ಪಾರಿವಾಳ ಅಡ್ಡದಲ್ಲಿ ಆ್ಯಕ್ಷನ್ ಬಜಾರ್
Team Udayavani, Feb 3, 2019, 5:40 AM IST
ನಿರ್ದೇಶಕ ಸುನಿ “ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ಯಿಂದ ಇಲ್ಲಿವರೆಗೆ ಮಾಡಿಕೊಂಡು ಬಂದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಲವ್, ಕಾಮಿಡಿ, ಒಂದಷ್ಟು ಪಂಚಿಂಗ್ ಡೈಲಾಗ್‌ಗಳು ಇರುತ್ತಿದ್ದವು. ತಮ್ಮದೇ ಶೈಲಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡ ಸುನಿಗೆ ಒಂದು ಆ್ಯಕ್ಷನ್ ಸಿನಿಮಾ ಮಾಡಬೇಕೆಂಬ ಆಸೆ ಬಹುದಿನಗಳಿಂದ ಕಾಡಿದಂತಿದೆ. ಆ ಆಸೆಯನ್ನು ಅವರು ಈಗ ಈಡೇರಿಸಿಕೊಂಡಿದ್ದಾರೆ. ಅದು “ಬಜಾರ್’ ಮೂಲಕ.
“ಬಜಾರ್’ ಚಿತ್ರ ನೋಡಿ ಹೊರಬಂದಾಗ ನಿಮಗೆ ಹಾಡು, ಸಂಭಾಷಣೆಗಳಿಗಿಂತ ಹೆಚ್ಚಾಗಿ ಮಚ್ಚಿನೇಟಿನ ಸದ್ದುಗಳೇ ಗುಂಯ್‌ಗಾಡುತ್ತಿರುತ್ತದೆ. ಆ ಮಟ್ಟಿಗೆ ಸುನಿ ಬದಲಾಗಿದ್ದಾರೆ ಮತ್ತು ಹೊಸ ಜಾನರ್‌ಗೆ ಒಗ್ಗಿಕೊಂಡಿದ್ದಾರೆ. ಹಾಗಾಗಿ, ಆ್ಯಕ್ಷನ್ ಬಜಾರ್‌ಗೆ ಸುನಿ ಬಂದಿದ್ದಾರೆಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಸುನಿಗೆ ಮುಖ್ಯವಾಗಿ ಎರಡು ರೀತಿಯ ಸವಾಲು ಎದುರಾಗಿದೆ. ಮೊದಲನೇಯದಾಗಿ ಏಕಾಏಕಿ ಆ್ಯಕ್ಷನ್ ಸಿನಿಮಾ ನಿರ್ದೇಶನಕ್ಕಿಳಿದು, ಅದನ್ನು ಸಮರ್ಥವಾಗಿ ನಿರ್ವಹಿಸುವುದು ಒಂದಾದರೆ, ಎರಡನೇಯದಾಗಿ ಹೊಸಬನ ಆ್ಯಕ್ಷನ್ ಹೀರೋ ಆಗಿ ಪ್ರೇಕ್ಷಕರಿಗೆ ಮೆಚ್ಚುವಂತೆ ತೋರಿಸುವುದು.
ಈ ಎರಡು ಸವಾಲಿನಲ್ಲಿ ಸುನಿ ಬಹುತೇಕ ಗೆದ್ದಿದ್ದಾರೆ. ಒಬ್ಬ ಹೊಸ ಹುಡುಗನ ಲಾಂಚ್, ಅದರಲ್ಲೂ ಆ್ಯಕ್ಷನ್ ಹೀರೋ ಆಗಬೇಕೆಂದುಕೊಂಡಿರುವ ಹುಡುಗನನ್ನು ಎಷ್ಟು ಖಡಕ್ ಹಾಗೂ ಖದರ್ ಆಗಿ ತೋರಿಸಬೇಕೋ ಅದನ್ನಿಲ್ಲಿ ಸುನಿ ಮಾಡಿದ್ದಾರೆ. ಖಡಕ್ ಡೈಲಾಗ್, ಅದಕ್ಕೆ ಹೊಂದುವ ಪರಿಸರ, ಮ್ಯಾನರೀಸಂ … ಹೀಗೆ ಎಲ್ಲವನ್ನು ಸೃಷ್ಟಿಸಿದ್ದಾರೆ ಸುನಿ. ಹೀರೋನಾ ಲಾಂಚ್ ಸಿನಿಮಾ ಎಂದರೆ ಒಂದಷ್ಟು ಬಿಲ್ಡಪ್, ಹೈವೋಲ್ಟೆಜ್ ಆ್ಯಕ್ಷನ್ ಇರುತ್ತದೆ.
