ಖಾಕಿ ಖದರ್‌ನಲ್ಲಿ ಗೋಲ್ಡನ್ ಮಿಂಚು
Team Udayavani, May 27, 2017, 11:55 AM IST
“ನಾವು ಸಿನ್ಸಿಯರ್ ಆಗಿ ಕೆಲಸ ಮಾಡುವುದಿಲ್ಲ. ನಮ್ಮ ಸ್ವಾರ್ಥ ನೋಡಿಕೊಳ್ಳುತ್ತೇವೆ, ಎಲ್ಲಾ ಡೀಲ್‌ಗಳನ್ನು ನಾವೇ ಮಾಡುತ್ತೇವೆ …’ – ಇನ್ನೂ ಆತ ಸ್ಟೇಷನ್ ಒಳಗೆ ಎಂಟ್ರಿಕೊಟ್ಟಿರುವುದಿಲ್ಲ. ಆಗಲೇ ಎಲ್ಲಾ ಇನ್ಸ್‌ಪೆಕ್ಟರ್‌ಗಳಲ್ಲಿ ಹೀಗೆ ಪ್ರಮಾಣ ಮಾಡಿಸುತ್ತಾನೆ. ಬರೀ ಪ್ರಮಾಣವಷ್ಟೇ ಅಲ್ಲ, ಹೇಳಿದಂತೆ ಮಾಡುತ್ತಾನೆ ಕೂಡಾ. ಕಾನೂನಿನಡಿ ಪರಿಹಾರವಾಗಬೇಕಿದ್ದ, ಇತ್ಯರ್ಥವಾಗಬೇಕಿದ್ದ ಕೇಸ್‌ಗಳೆಲ್ಲಾ ಎಸಿಪಿ ಸೂರ್ಯ ನೇತೃತ್ವದಲ್ಲಿ ಡೀಲ್ ಆಗುತ್ತವೆ. ಆ ಮಟ್ಟಿಗೆ ಎಸಿಪಿ ಸೂರ್ಯ ಕರಫ್ಟ್ ಆಫೀಸರ್.
ಈ ಕರಫ್ಟ್ ಆಫೀಸರ್ ಒಂದು ಹಂತದಲ್ಲಿ ಕರೆಕ್ಟ್ ಆಫೀಸರ್ ಆಗುತ್ತಾನೆ. ನೋಡ ನೋಡುತ್ತಲೇ ಆ್ಯಕ್ಷನ್ ಹೀರೋ ಆಗಿ ರೌಡಿಗಳನ್ನು ಚೆಂಡಾಡುತ್ತಾನೆ. “ಪಟಾಕಿ’ ಚಿತ್ರ ನಿಮಗೆ ಮಜಾ ಕೊಡುವುದೇ ಈ ಕಾರಣಕ್ಕಾಗಿ. ಒಬ್ಬ ತುಂಟ ಯುವಕ ಎಸಿಪಿಯಾದರೆ, ಅದರಲ್ಲೂ “ಸಂಪಾದನೆ’ಯ ಕನಸು ಕಂಡವನಾಗಿದ್ದರೆ ಏನೆಲ್ಲಾ ಆಗಬಹುದು ಅವೆಲ್ಲವೂ ಇಲ್ಲಿ ಆಗುತ್ತದೆ. ಪಕ್ಕಾ ಒಂದು ಫ್ಯಾಮಿಲಿ ಸೆಂಟಿಮೆಂಟ್ ಹಿನ್ನೆಲೆಯ ಕಥೆಯನ್ನು ಆ್ಯಕ್ಷನ್ ಹಾಗೂ ಕಾಮಿಡಿ ಹಿನ್ನೆಲೆಯಲ್ಲಿ ಮಜಾವಾಗಿ ಹೇಳಿದ್ದಾರೆ ನಿರ್ದೇಶಕ ಮಂಜು ಸ್ವರಾಜ್.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೆಂಟಿಮೆಂಟ್, ಲವ್ ಸಬೆಕ್ಟ್ಗಳಲ್ಲಿ ಗಣೇಶ್ ಅವರನ್ನು ನೋಡಿದ್ದ ಅವರ ಅಭಿಮಾನಿಗಳಿಗೆ ಇಲ್ಲಿ ಹೊಸ ಲುಕ್‌ನ ಗಣೇಶ್ ಕಾಣಸಿಗುತ್ತಾರೆ ಮತ್ತು ಇಷ್ಟವಾಗುತ್ತಾರೆ. ಇಡೀ ಸಿನಿಮಾದ ಫೋಕಸ್ ಪಕ್ಕಾ ಎಂಟರ್‌ಟೈನ್‌ಮೆಂಟ್. ಅದನ್ನು ಯಾವ್ಯಾವ ರೀತಿಯಲ್ಲಿ ಕೊಡಬಹುದು, ಆ ಎಲ್ಲಾ ಮಾರ್ಗಗಳನ್ನು ಇಲ್ಲಿ ಬಳಸಲಾಗಿದೆ.
