ಕಾಫಿ ತೋಟದಲ್ಲೊಂದು ಸಾವಿನ ಸುತ್ತ…
Team Udayavani, Aug 19, 2017, 10:31 AM IST
ನಿನ್ನ ಜೊತೆಗೆ ನಾನು ಕೊನೆವರೆಗೂ ಇರ್ತೀನಿ! ಹಾಗಂತ ಪ್ರಮಾಣ ಮಾಡಿಬಿಟ್ಟಿರುತ್ತಾನೆ ಅವನು. ಆದರೆ, ಅದೊಂದು ದಿನ ಅವಳು ಅನಿರೀಕ್ಷಿತವಾಗಿ ಸಾಯುತ್ತಾಳೆ ಮತ್ತು ಆಕೆಯ ಕೊಲೆಯ ಆರೋಪ ಆಕೆಯ ಗಂಡನ ಮೇಲೆ ಬೀಳುತ್ತದೆ. ತಾನು ಹಿಂದೊಮ್ಮೆ ಬಹಳ ಪ್ರೀತಿಸಿದ ಹುಡುಗಿ ಕೊಲೆಯಾಗಿದ್ದಾಳೆ. ತಪ್ಪಿತಸ್ಥನ ಸ್ಥಾನದಲ್ಲಿ ತನ್ನ ಸ್ನೇಹಿತ ಇದ್ದಾನೆ. ಆಗ ಅವನಿಗೆ ತಾನು ಕೊಟ್ಟಿರುವ ಮಾತು ನೆನಪಾಗುತ್ತದೆ. ಸರಿ, ಆ ಕೇಸ್ ತೆಗೆದುಕೊಳ್ಳುತ್ತಾನೆ.
ಸಾಕಷ್ಟು ಹೋರಾಡಿ, ಆ ಕೇಸ್ ಗೆಲ್ಲುತ್ತಾನೆ. ಆಕೆಯ ಗಂಡ ನಿರಪರಾಧಿ ಎಂದು ಕೋರ್ಟ್‌ನಲ್ಲಿ ಸಾಬೀತು ಮಾಡುತ್ತಾನೆ. ಅಲ್ಲಿಗೆ ಆಕೆಯ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ನಿಟ್ಟುಸಿರುಬಿಡುತ್ತಾನೆ. ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ತಾನಂದುಕೊಂಡಿರುವುದೆಲ್ಲಾ ನಿಜವಲ್ಲ ಎಂದು ಅವನಿಗೆ ಗೊತ್ತಾಗುತ್ತಾ ಹೋಗುತ್ತದೆ. ತಾನು ಎತ್ತಿ ಹಿಡಿದಿದ್ದು ಸತ್ಯವಲ್ಲ, ಸತ್ಯ ತರಹದ ಕಾಣುವ ಸುಳ್ಳು ಎಂದು ಸ್ಪಷ್ಟವಾಗುತ್ತದೆ. ಹಾಗಾದರೆ ಮುಂದೆ? ಹೊಸ ಹೋರಾಟ ಶುರು …
ಕನ್ನಡದಲ್ಲಿ ಒಂದು ಕೋರ್ಟ್ ರೂಂ ಡ್ರಾಮಾ ಬಂದು ಬಹಳ ದಿನಗಳೇ ಆಗಿತ್ತು. ಆ ಕೊರಗನ್ನು ಮರೆಸುವುದಕ್ಕೆ “ಕಾಫಿ ತೋಟ’ ಬಂದಿದೆ. ಟಿ.ಎನ್. ಸೀತಾರಾಂ ಅವರ ಬಹಳ ಇಷ್ಟವಾದ ವಿಷಯವಿದು. ಈ ವಿಷಯವನ್ನು ಅವರು ಕಿರುತೆರೆಯಲ್ಲಿ ಸಾಕಷ್ಟು ಬಾರಿ ಜಾಲಾಡಿದ್ದಾರೆ. ಹಿರಿತೆರೆಯಲ್ಲಿ ಅಂಥದ್ದೊಂದು ಪ್ರಯತ್ನವನ್ನು ಅವರು ಮಾಡಿರಲಿಲ್ಲ. ಈ ಚಿತ್ರದ ಮೂಲಕ ಅದು ಈಡೇರಿದೆ. 200 ಕೋಟಿ ಆಸ್ತಿಯ ಒಡತಿಯೊಬ್ಬಳು ಕೊಲೆಯ ರಹಸ್ಯವನ್ನು ಅವರು ತಮ್ಮದೇ ಥಿಯರಿಗಳ ಬಗ್ಗೆ ಅಚ್ಚುಕಟ್ಟಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ.
