ಪ್ರೀತಿಯ ತೊಳಲಾಟ ಮತ್ತು ಆತ್ಮದ ನರಳಾಟ
Team Udayavani, May 20, 2017, 11:41 AM IST
ಅವಳು ಇವನ ಜೊತೆ ಎಲ್ಲಿಗೂ ಬಂದಿಲ್ಲ. ಆದರೂ ಆತ ಅವಳ ಜೊತೆ ಸುತ್ತಾಡಿದ್ದಾನೆ, ಬೈಕಲ್ಲಿ ಜಾಲಿ ರೈಡ್ ಹೋಗಿದ್ದಾನೆ, ಮನೆಯಲ್ಲಿ ಕೈ ತುತ್ತು ತಿನ್ನಿಸಿ ಹೂ ಮುಡಿಸಿದ್ದಾನೆ. ಜೊತೆಗೊಂದು ಸೆಲ್ಫಿ ಕೂಡಾ ತಗೊಂಡಿದ್ದಾನೆ. ಮರುದಿನ ಖುಷಿಯಲ್ಲಿ ಆ ಘಟನೆಯ ಬಗ್ಗೆ ತನ್ನ ಹುಡುಗಿಯಲ್ಲಿ ಮಾತನಾಡಿದರೆ ಆಕೆಗೆ ಆಶ್ಚರ್ಯ. ಏಕೆಂದರೆ, ಆಕೆ ಈತನ ಜೊತೆ ಸುತ್ತಾಡಿಲ್ಲ, ಊಟ ಮಾಡಿಲ್ಲ, ಸೆಲ್ಫಿಗೆ ಫೋಸ್ ಕೊಟ್ಟಿಲ್ಲ.
ಹಾಗಾದರೆ ಅವಳದ್ದೇ ರೂಪದಲ್ಲಿದ್ದ ಆ ಹುಡುಗಿ ಯಾರು? ಸಂದೇಹ ಬರುತ್ತದೆ ಮತ್ತು ಬಲವಾಗುತ್ತಾ ಹೋಗುತ್ತದೆ. ಆತ ತಾನು ತೆಗೆದ ಸೆಲ್ಫಿ ನೋಡುತ್ತಾನೆ. ಅಲ್ಲಿ ಆತನೊಬ್ಬನದ್ದೇ ಫೋಟೋ ಇರುತ್ತದೆ. ಅಲ್ಲಿಗೆ ಇಬ್ಬರಿಗೂ ಒಂದು ಮನದಟ್ಟಾಗುತ್ತದೆ. ಅದು ದೆವ್ವ ಎಂಬುದು. ಯಾರಿಗೆ ಎಂದರೆ ಚಿತ್ರದ ನಾಯಕ ಹಾಗೂ ಪ್ರೇಕ್ಷಕರಿಗೆ. ದೆವ್ವದ ನೆರಳಿನೊಂದಿಗೆ ಆರಂಭವಾಗುವ ಈ ಸಿನಿಮಾದಲ್ಲಿ ಒಂದು ಸಂದೇಹವಂತೂ ಇತ್ತು.
ಇದು ಹಾರರ್ ಸಿನಿಮಾನಾ ಅಥವಾ ಹಾರರ್ ಫೀಲ್‌ಗಾಗಿ ಈ ತರಹದ ಚಮಕ್ಕಾ ಎಂದು. ಆದರೆ, “ಕರಾಲಿ’ ಪಕ್ಕಾ ಹಾರರ್ ಸಿನಿಮಾ. ಆದರೆ, ಈ ಹಾರರ್ ಸಿನಿಮಾ ಎಲ್ಲಾ ಹಾರರ್ ಸಿನಿಮಾಗಳಂತಲ್ಲ. ಇಲ್ಲಿ ಮಬ್ಬು ಬೆಳಕಿಗಿದೆ, ಕಂಡು ಕಾಣದಂತೆ ಮಾಯವಾಗುವ ದೆವ್ವವಿದೆ, ದೆವ್ವದ ಓಡಾಟವೂ ಇದೆ. ಆದರೆ, ವಿಕಾರತೆ, ಭಯಾನಕ ಸನ್ನಿವೇಶಗಳಿಲ್ಲ. ಹಾಗಾಗಿ, ಇದನ್ನು ನೀವು ಸಾಫ್ಟ್ ದೆವ್ವ ಎಂದು ಕರೆಯಲಡ್ಡಿಯಿಲ್ಲ.