ಇದು ತೆಲುಗಿನ “ಪಟಾಸ್’ ಚಿತ್ರದ ರೀಮೇಕ್. ಮೂಲ ಚಿತ್ರಕ್ಕೆ ಧಕ್ಕೆಯಾಗದಂತೆ ಇಲ್ಲೊಂದಿಷ್ಟು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ ಮತ್ತು ಅದು ಚಿತ್ರಕ್ಕೆ ಪೂರಕವಾಗಿದೆ ಕೂಡಾ.
ಆರಂಭದಿಂದ ಇಂಟರ್‌ವಲ್‌ವರೆಗೆ ಬಿಸಿರಕ್ತದ ಎಸಿಪಿ ಸೂರ್ಯನ ಖತರ್‍ನಾಕ್ ಐಡಿಯಾಗಳು, ಆತನ ಆಲೋಚನೆಗಳನ್ನು ಹೇಳುವ ಮೂಲಕ ಫನ್ನಿಯಾಗಿ ಸಾಗುವ ಸಿನಿಮಾಕ್ಕೆ ಇಂಟರ್‌ವಲ್ ನಂತರ ಸೆಂಟಿಮೆಂಟ್ ಹಾಗೂ ಆ್ಯಕ್ಷನ್ ಟ್ಯಾಗ್ ಅಂಟಿಕೊಳ್ಳುತ್ತೆ. ಚಿತ್ರದಲ್ಲಿ ಒಂದು ಗಾಢವಾದ ಸೆಂಟಿಮೆಂಟ್ ಎಳೆ ಇದೆ. ಹಾಗಂತ ಅದನ್ನು ಹೆಚ್ಚು ಎಳೆದಾಡುವ ಗೋಜಿಗೆ ಹೋಗದೇ ಕಥೆಗೆ ಪೂರಕವಾಗಿ ಮುಗಿಸುವ ಮೂಲಕ ಎಂಟರ್‌ಟೈನ್‌ಮೆಂಟ್‌ಗೆ ಹೆಚ್ಚು ಮಹತ್ವ ನೀಡಲಾಗಿದೆ. ತಂದೆ-ಮಗನ ಸಂಬಂಧ, ಅವರ ಫ್ಲ್ಯಾಶ್‌ಬ್ಯಾಕ್, ಅಣ್ಣ-ತಂಗಿ ಬಾಂಧವ್ಯ … ಎಲ್ಲವೂ ಈ ಸಿನಿಮಾದಲ್ಲಿವೆ.
ಪೊಲೀಸ್ ಸ್ಟೋರಿ ಎಂದರೆ ಖಡಕ್ ಡೈಲಾಗ್, ಹೀರೋ ಜಬರ್‌ದಸ್ತ್ ಎಂಟ್ರಿ ಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಆರಂಭದಲ್ಲಿ ಫನ್ನಿಯಾಗಿ ಸಾಗುವ ಸಿನಿಮಾ ನೋಡಿದಾಗ “ಪೊಲೀಸ್ ಪವರ್’ ಮಿಸ್ ಆಯಿತಾ ಎಂಬ ಪ್ರಶ್ನೆ ಬರಬಹುದು. ಆ ಎಲ್ಲಾ ಪ್ರಶ್ನೆಗಳಿಗೆ ದ್ವಿತೀಯಾರ್ಧದಲ್ಲಿ ಉತ್ತರ ಸಿಗುತ್ತದೆ. ಒಂದು ಹಂತದಲ್ಲಿ ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾನಾ ಎಂಬ ಸಂದೇಹ ಬರುವ ಮಟ್ಟಿಗೆ ಇಲ್ಲಿ ಹೈವೋಲ್ಟೆàಜ್ ಫೈಟ್‌ಗಳಿವೆ, ಹೀರೋ-ವಿಲನ್ ಮಧ್ಯೆ ಕಣ್ಣಾಮುಚ್ಚಾಲೆಯಾಟವಿದೆ.
