ಉಬ್ಬುವ ಗಂಟಲು, ಬಿಗಿಯುಸಿರು ಮತ್ತು ಪದ್ಮಾವತ್!
Team Udayavani, Jan 26, 2018, 12:00 PM IST
ತನಗೆ ಇಷ್ಟವಾಗಿದ್ದೆಲ್ಲಾ ಅವನಿಗೆ ಸಿಕ್ಕಿಬಿಡಬೇಕು. ಅದಕ್ಕೋಸ್ಕರ ತಲೆ ಕತ್ತರಿಸುವುದಕ್ಕೂ ಸಿದ್ಧ ಅವನು. ಅಂಥವನ ತಲೆಯನ್ನು ಒಬ್ಬ ಕೆಡಿಸಿಬಿಡುತ್ತಾನೆ. “ಹಿಂದೂಸ್ಥಾನದ ಸಾಮ್ರಾಟ ನೀನು. ಇಲ್ಲಿನ ಎಲ್ಲಾ ಅಮೂಲ್ಯ ವಸ್ತುಗಳೂ ನಿನ್ನಲ್ಲಿವೆ. ರಾಣಿ ಪದ್ಮಾವತಿಯೊಬ್ಬಳನ್ನು ಬಿಟ್ಟು …’ ಎಂದು. ರಾಣಿ ಪದ್ಮಾವತಿ ಎಂಬ ಅಪರೂಪದ ಸುಂದರಿಯೂ ನಿನ್ನ ಜೊತೆಗೆ ಬಂದು ಬಿಟ್ಟರೆ ನಿನ್ನನ್ನು ಹಿಡಿಯುವವರೇ ಇರುವುದಿಲ್ಲ ಎಂದು ಆಸೆ ತೋರಿಸಿಬಿಡುತ್ತಾನೆ.
ಅಲ್ಲಿಂದ ಶುರುವಾಗುತ್ತದೆ ನೋಡಿ ಅಲ್ಲಾವುದ್ದೀನ ಖಿಲ್ಜಿ ಆಸೆ. ರಾಣಿ ಪದ್ಮಾವತಿಗಾಗಿ ದೂರದ ಚಿತ್ತೋರಿಗೆ ಹೋಗಿ ಆಕೆಯ ಗಂಡನ ಜೊತೆಗೆ ಯುದ್ಧ ಮಾಡುವುದಕ್ಕೆ ಮುಂದಾಗುತ್ತಾನೆ. ಯಾವಾಗ ಅವರು ಆರು ತಿಂಗಳಾದರೂ ಶರಣಾಗುವುದಿಲ್ಲವೋ, ಆಗ ತಾನೇ ರಾಜನನ್ನು ಭೇಟಿಯಾಗುವುದಕ್ಕೆ ಮುಂದಾಗುತ್ತಾನೆ. ಬಂದ ದಾರಿಗೆ ಸುಂಕವಿಲ್ಲದಂತೆ ಹೊರಟು ಹೋಗುತ್ತೇನೆ, ಒಮ್ಮೆ ಪದ್ಮಾವತಿಯ ದರ್ಶನ ಮಾಡಿಸು ಎಂದು ಬೇಡಿಕೊಳ್ಳುತ್ತಾನೆ.
ಹಾಗೆಲ್ಲಾ ಪರಗಂಡಸರಿಗೆ ತಮ್ಮ ಹೆಂಡತಿಯರನ್ನು ತೋರಿಸುವಂತಿಲ್ಲ, ತೋರಿಸದಿದ್ದರೆ ಖಿಲ್ಜಿ ಎಂಬ ಸಾಮ್ರಾಟನ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ಇಂಥದ್ದೊಂದು ಸಂದಿಗ್ಧತೆಯಲ್ಲಿದ್ದಾಗ, ಒಂದು ಉಪಾಯ ಮಾಡಿ ಪದ್ಮಾವತಿಯನ್ನು ತೋರಿಸಿಯೂ ತೋರಿಸದಂತೆ ಮಾಡಲಾಗುತ್ತದೆ. ಇದರಿಂದ ಮತ್ತಷ್ಟು ವ್ಯಘ್ರಗೊಳ್ಳುವ ಖಿಲ್ಜಿ ಕಳ್ಳಾಟ ಮಾಡಿ, ರಾಜನನ್ನು ಬಂಧಿ ಮಾಡಿ ದೆಹಲಿಗೆ ಕರೆದುಕೊಂಡು ಹೋಗುತ್ತಾನೆ.
