ಹಳೆಯದನ್ನು ನೆನಪಿಸುವ ಹೊಸ ಪ್ರಯತ್ನ
Team Udayavani, Jun 9, 2018, 11:01 AM IST
ನಾಯಕಿಯನ್ನು ಒಂದಷ್ಟು ಮಂದಿ ಅಟ್ಟಾಡಿಸಿಕೊಂಡು ಬರುತ್ತಾರೆ. ಆಕೆ “ಕಾಪಾಡಿ ಕಾಪಾಡಿ’ ಎಂದು ಜೋರಾಗಿ ಚೀರುತ್ತಾ ಓಡಿಕೊಂಡು ಬರುತ್ತಾಳೆ. ಕ್ಯಾಮರಾ ನೇರವಾಗಿ ಹೀರೋ ಕಾಲಿಗೆ ಫೋಕಸ್ ಆಗುತ್ತದೆ. ಹಾಗೇ ಮೇಲೆವರೆಗೆ ಹೀರೋನ ಖಡಕ್ ಲುಕ್ ಅನ್ನು ತೋರಿಸಿ, ಸರ್ರನೇ ಲಾಂಗ್ ಶಾಟ್‌ಗೆ ಹೋಗಿ ಕ್ಯಾಮರಾ ನಿಲ್ಲುತ್ತದೆ. ಹೀರೋ ಒಬ್ಬೊಬ್ಬರನ್ನೇ ಯರ್ರಾಬಿರ್ರಿ ಹೊಡೆದು ಬಿಸಾಕುತ್ತಾನೆ.
ನಾಯಕಿ ಹೀರೋ ಹಿಂದೆ ಬಂದು ನಿಂತಿರುತ್ತಾಳೆ. ಕಟ್ ಮಾಡಿದರೆ, ನಾಯಕಿ ಅನಾಥೆ ಎಂದು ಗೊತ್ತಾಗುತ್ತದೆ. ವಿಶಾಲ ಹೃದಯಿ ನಾಯಕನ ಮನಸ್ಸು ಕರಗುತ್ತದೆ. “ಬಾ ನಮ್ಮ ಮನೆಯಲ್ಲೇ ಇರು’ ಎಂಬ ಒಂದೇ ಮಾತು ಅವರನ್ನು ಹತ್ತಿರ ಮಾಡುತ್ತದೆ. ಆಶ್ರಯ ಹೆಸರಿನ ನಾಯಕಿ ಆಶ್ರಯ ಸಿಕ್ಕ ಖುಷಿಯಲ್ಲಿ ನಾಯಕನ ಮನೆ ಸೇರಿಯೇ ಬಿಡುತ್ತಾಳೆ. ಅಲ್ಲಿಗೆ ನಾಯಕನ ಇಂಟ್ರೋಡಕ್ಷನ್ ಮುಗಿದು ಹೋಗುತ್ತದೆ.
ನಾಯಕನ ಇಂಟ್ರೋಡಕ್ಷನ್ ದೃಶ್ಯವನ್ನು ಕೇಳಿದಾಗ ನಿಮಗೆ ಮುಂದಿನದ್ದನ್ನು ಊಹಿಸಿಕೊಳ್ಳೋದು ಹಾಗೂ ಇದು ಯಾವ ಶೈಲಿಯ ಸಿನಿಮಾ ಎಂಬ ನಿರ್ಧಾರಕ್ಕೆ ಬರೋದು ಕಷ್ಟದ ಕೆಲಸವೇನಲ್ಲ. ಸಿನಿಮಾ ಕಮರ್ಷಿಯಲ್ ಆಗಿರಬೇಕು, ಮಾಸ್ ಪ್ರಿಯರು ಶಿಳ್ಳೆ ಹಾಕುವಂತಹ ಫೈಟ್, ಮೈ ಜುಮ್ಮೆನ್ನುವಂತಹ ಐಟಂ ಸಾಂಗ್, ಕೇಕೆ ಹಾಕಿ ನಗುವಂತಹ ಡಬಲ್ ಮೀನಿಂಗ್ ಡೈಲಾಗ್‌ಗಳಿರಬೇಕೆಂದು ತುಂಬಾನೇ ತಲೆಕೆಡಿಸಿಕೊಂಡು ಮಾಡಿದಂತಿದೆ “ಶತಾಯ ಗತಾಯ’.