ಹಾಗಾಗಿ, ಲವ್, ಆ್ಯಕ್ಷನ್, ಸೆಂಟಿಮೆಂಟ್ ಜೊತೆಗೆ ಕಾಮಿಡಿ ಸೇರಿಕೊಳ್ಳುವ ಮೂಲಕ “ಪಟಾಕಿ’ ಇಷ್ಟವಾಗುತ್ತದೆ. ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳನ್ನು ಟ್ರಿಮ್ ಮಾಡುವ ಮೂಲಕ ಚಿತ್ರದ ವೇಗವನ್ನು ಮತ್ತಷ್ಟು ಹೆಚ್ಚಿಸುವ ಅವಕಾಶ ನಿರ್ದೇಶಕರಿಗಿತ್ತು. ನಾಯಕ ಗಣೇಶ್‌ಗೆ ಆ್ಯಕ್ಷನ್ ಚಿತ್ರ, ಪೊಲೀಸ್ ಪಾತ್ರ ಒಗ್ಗುತ್ತಾ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಆ ಎಲ್ಲಾ ಪ್ರಶ್ನೆಗಳಿಗೆ ಗಣೇಶ್ ತಮ್ಮ ನಟನೆಯ ಮೂಲಕ ಉತ್ತರ ಕೊಟ್ಟಿದ್ದಾರೆ. ಅವರಿಲ್ಲಿ ಮೂರು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಲವರ್‌ಬಾಯ್, ಪಕ್ಕಾ ಲೋಕಲ್ ಎಸಿಪಿ ಹಾಗೂ ಸ್ಟ್ರಿಕ್ಟ್ ಆಫೀಸರ್ ಎಸಿಪಿ ಸೂರ್ಯ. ಈ ಮೂರು ಶೇಡ್‌ಗಳಲ್ಲಿ ಗಣೇಶ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ತಂದೆ-ಮಗನ ನಡುವಿನ ಕೆಲವು ಸನ್ನಿವೇಶಗಳಲ್ಲಿ ಗಣೇಶ್ ಹೆಚ್ಚು ಇಷ್ಟವಾಗುತ್ತಾರೆ. ನಾಯಕಿ ರನ್ಯಾಗೆ ಇಲ್ಲಿ ಹೆಚ್ಚು ಸ್ಕೋಪ್ ಇಲ್ಲ. ಗಣೇಶ್ ತಂದೆಯಾಗಿ, “ಡ್ನೂಟಿ ಫಸ್ಟ್ ಫ್ಯಾಮಿಲಿ ನೆಕ್ಸ್ಟ್’ ಎಂಬ ಖಡಕ್ ಪೊಲೀಸ್ ಆಫೀಸರ್ ಆಗಿ ಸಾಯಿಕುಮಾರ್ ಮಿಂಚಿದ್ದಾರೆ.
ಮಾತು ಬಾರದ ತಂಗಿಯಾಗಿ ಪ್ರಿಯಾಂಕಾ ತಮ್ಮ ಭಾವನೆಗಳ ಮೂಲಕ ಪಾತ್ರದ ತೂಕ ಹೆಚ್ಚಿಸಿದ್ದಾರೆ. ಉಳಿದಂತೆ ಆಶಿಶ್ ವಿದ್ಯಾರ್ಥಿ, ಧರ್ಮ, ಸಾಧುಕೋಕಿಲ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಡು ಹಾಗೂ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಪಟಾಕಿ
ನಿರ್ಮಾಣ: ಎಸ್.ವಿ.ಬಾಬು
ನಿರ್ದೇಶನ: ಮಂಜು ಸ್ವರಾಜ್
ತಾರಾಬಳಗ: ಗಣೇಶ್, ರನ್ಯಾ, ಸಾಯಿಕುಮಾರ್, ಪ್ರಿಯಾಂಕಾ, ಸಾಧುಕೋಕಿಲ, ಆಶಿಶ್ ವಿದ್ಯಾರ್ಥಿ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.