ಹೊಸ ಪ್ರೇಮಲೋಕದ ಬಣ್ಣಬಣ್ಣದ ಕಥೆಗಳು
Team Udayavani, Feb 24, 2018, 4:42 PM IST
ಎದುರು ಮನೆಯಲ್ಲೊಬ್ಬ, ಆ ಮನೆ ಮೇಲೊಬ್ಬ, ಬಸ್‌ಸ್ಟಾಪ್ ಪಕ್ಕದ ಗ್ಯಾರೇಜ್ ಹುಡುಗನೊಬ್ಬ, ಕಾಲೇಜ್ ಓದೋ ಇನ್ನೊಬ್ಬ. ಅವರೊಟ್ಟಿಗೆ ಕಾಲೇಜು, ಬಸ್‌ಸ್ಟಾಪ್ ಸೇರಿದಂತೆ ಕಂಡ ಕಂಡ ಹುಡುಗರೆಲ್ಲರೂ ಅವಳ ಲುಕ್, ಸ್ಮೈಲ್‌ಗೆ ಬಿದ್ದವರೇ! ಎಲ್ಲರೂ ಆಕೆ ನನ್ನವಳಾಗಬೇಕೆಂದು ಬಯಸಿದವರು. ಆ ನಾಲ್ವರು ಹುಡುಗರು ಮಾತ್ರ ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಎದೆಯೊಳಗೆ ಅವಳನ್ನ ಆರಾಧಿಸಿದವರೇ.
ಆದರೆ, ಅವಳು ಯಾರನ್ನು ಇಷ್ಟಪಡ್ತಾಳೆ ಅನ್ನೋದೇ ಮಹಾ ತಿರುವು. ಆ ತಿರುವಿನಲ್ಲಿ ನಿಂತು ನೋಡಿದರೆ, ಅಲ್ಲಿ ಕಾಣಸಿಗೋದು “ಕಲರ್‌ಫುಲ್ ಪ್ರೇಮಲೋಕ’. ಹಾಗೆ ಹೇಳುವುದಾದರೆ, ಈಗಿನ ಲವ್ ದುನಿಯಾದಲ್ಲಿ ನಡೆಯುವ ವಾಸ್ತವತೆಯ ಸಾರವನ್ನು ಇಲ್ಲಿ ಉಣಬಡಿಸಿದ್ದಾರೆ ನಿರ್ದೇಶಕರು. ಒಂದೇ ಮಾತಲ್ಲಿ ಹೇಳುವುದಾದರೆ, “ರಂಗ್ ಬಿರಂಗಿ’ ಹೆಸರಿಗೆ ತಕ್ಕಂತೆ ರಂಗಾಗಿದೆ. ನೋಡುಗರು ಚಿತ್ರದಲ್ಲಿ ಬಯಸೋದು ಮನರಂಜನೆ.
ಅದಿಲ್ಲಿ ಹೇರಳವಾಗಿದೆ. ಹದಿಹರೆಯದಲ್ಲಿ ಪ್ರೀತಿ, ಪ್ರೇಮ ಸಹಜ. ಆದರೆ, ಆ ವಯಸ್ಸಲ್ಲಿ ಹುಟ್ಟುವ ಪ್ರೀತಿ, ಭ್ರಮೆ, ತವಕ, ತಲ್ಲಣ, ಆಸೆ, ಆಕಾಂಕ್ಷೆಗಳು, ಪಡುವ ಪಶ್ಚಾತ್ತಾಪ, ಪರಿತಪಿಸುವ ಹೃದಯ, ಅನುಭವಿಸುವ ಯಾತನೆ ಇವೆಲ್ಲದರ “ಹೂರಣ’ ತುಂಬಿಟ್ಟು, ನಗಿಸುತ್ತಲೇ ಸೂಕ್ಷ್ಮವಾಗಿ ತೋರಿಸುವ ಮೂಲಕ “ರಂಗು’ ಚೆಲ್ಲಿದ್ದಾರೆ ಆ ಕಾರಣಕ್ಕೆ ಚಿತ್ರವನ್ನು ಯಾವುದೇ ಅನುಮಾನವಿಲ್ಲದೆ ನೋಡಲ್ಲಡ್ಡಿಯಿಲ್ಲ.
ಇಲ್ಲಿ ಕಥೆಗೆ ಒತ್ತು ಕೊಡಲಾಗಿದೆ. ಚಿತ್ರಕಥೆಯಲ್ಲೂ ಹಿಡಿತವಿದೆ. ವೇಗದ ನಿರೂಪಣೆ, ಲವಲವಿಕೆಯ ಪಾತ್ರಗಳು, ಹರಿದಾಡುವ ತಮಾಷೆ ಮಾತುಗಳು, ಮನಸ್ಸಿಗೊಪ್ಪುವ ಹಾಡುಗಳು, ಖುಷಿಯಾಗಿಸುವ ತಾಣಗಳು ನೋಡುಗರನ್ನು ಅತ್ತಿತ್ತ ಅಲ್ಲಾಡಿಸುವುದಿಲ್ಲ. ಅದು ಚಿತ್ರದ ಪ್ಲಸ್ಸು. ಮೊದಲರ್ಧ ಹಾಸ್ಯಮಯವಾಗಿಯೇ ಸಾಗುವ ಕಥೆ, ದ್ವಿತಿಯಾರ್ಧದಲ್ಲಿ ಮತ್ತಷ್ಟು ಹಾಸ್ಯದೊಂದಿಗೆ ನೋಡುಗನನ್ನು ಹಿಡಿದಿಡುವತ್ತ ಯಶಸ್ವಿಯಾಗುತ್ತೆ.
