ಪತಿ ಪತ್ನಿ ಮತ್ತು ಅವನು!
ಚಿತ್ರ ವಿಮರ್ಶೆ
Team Udayavani, May 11, 2019, 3:00 AM IST
“ನನಗೆ ಡೈವೋರ್ಸ್ ಓಕೆ ಆದರೆ, ಸಾಯಿಸೋಕೆ ಇಷ್ಟ ಇಲ್ಲ…’ ಈ ಡೈಲಾಗ್ ಬರುವ ಹೊತ್ತಿಗೆ ಅಲ್ಲೊಂದು ಸಂಚು ನಡೆದಿರುತ್ತೆ. ಇದನ್ನು ಯಾರು, ಯಾರಿಗೆ, ಯಾಕೆ ಹೇಳಿದರು ಅನ್ನೋದೇ ಕುತೂಹಲ. ಹಾಗಂತ, ಆ ಕುತೂಹಲ ಬಹಳ ಸಮಯ ಉಳಿಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಕನ್ನಡಕ್ಕೆ ಈ ಕಥೆ ಹೊಸದಲ್ಲ. ಒಂದಷ್ಟು ಸಣ್ಣಪುಟ್ಟ ತಿರುವುಗಳೊಂದಿಗೆ ನೋಡುಗರನ್ನು ಕೂರಿಸುವ ಪ್ರಯತ್ನ ಮಾಡಿರುವುದೇ ಸಮಾಧಾನದ ವಿಷಯ.
ಅದರೊಂದಿಗೆ ಕೆಲವು ಕಡೆ ತಾಳ್ಮೆ ಕಳೆದುಕೊಳ್ಳುವಂತಹ ದೃಶ್ಯಗಳೂ ಕಾಣಸಿಗುತ್ತವೆ. ಚಿತ್ರದ ಬಗ್ಗೆ ಸಿಂಪಲ್ ಆಗಿ ಹೇಳುವುದಾದರೆ, ಪತಿ, ಪತ್ನಿ ಮತ್ತು ಅವನು. ಇಷ್ಟು ಹೇಳಿದ ಮೇಲೆ, ಗಂಡ ಹೆಂಡತಿ ನಡುವೆ ಎಂಟ್ರಿಯಾಗುವ ವ್ಯಕ್ತಿಯಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದೇ ಕಥೆ. ಇಲ್ಲಿ ಪ್ರೀತಿ, ಮೋಸ, ದ್ವೇಷ, ಸಂಬಂಧ, ಅನುಬಂಧ ಇತ್ಯಾದಿ ವಿಷಯಗಳಿವೆ.
ಮೊದಲರ್ಧ ಮಂದಗತಿಯಲ್ಲಿ ಸಾಗುವ ಚಿತ್ರ, ದ್ವಿತಿಯಾರ್ಧ ಕೊಂಚ ವೇಗ ಪಡೆದುಕೊಳ್ಳುತ್ತೆ. ಸಣ್ಣ ಸಣ್ಣ ತಪ್ಪುಗಳನ್ನು ಬದಿಗೊತ್ತಿ ನೋಡುವುದಾದರೆ, ಚಿತ್ರದಲ್ಲಿ ಹೊಸತನ ಮತ್ತು ಚುರುಕುತನವಿದೆ. ಆ ಹೊಸತನಕ್ಕೆ ಮೆರುಗು ನೀಡಿರುವುದು ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಸಿನಿಮಾ ನೋಡುವಾಗ, ಎಲ್ಲೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತೆ.
ಜೊತೆಗೆ ಒಂದು ಮನೆಯಲ್ಲೇ ಅರ್ಧ ಸಿನಿಮಾ ಮಾಡಿ ಮುಗಿಸಿರುವ ನಿರ್ದೇಶಕರ ಜಾಣತನವೂ ಇಲ್ಲಿ ಪ್ಲಸ್ ಆಗಿದೆ. ಇಂತಹ ಕಥೆಗೆ ಬೇಕಾಗಿರುವುದೇ ಅಂತಹ ಮನೆಯ ಲೊಕೇಷನ್. ಹಾಗಾಗಿ , ಆ ಮನೆ ಕೂಡ ಇಲ್ಲೊಂದು ಪ್ರಮುಖ ಪಾತ್ರವೆಂದರೆ ತಪ್ಪಿಲ್ಲ. ಇಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಬಹುದು. ಆದರೆ, ಕೊಲೆಯಾದ ವ್ಯಕ್ತಿಯನ್ನು ಮಣ್ಣಿನೊಳಗೆ ಹೂತು ಹಾಕಿ ಸಂಜೆ ಕಳೆದರೂ ಅವನು ಆ ಗೋರಿಯಿಂದ ಮೇಲೆದ್ದು ಬರುತ್ತಾನೆ ಅನ್ನುವುದನ್ನು ಸುಲಭವಾಗಿ ಅರಗಿಸಿಕೊಳ್ಳುವುದಕ್ಕಾಗಲ್ಲ.
