ಗಲ್ಲಿಯಲ್ಲಿ ಬರೀ ಘರ್ಜನೆ!
Team Udayavani, Oct 27, 2017, 4:44 PM IST
ಒಂದಕ್ಕಿಂತ ಒಂದು ಆವೇಶಭರಿತ ಪಾತ್ರಗಳು, ಬಾಯಿಬಿಟ್ಟರೆ “ಬೋ.. ಸೂ .. ಮಗ ಪದಗಳು, ಗಲ್ಲಿಯ ಮೂಲೆ ಮೂಲೆಯಲ್ಲೂ ಝಳಪಿಸೋ ಲಾಂಗು ಮಚ್ಚು, ಕೂದಲನ್ನೇ ಬಂಡವಾಳವಾಗಿಟ್ಟುಕೊಂಡವನಂತೆ ಫೋಸ್ ಕೊಡುವ ವಿಲನ್, ರೊಚ್ಚಿಗೆದ್ದು ಹೊಡೆದಾಡೋ ಒಬ್ಬ ಹೀರೋ … ಇವೆಲ್ಲವೂ “ಟೈಗರ್ ಗಲ್ಲಿ’ಯ ಸರಕು. ಇಷ್ಟು ಹೇಳಿದ ಮೇಲೆ ಸಿನಿಮಾವನ್ನು ಊಹಿಸಿಕೊಳ್ಳೋದು ನಿಮಗೆ ಕಷ್ಟದ ಕೆಲಸವಲ್ಲ.
ಆ ಮಟ್ಟಿಗೆ “ಟೈಗರ್ ಗಲ್ಲಿ’ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಇಲ್ಲಿ ಏನಿದೆ ಎಂದರೆ ಕೆಜಿ ಗಟ್ಟಲೇ ಮಾತಿದೆ ಎನ್ನಬಹುದು. ಒಂದೈದು ಸಿನಿಮಾಕ್ಕಾಗುವಷ್ಟು ಮಾತನ್ನು ನಿರ್ದೇಶಕ ರವಿ ಶ್ರೀವತ್ಸ “ಟೈಗರ್ ಗಲ್ಲಿ’ಯಲ್ಲಿ ತುರುಕಿಬಿಟ್ಟಿದ್ದಾರೆ. ಹಾಗಾಗಿ, ಕಥೆಗಿಂತ ಮಾತಲ್ಲೇ ಸಿನಿಮಾ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆ ಮಾತು ನಿಮ್ಮ ತಾಳ್ಮೆ ಪರೀಕ್ಷಿಸೋದರಲ್ಲಿ ಯಾವ ಸಂದೇಹವೂ ಇಲ್ಲ.
ಮುಖ್ಯವಾಗಿ ಕಥೆಯಲ್ಲಿ ಮಜಾ ಕೊಡುವ ಅಂಶಗಳಿಲ್ಲ. 20 ವರ್ಷದಿಂದ ಹಣ, ರೌಡಿಸಂನ ಪ್ರಭಾವದಿಂದ ರಾಜ್ಯವಾಳುತ್ತಾ, ಮಾಡಬಾರದ ಅನಾಚಾರ ಮಾಡುವ ಒಂದು ವರ್ಗದ ವಿರುದ್ಧ ತಿರುಗಿ ಬೀಳುವ ಯುವಕನೊಬ್ಬನ ಕಥೆಯೇ “ಟೈಗರ್ ಗಲ್ಲಿ’. ಹಾಗಂತ ಕಥೆ ಹೇಗೆ ಸಾಗುತ್ತದೆ ಎಂದರೆ ಕಥೆಯ ಹಾದಿಯಲ್ಲಿ ಬಳಸಿದ ಪದಗಳನ್ನು ಹಾಕಿದರೆ ನೀವು ನಿಮಗೆ ಕೇಳಲು ಕಷ್ಟವಾದಿತು. ಅಷ್ಟೊಂದು ಕೆಟ್ಟ ಬೈಗುಳಗಳ ಮೂಲಕವೇ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಕಮರ್ಷಿಯಲ್ ಸಿನಿಮಾ,
