ಒಂದು ಮಜಾವಾದ ಇಂಡೋ-ಅಮೆರಿಕನ್ ಜರ್ನಿ
ಚಿತ್ರ ವಿಮರ್ಶೆ
Team Udayavani, May 18, 2019, 3:00 AM IST
ಅಮೆರಿಕಾದಲ್ಲಿ ಓದಿ ಅಲ್ಲೇ ಕೆಲಸ ಹುಡುಕಿಕೊಂಡು ಕೈ ತುಂಬಾ ಸಂಪಾದಿಸುವ ಕನ್ನಡದ ಹುಡುಗ ಸಿದ್ಧು. ಅಲ್ಲೇ ಅವನ ಕಣ್ಣಿಗೆ ಬೀಳುವ ಹುಡುಗಿಯ ಜೊತೆಗಿನ ಅವನ ಸ್ನೇಹ-ಪ್ರೀತಿಗೆ ತಿರುಗುತ್ತದೆ. ಪ್ರೀತಿಗೆ ಹೆತ್ತವರ ಸಮ್ಮತಿಯ ಮೇಲೆ ಮದುವೆ ಮುದ್ರೆ ಕೂಡ ಬೀಳುತ್ತದೆ. ಎಲ್ಲವೂ ಸುಖವಾಗಿ ನಡೆಯುತ್ತದೆ ಎನ್ನುವಾಗಲೇ, ನವವಿವಾಹಿತ ಸಿದ್ಧು ಪಕ್ಕದ ಮನೆಯಲ್ಲಿ ವಾಸವಿದ್ದ ಅನಿವಾಸಿ ಕನ್ನಡಿಗರಾದ ಪಂಡಿತ್ ದಂಪತಿಗಳ ಜೋಡಿ ಕೊಲೆಯಾಗುತ್ತದೆ.
ತನ್ನನ್ನು ಮಗನಂತೆ ನೋಡುತ್ತಿದ್ದ ಹಿರಿಯ ದಂಪತಿಗಳ ಜೋಡಿ ಕೊಲೆಯ ರಹಸ್ಯವನ್ನು ಬೆನ್ನತ್ತಿ ಹೊರಡುವ ಸಿದ್ಧುವಿಗೆ ಒಂದರ ಹಿಂದೊಂದು ರೋಚಕಗಳು ಎದುರಾಗುತ್ತದೆ. ಅಂತಿಮವಾಗಿ ಸಿದ್ಧು ಕೊಲೆಗಾರರ ಪತ್ತೆ ಮಾಡುತ್ತಾನಾ? ಇಲ್ಲವಾ.. ಹಾಗಾದರೆ “ರತ್ನ ಮಂಜರಿ’ ಅಂದ್ರೆ ಏನು? ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಇದು ಈ ವಾರ ತೆರೆಗೆ ಬಂದಿರುವ “ರತ್ನ ಮಂಜರಿ’ ಚಿತ್ರದ ಕಥಾಹಂದರ.
ಚಿತ್ರದ ಪೋಸ್ಟರ್‌ಗಳು, ಟ್ರೇಲರ್‌ಗಳಲ್ಲಿ ಹೇಳಿದಂತೆ “ರತ್ನ ಮಂಜರಿ’ ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೊಂದು ಕ್ರೈಂ ಸ್ಟೋರಿಯನ್ನು ತನ್ನೊಳಗೆ ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ. ಅಮೆರಿಕಾದಲ್ಲಿ ಶುರುವಾಗುವ ಚಿತ್ರದ ಕಥೆಗೆ ಕೊನೆಗೆ ಕೊಡಗಿನ ಹಚ್ಚ ಹಸಿರಿನ ಸುಂದರ ಪರಿಸರದಲ್ಲಿ ತಾರ್ಕಿಕ ಅಂತ್ಯ ಸಿಗುತ್ತದೆ. ಹಾಗಂತ “ರತ್ನ ಮಂಜರಿ’ಯಲ್ಲಿ ಹೊಸಥರದ ಕಥೆಯನ್ನ ಏನೂ ನಿರೀಕ್ಷಿಸುವಂತಿಲ್ಲ.
