ಸಿಂಹದ ಹೆಜ್ಜೆಯಲ್ಲಿ ಅಭಿಮಾನದ ಗುರುತು
Team Udayavani, May 7, 2017, 11:40 AM IST
ಅಲ್ಲಿಯವರೆಗೂ ಅವನ ಮೇಲೆ ಅವಳಿಗೆ ಅದೇನು ಪ್ರೀತಿ? ಆದರೆ, ಯಾವಾಗ ಅವನೇ ತನ್ನ ಬಾವನ ಸಾವಿಗೆ ಕಾರಣನಾದವನು ಎಂದು ಗೊತ್ತಾಗುತ್ತದೋ, ಉರಿದು ಬೀಳುತ್ತಾಳೆ. ತನ್ನ ಬಾವನನ್ನು ಸಾಯಿಸುವ ಮೂಲಕ ತನ್ನ ಕುಟುಂಬದ ಸಂತೋಷವನ್ನು ಕಿತ್ತುಕೊಂಡ ಅವನ ಬಗ್ಗೆ ಕಿಡಿ ಕಾರುತ್ತಾಳೆ. ಆಗ ಅವನು ಅವಳಿಗೆ ತಾನು ಹೇಗೆ ಮತ್ತು ಯಾಕೆ ಅವಳ ಬಾವನ ಸಾವಿಗೆ ಕಾರಣನಾದ ಎಂದು ಹೇಳುತ್ತಾನೆ.
ನಿಜ ಹೇಳಬೇಕೆಂದರೆ, ಚಿತ್ರ ಶುರುವಾಗುವುದೇ ಅಲ್ಲಿಂದ ಮತ್ತು ಅದು ದ್ವಿತೀಯಾರ್ಧದ ಆರಂಭ. ಅದಕ್ಕೂ ಮುನ್ನ ಮೊದಲಾರ್ಧದ ಪೂರಾ ಮೂರು ಫೈಟುಗಳು, ಎರಡು ಹಾಡುಗಳು, ಕೆಟ್ಟ ಕಾಮಿಡಿ, ನಾಯಕನ ಒಳ್ಳೆಯ ಗುಣ ಎಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತದೆ. ಮೊದಲಾರ್ಧದ ಐದು ನಿಮಿಷಕ್ಕೆ ಮುನ್ನ ಸೋನುಗೆ ತನ್ನ ಬಾವನ ಕೊಲೆಗೆ ಕರ್ಣನೇ ಕಾರಣ ಎಂದು ಗೊತ್ತಾಗುತ್ತದೆ. ಆ ನಂತರ ಕರ್ಣ ತನ್ನ ಫ್ಲಾಶ್‌ಬ್ಯಾಕ್ ಹೇಳಿಕೊಳ್ಳುವುದರಿಂದ ಚಿತ್ರ ಮತ್ತು ಕಥೆ ಎರಡೂ ಶುರುವಾಗುತ್ತದೆ.
ನರಸಿಂಹ (ಜಯಶ್ರೀ ರಾಜ್ ಅಲಿಯಾಸ್ ಜ್ಯೂನಿಯರ್ ವಿಷ್ಣುವರ್ಧನ್). ಬಡವರ ಪಾಲಿನ ಆಶಾಕಿರಣ ಆತ. ಆತ ತನ್ನ ಜಮೀನಿನ್ನಲ್ಲಿ ಬಡವರಿಗೆ ಆಸ್ಪತ್ರೆ ಕಟ್ಟಿಸಬೇಕು ಎಂದು ಯೋಜನೆ ಹಾಕಿಕೊಳ್ಳುತ್ತಾನೆ. ಆ ಜಾಗವನ್ನು ಹೊಡೆಯುವುದಕ್ಕೆ ಕಾಳಿಂಗ (ಶರತ್ ಲೋಹಿತಾಶ್ವ) ಸ್ಕೆಚ್ ಹಾಕುತ್ತಾನೆ. ಆದರೆ, ನರಸಿಂಹ ಅವರೆಲ್ಲರಿಗೂ ದಂಡಂ ದಶಗುಣಂ ಮಾಡಿ ಆಸ್ಪತ್ರೆ ಕಟ್ಟಿಸುವುದಕ್ಕೆ ಭೂಮಿಪೂಜೆ ಶುರು ಮಾಡುತ್ತಾನೆ. ಆಗ ಕಾಳಿಂಗ, ನರಸಿಂಹನ ಬಲಗೈ ಭಂಟ ವಿಷಕಂಠ (ಶೋಭರಾಜ್)ನ ಒಳಗೆ ಹಾಕಿಕೊಂಡು, ನರಸಿಂಹನಿಗೆ ಯಾಮಾರಿಸುತ್ತಾನೆ.