ಇಂತಹ ಸನ್ನಿವೇಶಗಳಲ್ಲಿ ಒಂದಾ ಕಥೆ ಕಳೆದು ಹೋಗುತ್ತದೆ ಅಥವಾ ಒನ್‌ಲೈನ್ ಕಥೆಯಷ್ಟೇ ಇರುತ್ತದೆ. “ಬಜಾರ್’ ಚಿತ್ರದಲ್ಲೂ ಒನ್‌ಲೈನ್ ಕಥೆ ಇದೆ. ಉಳಿದಂತೆ ಸುನಿ ಸನ್ನಿವೇಶಗಳನ್ನು ಬೆಳೆಸಿಕೊಂಡು ಹೋಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಒಬ್ಬ ಅನಾಥ ಹುಡುಗ, ಒಬ್ಬ ರೌಡಿಸಂ ಹಿನ್ನೆಲೆ ಇರುವ ವ್ಯಕ್ತಿಗೆ ಸಿಕ್ಕರೆ ಮುಂದೇನಾಗಬಹುದು ಎಂಬುದೇ ಚಿತ್ರದ ಒನ್‌ಲೈನ್. ಇದಕ್ಕೆ ಪಾರಿವಾಳ ರೇಸ್ ಅನ್ನು ಸೇರಿಸಿದ್ದಾರೆ ಸುನಿ.
ಚಿತ್ರದಲ್ಲಿ ಅಲ್ಲಲ್ಲಿ ಲವ್, ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಬಂದು ಹೋಗುತ್ತದೆ. ಆದರೆ, ಅವೆಲ್ಲವನ್ನು ಪಕ್ಕಕ್ಕೆ ಸರಿಸಿ ಗಟ್ಟಿಯಾಗಿ ನಿಲ್ಲುವುದು ಆ್ಯಕ್ಷನ್ ಅಷ್ಟೇ. ಚಿತ್ರದಲ್ಲಿನ ಲವ್‌ಟ್ರ್ಯಾಕ್ ಅನ್ನು ಇನ್ನಷ್ಟು ಬೆಳೆಸುವ ಅವಕಾಶ ಇತ್ತಾದರೂ, ನಾಯಕನ ಆ್ಯಕ್ಷನ್ ಇಮೇಜ್‌ಗೆ ಅಡ್ಡಬರಬಹುದೆಂಬ ಕಾರಣಕ್ಕೆ ಲವ್‌ಗೆ ಬ್ರೇಕ್ ಹಾಕಲಾಗಿದೆ. ಆ ಕಾರಣದಿಂದಲೇ “ಬಜಾರ್’ ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾವಾಗಿ ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುತ್ತದೆ.
ನಿರ್ದೇಶಕ ಸುನಿಗೆ ಆ್ಯಕ್ಷನ್ ಸಿನಿಮಾ ಹೊಸದಾಗಿದ್ದರಿಂದ ರೌಡಿಸಂ ಸಿನಿಮಾಗಳಲ್ಲಿನ ಒಂದಷ್ಟು ಸಿದ್ಧಸೂತ್ರಗಳನ್ನು ಪಾಲಿಸಿದ್ದಾರೆ. ಒಬ್ಬನ ಬೆನ್ನಿಗೆ ಮತ್ತೂಬ್ಬ ಸ್ಕೆಚ್, ಜೊತೆಯಲ್ಲಿದ್ದೇ ನಂಬಿಕೆ ದ್ರೋಹ … ಈ ತರಹದ ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ತುಂಬಾ ಹೊಸದಾಗಿ ಕಾಣುವ ಅಂಶವೆಂದರೆ ಅದು ಪಾರಿವಾಳ ರೇಸ್. ಅಲ್ಲಿನ ಭಾಷೆ, ಅದರ ವಿಧಾನ, ಅದರ ಹಿಂದಿನ ಜಿದ್ದು … ಈ ಅಂಶಗಳನ್ನು ಸೂಕ್ಷ್ಮವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಸುನಿ.
ನಾಯಕ ಧನ್ವೀರ್ ಮೊದಲ ಚಿತ್ರದಲ್ಲಿ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಆ್ಯಕ್ಷನ್ ಹೀರೋ ಆಗಿ ನೆಲೆ ನಿಲ್ಲುವ ಲಕ್ಷಣಗಳು ಕಾಣುತ್ತಿವೆ. ಅದಕ್ಕೆ ಪೂರಕವಾಗಿ ಅವರ ಬಾಡಿ, ಮ್ಯಾನರೀಸಂ ಕೂಡಾ ಇದೆ. ಅದನ್ನು ಮೊದಲ ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಧನ್ವೀರ್. ಆದರೆ, ಲವ್, ಸೆಂಟಿಮೆಂಟ್ ದೃಶ್ಯಗಳಲ್ಲಿ ಇನ್ನಷ್ಟು ಪಳಗಬೇಕಿದೆ. ನಾಯಕಿ ಅದಿತಿ ಪ್ರಭುದೇವಗೆ ಇಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಅವಕಾಶವೇನೂ ಇಲ್ಲ. ಇದ್ದಷ್ಟು ಹೊತ್ತು ಲವಲವಿಕೆಯಿಂದ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ.
ಚಿತ್ರ: ಬಜಾರ್
ನಿರ್ಮಾಣ: ತಿಮ್ಮೇಗೌಡ
ನಿರ್ದೇಶನ: ಸುನಿ
ತಾರಾಗಣ: ಧನ್ವೀರ್, ಅದಿತಿ, ಶರತ್ ಲೋಹಿತಾಶ್ವ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.