ಜಸ್ಟ್ ಮಾತ್ ಮಾತಲ್ಲಿ ಮಜ ….
ಚಿತ್ರ ವಿಮರ್ಶೆ
Team Udayavani, Oct 12, 2019, 3:04 AM IST
“ಮೊದಲ ನೋಟಕ್ಕೆ ಇಷ್ಟವಾಗುವ ಹುಡುಗಿಯೊಬ್ಬಳ ಪ್ರೀತಿ ಪಡೆಯೋಕೆ ಅವನು ಒಂದು ಸುಳ್ಳು ಹೇಳುತ್ತಾನೆ. ಅದು ನೂರಾರು ಸುಳ್ಳುಗಳಾಗುತ್ತವೆ. ಅವನ ಪ್ರೀತಿಯೂ ಸಿಗುತ್ತದೆ. ಇನ್ನೇನು ಮದ್ವೆ ಆಗಬೇಕು ಅನ್ನುವ ಹೊತ್ತಿಗೆ, ಅವನು ಹೇಳಿದ್ದೆಲ್ಲವೂ ಸುಳ್ಳು ಅನ್ನೋದು ಆಕೆಗೆ ಗೊತ್ತಾಗುತ್ತದೆ. ಮುಂದಾ? ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲವೂ ಶುಭಂ..! ಇದರಲ್ಲಿ ವಿಶೇಷವೇನಿದೆ? ಇಂಥದ್ದೊಂದು ಪ್ರಶ್ನೆ ನೋಡುಗರಲ್ಲೂ ಗಿರಕಿ ಹೊಡೆಯುತ್ತೆ.
ಗಾಂಧಿನಗರದ ಸಿದ್ಧಸೂತ್ರ ಬಿಟ್ಟು ಆಚೀಚೆ ಬರದ ಚಿತ್ರವಿದು. ಕನ್ನಡಕ್ಕೆ ಕಥೆ ಹೊಸದಲ್ಲ. ಈಗಾಗಲೇ ಕನ್ನಡದಲ್ಲೇ ಅದೆಷ್ಟೋ ಕಥೆಗಳು ಬಂದು ಹೋಗಿವೆ. ಸೃಜನ್ ಲೋಕೇಶ್ ನಿರ್ವಹಿಸಿರುವ ಪಾತ್ರವಷ್ಟೇ ಇಲ್ಲಿ ಹೊಸದು. ಕಾಣುವ ಪಾತ್ರಗಳಲ್ಲಷ್ಟೇ ಹೊಸತನವಿದೆ. ಉಳಿದಿದೆಲ್ಲವೂ ಮಾಮೂಲಿ. ಸುಳ್ಳು ಎಷ್ಟು ಮಜ ಕೊಡುತ್ತೆ ಎಂಬುದನ್ನಿಲ್ಲಿ ಅಷ್ಟೇ ಮಜವಾಗಿ ತೋರಿಸಲಾಗಿದೆ. ಅದರಿಂದ ಎಷ್ಟು ಮನಸ್ಸುಗಳಿಗೆ ನೋವಾಗುತ್ತೆ ಅನ್ನೋದನ್ನೂ ಹೇಳಲಾಗಿದೆ.
ಸಿಂಪಲ್ ಕಥೆಗೆ ಇನ್ನಷ್ಟು ಚಿತ್ರಕಥೆ ಎಂಬ ಗಟ್ಟಿ ಹೂರಣ ಬೇಕಿತ್ತು. ಅದಿಲ್ಲದ ಕಾರಣ, ಅಲ್ಲಲ್ಲಿ ಸಪ್ಪೆಯೆನಿಸುತ್ತೆ. ಆದರೂ, ಚಿತ್ರ ನೋಡಿಸಿಕೊಂಡು ಹೋಗುತ್ತೆ ಅನ್ನುವುದಾದರೆ, ಅದು ಸಂಭಾಷಣೆ. ತುಂಬಾ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಬರುವಂತಿಲ್ಲ. ಆದರೆ, ತಕ್ಕಮಟ್ಟಿಗೆ ನಕ್ಕು ಹೊರಬರಲು ಯಾವ ತೊಂದರೆಯೂ ಇಲ್ಲ. ಮೊದಲರ್ಧ ಸುಳ್ಳಿನ ಕಂತೆಯಲ್ಲೇ ಸಾಗುವ ಚಿತ್ರ ಅಲ್ಲಲ್ಲಿ ಸೀಟಿಗೆ ಒರಗಿಕೊಳ್ಳುವಂತೆ ಮಾಡುತ್ತೆ.
