ಡಾ ರಾಜ್ ಅಭಿಮಾನದಿಂದ; ವಿಜಯ್ ಅಭಿಮಾನಿಗಳಿಗೆ
Team Udayavani, Jan 26, 2018, 4:05 PM IST
“ಬಾರೋ ತಾಕತ್ತಿದ್ದರೆ ಬಾರೋ …’ ಎಂದು ಕೆಣಕುವ ಗೂಂಡಾಗಳು ಒಂದು ಕಡೆ, ಸರಿಯಾಗಿ ಹೊಡೆತ ತಿಂದು ರಕ್ತಕಾರುತ್ತಿರುವ ತಂದೆ-ತಮ್ಮಂದಿರು ಇನ್ನೊಂದು ಕಡೆ. ಕನಕ ಹೋಗಿ ಗೂಂಡಾಗಳನ್ನು ಬಡಿದು ಬಿಸಾಕಬೇಕಾ ಅಥವಾ ತಮ್ಮ ಕುಟುಂಬದವರನ್ನು ಕಾಪಾಡಿಕೊಳ್ಳಬೇಕಾ? “ಬಾ ಬಾರೋ ಬಾರೋ ರಣಧೀರ …’ ಎಂದು ಅಭಿಮಾನಿಗಳು ಮನಸ್ಸಿನಲ್ಲೇ ಹಾಡು ಶುರು ಮಾಡುತ್ತಾರೆ.
“ನೀ ಬಂದರೆ ದಿಗ್ವಿಜಯದ ಹಾರ …’ ಎಂಬ ಸಾಲು ಮುಗಿಯುವಷ್ಟರಲ್ಲಿ ಗೂಂಡಾಗಳು ನರಳುತ್ತಾ ಬಿದ್ದಿರುತ್ತಾರೆ. ಕ್ರಮೇಣ ರೀ-ರೆಕಾರ್ಡಿಂಗ್ ನಿಲ್ಲುತ್ತದೆ, ಗಾಳಿ ಕಡಿಮೆಯಾಗುತ್ತದೆ, ಆಕ್ರಂದನ ಮುಗಿಯುತ್ತದೆ. ಕಟ್ ಮಾಡಿದರೆ, ಸುಖಾಂತ್ಯವಾಗುತ್ತದೆ ಮತ್ತು ಕನಕನ ಕುಟುಂಬ ನೆಮ್ಮದಿಯಿಂದ ಬಾಳ್ವೆ ನಡೆಸುತ್ತದೆ. “ಕನಕ’ ಎಂಬ ಹೆಸರು, ಆಟೋ ಡ್ರೈವರ್ ಎಂಬ ವೃತ್ತಿ, ಇಬ್ಬಿಬ್ಬರು ನಾಯಕಿಯರು (ಅದರಲ್ಲೊಬ್ಬಳು ಸಿಟಿಯವಳು, ಇನ್ನೊಬ್ಬಳು ಹಳ್ಳಿಯವಳು) …
ಇವೆಲ್ಲಾ ನೋಡುತ್ತಿದ್ದರೆ, ಪ್ರೇಕ್ಷಕನಿಗೆ “ಕನಕ’ ಚಿತ್ರದ ಕಥೆ ಏನಿರಬಹುದು ಎಂಬ ಅಂದಾಜು ಬರಬಹುದು ಅಥವಾ ಕಥೆಯನ್ನು ಕಲ್ಪಿಸಿಕೊಂಡಿರಲೂಬಹುದು. ಅಂತಹ ಕಲ್ಪನೆ ಮತ್ತು ಅಂದಾಜುಗಳು ತಪ್ಪದಂತೆ ಸಿನಿಮಾ ಮಾಡಿದ್ದಾರೆ ಚಂದ್ರು. ಒಂದೆರೆಡು ಬಾರಿ ಪ್ರೇಕ್ಷಕರ ಊಹೆ ತಪ್ಪಬಹುದು ಅಥವಾ ಅಂದುಕೊಂಡಿದ್ದು ಆಗದಿರಬಹುದು. ಅದು ಬಿಟ್ಟರೆ, ಮಿಕ್ಕಂತೆ ಪ್ರೇಕ್ಷಕರ ಕಲ್ಪನೆಗೆ ಮೋಸ ಮಾಡದಂತೆ ಒಂದು ಚಿತ್ರ ಮಾಡಿದ್ದಾರೆ ಚಂದ್ರು.
