ಅಯನ ಎಂಬ ಸರಳ ಕಥನ, ನೈಜ ಚಿತ್ರಣ
Team Udayavani, Sep 11, 2017, 12:32 PM IST
ಬೈಕ್ ಸ್ಟಾರ್ಟ್ ಮಾಡುತ್ತಾನೆ ಆದಿ. ಅಲ್ಲಿಂದ ಚಿತ್ರವೂ ಶುರುವಾಗುತ್ತದೆ. ಅವನ ಪಯಣ ಎಲ್ಲಿಗೆ? ಗೊತ್ತಿಲ್ಲ. ಹಗಲು, ರಾತ್ರಿ, ಊರು, ಕೇರಿ, ಹಳ್ಳಿ, ಕಾಡು … ಅಂತ ಅವನು ಸುತ್ತುತ್ತಿದ್ದಂತೆ, ಅವನ ಹಳೆಯ ನೆನಪುಗಳು ಸಹ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ತಾನು ಹಿಂದೊಮ್ಮೆ ಹೇಗಿದ್ದೆ ಎಂದು ಶುರುವಾಗುವ ಅವನ ಕಥೆ, ಈಗ ಹೇಗಾಗಿದ್ದೇನೆ ಎಂಬಲ್ಲಿಗೆ ಬಂದು ಮುಟ್ಟುತ್ತದೆ. ಅಷ್ಟರಲ್ಲಿ ಅವನ ಪ್ರಯಾಣ ಸಹ ಮುಗಿದಿರುತ್ತದೆ. ಹಾಗಂತ ಕಥೆ ಅಥವಾ ಚಿತ್ರ ಅಷ್ಟಕ್ಕೇ ಮುಗಿಯುವುದಿಲ್ಲ. ಅಲ್ಲಿಂದ ಮತ್ತೆ ಮುಂದುವರೆಯುತ್ತದೆ. ಅದು ಹೇಗೆ ಅಂತ್ಯವಾಗುತ್ತದೆ?
“ಅಯನ’ ಒಬ್ಬ ಸಾಫ್ಟ್ವೇರ್ ಇಂಜಿನಿಯರ್‌ನ ಕಥೆ. ಸಾಫ್ಟ್ವೇರ್ ಇಂಜಿನಿಯರ್ ಒಬ್ಬ ಮಹತ್ವಾಕಾಂಕ್ಷೆಯ ಬೆನ್ನುಹತ್ತಿ ಏನೆಲ್ಲಾ ಅನುಭವಿಸುತ್ತಾನೆ ಎಂದು ಚಿತ್ರ ಹೇಳುತ್ತಾ ಹೋಗುತ್ತದೆ. ಅವನ ಒಂದು ಸಣ್ಣ ಪ್ರಯಾಣದ ಖುಷಿ, ನೋವು, ಆತಂಕ, ಗೊಂದಲ, ಅಸಹಾಯಕತೆ ಎಲ್ಲವೂ ಬಿಚ್ಚಿಡುತ್ತಾ ಹೋಗುತ್ತದೆ. ಹೀಗೆ ಹೇಳುತ್ತಲೇ, ಜೀವನದ ಸಾರ್ಥಕತೆ ಎಂದರೇನು ಎಂದು ಅವನಿಗೆ ಅರ್ಥವಾಗುವುದರ ಜೊತೆಗೆ ಪ್ರೇಕ್ಷಕರಿಗೂ ಅರ್ಥ ಮಾಡಿಸುತ್ತಾ ಸಾಗುತ್ತದೆ. ಆರಂಭದಲ್ಲಿ ನಗುತ್ತಾ ಕಾಲ ಕಳೆಯುವ ಪ್ರೇಕ್ಷಕ, ಬರುವಾಗ ಭಾರವಾದ ಮನಸ್ಸು ಹೊತ್ತು ಬರುವಂತೆ ಮಾಡುತ್ತದೆ.