ಆದರೆ, ಕಾಳಿಂಗ ಮತ್ತು ವಿಷಕಂಠನಿಗೆ ಜಾnನೋದಯವಾಗಿ ಹೋಗಿ ನರಸಿಂಹನ ಕಾಲಿಗೆ ಬೀಳಬೇಕು ಎನ್ನುವಷ್ಟರಲ್ಲಿ ನರಸಿಂಹನಿಗೆ ಪ್ರಾಣ ಹೋಗಿರುತ್ತದೆ. ಇದು ಗೊತ್ತಿಲ್ಲದ ನರಸಿಂಹನ ಸಾಕುಮಗ ಕರ್ಣ, ತನ್ನ ತಂದೆಯ ಸಾವಿಗೆ ಕಾರಣರಾದ ಕಾಳಿಂಗ ಮತ್ತು ವಿಷಕಂಠನನ್ನು ಹುಡುಕಿಕೊಂಡು ಬರುತ್ತಾನೆ. ಮುಂದೇನಾಗುತ್ತದೆ ಮತ್ತು ಕರ್ಣ ಹೇಗೆ ನರಸಿಂಹನ ಕನಸನ್ನು ನನಸು ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಒಬ್ಬ ಅಭಿಮಾನಿ, ತನ್ನ ಮೆಚ್ಚಿನ ಆರಾಧ್ಯದೈವನ ಬಗ್ಗೆ ಸಿನಿಮಾ ಮಾಡಿದರೆ ಹೇಗಿರಬೇಕೋ ಹಾಗಿದೆ “ಸಿಂಹ ಹಾಕಿದ ಹೆಜ್ಜೆ’.
ಚಿತ್ರದ ನಿರ್ಮಾಪಕ ಪಾರ್ಥಸಾರಥಿ, ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ವಿಷ್ಣುವರ್ಧನ್ ಅವರ ನೆನಪಿನಲ್ಲಿ ಮತ್ತು ಅವರನ್ನು ಹೋಲುವ ಪಾತ್ರ ಇಟ್ಟುಕೊಂಡು ಈ ಚಿತ್ರ ನಿರ್ಮಿಸಿದ್ದಾರೆ. ಇಲ್ಲಿ ಅಭಿಮಾನವೇ ಮುಖ್ಯ, ಅಭಿಮಾನವೇ ನಿತ್ಯ ಮತ್ತು ಅಭಿಮಾನವೇ ಸತ್ಯ. ಹಾಗಾಗಿ ಇಲ್ಲಿ ಕಥೆ, ಲಾಜಿಕ್ಕು ಯಾವುದೂ ಹುಡುಕುವುದು ತಪ್ಪಾಗುತ್ತದೆ. ಅಭಿಮಾನಕ್ಕೆ ಏನೇನು ಸಲಕರಣೆಗಳು ಬೇಕೋ ಅವೆಲ್ಲವನ್ನೂ ಇಟ್ಟುಕೊಂಡು ಅವರು ಹೆಜ್ಜೆ ಹಾಕಿಸಿದ್ದಾರೆ. ಇಲ್ಲಿ ಸಿಂಹದ ಹೆಜ್ಜೆ ಹೇಗಿದೆ ಎನ್ನುವುದಕ್ಕಿಂತ ಸಿಂಹ ಹಾಕಿದ್ದೇ ಹೆಜ್ಜೆ ಎಂದು ತೃಪ್ತಿಪಟ್ಟುಕೊಂಡು ಸುಮ್ಮನಾಗಬೇಕು.