ಮಾಮೂಲಿ ಸೂತ್ರದ ಸಿನಿಮಾಗಳನ್ನು ಬಿಟ್ಟು ಬೇರೆಯದ್ದನ್ನು ಪ್ರಯತ್ನಿಸುವವರ ಮಧ್ಯೆ “ಶತಾಯ ಗತಾಯ’ ನಿರ್ದೇಶಕರು ಮಾತ್ರ “ಹಳೆಯದನ್ನು ಉಳಿಸಿ ಬೆಳೆಸುವ’ ಪ್ರಯತ್ನ ಮಾಡಿದ್ದಾರೆ. ಅವರ ಆ ಪ್ರಯತ್ನದ “ಕಾವು’ ಪ್ರೇಕ್ಷರನ್ನು ತಟ್ಟಿರೋದಂತೂ ಸುಳ್ಳಲ್ಲ. ಪ್ರೇಕ್ಷಕ ಕೇವಲ ಸೀಟಿನ ತುದಿಗಷ್ಟೇ ಬಾರದೇ, ಆ ಕಡೆ ಈ ಕಡೆ ಎಲ್ಲಾ ವಾಲಾಡುತ್ತಾ ಸಿನಿಮಾ ನೋಡುವಂತೆ ಮಾಡಿದ್ದಾರೆ.
ಏನೇ ಕೆಲಸ ಮಾಡುವುದಾದರೂ ತುಂಬಾ ಸುಲಭವಾಗಿ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಂತಿರುವ ನಿರ್ದೇಶಕರು, ತುಂಬಾ ಕಷ್ಟಪಟ್ಟು, ದೃಶ್ಯಕಟ್ಟುವ ಗೋಜಿಗೂ ಹೋಗಿಲ್ಲ. ನಾಯಕನ ಹೊಡೆದಾಟ, ಬಡಿದಾಟ, ಲವ್‌ಸಾಂಗ್, ಪ್ರೇಕ್ಷಕ ಈ ಕಾಮಿಡಿಗೂ ನಗಬಹುದೆಂಬ ನಂಬಿಕೆಯಿಂದ ಸೃಷ್ಟಿಸಿದ ಕಾಮಿಡಿ ದೃಶ್ಯಗಳೊಂದಿಗೆ ಬಹುತೇಕ ಸಿನಿಮಾವನ್ನು ಮುಗಿಸಿದ್ದಾರೆ. ಈ ಮಧ್ಯೆ ಕಥೆಯೂ ಆಗಾಗ “ಗೆಸ್ಟ್ ಅಪಿಯರೆನ್ಸ್’ ಮಾಡುತ್ತಿರುತ್ತದೆ.
ಈ ಸಿನಿಮಾದಲ್ಲೊಂದು ಪಾತ್ರವಿದೆ. ಅದು ನಾಯಕನ ತಾತನ ಪಾತ್ರ. “ಈ ಕಥೆಯನ್ನು ಮರೆತು ಬೇರೇನನ್ನೋ ಮಾಡುತ್ತಿದ್ದೀಯಲ್ಲ’ ಎಂದು ನೆನಪಿಸುವಂತಿದೆ ಆ ಪಾತ್ರ. ಆಗಾಗ ನಾಯಕನಲ್ಲಿ “ಮಗ ನಮ್ಮ ಉದ್ದೇಶ ಈಡೇರುತ್ತಾ, ಇನ್ನೆಷ್ಟು ಜನ ಬಾಕಿ ಇದ್ದಾರೆ’ ಎಂದು ಆ ಪಾತ್ರ ಕೇಳುತ್ತಿರುತ್ತದೆ. ಹಾಗೆ ನೋಡಿದರೆ ಸಿನಿಮಾದ ಕಥೆ ಅಡಗಿರುವುದು ಕೂಡಾ ಅಲ್ಲೇ.