ಬಹುಶಃ ಅವರು ತುಂಬಾ ಹಿಂದೆ ಉಳಿದಿದ್ದಾರೋ ಅಥವಾ ಪ್ರೇಕ್ಷಕರ ತುಂಬಾ ಕಿಲಾಡಿಗಳಾಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ, ಮುಂದೆ ಈ ರೀತಿ ಆಗುತ್ತದೆ, ಪಾತ್ರ ಇದೇ ಮಾತಾಡುತ್ತದೆ ಎಂದು ಕರಾರುವಾಕ್ಕಾಗಿ ಹೇಳುವಷ್ಟರ ಮಟ್ಟಿಗೆ, ಯಾವುದೇ ದೊಡ್ಡ ಸರ್‌ಪ್ರೈಸ್‌ಗಳಿಲ್ಲದ ಒಂದು ಚಿತ್ರವಾಗಿದೆ “ಕನಕ’. “ಕನಕ’ ಒಬ್ಬ ಆಟೋ ಡ್ರೈವರ್‌ನ ಕಥೆ. ಅಮಾವಸ್ಯೆಯ ದಿನ ಹುಟ್ಟಿದ ಕನಕನಿಗೆ ಅನಿಷ್ಠ ಎಂಬ ಹಣೆಪಟ್ಟಿ ಬೀಳುತ್ತದೆ.
ತಂದೆಯಿಂದ ನಿರಂತರ ಕಿರುಕುಳಕ್ಕೊಳಗಾಗುವ ಕನಕ ಹಳ್ಳಿ ಬಿಟ್ಟು ಊರು ಸೇರುತ್ತಾನೆ. ಅಣ್ಣಾವ್ರ ದೊಡ್ಡ ಅಭಿಮಾನಿಯಾದ ಅವನಿಗೆ, ಪೋಸ್ಟರ್ ಅಂಟಿಸುವವನ ಆಶ್ರಯ ಸಿಗುತ್ತದೆ. ಕ್ರಮೇಣ ಅವನು ದೊಡ್ಡವನಾಗಿ ಆಟೋ ಓಡಿಸುತ್ತಾನೆ. ಒಂದು ಹುಡುಗಿಯ ಪರಿಚಯವಾಗುತ್ತದೆ. ಆ ಹುಡುಗಿ ಇವನನ್ನು ಪ್ರೀತಿಸಿ, ಮದುವೆಯಾಗಬೇಕು ಎಂಬ ಕನಸು ಕಂಡಿರುವಾಗಲೇ, ಅವಳ ಸಾವಾಗುತ್ತದೆ.
ಈ ಮಧ್ಯೆ ತನ್ನ ಕುಟುಂಬದವರನ್ನು ನೋಡಬೇಕು ಎಂದು ಪರಿತಪಿಸುವ ಕನಕ, ಬಂಕಾಪುರಕ್ಕೆ ವಾಪಸ್ಸಾಗುತ್ತಾನೆ. ಇಷ್ಟು ವರ್ಷಗಳಲ್ಲಿ ಅಲ್ಲಿಯ ಚಿತ್ರಣವೇ ಬೇರೆಯಾಗಿರುತ್ತದೆ. ಓಬಳೇಶನೆಂಬ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ, ಇಡೀ ಊರನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡು ಆಳುತ್ತಿರುತ್ತಾನೆ. ಕನಕ ಬಂದ ನಂತರ ಪರಿಸ್ಥಿತಿ ಬದಲಾಗುತ್ತದೆ. ಕನಕನ ಅಭಯಹಸ್ತದಿಂದ, ಆತನ ತಮ್ಮ ಲಕ್ಷ್ಮೀಶ ಒಕ್ಕೂಟದ ಹೊಸ ಅಧ್ಯಕ್ಷನಾಗುತ್ತಾನೆ.
ಇಷ್ಟೆಲ್ಲಾ ಆದರೂ ಅನಿಷ್ಠನೆಂಬ ಹಣೆಪಟ್ಟಿ ಹೋಗುವುದಿಲ್ಲ. ಆ ಕಡೆ ಹಣೆಪಟ್ಟಿ ಹೋಗಿ ಕುಟುಂಬದ ಸದಸ್ಯನಾಗಬೇಕು, ಇನ್ನೊಂದು ಕಡೆ ಓಬಳೇಶ ಮುಷ್ಠಿಯಿಂದ ಇಡೀ ಊರನ್ನು ಪಾರು ಮಾಡಬೇಕು. ಇವೆರೆಡೂ ಹೇಗೆ ಸಾಧ್ಯವಾಗುತ್ತದೆ ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಈ ಚಿತ್ರವನ್ನು ವಿಜಯ್ ಅಭಿಮಾನಿಗಳಿಗನ್ನು ದೃಷ್ಟಿಯಲ್ಲಿಟ್ಟುಕೊಂಡೇ ರೂಪಿಸಿರುವುದರಲ್ಲಿ ಎರಡು ಮಾತಿಲ್ಲ. ಅಭಿಮಾನಿಗಳನ್ನು ಖುಷಿಪಡಿಸುವುದಕ್ಕೆ ಏನೇನು ಬೇಕೋ ಅವೆಲ್ಲಾ ಚಿತ್ರದಲ್ಲಿದೆ.
