ಕೃಷ್ಣ-ರುಕ್ಕು ಬಾಳಿನಲ್ಲಿ ವಿಧಿಯಾಟ
Team Udayavani, Apr 20, 2018, 6:13 PM IST
“ಇನ್ನು ಮುಂದೆ ಈಕೆ ಅನಾಥಳಲ್ಲ, ಇವಳ ಜೊತೆ ನಾನಿದ್ದೇನೆ …’ ಕೃಷ್ಣ, ರುಕ್ಕುವಿನ ಕೈ ಹಿಡಿದುಕೊಂಡು ಹೋಗುತ್ತಾನೆ. ಕೃಷ್ಣನ ತಂದೆ-ತಾಯಿಗೆ ಆಶ್ಚರ್ಯವಾಗುತ್ತದೆ. ನಮ್ಮ ಮಗನಿಗೆ ಏನಾಗಿದೆ, ಯಾಕಾಗಿ ಇಂತಹ ನಿರ್ಧಾರ ತಗೊಂಡ, ಹೋಗಿ ಹೋಗಿ ಈ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದನಲ್ಲ ಎಂದು ಕೊರಗುತ್ತಾರೆ. ಆದರೆ ಕೃಷ್ಣ ಮಾತ್ರ ಆತನ ನಿರ್ಧಾರ ಬದಲಿಸುವುದಿಲ್ಲ. ಮಗನನ್ನು ಆ ಹುಡುಗಿಗೆ ಬಿಟ್ಟುಕೊಡಲು ಅಪ್ಪ-ಅಮ್ಮನಿಗೆ ಮನಸ್ಸಿರೋದಿಲ್ಲ.
ಕೊನೆಗೂ ಅವರು ಮಗನನ್ನು ಬಿಟ್ಟುಕೊಡುವಂತೆ ಆ ಹುಡುಗಿಯಲ್ಲಿ ಮನವಿ ಮಾಡುತ್ತಾರೆ. ಆಕೆಯ ಮನಸ್ಸು ಕರಗುತ್ತದೆ. ಆಕೆ ಒಂದು ನಿರ್ಧಾರಕ್ಕೆ ಬಂದು ಬಿಡುತ್ತಾಳೆ. ಹಾಗಾದರೆ, ಮಗ ಸಿಗುತ್ತಾನಾ, ಪ್ರೀತಿ ಮುರಿದು ಬಿತ್ತಾ ಎಂಬ ಕುತೂಹಲ ನಿಮ್ಮಲ್ಲಿದ್ದರೆ ನೀವು “ರುಕ್ಕು’ ನೋಡಬಹುದು. ಚಿತ್ರದ ಒನ್‌ಲೈನ್ ಕೇಳಿದಾಗ ನಿಮಗೆ ಇದೊಂದು ಪಕ್ಕಾ ಫ್ಯಾಮಿಲಿ ಡ್ರಾಮಾ ಎಂಬುದು ಅರ್ಥವಾಗಿರುತ್ತದೆ. ನಿರ್ದೇಶಕ ಬಸವರಾಜ್ ಬಳ್ಳಾರಿ ಕುಟುಂಬದ ಹಿನ್ನೆಲೆಯಲ್ಲಿ ಒಂದು ಪ್ರೇಮಕಥೆಯನ್ನು ಹೇಳಲು ಹೊರಟಿದ್ದಾರೆ.
ಕಥೆಯ ಒನ್‌ಲೈನ್ ಚೆನ್ನಾಗಿದೆ. ಆದರೆ, ಈ ಕಥೆ ಇವತ್ತಿನ ಟ್ರೆಂಡ್‌ಗೆ ಹೊಂದುತ್ತಾ ಎಂಬ ಪ್ರಶ್ನೆ ಕಾಡದೇ ಇರದು. ಅಂದಹಾಗೆ, ಪ್ರೇಮಕಥೆ ಎಂದಾಕ್ಷಣ ಇಲ್ಲಿ ನಾಯಕ-ನಾಯಕಿಯ ಲವ್ವಿಡವ್ವಿಯಾಗಲಿ, ಮರಸುತ್ತುವ ಹಾಡಾಗಲಿ ಇಲ್ಲ. ಏಕೆಂದರೆ, ಪ್ರೇಮಕಥೆಯ ಹಿಂದೆ ಮತ್ತೂಂದು ನೋವಿನ ಕಥೆ ಇದೆ. ಆ ಕಾರಣದಿಂದ ಫ್ಯಾಮಿಲಿ ಸ್ಟೋರಿಯಾಗಿಯೇ “ರುಕ್ಕು’ ಸಾಗುತ್ತದೆ. ಎಲ್ಲಾ ಚಿತ್ರಗಳಂತೆ ಇಲ್ಲೂ ನಾಯಕನ ಒಳ್ಳೆಯ ಗುಣಗಳನ್ನು ಬಿಂಬಿಸುವ, ನಾಯಕಿ ಮೆಚ್ಚಿಕೊಳ್ಳುವಂತೆ ಮಾಡುವ ಸಾಕಷ್ಟು ಸನ್ನಿವೇಶಗಳಿವೆ.
