ಮನುಷ್ಯತ್ವ ಮತ್ತು ಕರ್ತವ್ಯದ ನಡುವೆ
Team Udayavani, Dec 1, 2017, 6:32 PM IST
ರಾಕ್ಷಸನಾ ಅಥವಾ ರಕ್ಷಕನಾ? ಇಂಥದ್ದೊಂದು ಪ್ರಶ್ನೆ ಅವನನ್ನು ತೀವ್ರವಾಗಿ ಕಾಡುತ್ತದೆ. ಏಕೆಂದರೆ, ಆರಂಭದಲ್ಲಿ ರಾಕ್ಷಸನಂತೆ ಕಾಣುವವನು ಈಗ ರಕ್ಷಕನಂತೆ ಕಾಣುತ್ತಿದ್ದಾನೆ. ಹೊರಗೆ ನಿಂತು ನೋಡಿದಾಗ ರಾಕ್ಷಸನಂತೆ ಕಂಡವನು, ಒಳಗೆ ನಿಂತು ನೋಡಿದರೆ ರಕ್ಷಕನ ಹಾಗೆ ಕಾಣಿಸುತ್ತಿದ್ದಾನೆ. ಹಾಗಾದರೆ, ಏನವನು? ತಾನು ಅವನನ್ನು ಹಿಡಿಯಬೇಕಾ? ಅಥವಾ ಅವನ ಒಳ್ಳೆಯತನಕ್ಕೆ ಮಾರುಹೋಗಿ ಸುಮ್ಮನಾಗಬೇಕಾ?
ಇಂಥದ್ದೊಂದು ಧ್ವಂಧ್ವ ಅವನನ್ನು ಕಾಡತೊಡಗುತ್ತದೆ. ಹಾಗಾದರೆ, ಅವನೇನು ಮಾಡುತ್ತಾನೆ? ಹಿಡಿಯುತ್ತಾನಾ? ಬಿಟ್ಟುಬಿಡುತ್ತಾನಾ? ಈ ಪ್ರಶ್ನೆಯ ಮೇಲೆ “ಮಫ್ತಿ’ ಚಿತ್ರ ನಿಂತಿದೆ ಎಂದರೆ ತಪ್ಪಿಲ್ಲ. “ಮಫ್ತಿ’ ಎಂಬ ಹೆಸರೇ ಹೇಳುವಂತೆ ಇದೊಂದು ಅಂಡರ್‌ಕವರ್ ಕಾಪ್ ಚಿತ್ರ. ರೋಣಾಪುರ ಎಂಬ ಊರು. ಆ ಊರಿಗೆ ಭೈರತಿ ರಣಗಲ್ಲು ಎಂಬ ದೊಡ್ಡ ಡಾನ್. ಅವನ ಕೋಟೆಯನ್ನು ಬೇಧಿಸಲಾರದೆ, ಪೊಲೀಸರು ತಮ್ಮಲ್ಲಿರುವ ರಫ್ ಆ್ಯಂಡ್ ಟಫ್ ಪೊಲೀಸ್ ಅಧಿಕಾರಿಯನ್ನು ಒಳಗೆ ನುಗ್ಗಿಸುತ್ತಾರೆ.
ಅವನು ಮಫ್ತಿಯಲ್ಲಿ ಭೈರತಿಯ ಗ್ಯಾಂಗ್‌ಗೆ ಹೊಕ್ಕು, ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಕ್ರಮೇಣ ಡಾನ್‌ಗೆ ಹತ್ತಿರವಾಗುತ್ತಾನೆ. ಹತ್ತಿರವಾದಂತೆಲ್ಲಾ ತಾನಂದುಕೊಂಡಷ್ಟು ಕೆಟ್ಟವನಲ್ಲ ಡಾನ್ ಎಂಬುದು ಕ್ರಮೇಣ ಅರ್ಥವಾಗುತ್ತಾ ಹೋಗುತ್ತದೆ. ಸರ್ಕಾರದ ಕಣ್ಣಿಗೆ ಡಾನ್ ವಿಲನ್‌ನಂತೆ ಕಂಡರೂ, ಸಮಾಜದ ಪಾಲಿಗೆ ದೊಡ್ಡ ಹೀರೋ ಆಗಿರುತ್ತಾನೆ. ಹಾಗಾದರೆ, ಡಾನ್‌ನ ಮನುಷ್ಯತ್ವಕ್ಕೆ ಬೆಲೆಕೊಡಬೇಕಾ? ಅಥವಾ ಕರ್ತವ್ಯಕ್ಕೆ ಬಾಗಬೇಕಾ?
