ಮಾನವ ಸಂಬಂಧಗಳ ಚಿಂತನ-ಮಂಥನ
Team Udayavani, Feb 18, 2017, 11:55 AM IST
“ಅವನಿಗೆ ಮ್ಯೂಸಿಕ್ ಅಂದ್ರೆ ಇಷ್ಟ. ಅದು ಅವನಪ್ಪನಿಗೆ ಇಷ್ಟವಿಲ್ಲ. ಅವನಪ್ಪನಿಗೆ ಮಗ ಬಿಜಿನೆಸ್ ನೋಡಿಕೊಂಡಿರಬೇಕೆಂಬುದು ಇಷ್ಟ. ಆದರೆ, ಮಗನಿಗೆ ಹೆಚ್ಚು ಓದಿ ವಿದೇಶಕ್ಕೆ ಹೋಗಬೇಕೆಂಬ ಆಸೆ. ಮಗನಿಗೆ ಎಂಜಿನಿಯರಿಂಗ್ ಓದುವ ಬಯಕೆ, ಅಪ್ಪನಿಗೆ ಕಾಮರ್ಸ್ ಓದಿಸುವ ಹೆಬ್ಬಯಕೆ…’ ಇದರ ನಡುವೆ ಎಲ್ಲೋ ಒಂದು ಕಡೆ ಅರಳುವ ಪ್ರೀತಿ, ಕಾಡುವ ಭೀತಿ, ಮಾನಸಿಕ ತುಮುಲ, ಸಂಬಂಧ, ಸಂವೇದನೆ, ಸಂಘರ್ಷಗಳ ಒಟ್ಟಾರೆ ಪಾಕವೇ “ಮನ ಮಂಥನ’.
ಒಂದು ದೊಡ್ಡ ಗ್ಯಾಪ್ ಬಳಿಕ ಬಂದರೂ, ನಿರ್ದೇಶಕ ಸುರೇಶ್ ಹೆಬ್ಳೀಕರ್‌ಗೆ ಒಂದು ಸ್ಪಷ್ಟತೆ ಇದೆ. ಕಥೆಯ ಆಯ್ಕೆ, ನಿರೂಪಣೆ, ಯುವಕರಲ್ಲಿರುವ ತಳಮಳ, ಒತ್ತಡಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿಗಧಿತ ಅವಧಿಯಲ್ಲಿ ಏನೆಲ್ಲಾ ಹೇಳಬೇಕು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಒಂದು “ಸಿಂಪಲ್’ ಸಿನಿಮಾವನ್ನು ಮುಂದಿಟ್ಟಿದ್ದಾರೆ. ಹಾಗಂತ, ಅವರ “ಮಂಥನ’ದಲ್ಲಿ ವಿಶೇಷತೆ ಹುಡುಕುವಂತಿಲ್ಲ. ಒಂದು ಸಣ್ಣ ಎಳೆಯನ್ನೇ ಅಂದವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಸಮಾಧಾನಕರ.
ಹಾಗೆ ನೋಡಿದರೆ, ಕಥೆಯಲ್ಲಿ ಹೊಸತನವಿಲ್ಲ. ಆದರೆ, ನಿರೂಪಣೆಯಲ್ಲಿ ಹೆಬ್ಳೀಕರ್‌ತನ ಮಿಸ್ಸಾಗಿಲ್ಲ. ಮೊದಲರ್ಧ ಸ್ವಲ್ಪ ನಿಧಾನ ಎನಿಸಿದರೂ, ದ್ವಿತಿಯಾರ್ಧ ಸಣ್ಣ ತಿರುವಿನೊಂದಿಗೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಸಿನಿಮಾದೊಳಗಿನ ಮಾತು, ಕಾಣುವ ತಾಣ ಇಷ್ಟವಾಗದೇ ಇರದು. ಆದರೆ, ಅವುಗಳನ್ನು ಅಷ್ಟೇ ವೇಗವಾಗಿ ತೋರಿಸಬೇಕು ಎಂಬ ಧಾವಂತವೋ ಏನೋ, ಸಂಕಲನಕಾರನ “ಕತ್ತರಿ’ಯಲ್ಲಿ ಒಂದಷ್ಟು ಎಡವಟ್ಟುಗಳಾಗಿವೆ. ಅದನ್ನು ಹೊರತುಪಡಿಸಿದರೆ, “ಮಂಥನ’ದೊಳಗಿನ ತಪ್ಪು ಹುಡುಕುವಂತಿಲ್ಲ.