ಪಂಚಿಂಗ್ ಸಂಭಾಷಣೆಗಳು, ಫೈಟುಗಳು, ಕಲರ್ ಕಲರ್ ಹಾಡುಗಳು, ಕಾಮಿಡಿ ಎಲ್ಲವೂ ಈ ಚಿತ್ರದಲ್ಲಿದೆ. ಇದರ ಜೊತೆಗೆ, ಡಾ ರಾಜಕುಮಾರ್ ಮೇಲಿನ ಅಭಿಮಾನ, ಆಟೋ ಡ್ರೈವರ್‌ಗಳ ಕಾಯಕ ಪ್ರೇಮ, ಲವ್ವು, ಆ್ಯಕ್ಷನ್, ಸೆಂಟಿಮೆಂಟು (ಮದರ್ ಮತ್ತು ಬ್ರದರ್ ಎರಡೂ), ಕಾಮಿಡಿ ಹೀಗೆ ಎಲ್ಲವನ್ನೂ ಸೇರಿಸಿ ಚಿತ್ರ ಮಾಡಿದ್ದಾರೆ ಚಂದ್ರು. ಎಲ್ಲಕ್ಕಿಂತ ಹೆಚ್ಚಾಗಿ ಹಲವು ಸಂದೇಶಗಳನ್ನೂ, ವಿಪರೀತ ಮಾತುಗಳನ್ನೂ ಸೇರಿಸಲಾಗಿದೆ. ಇದೆಲ್ಲಾ ಸೇರಿ ಚಿತ್ರದ ಗಾತ್ರ ದೊಡ್ಡದಾಗಿದೆ.
ಮಿಕ್ಕವರ ಬಗ್ಗೆ ಗೊತ್ತಿಲ್ಲ, ವಿಜಯ್ ಅಭಿಮಾನಿಗಳಿಗೆ ಚಿತ್ರ ಬಹಳ ಖುಷಿ ಕೊಡುವುದರಲ್ಲಿ ಅನುಮಾನವೇ ಇಲ್ಲ. ಚಿತ್ರದ ಆರಂಭದಿಂದ ಕೊನೆಯವರೆಗೂ ವಿಜಯ್ ಅವರ ಹಲವು ಮಜಲುಗಳನ್ನು ನೋಡಬಹುದು. ಒಮ್ಮೆ ಅವರು ಸಖತ್ ಡೈಲಾಗ್ ಹೊಡೆಯುತ್ತಾರೆ, ಕಾಮಿಡಿ ಮಾಡುತ್ತಾರೆ, ಭಾವುಕರಾಗುತ್ತಾರೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಖತ್ತಾಗಿ ಫೈಟ್ ಮಾಡುತ್ತಾರೆ. ವಿಜಯ್ ಬಿಟ್ಟರೆ ಚಿತ್ರದಲ್ಲಿ ಗಮನ ಸೆಳೆಯುವುದು ಅವರ ತಂದೆ-ತಾಯಿ ಪಾತ್ರ ಮಾಡಿರುವ ಸಿದ್ಧರಾಜ ಕಲ್ಯಾಣ್‌ಕರ್ ಮತ್ತು ಸುಧಾ.
ಇಬ್ಬರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕಿಯರ ಪೈಕಿ ಹರಿಪ್ರಿಯಾಗೆ ಹೆಚ್ಚು ಕೆಲಸವಿಲ್ಲ. ರವಿಶಂಕರ್ ಇದ್ದರೂ, ಅವರಿಗೊಂದು ಒಳ್ಳೆಯ ಪಾತ್ರ ಅಂತೇನಿಲ್ಲ. ಇನ್ನು ಸಾಧು, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ ಅವರ ಕಾಮಿಡಿಯಿದ್ದರೂ ನಗು ಬರುವುದಿಲ್ಲ. ಒಬ್ಬ ನಾಯಕನ ಅಭಿಮಾನಿಗಳನ್ನು ಮೆಚ್ಚಿಸುವಂತ ಸಿನಿಮಾ “ಕನಕ’. ವಿಜಯ್ ಅಭಿಮಾನಿಯಾಗಿದ್ದರೆ, ಚಿತ್ರ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ಚಿತ್ರ: ಕನಕ
ನಿರ್ಮಾಣ-ನಿರ್ದೇಶನ: ಆರ್. ಚಂದ್ರು
ತಾರಾಗಣ: “ದುನಿಯಾ’ ವಿಜಯ್, ಹರಿಪ್ರಿಯಾ, ಮಾನ್ವಿತಾ ಹರೀಶ್, ರವಿಶಂಕರ್, ಸಿದ್ಧರಾಜ ಕಲ್ಯಾಣ್‌ಕರ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.