ಹಾಗೆ ನೋಡಿದರೆ, ಈ ಕಥೆ ವಿಶೇಷವೇನಲ್ಲ. ಯಾವುದೇ ಒಂದು ವೃತ್ತಿಯಲ್ಲಿ ಒಬ್ಬ ವ್ಯಕ್ತಿ ತೀವ್ರವಾಗಿ ತೊಡಗಿಸಿಕೊಂಡಾಗ, ಅವನು ಅನುಭವಿಸುವ ತುಮುಲಗಳ ಹಲವು ಕಥೆಗಳು ಈಗಾಗಲೇ ಬಂದಿವೆ. ಆದರೆ, ಆ ಕಥೆಯನ್ನು ಒಂದು ವಿಭಿನ್ನವಾದ ಪರಿಸರದಲ್ಲಿ ಇಟ್ಟಿರುವುದೇ ವಿಶೇಷ ಎಂದರೆ ತಪ್ಪಿಲ್ಲ. ಇಡೀ ಕಥೆಯನ್ನು ಸಾಫ್ಟ್ವೇರ್ ಕ್ಷೇತ್ರದ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಗಂಗಾಧರ್ ಸಾಲಿಮಠ ಆ ಕ್ಷೇತ್ರದ ನೋವು, ನಲಿವುಗಳು, ಒತ್ತಡಗಳು ಮತ್ತು ಅದರಿಂದ ಮನಸ್ಸಿನ ಮೇಲೆ ಹಾಗೂ ಕುಟುಂಬದ ಮೇಲೆ ಆಗುವ ಪರಿಣಾಮಗಳು … ಎಲ್ಲವನ್ನೂ ಬಿಡಿಸಿಡುತ್ತಾ ಹೋಗುತ್ತಾರೆ.
ಆ ಕ್ಷೇತ್ರವನ್ನು ಹತ್ತಿರದಿಂದ ನೋಡಿರುವ ಸಾಧ್ಯತೆ ಇರುವುದರಿಂದ ಸಣ್ಣ ಸಣ್ಣ ಡೀಟೈಲ್‌ಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಹಾಗಾಗಿಯೇ ಇಲ್ಲಿ ಯಾವುದೇ ಅಬ್ಬರ ಅಥವಾ ಉತ್ಪ್ರೇಕ್ಷೆಯಿಲ್ಲ. ಹತ್ತಾರು ಜನರನ್ನು ಚಚ್ಚುವ ಹೊಡೆದಾಟಗಳು, ಡ್ರೀಮ್‌ಸಾಂಗ್‌ಗಳು, ಬಿಲ್ಡಪ್‌ಗ್ಳು ಯಾವುದೂ ಈ ಚಿತ್ರದಲ್ಲಿಲ್ಲ. ಎಲ್ಲವೂ ನೈಜವಾಗಿ ಮತ್ತು ಸಹಜವಾಗಿದೆ. ಎಷ್ಟು ನೈಜವಾಗಿದೆ ಎಂದರೆ, ಯಾರ ಮನೆಯಲ್ಲಿ ಬೇಕಾದರೂ ನಡೆಯಬಹುದಾದ ಒಂದು ಘಟನೆಯನ್ನು ಹೆಕ್ಕಿ ಚಿತ್ರ ಮಾಡಿದ್ದಾರೆ ಗಂಗಾಧರ್.
ಹಾಗೆ ನೋಡಿದರೆ, ಅವರಿಗೊಂದು ಕಮರ್ಷಿಯಲ್ ಸಿನಿಮಾ ಮಾಡಬೇಕು ಅಥವಾ ಒಂದು ಸಿನಿಮಾಗೆ ಒಂದಿಷ್ಟು ಸರಕುಗಳನ್ನು ತುರುಕಬೇಕು ಎಂಬ ಯಾವುದೇ ಯೋಚನೆ ಇದ್ದಂತಿಲ್ಲ. ಹಾಗಾಗಿ ತಾನು ನೋಡಿಧ್ದೋ ಅಥವಾ ಕೇಳಿಧ್ದೋ ಒಂದು ಘಟನೆಯನ್ನು ಅವರು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಚಿತ್ರ ಮಾಡಿದ್ದಾರೆ. ಕಮರ್ಷಿಯಲ್ ಅಂಶಗಳು ಇಲ್ಲದೆ, ತೀರಾ ನೈಜವಾಗಿ ಹೇಳುವುದಕ್ಕೆ ಹೋದರೆ, ಪ್ರೇಕ್ಷಕರಿಗೆ ಬೋರ್ ಆಗುವ ಸಾಧ್ಯತೆ ಇದೆ ಎಂಬುದು ನಿರ್ದೇಶಕರಿಗೆ ಗೊತ್ತಿದೆ. ಅದೇ ಕಾರಣಕ್ಕೆ, ಅವರು ಅಲ್ಲಲ್ಲಿ ಒಂದಿಷ್ಟು ಟ್ವಿಸ್ಟ್‌ಗಳನ್ನು, ನಗು ಉಕ್ಕಿಸುವ ಮಾತುಗಳನ್ನು ಮತ್ತು ಹಾಡುಗಳನ್ನು ತುಂಬಿದ್ದಾರೆ.