ಬಹುಶಃ ಇಂಥದ್ದೊಂದು ಚಿತ್ರಕ್ಕೆ ಇನ್ನಷ್ಟು ಡ್ರಾಮಾ, ಇನ್ನಷ್ಟು ಟ್ವಿಸ್ಟ್‌ಗಳು ಮತ್ತು ಇನ್ನಷ್ಟು ಥ್ರಿಲ್‌ಗಳ ಅವಶ್ಯಕತೆ ಇತ್ತೇನೋ? ಆದರೆ, ಒಂದರ್ಥದಲ್ಲಿ ಚಿತ್ರ ಶುರುವಾಗುವುದು ದ್ವಿತೀರ್ಯಾಧದಲ್ಲೇ. ಅಲ್ಲಿಂದ ಒಂದೇ ಸಮನೆ ಹಲವು ಘಟನೆಗಳು ನಡೆಯುತ್ತವೆ. ಮೊದಲಾರ್ಧವೆಲ್ಲಾ ಅವರು ಪ್ರೇಮಕಥೆಗಳನ್ನು ಹೇಳುವುದಕ್ಕೆ ಮೀಸಲಿಟ್ಟರೆ, ದ್ವಿತೀಯಾರ್ಧವನ್ನು ಅವರು ಕೊಲೆಯ ರಹಸ್ಯವನ್ನು ಬೇಧಿಸುವುದಕ್ಕೆ ಮೀಸಲಿಟ್ಟಿದ್ದಾರೆ. ಒಂದು ದೊಡ್ಡ ನಾಟಕಕ್ಕೆ ಮೊದಲಾರ್ಧ ವೇದಿಕೆಯಾದರೆ, ದ್ವಿತೀಯಾರ್ಧ ಆ ವೇದಿಕೆಯ ಮೇಲೆ ನಾಟಕ ನಡೆಯುತ್ತದೆ.
ಹಾಗಾಗಿ ನಾಟಕ ಇಷ್ಟವಾಗಬೇಕೇಂದರೆ, ವೇದಿಕೆಯನ್ನೂ ಪ್ರೀತಿಸುವ ಸಂಯಮವಿರಬೇಕು. ಮೊದಲಾರ್ಧದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶವಿತ್ತು ಅಥವಾ ಆ ದೃಶ್ಯಗಳ ಬದಲಿಗೆ, ಬೇರೆ ಒಂದಿಷ್ಟು ದೃಶ್ಯಗಳನ್ನು ಸೇರಿಸಿ ಚಿತ್ರವನ್ನು ಇನ್ನಷ್ಟು ಇಂಟೆನ್ಸ್ ಮಾಡುವ ಸಾಧ್ಯತೆ ಇತ್ತು. ಚಿತ್ರವನ್ನು ಇನ್ನಷ್ಟು ಪಕ್ವ ಮಾಡಬಹುದಿತ್ತು. ಆದರೂ ಕನ್ನಡಕ್ಕೆ ಈ ಪ್ರಯತ್ನ ಬಹಳ ಫ್ರೆಶ್ ಎನಿಸಬಹುದು. ಆದರೆ, ಹಾಲಿವುಡ್ ಚಿತ್ರಗಳನ್ನು ನೋಡುವ ಅಭ್ಯಾಸವಿರುವವರಿಗೆ “ಪ್ರçಮಲ್ ಫಿಯರ್’ ಎಂಬ ಚಿತ್ರ ಪ್ರಮುಖವಾಗಿ ಕಣ್ಮುಂದೆ ಬರುತ್ತದೆ.
