) ಬರ್ತೀದ್ದಾನಲ್ಲಾ… ಚೌತಿ ಹಬ್ಬಕ್ಕೆ ಏನೇನ್ ಅಡುಗೆ ಪ್ಲಾನ್ ಮಾಡ್ಕೊಂಡಿದ್ದೀರಿ?
ಅಯ್ಯೋ ಏನೇನೂ ಪ್ಲಾನ್ ಮಾಡಿಲ್ಲ ಕಣ್ರೀ. ಉಪೇಂದ್ರ ಅವರು ಪ್ರಜಾಕೀಯ ಕೆಲಸದಲ್ಲಿ ಬ್ಯುಸಿ. ಮನೆಗೆ ಬರುವ ಅಭಿಮಾನಿಗಳ ಸಂಖ್ಯೆ ಎಷ್ಟಿದೆ ಅಂದ್ರೆ, ಮನೆ ಒಂಥರಾ ಮೀಟಿಂಗ್ ಪಾಯಿಂಟ್ ಆಗಿºಟ್ಟಿದೆ. ಪ್ರಜಾಕೀಯವನ್ನು ಬೆಂಬಲಿಸಿ ತುಂಬಾ ಜನ ಮನೆಗೆ ಬರಿ¤ದ್ದಾರೆ. ಹೊಸ ಹೊಸ ಐಡಿಯಾದ ಬಗ್ಗೆ ಚರ್ಚಿಸ್ತಾರೆ. ಜನರ ಸಹಕಾರ ನೋಡಿ ಖುಷಿ ಆಗ್ತಿದೆ. ಇದೇ ಒಂಥರ ಹಬ್ಬದ ರೀತಿ. ಗಣೇಶ ಎಲ್ಲರಿಗೂ ಒಳ್ಳೇದು ಮಾಡ್ಲಿ. ಪ್ರಜಾಕೀಯದ ಆಶಯ ನೆರವೇರಲಿ ಅಂತ ಪ್ರಾರ್ಥನೆ ಮಾಡ್ತಿದ್ದೀನಿ. ಹಬ್ಬದ ತಯಾರಿ ಎಲ್ಲ ಆಗಿಲ್ಲ.
ಈ ವ್ಯಕ್ತಿಗಳಿಂದ ನೀವು ಏನನ್ನು ಕಲಿಯಲು ಬಯಸುತ್ತೀರಿ?
1. ಸುದೀಪ್: ಅವರು ತುಂಬಾ ಟ್ಯಾಲೆಂಟೆಡ್ ನಟ. ಅವರಿಂದ ಆ್ಯಕ್ಟಿಂಗ್ ಸ್ಕಿಲ್ ಕಲೀತೀನಿ.
2. ನರೇಂದ್ರ ಮೋದಿ: ಡ್ರೆಸಿಂಗ್ ಸೆನ್ಸ್. ಅವರು ತುಂಬಾ ಚೆನ್ನಾಗಿ ಡ್ರೆಸ್ ಮಾಡ್ಕೊàತಾರೆ.
3. ಉಪೇಂದ್ರ: ಸಿಂಪ್ಲಿಸಿಟಿ. ಅವರು ತುಂಬಾ ಸರಳ ವ್ಯಕ್ತಿ.
4. ಶಿವರಾಜ್‌ಕುಮಾರ್: ಶಿವಣ್ಣನ ಎನರ್ಜಿನ ಯಾರಿಗೂ ಬೀಟ್ ಮಾಡೋಕೆ ಆಗಲ್ಲ. ಅವರಷ್ಟು ಎನರ್ಜಿಟಿಕ್ ಆಗಿರೋದನ್ನು ಕಲಿಯಬೇಕು.
5. ರಮ್ಯಾ: ಸೌಂದರ್ಯ
6. ರಾಧಿಕಾ ಪಂಡಿತ್: ರಾಧಿಕಾ ತುಂಬಾ ಚೆನ್ನಾಗಿ ಮಾತಾಡ್ತಾರೆ. ಅವರ ಮಾತಿನ ಶೈಲಿ ತುಂಬಾ ಇಷ್ಟ ಆಗುತ್ತೆ. ಅದನ್ನು ಕಲೀಬೇಕು.
ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.