ಆದರೆ, ನಿರ್ದೇಶಕರ ಕಲ್ಪನೆಯ ಸಿನಿಮಾ ಆಗಿರುವುದರಿಂದ ಸುಮ್ಮನೆ ನೋಡಿಕೊಂಡು ಕೂರಬೇಕು. ಚಿತ್ರದಲ್ಲಿ ಬೆರಳೆಣಿಕೆಯಷ್ಟು ತಿರುವುಗಳಿವೆ. ಆದರೆ, ಅವುಗಳನ್ನು ಸರಿಯಾಗಿ ಅಳವಡಿಸಿಲ್ಲ ಎಂದು ದೂರಿದರೆ ನಿರ್ದೇಶಕರು ಬೇಸರಿಸಿಕೊಳ್ಳಬಾರದು. ಆದರೂ, ದ್ವಿತಿಯಾರ್ಧದಲ್ಲಿ ಸಿಗುವ ಟ್ವಿಸ್ಟ್‌ಗಳು ಸಿನಿಮಾಗೆ ಸಿಗುವ ಬಲ ಎನ್ನುವುದನ್ನು ಒಪ್ಪಬೇಕು.
ಗಂಡ ಹೆಂಡತಿ ಮಧ್ಯೆ ಬರುವ ಆ ವ್ಯಕ್ತಿ ಯಾರು? ಅಲ್ಲಿಂದ ಸಿನಿಮಾ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಬಹುದು. ಮೊದಲೇ ಹೇಳಿದಂತೆ ಇದು ಸರಳ ಕಥೆ. ವಿದೇಶದಲ್ಲಿ ದುಡಿದು ಇಂಡಿಯಾಗೆ ಹಿಂದಿರುಗಿರುವ ನಾಯಕನದು ಲವ್‌ಮ್ಯಾರೇಜ್. ಅವನಿಗೆ ತನ್ನ ಹೆಂಡತಿ ಮತ್ತು ತಾನು ಕಟ್ಟಿಸಿರುವ ಮನೆ ಅಂದರೆ ಎಲ್ಲಿಲ್ಲದ ಪ್ರೀತಿ.
ಅವನ ಹೆಂಡತಿಗೆ ಅವನೆಂದರೆ ಪ್ರೀತಿ ಅಷ್ಟಕ್ಕಷ್ಟೇ. ಅವನು ಕಟ್ಟಿಸಿರುವ ಮನೆ ಮಾರಿ, ವಿದೇಶಕ್ಕೆ ಹೋಗಿ ನೆಲೆಸಬೇಕೆಂಬ ಆಸೆ. ಆದರೆ, ಅವನಿಗೆ ಇಷ್ಟವಿಲ್ಲ. ಗಂಡನಿಗೆ ಸುಳ್ಳು ಹೇಳಿ ತನ್ನ ಫ್ಯಾಮಿಲಿ ಡಾಕ್ಟರ್ ಜೊತೆ ಸಂಬಂಧ ಇಟ್ಟುಕೊಂಡಿರುವ ಆಕೆಗೆ ಗಂಡನಿಂದ ದೂರವಾಗಬೇಕೆಂಬ ಯೋಚನೆ. ಆ ಯೋಚನೆಗೆ ಸಾಥ್ ಕೊಡುವ ಆ ಡಾಕ್ಟರ್ ಅವಳ ಗಂಡನನ್ನೇ ಕೊಲೆ ಮಾಡಿ, ಆಸ್ತಿ ಮಾರಿ ದೊಡ್ಡದ್ದೊಂದು ಆಸ್ಪತ್ರೆ ಕಟ್ಟಿಸಿ, ರಾಯಲ್ ಲೈಫ್ ಕಳೆಯಬೇಕೆಂಬ ದುರಾಸೆಯನ್ನು ತೋರಿಸುತ್ತಾನೆ.
