ವಿಪರೀತ ಕುಡಿತ, ಅತೀ ಮಾತು, ಅಲ್ಲಲ್ಲಿ “ಖಂಡನೆ’ …
Team Udayavani, Feb 2, 2018, 5:02 PM IST
“ನೀನು ನನಗೊಂದು ಮಾತು ಕೊಡಬೇಕು. ನನ್ನ ಸಂಪಾದನೆಯಲ್ಲಿ ನೀನು ಕುಡಿಯಬಾರದು, ನಿನ್ನ ಸಂಪಾದನೆಯಲ್ಲೂ ಕುಡಿಯಬಾರದು, ಫ್ರೆಂಡ್ಸ್, ರಿಲೇಷನ್ಸ್ ಹಣದಲ್ಲೂ ಕುಡಿಯಬಾರದು. ಗುರುತು ಪರಿಚಯ ಇಲ್ಲದವರ ಹಣದಲ್ಲಿ ಮಾತ್ರ ಕುಡಿಯಬೇಕು…’ ಹೀಗಂತ ಕೇಳಿ, ಅವನ ಅಪ್ಪ ಸಾಯುವ ಮುನ್ನ ಅವನಿಂದ ಪ್ರಮಾಣ ಮಾಡಿಸಿಕೊಳ್ಳುತ್ತಾನೆ. ಅಲ್ಲಿಂದ ಶುರುವಾಗುವ ಅವನ ಕುಡಿಯೋ ಚಟ, ಚಟ್ಟಕ್ಕೇರಿಸುವ ರೇಂಜ್‌ಗೆ ಹೋಗುತ್ತೆ.
ವಿಪರೀತ ಕುಡಿತ, ಅತೀ ಮಾತು, ಅಲ್ಲಲ್ಲಿ “ಖಂಡನೆ’ ಇಷ್ಟಕ್ಕೇ ಸೀಮಿತವಾಗಿರುವ ಪ್ರಥಮನ “ಹಾವ ಭಾವ’ ಸಹಿಸಿಕೊಂಡು ನೋಡುವುದೇ ದೊಡ್ಡ ಸಾಹಸ! ಇಲ್ಲೊಂದು ಗಟ್ಟಿತನದ ಕಥೆ ಇದೆ. ಅರ್ಥಪೂರ್ಣ ಸಂಭಾಷಣೆಯೂ ಇದೆ. ಆದರೆ, ಅದಕ್ಕೆ ಪೂರಕವಾಗಿರುವಂತಹ ದೃಶ್ಯಗಳನ್ನು ಪೋಣಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಆಗಾಗ, ಚೆಂದದ ಮಾತುಗಳು ಹರಿದಾಡುವುದು ಬಿಟ್ಟರೆ, ಉಳಿದದ್ದೆಲ್ಲವೂ “ಖಂಡನೆ’ಗೆ ಅರ್ಹ ಎನ್ನಬಹುದು.
ಒಂದು ಸರಳ ಕಥೆಯನ್ನು ಅಷ್ಟೇ ಚೆನ್ನಾಗಿ ಹೇಳುವ, ತೋರಿಸುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ, “ಪ್ರಥಮ’ ಕಾಣಿಕೆ ಕೊಡಬೇಕೆಂಬ ಉದ್ದೇಶ ಮತ್ತು ಆತುರದಿಂದಲೋ ಏನೋ, “ಭರಪೂರ’ ಮಾತುಗಳಿಗೆ ಜಾಗ ಕಲ್ಪಿಸಿ, ಆ ಪಾತ್ರ ಮಾಡುವ ಹುಚ್ಚಾಟಗಳಿಗೇ ಆದ್ಯತೆ ಕಲ್ಪಿಸಲಾಗಿದೆ. ಹಾಗಾಗಿ, ನೋಡುಗರು ಅದನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ. ನಾಯಕ ಪ್ರಥಮ್ ಓದುವ ವಯಸ್ಸಲ್ಲೇ ಔಷಧಿ ಅಂತ ಮದ್ಯ ಸೇವಿಸಿದಾತ.
