ಹುಡ್ಗಿರಂದ್ರೆ ಡೇಂಜರಪ್ಪೋ ಹುಷಾರ್ರಾಗಿರಪ್ಪೋ
Team Udayavani, Jul 14, 2018, 11:08 AM IST
“ಬಾಯ್ಸ ಹುಡುಗಿಯರಿದ್ದಾರೆ ಎಚ್ಚರಿಕೆ …’ ಆ ನಾಲ್ಕು ಜನ ಹುಡುಗಿಯರು ಕೋರ್ಟ್ ಆವರಣದಲ್ಲಿ ನಿಂತು ಒಕ್ಕೊರಲಿನಿಂದ ಈ ಡೈಲಾಗ್ ಹೇಳುತ್ತಿದ್ದಂತೆಯೇ ಚಿತ್ರವೂ ಅಂತ್ಯವಾಗುತ್ತೆ. ಈ ಡೈಲಾಗ್ ಹೇಳುವ ಮೊದಲು ಆ ನಾಲ್ವರೂ ಒಂದು ಕೊಲೆಗೆ ಕಾರಣರಾಗಿರುತ್ತಾರೆ. ಆ ಕೊಲೆಯ ಸುತ್ತ ನಡೆಯೋ ಕಥೆಯೇ “ಎಂಎಂಸಿಹೆಚ್’. ಇದು ಪಕ್ಕಾ ಹುಡುಗಿಯರ ಕಥೆ ಮತ್ತು ವ್ಯಥೆ. ಒಂದು ಸಿಂಪಲ್ ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಆ ತಿರುವುಗಳೇ ಚಿತ್ರದ ಜೀವಾಳ. ಹಾಗಂತ, ದೊಡ್ಡದೇನೋ ಪವಾಡವಿದೆ ಅಂದುಕೊಳ್ಳುವಂತೂ ಇಲ್ಲ.
ಆದರೆ, ಒಂದು ಕೊಲೆಯ ರಹಸ್ಯದ ಹಿಂದಿನ ಸತ್ಯವನ್ನು ಹೇಳುವ ಮತ್ತು ತೋರಿಸುವ ರೀತಿ ನೋಡುಗರನ್ನು ತಕ್ಕಮಟ್ಟಿಗೆ ಸಮಾಧಾನಿಸುತ್ತೆ. ನಾಲ್ವರು ನಾಯಕಿಯರನ್ನಿಟ್ಟುಕೊಂಡು ಕೊಲೆಯ ವಿಷಯವೊಂದನ್ನು ಕಟ್ಟಿಕೊಂಡು ರೋಚಕವಾಗಿಯಲ್ಲದಿದ್ದರೂ, ಒಂದಷ್ಟರ ಮಟ್ಟಿಗೆ ಮುಂದೇನಾಗಬಹುದು ಎಂಬ ಸಣ್ಣ ಕುತೂಹಲಕ್ಕೆ ಕಾರಣವಾಗುವ ಅಂಶವನ್ನು ಮೆಚ್ಚಲೇಬೇಕು. ಮೊದಲರ್ಧ ಕೊಲೆ ತನಿಖೆಯ ಸುತ್ತವೇ ಕಥೆ ಸುತ್ತುತ್ತದೆ. ಅದನ್ನು ಇನ್ನಷ್ಟು ರೋಚಕವಾಗಿಸುವ ಸಾಧ್ಯತೆಯೂ ಇತ್ತು.
ಆ ತನಿಖೆ ಕೆಲವೆಡೆ ಜೊಳ್ಳು ಅನಿಸುವುದರ ಜೊತೆಗೆ ನೋಡುಗನ ತಲೆಯೂ ಗಿರ್ರ ಅನ್ನುವ ಹೊತ್ತಿಗೆ ಅಲ್ಲೊಂದು ಟ್ವಿಸ್ಟ್ ಎದುರಾಗಿ ಮತ್ತೂಂದು ಟೆಸ್ಟ್‌ಗೆ ಕಾರಣವಾಗುತ್ತೆ. ತಾಳ್ಮೆಯಿಂದ ಆ ಟೆಸ್ಟ್ ಅರ್ಥ ಮಾಡಿಕೊಂಡರೆ ಮೇಘ, ಮಾಲ, ಛಾಯ ಮತ್ತು ಹರ್ಷಿಕಾ ಅವರ ಮುದ್ದು ಮುಖದ ಅಸಲಿ ನೋಟವೇನೆಂಬುದು ಗೊತ್ತಾಗುತ್ತದೆ. ಮಂಗಳೂರು, ಮೈಸೂರು, ಚಾಮರಾಜನಗರ ಮತ್ತು ಹಾಸನ ಈ ನಗರಗಳಿಂದ ಓದಲೆಂದೇ ಕಾಲೇಜೊಂದಕ್ಕೆ ಮೇಘ, ಮಾಲ, ಛಾಯಾ ಮತ್ತು ಹರ್ಷಿಕಾ ಸೇರುತ್ತಾರೆ.