ಆರಂಭದಿಂದ ಅಂತ್ಯದವರೆಗೂ ಒಬ್ಬ ಹುಡುಗಿಯನ್ನು ನೋಡಿ, ಫಿದಾ ಆಗುವ ಹುಡುಗರು ಹೇಗೆಲ್ಲಾ ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳೋಕೆ ಪರಿತಪಿಸುತ್ತಾರೆ ಎಂಬುದನ್ನು ಸೊಗಸಾಗಿ ನಿರೂಪಿಸಿದ್ದಾರೆ. ಪ್ರೀತಿಗೆ ಜಾತಿ ಇಲ್ಲ, ಬಡವ, ಶ್ರೀಮಂತ ಎಂಬುದಿಲ್ಲ, ಅಂದ, ಚೆಂದವೂ ಕೌಂಟ್‌ಗೆ ಬರಲ್ಲ ಎಂಬುದಕ್ಕೆ “ರಂಗ್ ಬಿರಂಗಿ’ ಉದಾಹರಣೆಯಾಗುತ್ತೆ. ಯಾಕೆಂದರೆ, ಇಲ್ಲಿ ಕಾಲೇಜ್ ಓದುವ, ಆಗಷ್ಟೇ ಕಾಲೇಜು ಮುಗಿಸಿ ಕೆಲಸಕ್ಕೆ ಅಲೆದಾಡುವ, ಅಮ್ಮನ ಕಷ್ಟದ ದುಡಿಮೆಯಲ್ಲಿ ಅಂತಿಮ ಪದವಿ ಓದುತ್ತಿರುವ ಮತ್ತು ಗ್ಯಾರೇಜ್‌ನಲ್ಲಿ ಕೆಲಸ ಮಾಡುವವನ ಕಣ್ಣಿಗೆ ಆಕೆ ದೇವತೆ.
ಎಲ್ಲರೂ ತಮ್ಮದೇ ಶೈಲಿಯಲ್ಲಿ ಆಕೆಯನ್ನು ಒಲಿಸಿಕೊಳ್ಳಲು ಬಗೆಬಗೆಯ ಸರ್ಕಸ್ ಮಾಡುತ್ತಾರೆ. ಅವೆಲ್ಲವನ್ನು ತೋರಿಸಿರುವ ರೀತಿಯೇ ಚಿತ್ರದ ಹೈಲೈಟ್. ಬಹುಶಃ, ಕಾಲೇಜ್ ಹುಡುಗರಿಗಷ್ಟೇ ಅಲ್ಲ, ಪ್ರೀತಿಗೆ ಸಜ್ಜಾಗಿರುವ ಯುವಕರಿಗಂತೂ “ರಂಗ್ ಬಿರಂಗಿ’ ಇಷ್ಟವಾಗದೇ ಇರದು. ಇದು ಕೇವಲ ಯೂಥ್ಸ್ ಮಾತ್ರ ನೋಡುವಂತಹ ಚಿತ್ರವಲ್ಲ. ಪೋಷಕರೂ ಕುಳಿತು ನೋಡಬಹುದಾದ ಸಂದೇಶ ಇರುವ ಚಿತ್ರ. ಚಿತ್ರದಲ್ಲಿ ಎಲ್ಲವೂ ಚೆಂದ.
ಆದರೆ, ನಿರ್ದೇಶಕರು ಸ್ವಲ್ಪ ಅವಧಿ ಬಗ್ಗೆ ಗಮನಹರಿಸಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು. ಅವಧಿ ಹೆಚ್ಚಾಯ್ತು ಎಂಬ ಗೊಣಗಾಟ ಬಿಟ್ಟರೆ, ಮಿಕ್ಕಿದ್ದೆಲ್ಲ ಓಕೆ. ಎಲ್ಲೋ ಒಂದು ಕಡೆ ಕೆಲ ದೃಶ್ಯಗಳು ಅತಿಯಾಯ್ತು ಎನಿಸುತ್ತಿದ್ದಂತೆಯೇ, ಅಲ್ಲೊಂದು ಹಾಡು ಕಾಣಿಸಿಕೊಂಡು, ಮತ್ತದೇ ಟ್ರಾಕ್‌ಗೆ ಕರೆದುಕೊಂಡು ಬಿಡುತ್ತೆ. ಇಲ್ಲಿ ಕಥೆ-ಚಿತ್ರಕಥೆ ಎಷ್ಟು ಮುಖ್ಯವಾಗಿದೆಯೋ, ಅಷ್ಟೇ ಮುಖ್ಯವಾಗಿ ಪಾತ್ರಗಳೂ ಇವೆ.