ಅಲ್ಲಿ ಹೀಗಾಗಬಹುದು, ಹಾಗೆ ಆಗಬಹುದು ಅಂದುಕೊಂಡವರಿಗೆ ಯಾವ ಪವಾಡವೂ ಆಗಲ್ಲ. ಚಿತ್ರದ ಅದ್ಧೂರಿತನಕ್ಕೆ ಬರವಿಲ್ಲ. ಆದರೆ, ಹೊಸತನವನ್ನು ಹುಡುಕುವಂತಿಲ್ಲ. ಇಲ್ಲಿ ಮಾತೇ ಬಂಡವಾಳ. ಅದು ಬಿಟ್ಟು ಬೇರೇನೂ ಇಲ್ಲ. ಕೆಲವು ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ಸಿನಿಮಾದುದ್ದಕ್ಕೂ ಒಂದಷ್ಟು ಎಡವಟ್ಟುಗಳಿವೆ. ಆದರೆ, ನಿರ್ದೇಶಕರ ಮೊದಲ ಚಿತ್ರವಾದ್ದರಿಂದ ಆ ತಪ್ಪುಗಳನ್ನು ಬದಿಗೊತ್ತಬಹುದು. ಚಿತ್ರಕ್ಕಿನ್ನೂ ಬಿಗಿಯಾದ ನಿರೂಪಣೆಯ ಅಗತ್ಯವಿತ್ತು.
ಎಲ್ಲವನ್ನೂ ಕ್ರಮವಾಗಿ ಬಳಸಿಕೊಂಡಿದ್ದರೆ, ಇನ್ನಷ್ಟು ಮನಸ್ಸಿಗೆ ಹತ್ತಿರವಾಗುವಂತಹ ಚಿತ್ರ ಕಟ್ಟಿಕೊಡಲು ಸಾಧ್ಯವಿತ್ತು. ವಿನಾಕಾರಣ ಹಾಸ್ಯ ದೃಶ್ಯಗಳನ್ನು ತೂರಿಸಿ, ನೋಡುಗರ ತಾಳ್ಮೆ ಕೆಡಿಸಲಾಗಿದೆ. ಹಾಸ್ಯ ದೃಶ್ಯಗಳಿಗಿಂತ ಮಾತುಗಳ “ಪಂಚ್’ ಆಗಾಗ ನಗೆಯ ಅಲೆ ಎಬ್ಬಿಸುತ್ತದೆ. ತುಂಬಾ ಸೀರಿಯಸ್ ಆಗಿ ನೋಡುವಂತಹ ಚಿತ್ರವೇನೂ ಅಲ್ಲ, “ಭರಪೂರ’ ಮನರಂಜನೆಯನ್ನು ಬಯಸುವಂತಿಲ್ಲ. ಕೊಂಚ ಕಿರಿಕಿರಿ ನಡುವೆ ಎರಡು ತಾಸು ಸಿನಿಮಾ ನೋಡಿಸಿಕೊಂಡು ಹೋಗುತ್ತೆ ಎಂಬುದೇ ಸಮಾಧಾನ.