ಅಲ್ಲಿಗೆ ಹೋಗುವ ಪದ್ಮಾವತಿ, ಖಿಲ್ಜಿಗೆ ಮುಖ ತೋರಿಸದೆಯೇ, ಗಂಡನನ್ನು ಬಿಡಿಸಿಕೊಂಡು ವಾಪಸ್ಸು ಚಿತ್ತೋರಿಗೆ ಬರುತ್ತಾಳೆ. ಇದರಿಂದ ಖಿಲ್ಜಿಯ ಸಿಟ್ಟು, ಅಸಹನೆ, ನೋವು ಜಾಸ್ತಿಯಾಗುತ್ತದೆ. ಈ ಬಾರಿ ಪದ್ಮಾವತಿಯನ್ನು ನೋಡದೆ ಇರುವುದಿಲ್ಲ, ತನ್ನವಳನ್ನಾಗಿಸಿಕೊಳ್ಳದೇ ಬಿಡುವುದಿಲ್ಲ ಎಂಬ ಹಠದೊಂದಿಗೆ ಮತ್ತೆ ಚಿತ್ತೋರಿಗೆ ದೊಡ್ಡ ಸೈನ್ಯ ಕಟ್ಟಿಕೊಂಡು ಹೋಗುತ್ತಾನೆ. ಈ ಬಾರಿ ಪದ್ಮಾವತಿಯನ್ನು ತನ್ನವಳನ್ನಾಗಿಸಿಕೊಳ್ಳಲು ಸಫಲನಾಗುತ್ತಾನಾ? ಚಿತ್ರ ನೋಡಿ.
“ಪದ್ಮಾವತಿ’ ಚಿತ್ರವು ಶುರುವಾದಾಗಿನಿಂದ ಕೊನೆಯವರೆಗೂ ಸಾಕಷ್ಟು ವಿವಾದಗಳನ್ನು ಎಬ್ಬಿಸಿದೆ. ಪ್ರಮುಖವಾಗಿ ಪದ್ಮಾವತಿ ಎಂಬ ರಾಣಿಯೇ ಇರಲಿಲ್ಲ, ಸೂಫಿ ಕವಿ ಮಲ್ಲಿಕ್ ಮೊಹಮ್ಮದ್ ಜಿಯಸಿ ಬರೆದ ಒಂದು ಮಹಾಕಾವ್ಯದಲ್ಲಿ ಈ ಪಾತ್ರ ಉಲ್ಲೇಖವಿದೆಯೇ ಹೊರತು, ಪದ್ಮಾವತಿ ಅಸ್ತಿತ್ವದಲ್ಲೇ ಇರಲಿಲ್ಲ ಎಂಬ ನಂಬಿಕೆಯಿದೆ. ಪದ್ಮಾವತಿ ಎಂಬ ಮಹಾರಾಣಿ ಬದುಕಿದ್ದಳ್ಳೋ ಗೊತ್ತಿಲ್ಲ, ಹಾಗೆಯೇ ಖಿಲ್ಜಿ ಅವಳನ್ನು ಪ್ರೀತಿಸಿದ್ದನೋ ಎಂಬುದೂ ಗೊತ್ತಿಲ್ಲ.
ಇದೊಂದು ಕಾಲ್ಪನಿಕ ಕಥೆಯಾದರೂ ಒಂದು ಚಿತ್ರಕ್ಕೆ ಹೇಳಿ ಮಾಡಿಸಿದಂತಹ ಕಥೆ ಎಂದರೆ ತಪ್ಪಿಲ್ಲ. ಏಕೆಂದರೆ, ಈ ಕಥೆಯಲ್ಲಿ ಸಾಕಷ್ಟು ಡ್ರಾಮಾ ಇದೆ, ಹಲವು ಟ್ವಿಸ್ಟ್‌ಗಳಿವೆ, ಎಲ್ಲಕ್ಕಿಂತ ಹೆಚ್ಚಾಗಿ, ಪ್ರೀತಿ, ಸಂಘರ್ಷ, ನೋವು, ಅಸಹಾಯಕತೆ ಎಲ್ಲವೂ ಇದೆ. ಒಂದು ಚಿತ್ರಕ್ಕೆ ಇದಕ್ಕಿಂತ ಹೇಳಿ ಮಾಡಿಸಿದ ಕಥೆ ಸಿಗುವುದಿಲ್ಲ. ಅದರಲ್ಲೂ ಸಂಜಯ್ ಲೀಲಾ ಬನ್ಸಾಲಿಯಂತಹವರ ಕೈಗೆ ಇಂಥದ್ದೊಂದು ಕಥೆ ಸಿಕ್ಕರೆ ಅದರ ಮಜವೇ ಬೇರೆ.