ಅವನ ಮಾತಿಗೆ ಮೊದಲು ಅವಳು ಸಮ್ಮತಿಸದಿದ್ದರೂ, ಪರಿಸ್ಥಿತಿಯೇ ಅವಳಿಂದ ಗಂಡನನ್ನು ಕೊಲೆ ಮಾಡಿಸಿಬಿಡುತ್ತೆ. ಕೊನೆಗೆ ಅದೊಂದು ಹೃದಯಾಘಾತದ ಸಾವು ಎಂದು ಬಿಂಬಿಸಿ, ಯಾರಿಗೂ ಅನುಮಾನ ಬರದಂತೆ ಮಣ್ಣಲ್ಲಿ ಹೂತು ಹಾಕುತ್ತಾರೆ. ಆದರೆ, ಅವರಂದುಕೊಂಡಿದ್ದು ಯಾವುದೂ ಆಗೋದಿಲ್ಲ. ಕಾರಣ, ಪತಿ ಆ ಗೋರಿಯಿಂದ ಎದ್ದು ಬರುತ್ತಾನೆ! ಅವನು ಹೇಗೆ ಬಂದ, ಆಮೇಲೆ ಅವರನ್ನು ಏನು ಮಾಡುತ್ತಾನೆ ಎಂಬ ಕುತೂಹಲವೇನಾದರೂ ಮೂಡಿದರೆ “ಖನನ’ದತ್ತ ಮುಖ ಮಾಡಬಹುದು.
ಆರ್ಯವರ್ಧನ್ ಪಾತ್ರಕ್ಕೆ ತಕ್ಕಂತೆ ದೇಹ ಸೌಂದರ್ಯವನ್ನೂ ಹೆಚ್ಚಿಸಿಕೊಂಡಿರುವುದಷ್ಟೇ ಅಲ್ಲ, ನಟನೆಯಲ್ಲೂ ಗಮನಸೆಳೆಯುತ್ತಾರೆ. ಸಣ್ಣಪುಟ್ಟ ತಪ್ಪುಗಳಿದ್ದರೂ ಮೊದಲ ಚಿತ್ರವಾದ್ದರಿಂದ ಅವನ್ನೆಲ್ಲಾ ಪಕ್ಕಕ್ಕೆ ಸರಿಸಬಹುದು. ಇನ್ನು, ಕರಿಷ್ಮಾ ಬರುಹ ಗ್ಲಾಮರ್‌ಗಷ್ಟೇ ಸೀಮಿತ. ಉಳಿದಂತೆ ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಅವರಿಗೆ ಸಿಕ್ಕ ಪಾತ್ರದಲ್ಲಿ ತೂಕವಿದೆ.
ಆದರೆ, ಅದನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲ. ಅವಿನಾಶ್ ಪೊಲೀಸ್ ಅಧಿಕಾರಿಯಾಗಿ ಇಷ್ಟವಾಗುತ್ತಾರೆ. ಉಳಿದಂತೆ ಓಂಪ್ರಕಾಶ್‌ರಾವ್, ಮಹೇಶ್ ಸಿದ್ದು, ಮೋಹನ್ ಜುನೇಜ, ಕೆಂಪೇಗೌಡ ಇರುವಷ್ಟು ಕಾಲ ಕಚಗುಳಿ ಇಡುತ್ತಾರೆ. ಕುನ್ನಿ ಗುಡಿಪಾಟಿ ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ. ರಮೇಶ್ ತಿರುಪತಿ ತಮ್ಮ ಛಾಯಾಗ್ರಹಣದಲ್ಲಿ ಎಲ್ಲರನ್ನೂ ಅಂದಗಾಣಿಸಿದ್ದಾರೆ.
ಚಿತ್ರ: ಖನನ
ನಿರ್ಮಾಣ: ಶ್ರೀನಿವಾಸ್
ನಿರ್ದೇಶನ: ರಾಧ
ತಾರಾಗಣ: ಆರ್ಯವರ್ಧನ್, ಕರಿಷ್ಮಾ ಬರುಹ, ಯುವ ಕಿಶೋರ್, ಅವಿನಾಶ್, ವಿನಯಾ ಪ್ರಸಾದ್, ಓಂ ಪ್ರಕಾಶ್‌ರಾವ್, ಮಹೇಶ್ ಸಿದ್ದು ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.