ಇಲ್ಲಿ ಕಾಣಿಸಿಕೊಂಡಿರುವ ಹೊಸ ಪ್ರತಿಭೆಗಳಿಗೆ ಭವ್ಯ ಭವಿಷ್ಯವಂತೂ ಇದೆ. ನಾಲ್ವರು ಹುಡುಗರು ಒಬ್ಬ ಹುಡುಗಿಯ ಹಿಂದೆ ಬಿದ್ದು, ಹೇಗೆ ತಮ್ಮ ಬದುಕನ್ನು ಕಳೆದುಕೊಳ್ಳುತ್ತಾರೆ ಎಂಬುದಕ್ಕೆ ಇಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಪ್ರೀತಿಸುವ ಭರದಲ್ಲಿ ಏನೆಲ್ಲಾ ತಪ್ಪುಗಳಾಗುತ್ತವೆ ಎಂಬ ಗಂಭೀರ ಅಂಶ ಎಲ್ಲರ ಗಮನಸೆಳೆಯುತ್ತೆ. ಇಲ್ಲಿ ಅಂಥದ್ದೇನಿದೆ ಎಂಬು ಸಣ್ಣ ಪ್ರಶ್ನೆ ಎದುರಾಗಬಹುದು. ಉತ್ತರ ಬೇಕಿದ್ದರೆ ಚಿತ್ರ ನೋಡಲು ಅಭ್ಯಂತರವಿಲ್ಲ.
ಈಗಿನ ಹೊಡಿ, ಬಡಿ, ಲಾಂಗು, ಮಚ್ಚು ಕಥೆಗಳ ನಡುವೆ, ಮನರಂಜನೆ ಕಾಪಾಡಿಕೊಂಡು, ಸಣ್ಣದ್ದೊಂದು ಸಂದೇಶ ಸಾರಿರುವ ಪ್ರಯತ್ನ ಸಾರ್ಥಕ. ನೋಡುಗರಿಗೆ ಎಲ್ಲೋ ಒಂದು ಕಡೆ, “ಜೋಶ್’, “ಜಾಲಿಡೇಸ್’ ಚಿತ್ರಗಳು ನೆನಪಾಗಬಹುದು. ಆದರೆ, ಇದು ಬೇರೆಯದ್ದೇ ರಂಗು ಚೆಲ್ಲಿರುವುದರಿಂದ ಆ ಛಾಯೆ ನಿಮಿಷಗಳ ಕಾಲ ಇರಲ್ಲ. ನಾಯಕ ಶ್ರೀತೇಜ್ ಅವರ ಬಾಡಿಲಾಂಗ್ವೇಜ್, ಡೈಲಾಗ್ ಡೆಲಿವರಿ, ಲುಕ್ ನೋಡಿದರೆ, ತೆಲುಗಿನ ಮಹೇಶ್‌ಬಾಬು ನೆನಪಾಗುತ್ತಾರೆ. ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಉಳಿದಂತೆ ನಟಿಸಿರುವ ಶ್ರೇಯಸ್, ಪಂಚಾಕ್ಷರಿ, ಚರಣ್ ಅವರ್ಯಾರೂ ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ. ತನ್ವಿ ನೋಡೋಕೆ ಅಷ್ಟೇ ಅಲ್ಲ, ನಟನೆಯಲ್ಲೂ ಗಮನಸೆಳೆಯುತ್ತಾರೆ. ಉಳಿದಂತೆ ಬರುವ ಪಾತ್ರಗಳೆಲ್ಲ ಕಾಣಿಸುವಷ್ಟು ಕಾಲ ಖುಷಿಕೊಡುತ್ತವೆ. ಮಣಿಕಾಂತ್ ಕದ್ರಿ ಸಂಗೀತದ ಎರಡು ಹಾಡು ಕೇಳಲು ಮೋಸವಿಲ್ಲ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ರವಿವರ್ಮ ಮತ್ತು ನಂದಕಿಶೋರ್ ಕ್ಯಾಮೆರಾ ಕೈಚಳಕದಲ್ಲಿ ರಂಗು ತುಂಬಿದೆ.
ಚಿತ್ರ: ರಂಗ್ ಬಿರಂಗಿ
ನಿರ್ಮಾಣ: ಶಾಂತಕುಮಾರ್
ನಿರ್ದೇಶನ: ಮಲ್ಲಿಕಾರ್ಜುನ ಮುತ್ತಲಗೇರಿ
ತಾರಾಗಣ: ಶ್ರೀತೇಜ್, ತನ್ವಿ, ಪಂಚಾಕ್ಷರಿ, ಚರಣ್, ಶ್ರೇಯಸ್, ಕುರಿಪ್ರತಾಪ್, ಪ್ರಶಾಂತ್ ಸಿದ್ದಿ, ಸತ್ಯಜಿತ್, ನಿರ್ಮಲ ಮುಂತಾದವರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.