ಅದರ ಜೊತೆಗೆ “ಕನ್ಸೆಂಟಿಂಗ್ ಅಡಲ್ಟ್’ ಎಂಬ ಇನ್ನೊಂದು ಚಿತ್ರವೂ ನೆನಪಿಗೆ ಬರುತ್ತದೆ. ಹಾಗಂತ ಟಿ.ಎನ್. ಸೀತಾರಾಂ ಅವರು ಸ್ಫೂರ್ತಿಪಡೆದು ಚಿತ್ರ ಮಾಡಿದರು ಎಂದು ಹೇಳುವುದು ತಪ್ಪಾಗಬಹುದು. ಏಕೆಂದರೆ, ಇಂತಹ ಹಲವು ಕಥೆಗಳು, ಕೇಸುಗಳು, ಉದಾಹರಣೆಗಳು ಅವರ ತಲೆಯಲ್ಲಿದೆ. ಅವನ್ನೆಲ್ಲಾ ಹೆಕ್ಕಿ ಅವರು ಒಂದು ಸ್ವಂತವಾದ “ಕಾಫಿ ತೋಟ’ ಬೆಳೆಸಿದ್ದಾರೆ. “ಕಾಫಿ ತೋಟ’ ಬಹಳ ಕಾಡುವುದು ಮೂರು ಅಂಶಗಳಿಗೆ. ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ ಮತ್ತು ರಾಧಿಕಾ ಚೇತನ್ ಅವರ ಅಭಿನಯ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ.
ರಾಧಿಕಾಗೆ ಇಲ್ಲೊಂದು ಬಹಳ ಒಳ್ಳೆಯ ಪಾತ್ರವಿದೆ ಮತ್ತು ಆ ಅವಕಾಶವನ್ನು ಆಕೆ ಚೆನ್ನಾಗಿ ಬಳಸಿಕೊಂಡಿದ್ದಾರೆ. ರಾಹುಲ್ ಮಾಧವ್ ಲವಲವಿಕೆ ಇಷ್ಟವಾಗುತ್ತದೆ. ರಘು ಮುಖರ್ಜಿ ಅವರಿಂದ ಇನ್ನಷ್ಟು ತೆಗೆಯಬೇಕಿತ್ತೇನೋ? ಮಿಕ್ಕಂತೆ ಟಿ.ಎನ್. ಸೀತಾರಾಂ, ವೀಣಾ ಸುಂದರ್, ಸುಂದರ್‌ರಾಜ್, ರಾಜೇಶ್ ನಟರಂಗ, ಸಂಯುಕ್ತಾ ಬೆಳವಾಡಿ, ಕೃಷ್ಣಮೂರ್ತಿ ನಾಡಿಗ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ ಮತ್ತು ಎಲ್ಲರಿಂದಲೂ ಅಚ್ಚುಕಟ್ಟಾದ ಅಭಿನಯ ತೆಗೆದಿದ್ದಾರೆ ಸೀತಾರಾಂ.
ಇನ್ನು ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣದ ಬಗ್ಗೆ ಹೇಳಲೇಬೇಕು. ಅಶೋಕ್ ಇಡೀ ಪರಿಸರವನ್ನು ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಮಲೆನಾಡ ಬೆಟ್ಟಗಳಿರಲಿ, ಕಾಶಿ ಯ ಘಟಿ ಇರಲಿ, ಸಮುದ್ರದ ದಡವಿರಲಿ ಅಲ್ಲೆಲ್ಲಾ ಅಶೋಕ್ ಕಾಣುತ್ತಾರೆ. ಸೀತಾರಾಂ ಮತ್ತು ಅವರ ಕೋರ್ಟ್‌ರೂಂ ಡ್ರಾಮಾಗಳನ್ನು ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಮಿಸ್ ಮಾಡಿಕೊಂಡಿದ್ದವರು ಈ ಚಿತ್ರವನ್ನು ನೋಡಬಹುದು.
ಚಿತ್ರ: ಕಾಫಿ ತೋಟ
ನಿರ್ದೇಶನ: ಟಿ.ಎನ್. ಸೀತಾರಾಂ
ನಿರ್ಮಾಣ: ಮನ್ವಂತರ ಚಿತ್ರ
ತಾರಾಗಣ: ರಘು ಮುಖರ್ಜಿ, ರಾಧಿಕಾ ಚೇತನ್, ರಾಹುಲ್ ಮಾಧವ್, ಟಿ.ಎನ್. ಸೀತಾರಾಂ, ಅಪೇಕ್ಷಾ, ಬಿ.ಸಿ. ಪಾಟೀಲ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.