“ಮಫ್ತಿ’ ಚಿತ್ರದ ಕಥೆ ಕೇಳುತ್ತಿದ್ದಂತೆಯೇ, ಹಲವು ಟ್ರಾಕ್‌ಗಳು ಅಥವಾ ದೃಶ್ಯಗಳು ನಿಮ್ಮ ನೆನಪಿಗೆ ಬರಬಹುದು. ಅದು ಸಹಜ. ಏಕೆಂದರೆ, ಈ ತರಹದ ದೃಶ್ಯಗಳು, ಟ್ರಾಕ್‌ಗಳು ಈ ಹಿಂದೆ ಕೆಲವು ಚಿತ್ರಗಳಲ್ಲಿ ಬಂದಿರಬಹುದು. ಹಾಗಂತ ಇದು ರೀಮೇಕ್ ಎನ್ನುವುದಕ್ಕೆ ಸಾಧ್ಯತೆ ಇಲ್ಲ. ಇಬ್ಬರು ದೊಡ್ಡ ಹೀರೋಗಳನ್ನಿಟ್ಟುಕೊಂಡು ಕಥೆ ಬರೆಯುವಾಗ, ಸಹಜವಾಗಿಯೇ ಈ ತರಹದ ಯೋಚನೆಗಳು ಬರಬಹುದು. ಅದನ್ನೇ ನರ್ತನ್ ಸಹ ಮಾಡಿದ್ದಾರೆ.
ಎರಡು ರಗ್ಗಡ್ ಆದಂತಹ ಪಾತ್ರಗಳು, ಪ್ರದೇಶ, ಹಿನ್ನೆಲೆ, ಮಾಫಿಯಾ, ರಾಜಕಾರಣ … ಇಟ್ಟುಕೊಂಡು ಒಂದು ಕಥೆ ಬರೆದಿದ್ದಾರೆ. ಬರೆಯುತ್ತಾ ಬರೆಯುತ್ತಾ ಒಂದು ಸೀರಿಯಸ್ ಆದ ಕಥೆಯೊಂದನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಇಬ್ಬರು ದೊಡ್ಡ ನಟರನ್ನು ತೂಗಿಸಿಕೊಂಡು ಒಂದು ಬೇರೆ ತರಹದ ಚಿತ್ರವನ್ನು ಅವರು ಮಾಡಲು ಪ್ರಯತ್ನಿಸಿದ್ದಾರೆ. ಸರಿಯೋ, ತಪ್ಪೋ ಈ ತರಹದ ಚಿತ್ರಗಳು ಗಂಭೀರವಾಗಿಯೇ ಇರಬೇಕು. ಇಲ್ಲಿ ಪ್ರೇಕ್ಷಕ ನಗುವುದಿರಲಿ, ಉಸಿರಾಡುವುದಕ್ಕೂ ಅವಕಾಶ ಕೊಡಬಾರದು.
ಸೀಟಿಗೆ ಅಂಟಿಕೊಂಡು ಗಂಭೀರವಾಗಿ ಚಿತ್ರ ನೋಡುತ್ತಾ ಹೋಗಬೇಕು. ಆದರೆ, ಕಥೆ ಬಹಳ ಗಂಭೀರವಾಗಿದೆ ಎನ್ನುವ ಕಾರಣಕ್ಕೆ ಸ್ವಲ್ಪ ಲೈಟ್ ಮಾಡುವುದಕ್ಕೆ ಹೋಗಿದ್ದಾರೆ ನರ್ತನ್. ಅದೇ ಕಾರಣಕ್ಕೊಂದು ಲವ್ವು, ಕಾಮಿಡಿ ಟ್ರಾಕ್ ತರುತ್ತಾರೆ. ಪ್ರೀತಿಸುವುದಕ್ಕೆ ಸಾನ್ವಿ ಶ್ರೀವಾತ್ಸವ್ ಮತ್ತು ನಗಿಸುವುದಕ್ಕೆ ಚಿಕ್ಕಣ್ಣ ಮತ್ತು ಸಾಧು ಕೋಕಿಲರನ್ನು ತರುತ್ತಾರೆ.
ಆದರೆ, ಈ ಎರಡೂ ಟ್ರಾಕ್‌ಗಳು ಮೊಸರನ್ನದಲ್ಲಿ ಸಿಕ್ಕ ಕಲ್ಲುಗಳಂತೆ ಪ್ರೇಕ್ಷಕರಿಗೆ ಕಾಣುತ್ತವೆ. ಚಿತ್ರ ಗಂಭೀರವಾಗಿ ಒಂದೊಳ್ಳೆಯ ವೇಗದಲ್ಲಿ ಹೋಗುತ್ತಿದೆ ಎನ್ನುವಷ್ಟರಲ್ಲಿ, ಈ ಎರಡರಲ್ಲಿ ಒಂದು ಟ್ರಾಕ್ ಅಡ್ಡ ಬಂದು, ಚಿತ್ರಕ್ಕೆ ಸ್ಪೀಡ್‌ಬ್ರೇಕರ್ ಆಗುತ್ತದೆ. ಹಾಗೆ ನೋಡಿದರೆ, ಚಿತ್ರಕ್ಕೆ ನಾಯಕಿಯಾಗಲೀ ಅಥವಾ ಕಾಮಿಡಿ ನಟರ ಅವಶ್ಯಕತೆಯೇ ಇರಲಿಲ್ಲ. ಅವರಿಗೆ ಮಾಡುವುದಕ್ಕೆ ಹೆಚ್ಚು ಕೆಲಸವೂ ಇಲ್ಲ. ಒಂದು ಗಂಭೀರವಾದ ಕಥೆಗೆ, ಇವನ್ನೆಲ್ಲಾ ಎಕ್ಸಾಟ್ರಾ ಫಿಟ್ಟಿಂಗ್ ಎಂಬಂತೆ ತುರುಕಲಾಗಿದೆ.