ತನ್ನ ತಾಯಿಗೆ ಅನ್ಯಾಯ ಮಾಡಿದ ಕುಟುಂಬವೊಂದರ ವಿರುದ್ಧ ತೊಡೆತಟ್ಟಿ ನಿಲ್ಲುವ ನಾಯಕ ಮತ್ತು ಆತನ ದಾರಿಯೇ ಈ ಸಿನಿಮಾದ ಒನ್‌ಲೈನ್. ನಿಜಕ್ಕೂ ಅದು ಕೇವಲ “ಒನ್‌ಲೈನ್’ ಆಗಿಯಷ್ಟೇ ಉಳಿದಿದೆ. ಏಕೆಂದರೆ, ಆಗಾಗ ಒಂದೊಂದು ದೃಶ್ಯ ಬಂದು ಹೋಗುವ ಮೂಲಕ ಈ ಚಿತ್ರದಲ್ಲೊಂದು ಕಥೆ ಇದೆ ಎಂಬುದನ್ನು ನೆನಪಿಸುತ್ತಾರೆ. ಇದೇ ಕಥೆಯನ್ನು ಮತ್ತಷ್ಟು ಗಂಭೀರವಾಗಿ, ಪೂರ್ವತಯಾರಿಯೊಂದಿಗೆ ನಿರೂಪಿಸಿದ್ದರೆ ಒಂದೊಳ್ಳೆಯ ಥ್ರಿಲ್ಲರ್ ಸಿನಿಮಾವಾಗುವ ಸಾಧ್ಯತೆ ಇತ್ತು. ಇನ್ನು, ಸಿನಿಮಾದ ಕ್ಲೈಮ್ಯಾಕ್ಸ್ ವೇಳೆ ನಿರ್ದೇಶಕರು ಕೊಟ್ಟ ಟ್ವಿಸ್ಟ್ ಚೆನ್ನಾಗಿದೆ.
ಅದನ್ನು ಮತ್ತಷ್ಟು ಬೆಳೆಸುವ ಅವಕಾಶವಿತ್ತು. ಆದರೆ, ನಿರ್ದೇಶಕರು ಏಕಕಾಲಕ್ಕೆ ಎಲ್ಲಾ ವರ್ಗದವರನ್ನು ತೃಪ್ತಿಪಡಿಸುವ “ಮಹತ್ತರ’ವಾದ ಜವಾಬ್ದಾರಿಯನ್ನು ಹೊತ್ತುಕೊಂಡ ಪರಿಣಾಮ ಹತ್ತರಲ್ಲಿ ಹನ್ನೊಂದಾಗಿಯಷ್ಟೇ ಉಳಿಯುತ್ತದೆ. ನಾಯಕ ರಘು ರಾಮಪ್ಪ ಆ್ಯಕ್ಷನ್ ದೃಶ್ಯಗಳಲ್ಲಷ್ಟೇ ಇಷ್ಟವಾಗುತ್ತಾರೆ. ಉಳಿದಂತೆ ಲವ್, ಕಾಮಿಡಿಯಲ್ಲಿ ಅವರು ಸಾಕಷ್ಟು ಪಳಗಬೇಕು. ನಾಯಕಿ ಸೋನಿಕಾಗೆ ಇಲ್ಲಿ ಹೆಚ್ಚೇನು ಸ್ಕೋಪ್ ಇಲ್ಲ. ಉಳಿದಂತೆ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬಂದು ಹೋಗುತ್ತವೆ ಮತ್ತು ಎಲ್ಲಾ ಪಾತ್ರಗಳು ದ್ವಂಧ್ವಾರ್ಥವನ್ನು ಕಣ್ಣಿಗೊತ್ತಿಕೊಂಡಂತೆ ವರ್ತಿಸಿವೆ.
ಚಿತ್ರ: ಶತಾಯ ಗತಾಯ
ನಿರ್ಮಾಣ-ನಿರ್ದೇಶನ: ಸಂದೀಪ್ ಗೌಡ
ತಾರಾಗಣ: ರಘು ರಾಮಪ್ಪ, ಸೋನಿಕಾ ಗೌಡ, ಕುರಿ ಪ್ರತಾಪ್, ಸಂದೀಪ್ ಗೌಡ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.