ಅದರಲ್ಲೊಂದು ಅನಾಥ ಆಶ್ರಮ. ಅನಾಥ ಆಶ್ರಮದಲ್ಲಿ ಹಿರಿಯ ಸೇವೆ ಮಾಡುತ್ತಾ, ಅವರ ಹುಟ್ಟುಹಬ್ಬ, ಆ್ಯನಿವರ್ಸರಿಗಳನ್ನು ಆಚರಿಸುತ್ತಾ ಮಕ್ಕಳಿಲ್ಲ ಎಂಬ ಕೊರಗನ್ನು ನೀಗಿಸುತ್ತಿರುವ ನಾಯಕನನ್ನು ನೋಡುತ್ತಿದ್ದಾಗ ಹಿಂದಿನಿಂದ ಯಾರೋ “ಗೊಂಬೆ ಹೇಳುತೈತೆ …’ ಹಾಡು ಗುನುಗಿದಂತೆ ನಿಮಗೆ ಭಾಸವಾಗಬಹುದು. ತಾನು ಆಯ್ಕೆಮಾಡಿಕೊಂಡಿರುವ ಕಥೆ ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ, ಅದನ್ನೇ ನೇರಾನೇರ ಹೇಳಿಬಿಟ್ಟರೆ ಪ್ರೇಕ್ಷಕನಿಗೆ ಎಲ್ಲಿ ಬೋರಾಗುತ್ತದೋ ಎಂಬ ಭಯ ನಿರ್ದೇಶಕರನ್ನು ತೀವ್ರವಾಗಿ ಕಾಡಿದ ಪರಿಣಾಮ ಅವರು ಕಾಮಿಡಿ ಮೊರೆ ಹೋಗಿದ್ದಾರೆ.
ಹಾಗಾಗಿಯೇ ಕಥೆಯ ಜೊತೆಜೊತೆಗೆ ಸಾಧುಕೋಕಿಲ ಅವರ ಕಾಮಿಡಿಯೂ ಸಾಗಿಬರುತ್ತದೆ. ಹಾಗಂತ ಕಾಮಿಡಿ ನಗುತರಿಸುತ್ತದೆ ಎನ್ನುವಂತಿಲ್ಲ. ಚಿತ್ರದ ಕಥೆಯಲ್ಲಿ ಹೊಸತನವಿಲ್ಲ ಅನ್ನೋದು ಬಿಟ್ಟರೆ, ನಿರ್ದೇಶಕ ಬಸವರಾಜು ಬಳ್ಳಾರಿ ತಕ್ಕಮಟ್ಟಿಗೆ ಚಿತ್ರವನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ಹೆಚ್ಚೇನು ಅನಾವಶ್ಯಕ ಅಂಶಗಳನ್ನು ಸೇರಿಸದೇ ಕಥೆಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ನಾಯಕನಿಗೆ ಬಿಲ್ಡಪ್ ಆಗಲೀ, ಸುಖಾಸುಮ್ಮನೆ ಫೈಟ್ ಆಗಲೀ ಇಟ್ಟಿಲ್ಲ.
ಒಂದಷ್ಟು ದೃಶ್ಯಗಳನ್ನು ಪಕ್ಕಕ್ಕಿಡುವ ಅವಕಾಶವೂ ನಿರ್ದೇಶಕರಿಗಿತ್ತು. ಆದರೆ, ಕಥೆಯನ್ನು ಮತ್ತಷ್ಟು ಬೆಳೆಸದ ಪರಿಣಾಮವೋ ಏನೋ, ಆ ದೃಶ್ಯಗಳ ಮೊರೆ ಹೋಗಿದ್ದಾರೆ. ನಾಯಕ ಶ್ರೇಯಸ್ ನಟನೆಯಲ್ಲಿ ಮತ್ತಷ್ಟು ದೂರ ಸಾಗಬೇಕಿದೆ. ನಾಯಕಿ ವೇಗ ರಮ್ಯಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಪದ್ಮಜಾ ರಾವ್, ಸತ್ಯಜಿತ್, ಸಾಧು ಕೋಕಿಲ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎ.ಟಿ. ರವೀಶ್ ಸಂಗೀತದ ಹಾಡುಗಳು ಮೋಡಿ ಮಾಡುವುದಿಲ್ಲ.
ಚಿತ್ರ: ರುಕ್ಕು
ನಿರ್ಮಾಣ: ರಾಜಣ್ಣ
ನಿರ್ದೇಶನ: ಬಸವರಾಜು ಬಳ್ಳಾರಿ
ತಾರಾಗಣ: ಶ್ರೇಯಸ್, ವೇಗರಮ್ಯ, ತಿಲಕ್, ಪದ್ಮಜಾ ರಾವ್, ಸತ್ಯಜಿತ್, ಸಾಧುಕೋಕಿಲ ಮತ್ತಿತರರು.
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.