ಬನ್ಸಾಲಿ ಯಾವತ್ತೂ ತಮ್ಮ ಅಸಮಾನ್ಯ ದೃಶ್ಯ ಕಾವ್ಯಗಳಿಗೆ ಹೆಸರುವಾಸಿ. “ಪದ್ಮಾವತ್’ ಅದಕ್ಕೊಂದು ಹೊಸ ಸೇರ್ಪಡೆ. “ಪದ್ಮಾವತ್’ ಒಂದು ಇತಿಹಾಸದ ಕಥೆಯೋ ಅಥವಾ ಕಾಲ್ಪನಿಕ ಕಥೆಯೋ ಅದು ಬೇರೆ ಮಾತು. ಯಾವುದಾದರೂ ತಮ್ಮ ಸಂಪೂರ್ಣವನ್ನು ಕೊಟ್ಟಿದ್ದಾರೆ ಬನ್ಸಾಲಿ. ಇಲ್ಲಿ ಅವರು ಇಡೀ ಕಥೆಯನ್ನು ಕಟ್ಟಿಕೊಟ್ಟಿರುವುದೇ ಅದ್ಭುತ. ಸೆಟ್‌ಗಳು, ಮೇಕಿಂಗ್, ಗ್ರಾಫಿಕ್ಸ್ ಎಲ್ಲವನ್ನೂ ಅದ್ಭುತವಾಗಿ ನಿಮ್ಮ ಕಣ್ಣಮುಂದೆ ಇಡುತ್ತಾರೆ ಅವರು.
ಹಾಗೆ ಕಣ್ಣಿಗೆ ಹಬ್ಬ ಮಾಡಿಸುತ್ತಲೇ, ಎಲ್ಲೋ ಒಂದು ಕಡೆ ಹೃದಯದ ಕನೆಕ್ಷನ್ ತಪ್ಪಿಹೋಗುತ್ತದೆ. ಕಥೆ ಹೇಳುತ್ತಾ ಹೇಳುತ್ತಾ, ಚೆಂದದ ದೃಶ್ಯಗಳನ್ನು ತೋರಿಸುತ್ತಾ ತೋರಿಸುತ್ತಾ ಸ್ವಲ್ಪ ಎಳೆಯುತ್ತಾರೆ ಬನ್ಸಾಲಿ. ಸಾಲದ್ದಕ್ಕೆ ಇಲ್ಲೊಂದು ಕುಡಿತದ ಹಾಡು, ಅತೀ ಎನಿಸುವ ಮಾತುಗಳು ಎಲ್ಲವೂ ಇದೆ. ಹಾಗಾಗಿ ಚಿತ್ರವು ಒಂದು ಹಂತದಲ್ಲಿ ನಿಧಾನ ಎನಿಸಬಹುದು, ಬೋರ್ ಹೊಡೆಸಬಹುದು, ಅವರವರ ಭಾವಕ್ಕೆ ಏನು ಬೇಕಾದರೂ ಆಗಬಹುದು.
ಆದರೆ, ಚಿತ್ರದ ಕೊನೆಯ ಹಂತವನ್ನು ಅವರು ಕಟ್ಟಿಕೊಟ್ಟಿರುವ ರೀತಿ ಮಾತ್ರ ನಿಜಕ್ಕೂ ನಿಮ್ಮ ಗಂಟಲು ಉಬ್ಬುವಂತೆ ಮಾಡುತ್ತದೆ. ಅದರಲ್ಲೂ ಕೊನೆಯ 20 ನಿಮಿಷಗಳ ಕಾಲ ಮಾತುಗಳೇ ಇಲ್ಲ. ರಾಜನನ್ನು ಮಣಿಸಿ ಬರುವ ಖಿಲ್ಜಿ, ಕೋಟೆಯಲ್ಲಿ ಪದ್ಮಾವತಿಗಾಗಿ ಹುಡುಕಾಡುವ ಮತ್ತು ಅದ್ಯಾವುದರ ಪರಿವೆಯೂ ಇಲ್ಲದ ಪದ್ಮಾವತಿ ತನ್ನ ಸಂಗಡಿಗರೊಡನೆ ಬೆಂಕಿಯೆಡೆಗೆ ನಡೆದು ಹೋಗುವ ದೃಶ್ಯಗಳು ನಿಮ್ಮ ಮನಕಲಕುತ್ತವೆ.