ಚಿತ್ರದಲ್ಲಿ ಸ್ವಲ್ಪ ಜಾಸ್ತಿಯೇ ಹಾಡುಗಳಿದೆ ಎಂದನಿಸಿದರೆ ಅದರಲ್ಲಿ ಉತ್ಪ್ರೇಕ್ಷೆ ಇಲ್ಲ. 20 ನಿಮಿಷಕ್ಕಾದರೂ ಒಂದೊಂದು ಹಾಡುಗಳು ಪ್ರತ್ಯಕ್ಷವಾಗುತ್ತವೆ. ಆ ಎಲ್ಲಾ ಹಾಡುಗಳು ಕಥೆಯನ್ನು ಮುಂದುವರೆಸುವ ಹಾಡುಗಳು ಎಂಬುದೇ ವಿಶೇಷ. ಆದರೂ ಚಿತ್ರ ಸ್ವಲ್ಪ ನಿಧಾನವೇ. ಫಾಸ್ಟ್ ಫುಡ್ ತರಹ ಏನೋ ತಕ್ಷಣ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಸಿನಿಮಾಗೆ ಹೋದರೆ ಬೇಸರ ಖಂಡಿತಾ. ನಿಧಾನವೇ ಪ್ರಧಾನ ಎಂಬ ನಂಬಿಕೆಯವರಿಗೆ ಈ ಚಿತ್ರ ಇಷ್ಟವಾಗಬಹುದು. ಚಿತ್ರದಲ್ಲಿ ರಮೇಶ್ ಭಟ್ ಬಿಟ್ಟರೆ, ಎಲ್ಲರೂ ಹೊಸಬರೇ. ಆದರೆ, ಹೊಸಬರು ಎಂದು ಬೆಟ್ಟು ಮಾಡಿ ತೋರಿಸುವಂತಿಲ್ಲ.
ಆ ಮಟ್ಟದ ಪಕ್ವ ಅಭಿನಯವನ್ನು ಎಲ್ಲರಿಂದಲೂ ತೆಗೆಸಿದ್ದಾರೆ ಗಂಗಾಧರ್. ಚಿತ್ರದಲ್ಲಿ ನಾಲ್ವರು ಹುಡುಗರು ಮತ್ತು ಮೂವರು ಹುಡುಗಿಯರನ್ನು ಅವರು ಪರಿಚಯಿಸಿದ್ದಾರೆ. ಮಿಕ್ಕಂತೆ ಪೋಷಕ ಪಾತ್ರಗಳಲ್ಲೂ ಹಲವರು ಹೊಸಬರೇ ಇದ್ದಾರೆ. ಈ ಪೈಕಿ ಹೆಚ್ಚು ಗಮನಸೆಳೆಯುವುದು ಆದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಕ್ ಮತ್ತು ಶಾಂತಿ ಪಾತ್ರದಲ್ಲಿ ಅಭಿನಯಿಸಿರುವ ವೇದಶ್ರೀ. ರಮೇಶ್ ಭಟ್ಟರದ್ದು ಎಂದಿನಂತೆ ತೂಕದ ಅಭಿನಯ. ಮಿಕ್ಕಂತೆ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ವರುಣ್ ಅವರ ಛಾಯಾಗ್ರಹಣ ಮತ್ತು ಶ್ರೀಯಂಶ ಶ್ರೀರಾಮ್ ಅವರ ಹಾಡುಗಳು ಹಿತಕರವಾಗಿವೆ.
ಚಿತ್ರ: ಅಯನ
ನಿರ್ದೇಶನ: ಗಂಗಾಧರ್ ಸಾಲಿಮs…
ನಿರ್ಮಾಣ: ಬಸವರಾಜ್, ಭರತ್, ಕೃಷ್ಣ ಮತ್ತು ಗಂಗಾಧರ್
ತಾರಾಗಣ: ದೀಪಕ್ ಸುಬ್ರಹ್ಮಣ್ಯ, ಅಪೂರ್ವ ಸೋಮ, ರಮೇಶ್ ಭಟ್, ನಾಗಶ್ರೀ, ಮೋಕ್ಷ ಕುಶಾಲ್, ಗೌತಮ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.