ಆ ಚಟ ದೊಡ್ಡವನಾದ ಮೇಲೂ ಜಾಸ್ತಿಯಾಗುತ್ತಾ ಹೋಗುತ್ತೆ. ಅದು ಎಷ್ಟರಮಟ್ಟಿಗೆ ಅಂದರೆ, ಅವನ ಅಪ್ಪ, ಮಗನ ಆ ಚಟಕ್ಕೆ ಬೇಸತ್ತು ಹಾಸಿಗೆ ಹಿಡಿದು ಇನ್ನೇನು ಜೀವ ಬಿಡುವಷ್ಟರ ಮಟ್ಟಿಗೆ. ಸಾಯುವ ಮುನ್ನ, ಮಗನಿಗೆ ಕುಡಿಯುವುದನ್ನು ಬಿಡಿಸಬೇಕು ಎಂಬ ಯೋಚನೆಯಲ್ಲೇ, ನೀನಿನ್ನು ಕುಡಿಯಬಾರದು ಅಂತ ಮಾತು ಪಡೆಯುತ್ತಾನೆ. ಅದು ಸಾಧ್ಯವಿಲ್ಲ ಅಂತ ಮಗ ತಿರುಗಿ ಹೇಳುತ್ತಾನೆ.
ಸರಿ, ನನ್ನ ಸಂಪಾದನೆ, ನಿನ್ನ ಸಂಪಾದನೆ, ಸಂಬಂಧಿಕರು, ಗೆಳೆಯರು ಇವರ್ಯಾರ ಹಣದಲ್ಲೂ ಕುಡಿಯದೆ, ಹೊಸಬರ ಹಣದಲ್ಲಿ ಕುಡಿಯಬೇಕು ಅಂತ ಮಾತು ಪಡೆಯುತ್ತಾನೆ. ಅದಕ್ಕೆ ಒಪ್ಪುವ ಮಗ, ಸಂಜೆಯಾಗುತ್ತಿದ್ದಂತೆಯೇ, ಸಿಕ್ಕವರನ್ನು ಪರಿಚಯ ಮಾಡಿಕೊಂಡು ಒಬ್ಬೊಬ್ಬರಿಗೆ ಒಂದೊಂದು ಕಥೆ ಕಟ್ಟಿಕೊಂಡು ಅವರನ್ನು ನಂಬಿಸಿ, ಕುಡಿದು ದಿನ ದೂಡುತ್ತಿರುತ್ತಾನೆ. ಅಂತಹವನ್ನೇ ಮದುವೆಯಾಗಬೇಕು ಅಂತ ಒಬ್ಟಾಕೆ ಹಿಂದೆ ಬೀಳುತ್ತಾಳೆ.
ಅವನೂ ಹಿಂದೆ ದೇವ್‌ದಾಸ್ ಆಗಿ, ಪುನಃ ಹೊಸ ಹುಡುಗಿಯ ಲವ್‌ಗೆ ಗ್ರೀನ್‌ಸಿಗ್ನಲ್ ಕೊಡ್ತಾನೆ. ಆದರೆ, ಆ ಪ್ರೀತಿಗೆ ಅವಳು ಎರಡು ಷರತ್ತು ಹಾಕುತ್ತಾಳೆ. ಮೊದಲನೆಯದು ಕುಡಿಯೋದನ್ನು ಬಿಡಬೇಕು ಅನ್ನೋದು. ಎರಡನೇ ಷರತ್ತು ಹೇಳುವುದೇ ಬೇಡ ಅಂತ ಹೊರಡುತ್ತಾನೆ. ಮುಂದಾ… ಅವನು ಅವಳನ್ನು ಒಪ್ಪುತ್ತಾನೋ, ಇಲ್ಲವೋ ಅನ್ನೋದೇ ಕಥೆ. ಅಲ್ಲಲ್ಲಿ ಆಗಿರುವ ಎಡವಟ್ಟುಗಳನ್ನು ಹೊರತುಪಡಿಸಿದರೆ, “ದೇವ್ರಂಥ ಮನುಷ್ಯ’ ಸ್ವಲ್ಪ ಮೆದುಳಿಗೆ ಕೈ ಹಾಕಿ, ನೋಡುಗನ ತಾಳ್ಮೆ ಪರೀಕ್ಷಿಸಿ ಬಿಡುತ್ತಾನೆ.