ಸ್ನೇಹಕ್ಕೂ ಸೈ, ಆ ಸ್ನೇಹಕ್ಕೆ ತೊಂದರೆಯಾದರೆ, ಹೊಡೆದಾಡೋಕ್ಕೂ ಸೈ ಎಂಬ ಗೆಳೆತನ ಅವರದು. ಈ ಪೈಕಿ ಹರ್ಷಿಕಾ ತನ್ನ ಮೂವರು ಗೆಳತಿಯರಿಗೆ ಗೊತ್ತಾಗದಂತೆ, ಕಾಲೇಜ್ ಎದುರಿಗಿದ್ದ ಬೇಕರಿ ಹುಡುಗನೊಬ್ಬನ ಪ್ರೀತಿಯ ಬಲೆಗೆ ಬೀಳುತ್ತಾಳೆ. ಕೊನೆಗೆ ಅವನಿಂದ ಮೋಸ ಹೋಗುತ್ತಾಳೆ. ಮೋಸ ಮಾಡಿದ ಹುಡುಗ ಆ ಗೆಳತಿಯರ ಮನವೊಲಿಕೆಗೆ ಬಗ್ಗಲ್ಲ. ಅಷ್ಟಾದರೂ, ಅವನ “ಕರಾಳ’ ಮುಖ ಬಯಲಾಗುತ್ತೆ. ಆಗ ಅಲ್ಲೊಂದು ಘಟನೆ ನಡೆದು ಹೋಗುತ್ತೆ. ಅದೇ ಚಿತ್ರದ ಟ್ವಿಸ್ಟು.
ಆ ಟ್ವಿಸ್ಟು ತಿಳಿಯೋ ಹಂಬಲವಿದ್ದರೆ, ನಾಲ್ವರು ಪ್ರಾಣ ಸ್ನೇಹಿತೆಯರ ಹೋರಾಟ, ಹಾರಾಟ, ಚೀರಾಟವನ್ನೊಮ್ಮೆ ನೋಡಿ, ಕೇಳಿಬರಬಹುದು. ಕೊನೆಯ ಕೋರ್ಟ್ ಒಳಗಿನ ಹತ್ತು ನಿಮಿಷದ ವಾದ, ವಿವಾದ ಆ ನಾಲ್ವರು ಹುಡುಗಿಯರ “ಭಯಂಕರ’ ಮಾತುಗಳಲ್ಲಿ ಸಮಾಜ, ಕಾನೂನು, ವ್ಯವಸ್ಥೆ ಎಲ್ಲವೂ ಎಷ್ಟರಮಟ್ಟಿಗೆ ಸರಿ, ತಪ್ಪು ಅನ್ನೋ ಅಂಶ ತಿಳಿಯುವುದಕ್ಕಾದರೂ ಎಂಎಂಸಿಹೆಚ್ ನೋಡಬಹುದು. “ಎಂಎಂಸಿಎಚ್’ ಚಿತ್ರದಲ್ಲಿ ಗಟ್ಟಿ ಸ್ನೇಹವಿದೆ, ಲವ್ವಿದೆ, ನೋವಿದೆ, ಆಕ್ರೋಶವಿದೆ, ಅನುಕಂಪವೂ ಇದೆ, ಅನ್ಯಾಯ ವಿರುದ್ಧದ ಧ್ವನಿಯೂ ಇದೆ.
ಇವೆಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ, ತೂಗಿರುವುದರಿಂದ ಸ್ವಲ್ಪ ಅರಗಿಸಿಕೊಳ್ಳುವುದು ಕಷ್ಟ. ಆದರೂ, ಹೆಣ್‌ಮನಸ್ಸಿನ ಭಾವನೆ, ಕಲ್ಪನೆ, ವೇದನೆ, ರೋಧನೆ ಇತ್ಯಾದಿ ವಿಷಯಗಳು ತಕ್ಕಮಟ್ಟಿಗೆ ನೋಡುಗರನ್ನು ತಟ್ಟುತ್ತವೆ. ಇದರಲ್ಲಿ ಚಿತ್ರದಲ್ಲೊಂದು ಮೈನಸ್ ಪಾಯಿಂಟ್ ಸಹ ಇದೆ. ಪ್ರಮುಖವಾಗಿ ಹುಡುಗಿಯರು ಎರ್ರಾಬರ್ರಿ ಹೊಡೆದಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ಎಂಬ ಕಾರಣಕ್ಕೆ ಅದನ್ನು ಒಪ್ಪಲೇಬೇಕು.