ಆ ದೃಶ್ಯಗಳೇ ಸ್ವಲ್ಪ ಭಾರವಾಯಿತು ಎನ್ನುವಾಗ, ತುಂಬು ಗರ್ಭಿಣಿಯರು, ಮಕ್ಕಳು ಸಹ ಬೆಂಕಿಯತ್ತ ನಡೆದು ಹೋಗುವ ದೃಶ್ಯಗಳನ್ನು ತೋರಿಸಿ, ಬನ್ಸಾಲಿ ಇನ್ನಷ್ಟು ಓವರ್ ಮಾಡುತ್ತಾರೆ. ಅಂಥದ್ದೆರೆಡು ಶಾಟ್‌ಗಳನ್ನು ಕತ್ತರಿಸಿ ಪಕ್ಕಕ್ಕಿಟ್ಟರೆ, ನಿಜಕ್ಕೂ “ಪದ್ಮಾವತ್’ನ ಕ್ಲೈಮ್ಯಾಕ್ಸ್ ನಿಮ್ಮನ್ನು ಉಸಿರು ಬಿಗಿಹಿಡಿದು ಕೂರಿಸುತ್ತದೆ. ಇದು ಪದ್ಮಾವತಿಯ ಕಥೆಯಾದರೂ, ಪದ್ಮಾವತಿ ಮತ್ತು ಆ ಪಾತ್ರ ಮಾಡಿರುವ ದೀಪಿಕಾ ಪಡುಕೋಣೆಗಿಂತ ಮಿಂಚುವುದು ಖಿಲ್ಜಿ ಪಾತ್ರ ಮಾಡಿರುವ ರಣವೀರ್ ಸಿಂಗ್.
ಬಹುಶಃ ಈಗಿನ ಬಾಲಿವುಡ್ ಕಲಾವಿದರಲ್ಲಿ ರಣವೀರ್ ಬಿಟ್ಟು ಬೇರೆ ಯಾರನ್ನೂ ಆ ಪಾತ್ರದಲ್ಲಿ ಊಹಿಸಿಕೊಳ್ಳಲೂ ಸಾಧ್ಯವಾಗದಂತೆ ರಣವೀರ್ ಆ ಪಾತ್ರದಲ್ಲಿ ಮಿಂಚಿದ್ದಾರೆ. ಖಿಲ್ಜಿ ಎಂಬ ಹುಚ್ಚು ಸಾಮ್ರಾಟನಲ್ಲಿ ಪರಕಾಯ ಪ್ರವೇಶ ಮಾಡಿರುವಂತೆ ಕಾಣುವ ರಣವೀರ್, ನಿಜಕ್ಕೂ ಮೆಚ್ಚುಗೆಗೆ ಅರ್ಹರು. ದೀಪಿಕಾ ಅಭಿನಯಕ್ಕಿಂತಲೂ ಅವರನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ರತನ್ ಸಿಂಗ್ ಆಗಿ ಶಾಹೀದ್ ಕಪೂರ್ ಸಹ ಇಷ್ಟವಾಗುತ್ತಾರೆ.
ಇನ್ನು ಅದಿತಿ ರಾವ್ ಹೈದರಿ, ಜಿವ್ ಸರ್ಭ, ರಾರಝಾ ಮುರಾದ್ ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಛಾಯಾಗ್ರಹಣ ಮತ್ತು ಸಂಗೀತದಿಂದ ಈ ಬಾರಿಯೂ ಬನ್ಸಾಲಿ ಬೇರೆ ಲೋಕಕ್ಕೆ ಕರೆದೊಯ್ಯುತ್ತಾರೆ ಎಂದರೆ ತಪ್ಪಿಲ್ಲ. ಇಷ್ಟಕ್ಕೂ ಚಿತ್ರ ಅಷ್ಟೊಂದು ವಿವಾದ ಹುಟ್ಟುಹಾಕಲು ಕಾರಣವೇನು? ಹಲವು ಕಾರಣಗಳಿರಬಹುದು. ಆದರೆ, ಈಗಿರುವ ಚಿತ್ರದಲ್ಲಿ ಮಾತ್ರ ವಿವಾದಗಳಾಗಲೀ, ಸಮಸ್ಯೆಗಳಾಗಲೀ ಇಣುಕದಂತೆ ನೋಡಿಕೊಳ್ಳಲಾಗಿದೆ.
ಚಿತ್ರ: ಪದ್ಮಾವತ್
ನಿರ್ಮಾಣ: ಸಂಜಯ್ ಲೀಲಾ ಬನ್ಸಾಲಿ, ಸುಧಾಂಶು ವತ್ಸ್, ಅಜಿತ್ ಅಂಧಾರೆ
ನಿರ್ದೇಶನ: ಸಂಜಯ್ ಲೀಲಾ ಬನ್ಸಾಲಿ
ತಾರಾಗಣ: ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಶಾಹೀದ್ ಕಪೂರ್, ಅದಿತಿ ರಾವ್ ಹೈದರಿ, ರಾರಝಾ ಮುರಾದ್ ಮುಂತಾದವರು.
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.