ಅದರಲ್ಲೂ ಸೆನ್ಸಾರ್‌ನಿಂದ “ಎ’ ಸರ್ಟಿಫಿಕೆಟ್ ಪಡೆದುಕೊಂಡ ಸಿನಿಮಾದಲ್ಲಿ ಏನು ಬೇಕಾದರೂ ಅಶ್ಲೀಲ ಪದಗಳನ್ನು ಬಳಸಬಹುದಾ? ಏನೇನು ಕೆಟ್ಟಕೆಟ್ಟ ಬೈಗುಳಗಳಿವೆ, ಅಸಹ್ಯ ಎಂದು ಕರೆದುಕೊಳ್ಳುವ ಪದಗಳಿವೆ, ಅವೆಲ್ಲವನ್ನೇ ಸೇರಿಸಿ ಸಂಭಾಷಣೆಯನ್ನಾಗಿಸಬಹುದು …ಹೀಗೊಂದು ಸಂದೇಹ ಬರುವ ಮಟ್ಟಕ್ಕೆ “ಟೈಗರ್ ಗಲ್ಲಿ’ ಯಲ್ಲಿ ಆ ತರಹದ ಪದ ಪ್ರಯೋಗವಾಗಿದೆ. ಕೆಟ್ಟದ್ದು, ಅಶ್ಲೀಲ ಎಂದು ಕರೆದುಕೊಳ್ಳುವ ಏನು ಪದಗಳಿವೆ,
ಅವೆಲ್ಲವನ್ನು ಹುಡುಕಿ, ಅದನ್ನು ಮತ್ತಷ್ಟು “ಡೆಕೋರೇಟ್’ ಮಾಡಿ ಇಲ್ಲಿ ಬಳಸಲಾಗಿದೆ. ಹಾಗಾಗಿ, ನೀವು ಕಿವಿ ಮುಚ್ಚಿಕೊಂಡು ಸಿನಿಮಾ ನೋಡುವ ಸಾಕಷ್ಟು ಅವಕಾಶವನ್ನು ಈ ಸಿನಿಮಾ “ಕಲ್ಪಿಸಿ’ಕೊಟ್ಟಿದೆ. ಕಥೆಯ ವಿಷಯಕ್ಕೆ ಬರೋದಾದರೆ, ರಾಜಕಾರಣಿಗಳ ದರ್ಪ, ಅವರಿಗೆ ಬಲಗೈಯಾಗಿರುವ ಡಾನ್‌ಗಳು, ಅಮಾಯಕ ಹೆಣ್ಣು ಮಗಳು, ಅವಳಿಗೊಬ್ಬಳು ರೆಬೆಲ್ ಮಗ, ಮಧ್ಯೆ ಒಂದಷ್ಟು ಜಿದ್ದಾಜಿದ್ದಿ … ಇವ್ಯಾವು ಕನ್ನಡ ಪ್ರೇಕ್ಷಕನಿಗೆ ಹೊಸತಲ್ಲ.
ಇಡೀ ಸಿನಿಮಾದಲ್ಲಿ ನಿಮಗೆ ಹೊಸತಾಗಿ ಕಾಣಸಿಗೋದು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ಮಾಡಿಕೊಂಡಿರುವ ಅನಧಿಕೃತ ನ್ಯಾಯಾಲಯ ಹಾಗೂ ಪೊಲೀಸ್ ಸ್ಪೇಷನ್ ಎಂಬ ಕಾನ್ಸೆಪ್ಟ್ ಅಷ್ಟೇ. ಹಾಗಂತ ಆ ಅಂಶ ಪಾಸಿಂಗ್ ಶಾಟ್‌ನಲ್ಲಿ ಬಂದು ಹೋಗುತ್ತದೆಯಷ್ಟೇ. ಅದಕ್ಕಿಂತ ಮುಂಚೆ ತಾಯಿ ಮಗನ ಸೆಂಟಿಮೆಂಟ್, ಗ್ಯಾಪಲ್ಲೊಂದು ಲವ್‌ಸ್ಟೋರಿ, ಒಂದೆರಡು ಗಲ್ಲಿ ಫೈಟ್ ಬಿಟ್ಟರೆ ನಿಮಗೆ ಹೊಸದೆನಿಸುವ ಯಾವ ಅಂಶವೂ ಇಲ್ಲಿಲ್ಲ.
ಮೊದಲೇ ಹೇಳಿದಂತೆ ಇಲ್ಲಿ ಕೋರ್ಟ್ ಇದೆ ಜಡ್ಜ್ ಇದ್ದಾರೆ. ಇಲ್ಲಿನ ಜಡ್ಜ್ ಕೂಡಾ ಫೈಟ್ ಮಾಡುತ್ತಾರೆ. ಅಂದಹಾಗೆ, ಸಿನಿಮಾವನ್ನು ಲಾಜಿಕ್‌ನಿಂದ ನೋಡಬೇಡಿ, ಮ್ಯಾಜಿಕ್‌ನಿಂದ ನೋಡಿ ಎಂದು ಈ ಹಿಂದೆಯೇ ರವಿ ಶ್ರೀವತ್ಸ ಹೇಳಿದ್ದಾರೆ. ಹಾಗಾಗಿ, ನೋ ಕ್ವಶ್ಚನ್. ಇಲ್ಲಿ ಬಂದು ಹೋಗುವ ಪಾತ್ರಗಳಿಗೆ ಲೆಕ್ಕವಿಲ್ಲ. ಆ ಪಾತ್ರಗಳ ಬಾಯಿಂದ ಬರೋ ಅಶ್ಲೀಲ ಪದಗಳಿಗೂ ಲೆಕ್ಕ ಕೊಡುವುದು ಕಷ್ಟ. ಪ್ರತಿ ಸಣ್ಣ ಪಾತ್ರಗಳಿಗೂ ಒಂದೊಂದು ಡೈಲಾಗ್ ಕೊಟ್ಟಿದ್ದಾರೆ.