ಇದು ನೈಜ ಘಟನೆಯ ಎಳೆಯೊಂದನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾದ್ದರಿಂದ ಇಲ್ಲಿ ಎಲ್ಲವೂ ಕಥೆಗೆ ಪೂರಕ ಎಂಬಂತೆಯೇ ಭಾಸವಾಗುತ್ತೆ. ಮನುಷ್ಯನ ವಿಚಾರ, ನಡತೆ ಎಲ್ಲವೂ ಹಂತ ಹಂತವಾಗಿ ಹೇಗೆ ಮಾರ್ಪಾಡಾಗುತ್ತಾ ಹೋಗುತ್ತವೆ ಎಂಬುದು ಚಿತ್ರದ ಗುಟ್ಟು. ಹಿರಿಯರ ವಿಷಯ ಮತ್ತು ಆಶಯಗಳೇ ಬೇರೆ, ಯುವಕರ ಬಯಕೆ, ಕನಸು ಹಾಗೂ ತಲ್ಲಣಗಳೇ ಬೇರೆ. ಇವೆರೆಡರ ನಡುವೆ ಸಣ್ಣ ಘರ್ಷಣೆ ಉಂಟಾದಾಗ, ಮಾನವ ಸಂಬಂಧಗಳ ಮೇಲಾಗುವ ಪರಿಣಾಮವನ್ನು ಎಂಥದ್ದು ಎಂಬುದನ್ನಿಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.
ಅದು ಚಿತ್ರದ ಹೈಲೆಟ್‌ಗಳಲ್ಲೊಂದು. ಬೆರಳೆಣಿಕೆಯ ಪಾತ್ರಗಳೇ ತುಂಬಿರುವ ಈ ಚಿತ್ರದಲ್ಲಿ ವಸ್ತುಸ್ಥಿತಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಮಾನವ ಸಂಬಂಧಗಳ ಮೇಲಿನ ನಂಬಿಕೆ ಹುಸಿಯಾದಾಗ, ಅದು ಮಾನಸಿಕವಾಗಿ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಅದರೊಂದಿಗೆ, ಸಣ್ಣ ತಪ್ಪುಗಳು ಮನವರಿಕೆಯಾದಾಗ ಬದುಕಿನ ಏರಿಳಿತಗಳ ಪಾತ್ರವೆಷ್ಟು ಎಂಬುದನ್ನು ಅರ್ಥಮಾಡಿಸಲಾಗಿದೆ. ಒಂದೊಮ್ಮೆ ನಂಬಿಕೆಯೇ ದೂರವಾದಾಗ, ಮನುಷ್ಯ ಹೇಗೆ ಮನೋಸ್ಥೈರ್ಯ ಕಳೆದುಕೊಳ್ಳುತ್ತಾನೆ ಎಂಬುದನ್ನು ಹೇಳಲಾಗಿದೆ.
ಉಳಿದಂತೆ, ಇಲ್ಲಿ ಅಬ್ಬರದ ಡೈಲಾಗ್‌ಗಳಿಲ್ಲ, ಹೊಡಿ-ಬಡಿ ಎಂಬ ಸನ್ನಿವೇಶವೂ ಇಲ್ಲ, ನಾಯಕನ ಹಿಂದೆ ನಾಯಕಿ ಸುತ್ತುವ ಹಾಡುಗಳೂ ಕಾಣಸಿಗಲ್ಲ. ಆದರೂ, ವಾಸ್ತವತೆಗೆ ಹತ್ತಿರ ಎನಿಸುವ ಅಂಶಗಳು ಒಂದಷ್ಟು ಭಾವುಕತೆಗೆ ದೂಡುತ್ತವೆ. ಹಾಗಾಗಿ “ಮಂಥನ’ ಒಂದರ್ಥದಲ್ಲಿ ಮನಸ್ಸಿನ ಸಮಸ್ಯೆಗೆ ಉತ್ತರವಾಗಿಯೂ ನಿಲ್ಲುತ್ತದೆ. ವಿನಾಕಾರಣ ಒತ್ತಡ ಎಂಬುದು ಮಾನಸಿಕ ಹಿಂಸೆಗೆ ಹೇಗೆ ಕಾರಣವಾಗುತ್ತೆ ಎಂಬುದನ್ನಿಲ್ಲಿ ಅತೀ ಸೂಕ್ಷ್ಮವಾಗಿ ಹೇಳಲಾಗಿದೆ. ಎಷ್ಟೇ ಮಾನಸಿಕ ತೊಳಲಾಟಗಳಿದ್ದರೂ ಭಾವನಾತ್ಮಕ ಸಂಬಂಧ ಅದನ್ನು ದೂರ ಮಾಡಬಲ್ಲದು ಎಂಬುದೇ “ಮಂಥನ’ದ ತಿರುಳು.
