ತಾರಕಾಸುರನೊಳಗೊಂದು ಭಿನ್ನ ಲೋಕ
Team Udayavani, Nov 24, 2018, 10:47 AM IST
“ಒಂದು ಬಾರಿ ಆ ಕೆಲಸ ಮಾಡಿ ನನ್ನಿಂದ ತೊಂದರೆಯಾಗಿದ್ದು ಸಾಕು, ಮತ್ತೆ ನಾನು ಆ ಕೆಲಸ ಮಾಡಲ್ಲ’ ನಾಯಕ ಖಡಕ್ ಆಗಿ ಹೇಳಿ ಹೊರಡುತ್ತಾನೆ. ಆದರೆ, ಆತನ ಸಾಕು ತಂದೆ ಮಾತ್ರ ಬೆನ್ನುಬಿಡದ ಬೇತಾಳನಂತೆ ಮಗನ ಹಿಂದೆ ಬೀಳುತ್ತಾನೆ. “ನನ್ನ ಹೆಂಡತಿಯ ಎದೆಹಾಲು ಕುಡಿದ ಋಣ ನಿನ್ನ ಮೇಲಿದೆ’ ಎನ್ನುತ್ತಲೇ ಭಾವನಾತ್ಮಕವಾಗಿ ಕಟ್ಟಿಹಾಕಲು ಪ್ರಯತ್ನಿಸುತ್ತಾನೆ. ಆ ಊರಿನಲ್ಲಿ, ಜನಾಂಗದಲ್ಲಿ ಆ ಕೆಲಸವನ್ನು ಬಲ್ಲವರೆಂದರೆ ತನ್ನ ಸಾಕು ಮಾತ್ರ ಎಂಬುದು ತಂದೆಗೆ ಚೆನ್ನಾಗಿ ಗೊತ್ತಿದೆ.
ಅದೇ ಕಾರಣದಿಂದ ಮಗನನ್ನು ಒಪ್ಪಿಸಲು ದುಂಬಾಲು ಬೀಳುತ್ತಾನೆ. ಹಾಗಾದರೆ, ಮಗ ಒಪ್ಪುತ್ತಾನಾ, ಅಷ್ಟಕ್ಕೂ ಆ ಕೆಲಸ ಯಾವುದು ಎಂಬ ಕುತೂಹಲವಿದ್ದರೆ ನೀವು “ತಾರಕಾಸುರ’ ನೋಡಬಹುದು. “ತಾರಕಾಸುರ’ ಸಿನಿಮಾದ ಕಥೆಯನ್ನು ನಿಮಗೆ ಒಂದೇ ಪದದಲ್ಲಿ ಹೇಳಿಬಿಡುವುದು ಕಷ್ಟ. “ತಾರಕಾಸುರ’ ಹೇಗೆ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೋ, ಅದರಾಚೆಗೆ ಇದೊಂದು ಭಿನ್ನ ಕಥಾವಸ್ತುವುಳ್ಳ ಸಿನಿಮಾ ಕೂಡಾ.
ಒಬ್ಬ ನಾಯಕನ ಲಾಂಚ್‌ಗೆ ಈ ತರಹದ ಕಥೆಯೊಂದನ್ನು ಆಯ್ಕೆ ಮಾಡಲು ನಿರ್ದೇಶಕರಿಗೆ ಹಾಗೂ ಅದನ್ನು ಒಪ್ಪಿಕೊಳ್ಳಲು ನಿರ್ಮಾಪಕರಿಗೊಂದು ಧೈರ್ಯ, ವಿಶ್ವಾಸಬೇಕು. ಆ ನಿಟ್ಟಿನಲ್ಲಿ “ತಾರಕಾಸುರ’ ತಂಡದ ಧೈರ್ಯವನ್ನು ಮೆಚ್ಚಬೇಕು. ಬುಡ್‌ಬುಡಿಕೆ ಹಾಗೂ ಸಿದ್ಧಿಯನ್ನು ಕಲಿತುಕೊಂಡಿರುವ ಜನಾಂಗ ಹಾಗೂ ಆ ಸಿದ್ಧಿಯಿಂದ ಆಗುವ ಪರಿಣಾಮ-ದುಷ್ಪರಿಣಾಮದ ಸುತ್ತ ಇಡೀ ಸಿನಿಮಾ ಸಾಗುತ್ತದೆ.
ಅನೇಕರಿಗೆ ಗೊತ್ತಿಲ್ಲದ ಸಾಕಷ್ಟು ಆಚಾರ-ವಿಚಾರಗಳನ್ನು ಈ ಸಿನಿಮಾ ಮೂಲಕ ನಿರ್ದೇಶಕರು ತೋರಿಸುತ್ತಾ ಹೋಗಿದ್ದಾರೆ. ಆ ಮಟ್ಟಿಗೆ “ತಾರಕಾಸುರ’ ಒಂದು ಹೊಸ ಬಗೆಯ ಕಥೆ. ಬುಡ್‌ಬುಡಿಕೆ ಜನಾಂಗದ ಆಚರಣೆ ಸೇರಿದಂತೆ ಹಲವು ಅಂಶಗಳನ್ನು ನಿರ್ದೇಶಕರು ತುಂಬಾ ನೀಟಾಗಿ ತೋರಿಸುತ್ತಾ ಹೋಗಿದ್ದಾರೆ. ನೈಜವಾಗಿ ನಡೆಯುತ್ತಿದೆಯೇನೋ ಎಂಬಷ್ಟರ ಮಟ್ಟಿಗೆ ಆ ಪರಿಸರವನ್ನು ಕಟ್ಟಿಕೊಟ್ಟಿದ್ದಾರೆ.