ಕೊಲೆಯ ಮೂಲಕ ಕಥೆ ಬಿಚ್ಚಿಕೊಳ್ಳುವುದರಿಂದ ಆರಂಭದಲ್ಲಿ ಸಣ್ಣ ಕುತೂಹಲ ಮೂಡುತ್ತಾದರೂ, ಆ ಕುತೂಹಲ ಬಹಳ ಹೊತ್ತು ನಿಲ್ಲೋದಿಲ್ಲ. ಒಂದು ಕೊಲೆಯ ಸಸ್ಪೆನ್ಸ್ ಕಥೆ ಸಾಂಗವಾಗಿ ನಡೆಯುವ ಮಧ್ಯೆ ವಿನಾಕಾರಣ ಹಾಡೊಂದು ಕಾಣಸಿಕೊಂಡು ಇರುವ ಕುತೂಹಲಕ್ಕೂ ತಣ್ಣೀರೆರಚಿಬಿಡುತ್ತೆ. ಅದರೊಂದಿಗೆ ಸಣ್ಣಪುಟ್ಟ ಎರರ್‌ಗಳು ಆಗೊಮ್ಮೆ ಕಿರಿಕಿರಿಯನ್ನುಂಟು ಮಾಡುತ್ತವೆ. ಅದರಾಚೆಗೂ ಒಂದು ಕೊಲೆಯ ಹಿನ್ನೆಲೆಯನ್ನು ತೋರಿಸಿರುವ ರೀತಿ ಮೆಚ್ಚುವಂತಿದೆ.
ಮೇಘನಾ ರಾಜ್ ಗೆಳತಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡುವಂತಹ ಪಾತ್ರದಲ್ಲಿ ಗಮನಸೆಳೆದರೆ, ಸಂಯುಕ್ತ ಹೊರನಾಡು ಸಿಕ್ಕ ಪಾತ್ರವನ್ನು ಸರಿದೂಗಿಸಿದ್ದಾರೆ. ಪ್ರಥಮ ಅವರ ಡ್ಯಾನ್ಸು, ಫೈಟು ನೋಡಿದರೆ ಪ್ರಥಮ ಬಹುಮಾನ ಕೊಡಬೇಕೆನಿಸುವುದು ನಿಜ. ರಗಡ್ ಹುಡುಗಿಯಾಗಿ ಎದುರಾಳಿಯನ್ನು ಎರ್ರಾಬಿರ್ರಿ ಎಳೆದಾಡುವಲ್ಲಿ ಯಶಸ್ವಿ. ಇನ್ನು, ದೀಪ್ತಿ ಕೂಡ ನಿರ್ದೇಶಕರು ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿರುವುದು ಕಾಣುತ್ತೆ. ರಾಗಿಣಿಯನ್ನು ಪೊಲೀಸ್ ಅಧಿಕಾರಿಯಾಗಿ ಒಪ್ಪೋದು ಕಷ್ಟ. ಉತ್ತರ ಕರ್ನಾಟಕ ಖಡಕ್ ಡೈಲಾಗ್‌ಗಳೇನೋ ಅವರಿಂದ ಬರುತ್ತವೆ.
ಆದರೆ, ನಟನೆಯಲ್ಲಿ ಆ ಪೊಲೀಸ್ ಖದರ್ ಇಲ್ಲ. ಪ್ರೇಮಿಯಾಗಿ ರಘು ಭಟ್ ಪರವಾಗಿಲ್ಲ. ಮೋಸ ಮಾಡೋ ಹುಡುಗನಾಗಿ ಯುವರಾಜ್ ತಕ್ಕಮಟ್ಟಿಗೆ ಗಮನಸೆಳೆಯುತ್ತಾರೆ. ಉಳಿದಂತೆ ಪದ್ಮವಾಸಂತಿ, ಗೋಪಾಲಕೃಷ್ಣ ದೇಶಪಾಂಡೆ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಶ್ರೀಧರ್ ವಿ. ಸಂಭ್ರಮ್ ಸಂಗೀತದ ಒಂದು ಹಾಡು ಬಿಟ್ಟರೆ ಬೇರೆ ಹಾಡು ಬಗ್ಗೆ ಹೇಳುವಂತಿಲ್ಲ. ಹಿನ್ನೆಲೆ ಸಂಗೀತ ಅಷ್ಟೇನೂ ಪೂರಕವಾಗಿಲ್ಲ. ನಾಗೇಶ್ ವಿ.ಆಚಾರ್ಯ ಅವರ ಛಾಯಾಗ್ರಹಣದಲ್ಲಿ ಮೇಘ, ಮಾಲ, ಛಾಯಾ, ಹರ್ಷಿಕಾರ ಸೊಗಸಿದೆ.
ಚಿತ್ರ: ಎಂಎಂಸಿಹೆಚ್
ನಿರ್ದೇಶನ: ಮುಸ್ಸಂಜೆ ಮಹೇಶ್
ನಿರ್ಮಾಣ: ಎಸ್.ಪುರುಷೋತ್ತಮ್, ಜಾನಕಿರಾಮ್, ಎಂ. ಅರವಿಂದ್
ತಾರಾಗಣ: ರಾಗಿಣಿ, ಮೇಘನಾರಾಜ್, ಸಂಯುಕ್ತ ಹೊರನಾಡು, ದೀಪ್ತಿ, ಪ್ರಥಮ, ಯುವರಾಜ್,ರಘುಭಟ್, ಪದ್ಮವಾಸಂತಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.