ಎಲ್ಲವನ್ನೂ ಸಹಿಸಿಕೊಂಡು ಆ ಮನುಷ್ಯನನ್ನು ಧೈರ್ಯವಾಗಿ ನೋಡುವುದಾದರೆ, ಯಾವುದೇ ಆತಂಕಗಳಿಲ್ಲ. ಮೊದಲರ್ಧದಲ್ಲಿ ಕಾಣ ಸಿಗುವ ಕಥೆಯಲ್ಲಿ ವ್ಯಥೆಯದ್ದೇ ಕಾರುಬಾರು. ದ್ವಿತಿಯಾರ್ಧದಲ್ಲಿ ಬಿಚ್ಚಿಕೊಳ್ಳುವ ಇನ್ನೊಂದು ಕಥೆಯಲ್ಲೂ ಹೇಳಲಾಗದ ವ್ಯಥೆ. ನೀಟ್ ಎನಿಸುವ ಕಥೆಗೆ, ತಕ್ಕದೆನಿಸುವ ಪಾತ್ರ ಹೊಂದಿಸಿದ್ದರೆ ಚಿತ್ರಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದಿತ್ತು. ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಅವಕಾಶವೂ ಅಲ್ಲಿತ್ತು.
ಆದರೆ, ಅಲ್ಲಿ ಖಂಡಿಸುವ ವ್ಯವಸ್ಥೆಯೇ ಹೆಚ್ಚಾಗಿ ಕಾಣುವುದರಿಂದ, ಅನಿವಾರ್ಯ ಎನ್ನುವಂತೆಯೇ, ಸಿಕ್ಕ ದೃಶ್ಯಗಳನ್ನು ಸುತ್ತಿರುವುದು ಎದ್ದು ಕಾಣುತ್ತದೆ. ಪ್ರಥಮ್ ಅವರನ್ನಿಲ್ಲಿ ಮಾತುಗಾರನಾಗಿ ಕಾಣಬಹುದೇ ಹೊರತು, ನಟನಾಗಿ ಅಲ್ಲ, “ಬಿಗ್ ಬಾಸ್’ ಮನೆಯಲ್ಲಿ ಹೇಗೆ “ಖಂಡಿಸ್ತೀನಿ’ ಅಂತ ಕ್ಯಾಮೆರಾಗಳ ಮುಂದೆ ಆರ್ಭಟಿಸುತ್ತಿದ್ದರೋ, ಇಲ್ಲೂ ಕೆಲವೆಡೆ ಅದೇ ಆರ್ಭಟಗಳಿವೆ. ಕುಡಿಯುವ ಪಾತ್ರ ಅಂದಮೇಲೆ, ದೇಹಕ್ಕೆ ಹಿಡಿತವೇ ಇರಲ್ಲ.
ಆದರೆ, ಇಲ್ಲಿ ಅವರು ಕಂಠ ಪೂರ್ತಿ ಕುಡಿದರೂ ಸ್ಟಡಿಯಾಗಿರ್ತಾರೆ ಅನ್ನೋದೇ ಅಚ್ಚರಿ! ಸುಚೇಂದ್ರ ಪ್ರಸಾದ್, ತಬಲ ನಾಣಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಶ್ರುತಿ, ವೈಷ್ಣವಿ ಸಿಕ್ಕ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡಿದ್ದಾರೆ. ಪವನ್ ಗೆಳೆಯನಾಗಿ ಗಮನಸೆಳೆಯುವುದು ಬಿಟ್ಟರೆ, ಉಳಿದ್ಯಾವ ಪಾತ್ರಗಳು ಗುರುತಿಸಿಕೊಳ್ಳುವುದಿಲ್ಲ. ಪ್ರದ್ಯೋತನ್ ಸಂಗೀತದ ಎರಡು ಹಾಡು ಪರವಾಗಿಲ್ಲ. ಅರುಣ್ ಸುರೇಶ್ ಕ್ಯಾಮೆರಾ ಕೈಚಳಕಕ್ಕೂ ಇದೇ ಮಾತು ಅನ್ವಯ.
ಚಿತ್ರ: ದೇವ್ರಂಥ ಮನುಷ್ಯ
ನಿರ್ಮಾಪಕರು: ಮಂಜುನಾಥ್ ಹೆಚ್.ಸಿ. ತಿಮ್ಮರಾಜು ಕೆ
ನಿರ್ದೇಶನ: ಕಿರಣ್ ಶೆಟ್ಟಿ
ತಾರಾಗಣ: ಪ್ರಥಮ್, ಶ್ರುತಿ, ವೈಷ್ಣವಿ, ಸುಚೇಂದ್ರ ಪ್ರಸಾದ್, ತಬಲನಾಣಿ, ರಾಕ್‌ಲೈನ್ ಸುಧಾಕರ್, ಪವನ್‌ಕುಮಾರ್ ಮುಂತಾದವರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.