ಇಲ್ಲೂ ಅಪ್ಪ-ಮಗನ ಗಾಢವಾದ ಸಂಬಂಧವಿದೆ, ತಾಯಿ-ಮಗಳ ವಾತ್ಸಲ್ಯವೂ ಇದೆ. ಹುಡುಗ, ಹುಡುಗಿ ನಡುವಿನ ಚಿಗುರು ಪ್ರೀತಿಯ ನಿರ್ಬಂಧಕ್ಕೆ ಅವರವರ ಅಪ್ಪ, ಅಮ್ಮನ ಮತ್ತೂಂದು “ಸಂಬಂಧ’ ಕಾರಣವಾಗುತ್ತೆ. ಇದು ಎಷ್ಟರ ಮಟ್ಟಿಗೆ ಅವರ ಮೇಲೆ ಪರಿಣಾಮ ಬೀರುತ್ತೆ ಎಂಬ ಬಗ್ಗೆ ತಿಳಿಯಬೇಕಾದರೆ, ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ. ಹೆಬ್ಳೀಕರ್ ಶೈಲಿಯ ಸಿನಿಮಾ ಇಷ್ಟಪಡೋರಿಗೆ, ಮಲೆನಾಡಿನ ಸೌಂದರ್ಯ ಸವಿಯಬೇಕೆನ್ನುವವರಿಗೆ ಈ ರೀತಿಯ ಪ್ರಯತ್ನ ಸಾರ್ಥಕ ಎನಿಸಬಹುದೇನೋ?
ಕಿರಣ್ ರಜಪೂತ್ ಹಾಗೂ ಅರ್ಪಿತ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ರಮೇಶ್ ಭಟ್ ಪಾತ್ರದಲ್ಲಿ ಜೀವಿಸಿದ್ದಾರೆ. ಸಂಗೀತ ಅಸಹಾಯಕ ಅಮ್ಮನಾಗಿ ಗಮನಸೆಳೆಯುತ್ತಾರೆ. “ಸಿದ್ಲಿಂಗು’ ಶ್ರೀಧರ್ ಕಾಣಿಸುವಷ್ಟು ಕಾಲ ಇಷ್ಟವಾಗುತ್ತಾರೆ. ಉಳಿದ ಪಾತ್ರಗಳಾವೂ ಗಮನಸೆಳೆಯುವುದಿಲ್ಲ. ಪ್ರವೀಣ್ ಡಿ.ರಾವ್ ಸಂಗೀತ, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಪಿ. ರಾಜನ್ ಕ್ಯಾಮೆರಾದಲ್ಲಿ ಮಲೆನಾಡ ಸೊಬಗಿದೆ.
ಚಿತ್ರ: ಮನ ಮಂಥನ
ನಿರ್ಮಾಣ: ಡಾ.ಕೆ.ಎ. ಅಶೋಕ್ ಪೈ
ನಿರ್ದೇಶನ: ಸುರೇಶ್ ಹೆಬ್ಳೀಕರ್
ತಾರಾಗಣ: ಕಿರಣ್ ರಜಪೂತ್, ಅರ್ಪಿತ, ರಮೇಶ್ ಭಟ್, ಸಂಗೀತ, ಕೆ.ಎಸ್.ಶ್ರೀಧರ್, ಸುರೇಶ್ ಹೆಬ್ಳೀಕರ್, ಸುಮನ್ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.