ಎಲ್ಲವೂ ಹೈಪರ್ ಆ್ಯಕ್ಟೀವ್ ಪಾತ್ರಗಳೇ. ರವಿ ಶ್ರೀವತ್ಸ ಕೆಲವು ದೃಶ್ಯಗಳನ್ನು ತುಂಬಾ “ಡೆಡ್ಲಿ’ಯಾಗಿ ಚಿತ್ರೀಕರಿಸಿದ್ದಾರೆ. ಉದಾಹರಣೆಗೆ ರೌಡಿಯೊಬ್ಬ ಲೇಡಿ ಪೊಲೀಸ್ ಆಫೀಸರ್‌ನನ್ನು ನಡುರಸ್ತೆಯಲ್ಲಿ ಯೂನಿಫಾರಂ ಬಿಚ್ಚಿ ಮೆರವಣಿಗೆ ಮಾಡಿಸುತ್ತಾನೆ. ಇನ್ನೊಂದು ದೃಶ್ಯದಲ್ಲಿ ರುಂಡವನ್ನು ಜೀಪಿಗೆ ಕಟ್ಟಿ ತರಲಾಗುತ್ತದೆ. ಇನ್ನು ಹೆಂಗಸರನ್ನು ಎಳೆದಾಡುವುದು, ಬಡಿದಾಡುವುದು, ಬೆಡ್‌ರೂಂಗೆ ಕರೆಯುವ ಸೀನ್‌ಗಳಂತೂ ಯಥೇತ್ಛವಾಗಿದೆ.
ನೀನಾಸಂ ಸತೀಶ್ ಈ ಚಿತ್ರ ತನಗೊಂದು ಆ್ಯಕ್ಷನ್ ಇಮೇಜ್ ತಂದುಕೊಡುತ್ತದೆ ಎಂದು ಆಸೆ ಇಟ್ಟಿದ್ದಾರೆ. ಹಾಗಂತ ಸತೀಶ್ ಆ್ಯಕ್ಷನ್ ಅನ್ನು ಸರಿಯಾಗಿ ಬಿಂಬಿಸುವ ದೃಶ್ಯಗಳ ಕೊರತೆ ಇಲ್ಲಿದೆ. ಲಾಂಗ್ ಹಿಡಿದು ಗಲ್ಲಿ ಕ್ರಿಕೆಟ್‌ನಂತಹ ಆ್ಯಕ್ಷನ್‌ಗೆ ಸತೀಶ್ ಖುಷಿಪಟ್ಟಿದ್ದಾರೆ. ಅದು ಬಿಟ್ಟರೆ ಸತೀಶ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಪಟ್ಟಿದ್ದಾರೆ. ಇನ್ನು ನಾಯಕಿ ಭಾವನಾ ರಾವ್ ಪಾತ್ರ ನಿಮ್ಮ ತಾಳ್ಮೆ ಪರೀಕ್ಷಿಸುವ ಮತ್ತೂಂದು ಟಾಸ್ಕ್.
ಮತ್ತೂಬ್ಬ ನಾಯಕಿ ರೋಶನಿ ಪ್ರಕಾಶ್ ಇಲ್ಲಿ ಖಡಕ್ ಪೊಲೀಸ್ ಆಫೀಸರ್. ಅವರ ಸಂಭಾಷಣೆಗೂ, ಬಾಡಿ ಲಾಂಗ್ವೇಜ್‌ಗೂ ಹೊಂದಿಕೆಯಾಗಿಲ್ಲ. ಇನ್ನು, ಶಿವಮಣಿ, ಗಿರಿರಾಜ್, ಅಯ್ಯಪ್ಪ, ಪೂಜಾ ಲೋಕೇಶ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಯಮುನಾ ಶ್ರೀನಿಧಿ ಖಡಕ್ ತಾಯಿಯಾಗಿ ಇಷ್ಟವಾಗಬಹುದು. ಹಾಡುಗಳು ಮತ್ತು ಹಿನ್ನೆಲೆ ಸಂಗೀತದಲ್ಲಿ ಹಾಡುಗಳೇ ಪರವಾಗಿಲ್ಲ. ಮಿಕ್ಕಂತೆ ಹಿನ್ನೆಲೆ ಸಂಗೀತ ನಿಮ್ಮ ಕಿವಿಗಪ್ಪಳಿಸುತ್ತದೆ.
ಚಿತ್ರ: ಟೈಗರ್ ಗಲ್ಲಿ
ನಿರ್ದೇಶನ: ರವಿ ಶ್ರೀವತ್ಸ
ನಿರ್ಮಾಣ: ಯೋಗೇಶ್ ಕುಮಾರ್
ತಾರಾಗಣ: ನೀನಾಸಂ ಸತೀಶ್, ರೋಶನಿ, ಭಾವನಾ ರಾವ್, ಯಮುನಾ ಶ್ರೀನಿಧಿ, ಶಿವಮಣಿ, “ಜಟ್ಟ’ ಗಿರಿರಾಜ್ ಮುಂತಾದವರು
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.