ಹಾಗಾಗಿಯೇ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಂಪುಗಳಾಗಿವೆ. ಆ ಹಂಪುಗಳನ್ನು ದಾಟಿಕೊಂಡು ಹೋಗುವುದಕ್ಕೆ ಸಹಜವಾಗಿಯೇ ತಡವಾಗುತ್ತದೆ. ಈ ಟ್ರಾಕ್‌ಗಳನ್ನು ಕಿತ್ತು ಹಾಕಿದರೂ, ಚಿತ್ರಕ್ಕೇನೂ ಲಾಸ್ ಇಲ್ಲ. ಇದೊಂದು ಬಿಟ್ಟರೆ, “ಮಫ್ತಿ’ ಒಂದೊಳ್ಳೆಯ ಮೇಕಿಂಗ್ ಚಿತ್ರ. ಚಿತ್ರ ಬಹಳ ರಗ್ಗಡ್ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಕಾಣದ ಒಂದಿಷ್ಟು ಹೊಸ ಮತ್ತು ಒರಟಾದ ವಾತಾವರಣವನ್ನು ಇಲ್ಲಿ ತೋರಿಸಲಾಗಿದೆ.
ಈ ಪರಿಸರವನ್ನು ಕೊಟ್ಟ ಛಾಯಾಗ್ರಾಹಕ ನವೀನ್ ಕುಮಾರ್ ಮತ್ತು ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಕೊಟ್ಟ ರವಿ ಬಸ್ರೂರು ಇಬ್ಬರ ಕೆಲಸವನ್ನು ಮೆಚ್ಚದಿರುವದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಚೆನ್ನಾಗಿ ಅವರಿಬ್ಬರೂ ನಿಮ್ಮನ್ನು ಆವರಿಸಿಕೊಳ್ಳುತ್ತಾರೆ. ಅದೇ ತರಹ ಕಾಡುವ ಇನ್ನಿಬ್ಬರು ಎಂದರೆ, ಅದು ಶಿವರಾಜಕುಮಾರ್ ಮತ್ತು ಮುರಳಿ. ಮೊದಲಾರ್ಧವೆಲ್ಲಾ ಮುರಳಿ ಆವರಿಸಿಕೊಂಡರೆ, ದ್ವಿತೀಯಾರ್ಧದಲ್ಲಿ ಶಿವರಾಜಕುಮಾರ್ ಇಷ್ಟವಾಗುತ್ತಾರೆ.
ಮುರಳಿ ತಮ್ಮ ಮೌನದಿಂದ ಇಷ್ಟವಾದರೆ, ಶಿವರಾಜಕುಮಾರ್ ತಮ್ಮ ತಾಳ್ಮೆಯಿಂದ ಖುಷಿಕೊಡುತ್ತಾರೆ. ಹಾಗೆ ನೋಡಿದರೆ, ಮುರಳಿ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಈ ಚಿತ್ರದಲ್ಲಿನ ಅಭಿನಯದಲ್ಲಿ ಹೆಚ್ಚು ಬದಲಾವಣೆ ಕಾಣುವುದಿಲ್ಲ. ಆ ಎರಡೂ ಚಿತ್ರಗಳಲ್ಲಿ ಅವರು ರೌಡಿಯ ಪಾತ್ರ ಮಾಡಿದ್ದರು, ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಎರಡೂ ಚಿತ್ರಗಳಂತೆ ಇಲ್ಲೂ ಮೌನವಾಗಿಯೇ ಮಾತನಾಡಿದ್ದಾರೆ. ದೇವರಾಜ್, ಛಾಯಾ ಸಿಂಗ್, ವಸಿಷ್ಠ, ಮಧು ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಚಿತ್ರ: ಮಫ್ತಿ
ನಿರ್ದೇಶನ: ನರ್ತನ್
ನಿರ್ಮಾಣ: ಜಯಣ್ಣ ಮತ್ತು ಭೋಗೇಂದ್ರ
ತಾರಾಗಣ: ಶಿವರಾಜಕುಮಾರ್, ಮುರಳಿ, ಸಾನ್ವಿ ಶ್ರೀವಾತ್ಸವ್, ದೇವರಾಜ್, ವಸಿಷ್ಠ ಸಿಂಹ, ಮಧು ಗುರುಸ್ವಾಮಿ, ಕೆ.ಎಸ್. ಶ್ರೀಧರ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.