ನಿರ್ದೇಶಕರ ಕಲ್ಪನೆ ಛಾಯಾಗ್ರಾಹಕರು ಸಾಥ್ ನೀಡಿದ ಪರಿಣಾಮ ಇಡೀ ಪರಿಸರ ನೈಜವಾಗಿ ಕಂಗೊಳಿಸಿದೆ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥೆಯನ್ನು ಇನ್ನಷ್ಟು ಬೆಳೆಸುತ್ತಾ ಹೋಗುವ ಅವಕಾಶವಿದ್ದರೂ, ಅವರಿಗೆ ಹೊಸ ಹೀರೋನಾ ಲಾಂಚ್, ಕಮರ್ಷಿಯಲ್ ಅಂಶಗಳು ಜಾಗೃತವಾಗಿವೆ. ಹಾಗಾಗಿ, ಸಿನಿಮಾದಲ್ಲಿ ಲವ್, ಕಾಮಿಡಿ, ಹಾಡು, ಫೈಟ್ ಎಲ್ಲವೂ ಸೇರಿಕೊಂಡಿದೆ. ಹಾಗೆ ನೋಡಿದರೆ ಈ ಸಿನಿಮಾಕ್ಕೆ ಅವೆಲ್ಲವೇ ಅಷ್ಟೇನು ಅಗತ್ಯವಿರಲಿಲ್ಲ.
ಈ ಅಂಶಗಳು ಕಥೆಯ ಮಧ್ಯೆ ಆಗಾಗ ನುಗ್ಗಿಬರುವುದರಿಂದ ಗಂಭೀರವಾದ ಕಥೆಯ ವೇಗಕ್ಕೆ ಅಡ್ಡಿಯುಂಟಾಗುತ್ತದೆ. ಜೊತೆಗೆ ಸಾಧುಕೋಕಿಲ ಕಾಮಿಡಿ ಸೇರಿದಂತೆ ಅನೇಕ ದೃಶ್ಯಗಳನ್ನು ಟ್ರಿಮ್ ಮಾಡಿ, ಕಥೆಯನ್ನು ಬೆಳೆಸಿದ್ದರೆ “ತಾರಕಾಸುರ’ನ ಅಬ್ಬರ ಇನ್ನೂ ಜೋರಾಗಿರುತ್ತಿತ್ತು. ಚಿತ್ರದಲ್ಲಿನ ಇಂತಹ ಸಣ್ಣಪುಟ್ಟ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ ಒಂದು ಪ್ರಯತ್ನವಾಗಿ ಸಿನಿಮಾವನ್ನು ಮೆಚ್ಚಿಕೊಳ್ಳಬಹುದು. ರೆಗ್ಯುಲರ್ ಕಥೆಯ ಮಧ್ಯೆ “ತಾರಕಾಸುರ’ ಕೊಂಚ ಭಿನ್ನವಾಗಿ ನಿಲ್ಲುತ್ತಾನೆ.
ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ವೈಭವ್ ಇಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಶೇಡ್‌ಗೆ ತಕ್ಕಂತೆ ಅವರು ತಮ್ಮ ದೇಹವನ್ನು ಹೊಂದಿಸಿಕೊಂಡಿರೋದನ್ನು ಮೆಚ್ಚಬೇಕು. ಕಾಲೇಜು ಹುಡುಗನಾಗಿ ಹಾಗೂ ವಿದ್ಯೆಯೊಂದನ್ನು ಕಲಿತುಕೊಂಡಿರುವ ಪಾತ್ರದಲ್ಲಿ ವೈಭವ್ ಇಷ್ಟವಾಗುತ್ತಾರೆ. ಲವ್, ಕಾಮಿಡಿ ದೃಶ್ಯಗಳಿಗಿಂತ ವೈಭವ್ ಆ್ಯಕ್ಷನ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ.
ಚಿತ್ರದಲ್ಲಿ ಮಾನ್ವಿತಾ ನಾಯಕಿ. ಹಾಗೆ ನೋಡಿದರೆ ಈ ಚಿತ್ರದಲ್ಲಿ ನಾಯಕಿಗೆ ಹೆಚ್ಚಿನ ಕೆಲಸವಿಲ್ಲ. ಹಾಗಾಗಿ ಇಲ್ಲಿ ಮಾನ್ವಿತಾ ನಟನೆ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಆದರೆ, ಇದ್ದಷ್ಟು ಹೊತ್ತು ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಉಳಿಂದತೆ ಡ್ಯಾನಿ ಸಫಾನಿ ಅಬ್ಬರಿಸಿದ್ದಾರೆ. ಸಾಧುಕೋಕಿಲ ಅವರು ಸಿನಿಮಾದುದ್ದಕ್ಕೂ ಸಾಗಿ ಬಂದು ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಕುಮಾರ್‌ಗೌಡ ಅವರ ಛಾಯಾಗ್ರಹಣ ಸೊಗಸಾಗಿದೆ.
ಚಿತ್ರ: ತಾರಕಾಸುರ
ನಿರ್ಮಾಣ: ಎಂ.ನರಸಿಂಹಲು
ನಿರ್ದೇಶನ: ಚಂದ್ರಶೇಖರ್ ಬಂಡಿಯಪ್ಪ
ತಾರಾಗಣ: ವೈಭವ್, ಮಾನ್ವಿತಾ, ಡ್ಯಾನಿ ಸಫಾನಿ, ಸಾಧುಕೋಕಿಲ, ಎಂ.ಕೆ.ಮಠ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.