ಕನ್ನಡದ ಈಗಾಗಲೇ ಬಂದ “ರಂಗಿತರಂಗ’, “ಅನುಕ್ತ’ ಹೀಗೆ ಹಲವು ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಚಿತ್ರಗಳಲ್ಲಿ ಇರುವಂಥ ಛಾಯೆ ಇಲ್ಲೂ ಕಾಣುತ್ತದೆ. ಆದರೆ ಅದು ನಡೆಯುವ ಪರಿಸರ, ಪಾತ್ರಗಳು ಮತ್ತು ನಿರೂಪಣೆ ಮಾತ್ರ ಬೇರೆ ಥರದ್ದಾಗಿದೆ ಅಷ್ಟೇ. ಕನ್ನಡ ಪ್ರೇಕ್ಷಕರು ಈ ಹಿಂದೆ ನೋಡಿದ ಕಥೆಯನ್ನೇ ನಿರ್ದೇಶಕ ಪ್ರಸಿದ್ಧ್ “ರತ್ನ ಮಂಜರಿ’ ಮೂಲಕ ಹೊಸಥರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಕಥೆಯ ಆಯ್ಕೆಯಲ್ಲಿ ಕೊಂಚ ಎಡವಿದಂತೆ ಕಂಡರೂ, ಆಯ್ಕೆ ಮಾಡಿಕೊಂಡ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಉದ್ದಕ್ಕೂ ಒಂದಷ್ಟು ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಇಟ್ಟು ಪ್ರೇಕ್ಷಕರ ಕುತೂಹಲವನ್ನು ಕೊನೆವರೆಗೂ ಉಳಿಸಿಕೊಂಡು ಹೋಗುತ್ತಾರೆ. ಕಥೆಯನ್ನು ಬದಿಗಿಟ್ಟು ಹೇಳುವುದಾದರೆ, “ರತ್ನ ಮಂಜರಿ’ಯ ಹೊಸಥರ ನಿರೂಪಣೆಯಲ್ಲಿ ನಿರ್ದೇಶಕ ಪ್ರಸಿದ್ಧ್ ಯಶಸ್ವಿಯಾಗಿದ್ದಾರೆ.
ಇನ್ನು ತಾಂತ್ರಿಕವಾಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಛಾಯಾಗ್ರಹಣದಲ್ಲಿ ಅಮೆರಿಕಾ ಮತ್ತು ಕೊಡಗಿನ ಲೊಕೇಶನ್‌ಗಳು ಸುಂದರವಾಗಿ ಮೂಡಿಬಂದಿವೆ. ಸಂಕಲನ ಇನ್ನಷ್ಟು ಮೊನಚಾಗಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಧ್ವನಿಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತಕ್ಕೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು.
ಬಹುತೇಕ ಅನಿವಾಸಿ ಕನ್ನಡಿಗರು ಸೇರಿ ಮಾಡಿರುವ ಚಿತ್ರವಾಗಿದ್ದರಿಂದ ಚಿತ್ರದ ಕಥೆಯಲ್ಲಿ, ಸಂಭಾಷಣೆಯಲ್ಲಿ, ದೃಶ್ಯಗಳಲ್ಲಿ ವಿದೇಶ ಮತ್ತು ಕನ್ನಡದ ಸೊಗಡು ಎರಡರ ಸಮ್ಮಿಶ್ರಣ ಎದ್ದು ಕಾಣುತ್ತದೆ. ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡಿದರೆ, ಹೊಸತರದ ಚಿತ್ರವನ್ನು ಕೊಡಬೇಕು ಎಂಬ ಚಿತ್ರತಂಡದ ಹಂಬಲ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಚಿತ್ರದ ನಾಯಕ ರಾಜ್ ಚರಣ್ ತಮ್ಮ ಪಾತ್ರವನ್ನು ಇನ್ನೂ ಚೆನ್ನಾಗಿ ನಿರ್ವಹಿಸಬಹುದಿತ್ತು. ನಾಯಕಿ ಅಖಿಲಾ ಪ್ರಕಾಶ್ ಆ್ಯಕ್ಟಿಂಗ್ ಮತ್ತು ಗ್ಲಾಮರಸ್ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಪಲ್ಲವಿ ರಾಜು, ಅನಿಲ್, ರಾಜು ವೈವಿದ್ಯ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದ ಪಾತ್ರಗಳು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ವಾರಾಂತ್ಯದಲ್ಲಿ ಹೊಸ ಚಿತ್ರವನ್ನು ನೋಡಬೇಕು ಎನ್ನುವವರಿಗೆ “ರತ್ನ ಮಂಜರಿ’ ಕೊಟ್ಟ ದುಡ್ಡಿಗೆ ಮೋಸವಿಲ್ಲದೆ ಮನರಂಜಿಸುತ್ತದೆ ಎನ್ನಲು ಅಡ್ಡಿ ಇಲ್ಲ.
ಚಿತ್ರ: ರತ್ನಮಂಜರಿ
ನಿರ್ಮಾಣ: ಸಂದೀಪ್ ಕುಮಾರ್, ನಟರಾಜ ಹಳೇಬೀಡು, ಡಾ. ನವೀನ್ ಕೃಷ್ಣ
ನಿರ್ದೇಶನ: ಪ್ರಸಿದ್ಧ್
ತಾರಾಗಣ: ರಾಜ್ ಚರಣ್, ಅಖಿಲಾ ಪ್ರಕಾಶ್, ಪಲ್ಲವಿ ರಾಜು, ಶ್ರದ್ಧಾ ಸಾಲಿಯನ್, ರಾಜು ವೈವಿದ್ಯ, ಅನಿಲ್ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.