ಹಾಗೆ ನೋಡಿದರೆ, ಚಿತ್ರದ ಕಥೆಯನ್ನು ಸಿನಿಮಾ ಮಾಡಿದರೆ ಒಂದೂವರೆ ಗಂಟೆ ಮೇಲೆ ಚಿತ್ರ ಮಾಡುವುದು ಕಷ್ಟ. ಆದರೆ, ಚಿತ್ರದಲ್ಲಿ ಎಲ್ಲಾ ಅಂಶಗಳಿರಬೇಕು ಎಂದು ಕಾಮಿಡಿಗೂ ಒತ್ತು ಕೊಡಲಾಗಿದೆ ಮತ್ತು ನಗು ಬರದ ಕಾಮಿಡಿ ಮತ್ತು ಪಾತ್ರಗಳನ್ನು ಸೇರಿಸಿ ಎರಡೂಕಾಲು ಗಂಟೆಯ ಚಿತ್ರ ಮಾಡಲಾಗಿದೆ. ಎಲ್ಲವನ್ನೂ ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಆದರೆ, ಅಭಿಮಾನ ಇದ್ದರೆ ಏನು ಬೇಕಾದರೂ ಸಹಿಸಿಕೊಳ್ಳಬಹುದು. ಅದಕ್ಕೆ ಉದಾಹರಣೆಯೆಂದರೆ “ಸಿಂಹ ಹಾಕಿದ ಹೆಜ್ಜೆ’. ನಾಯಕ ಪ್ರೀತಮ್ ಹಾಡು, ಫೈಟುಗಳಲ್ಲಿ ಚುರುಕು.
ಅಭಿನಯದಲ್ಲಿ ಆ ಚುರುಕುತನವನ್ನು ನಿರೀಕ್ಷಿಸುವುದು ಕಷ್ಟ. ಅಮೃತ ಅಭಿನಯದಲ್ಲಿ ಚುರುಕು. ನರಸಿಂಹನ ಪಾತ್ರ ಮಾಡಿರುವ ಜಯಶ್ರೀ ರಾಜ್, ವಿಷ್ಣು ಅವರನ್ನು ಚೆನ್ನಾಗಿ ಅನುಕರಿಸಿದ್ದಾರೆ. ಪವನ್ ಅಭಿನಯದ ಬಗ್ಗೆ ಚಕಾರವೆತ್ತುವುದು ಕಷ್ಟವಾದರೂ, ಕಾಮಿಡಿಯೇ ಇರದಿದ್ದರೆ ಅವರಾದರೂ ಅದೆಷ್ಟು ಕಷ್ಟಪಡುತ್ತಾರೆ ಹೇಳಿ? ಇನ್ನು ಹಾಡುಗಳು, ಛಾಯಾಗ್ರಹಣದ ಬಗ್ಗೆ ಹೆಚ್ಚು ಹೇಳುವುದಕ್ಕೇನಿಲ್ಲ. ಅಭಿಮಾನಿಯೊಬ್ಬ ಅಭಿಮಾನಿಗಳಿಗೆ ಮಾಡಿದ ಚಿತ್ರ “ಸಿಂಹ ಹಾಕಿದ ಹೆಜ್ಜೆ’. ಅಭಿಮಾನವಿದ್ದರೆ ಸಿಂಹದ ಹೆಜ್ಜೆ ಗುರುತು ನೋಡಲಡ್ಡಿಯಿಲ್ಲ.
ಚಿತ್ರ: ಸಿಂಹ ಹಾಕಿದ ಹೆಜ್ಜೆ
ನಿದೇಶನ: ವಿಕ್ರಮ್
ನಿರ್ಮಾಣ: ಪಾರ್ಥ ಸಾರಥಿ
ತಾರಾಗಣ: ಪ್ರೀತಮ್, ಅಮೃತ, ಪವನ್, ಶೋಭರಾಜ್, ಶರತ್ ಲೋಹಿತಾಶ್ವ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.