ನಾಯಕ ಸೂರ್ಯ ಚಿಕ್ಕವನಿರುವಾಗಲೇ ಅವನ ಅಪ್ಪ, ಅಮ್ಮ ಮಲೇಶಿಯಾಗೆ ಶಿಫ್ಟ್ ಆಗಿರುತ್ತಾರೆ. ದೊಡ್ಡ ಉದ್ಯಮಿ ಪುತ್ರನಾದ ಸೂರ್ಯನಿಗೆ ಇಂಡಿಯಾಗೆ ಬರುವ ಆಸೆ. ತಂದೆ ಮಾಡಿಕೊಟ್ಟ ಬಿಜಿನೆಸ್ ನೋಡಿಕೊಳ್ಳೋಕೂ ಸೋಮಾರಿತನ. ಅದರಲ್ಲೂ ಅವನಿಗೆ ಮದ್ವೆ ಅಂದರೆ ಅಲರ್ಜಿ. ಹೀಗಿರುವಾಗಲೇ, ತಂದೆ-ತಾಯಿ ಜೊತೆ ಇಂಡಿಯಾಗೆ ಬರುತ್ತಾನೆ. ಕಾರ್ಯಕ್ರಮವೊಂದರಲ್ಲಿ ನಾಯಕಿಯನ್ನು ನೋಡಿ ಫಿದಾ ಆಗುತ್ತಾನೆ.
ಆಕೆಯನ್ನು ಒಲಿಸಿಕೊಳ್ಳೋಕೆ ಡ್ರಾಮಾ ಶುರುಮಾಡುತ್ತಾನೆ. ಸುಳ್ಳುಗಳ ಮನೆಕಟ್ಟಿ ಆಕೆಯನ್ನು ಒಲಿಸಿಕೊಳ್ತಾನೆ. ಮದ್ವೆ ಆಗಲು ಹೊರಟಾಗ, ಅಲ್ಲೊಂದು ದೊಡ್ಡ ಘಟನೆ ನಡೆಯುತ್ತೆ. ಆ ಘಟನೆ ಏನೆಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು. ಸೃಜನ್ ಡೈಲಾಗ್ ಹರಿಬಿಡುವುದರಲ್ಲಿ ಇಷ್ಟವಾಗುತ್ತಾರೆ. ಬಿಲ್ಡಪ್‌ಗೆಂದು ಇಟ್ಟಿರುವ ಸ್ಟಂಟ್ಸ್‌ನಲ್ಲಿ ಅಷ್ಟೊಂದು ಗಮನಸೆಳೆಯಲ್ಲ. ಆದರೂ, ನಗಿಸಲು ಹಿಂದುಳಿದಿಲ್ಲ.
ಹರಿಪ್ರಿಯಾ, ಗ್ಲಾಮರ್ ಜೊತೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ತಾರಾ, ಅವಿನಾಶ್, ಸಾಧು, ತಬಲಾನಾಣಿ, “ತರಂಗ’ ವಿಶ್ವ, ಗಿರಿ ಸೇರಿದಂತೆ ಬರುವ ಪಾತ್ರಗಳು ಚಿತ್ರದ ವೇಗಕ್ಕೆ ಸಾಧ್ಯವಾದಷ್ಟು ಹೆಗಲು ಕೊಟ್ಟಿವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಒಂದು ಹಾಡಷ್ಟೇ ಪರವಾಗಿಲ್ಲ. ಹಿನ್ನೆಲೆ ಸಂಗೀತದಲ್ಲೂ ಹೇಳಿಕೊಳ್ಳುವಂತಹ “ಮಜ’ವಿಲ್ಲ. ಹೆಚ್.ಸಿ. ವೇಣು ಛಾಯಗ್ರಹಣ ಅಂದವನ್ನು ಹೆಚ್ಚಿಸಿದೆ.
ಚಿತ್ರ: ಎಲ್ಲಿದ್ದೆ ಇಲ್ಲೀ ತನಕ
ನಿರ್ಮಾಣ: ಲೋಕೇಶ್ ಪ್ರೊಡಕ್ಷನ್ಸ್
ನಿರ್ದೇಶನ: ತೇಜಸ್ವಿ
ತಾರಾಗಣ: ಸೃಜನ್ ಲೋಕೇಶ್, ಹರಿಪ್ರಿಯಾ, ತಾರಾ, ಅವಿನಾಶ್, ಗಿರಿಜಾ ಲೋಕೇಶ್, ತಬಲನಾಣಿ, ಸಾಧುಕೋಕಿಲ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.