ಆರಂಭದಲ್ಲಿ ಒಂದು ಸಾಮಾನ್ಯ ದೆವ್ವದಾಟದ ಚಿತ್ರದಂತೆ ಭಾಸವಾಗುವ ಸಿನಿಮಾ, ನೋಡ ನೋಡುತ್ತಲೇ ನಿಮಗೆ ಕೊಂಚ ಇಷ್ಟವಾದರೆ ಅದಕ್ಕೆ ಕಾರಣ, ನಿರ್ದೇಶಕರು ಮಾಡಿಕೊಂಡಿರುವ ಒಂದೆಳೆ ಹಾಗೂ ಅದನ್ನು ನಿರೂಪಿಸಿರುವ ರೀತಿ. ಆರಂಭದಲ್ಲಿ ಎಲ್ಲಾ ಹಾರರ್ ಸಿನಿಮಾಗಳಂತೆ ಮಬ್ಬು ಬೆಳಕಿನಲ್ಲಿ ಕ್ಯಾಂಡಲ್ ಹಿಡಿದು ಮೆಟ್ಟಿಲು ಹತ್ತೋ ಹುಡುಗಿ, ಡಬಾರನೇ ಬೀಳ್ಳೋ ಬಾಗಿಲು, ಏಕಾಏಕಿ ಜೀವಬಂದಾತಾಗುವ ಜೋಕಾಲಿ …
ಇಂತಹ ಮಾಮೂಲಿ ದೃಶ್ಯಗಳ ಮೂಲಕ ಸಾಗುವ “ಕರಾಲಿ’, ಮುಂದೆ ಒಂದು ಪ್ರೇಮಕಥೆಯನ್ನು ಹಾರರ್ ಶೇಡ್‌ನಲ್ಲಿ ಹೇಳುತ್ತಲೇ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ. ನಿಜಕ್ಕೂ ನಿರ್ದೇಶಕರು ಮಾಡಿಕೊಂಡಿರುವ ಕಥೆಯಲ್ಲೊಂದು ಫೀಲ್ ಇದೆ, ಚಿಂತಿಸುವ ಹಾಗೂ ಪ್ರಸ್ತುತ ಸಮಾಜದಲ್ಲಿ ಆಗಾಗ ಪ್ರಶ್ನೆಗೆ ಒಳಗಾಗುವ ವಿಷಯವೊಂದನ್ನು ಇಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಮಂಗಳಮುಖೀಯೊಬ್ಬಳ ಪ್ರೀತಿ, ತವಕ, ತಲ್ಲಣ ಹಾಗೂ ಆಕೆಯ ಆಸೆಗಳ ಜೊತೆಗೆ ಮಂಗಳಮುಖೀಯಾಗಿ ಬದಲಾಗುವ ವೇಳೆ ನಡೆಯುವ “ದಂಧೆ’ಯನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇವಿಷ್ಟನ್ನೇ ಹೇಳಿದ್ದರೆ ಅದೊಂದು ಡಾಕ್ಯುಮೆಂಟರಿಯಾಗುತ್ತಿತ್ತು. ಆದರೆ, ನಿರ್ದೇಶಕರು ಇಲ್ಲಿ ಒಂದು ಗಾಢವಾದ ಪ್ರೀತಿ ಹಾಗೂ ಅದು ಬಿಟ್ಟುಬಿಡದಂತೆ ಕಾಡುವ ರೀತಿ, ಅದರ ತೀವ್ರತೆಯನ್ನು ಹೊಸ ಬಗೆಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.
ಚಿತ್ರದ ಆ ಭಾಗ ಇಷ್ಟವಾಗುತ್ತದೆ ಮತ್ತು ಕಾಡುತ್ತದೆ. ವಿಕಾರ ದೆವ್ವವನ್ನು ನೋಡಬೇಕು, ಕಿಟರನೇ ಕಿರುಚಾಟದ ಸದ್ದು ಕೇಳಬೇಕೆಂದು ಬಯಸಿದರೆ ಅದು ಇಲ್ಲಿ ಸಿಗೋದಿಲ್ಲ. ಇಲ್ಲಿ ಸಿಗೋದು ಮುದ್ದು ಮುಖದ, ತನ್ನ ಗೋಳು ತೋಡಿಕೊಳ್ಳುವ ಮತ್ತು ಯಾರಿಗೂ ತೊಂದರೆ ಮಾಡದ “ಸಾಫ್ಟ್ ಕಾರ್ನರ್’ವಿರುವ ದೆವ್ವ. ಇಲ್ಲಿ ನಿರ್ದೇಶಕರು ಏನು ಹೇಳಬೇಕೋ ಅದನ್ನು ಹೆಚ್ಚು ಎಳೆಯದೇ, ನೇರವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಕೆಲವೇ ಕೆಲವು ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಕಥೆಯ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಇನ್ನು, ಹಾರರ್ ಸಿನಿಮಾಗಳನ್ನು ನೋಡಿ ಪಂಟರ್‌ಗಳಾಗಿರುವ ಪ್ರೇಕ್ಷಕ ಇಲ್ಲಿನ ಕೆಲವು ದೃಶ್ಯಗಳನ್ನು ಆರಾಮವಾಗಿ ಊಹಿಸಿಕೊಳ್ಳುತ್ತಾನೆ ಮತ್ತು ಆ ಊಹೆ ನಿಜವಾಗಿರುತ್ತದೆ ಕೂಡಾ. ಅದು ಬಿಟ್ಟರೆ ಹೊಸಬರ ಹೊಸ ಪ್ರಯತ್ನವಾಗಿ “ಕರಾಲಿ’ಯಲ್ಲಿ ಒಂದಷ್ಟು ಹೊಸತನವಿದೆ.
ಚಿತ್ರದಲ್ಲಿ ನಟಿಸಿರುವ ಸಾಹಿಲ್ ರೈ, ಪ್ರೇರಣಾ, ಶಾಲಿನಿ, ವಿಕಾಸ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ.
ಚಿತ್ರ: ಕರಾಲಿ
ನಿರ್ಮಾಣ: ವೇದಾಂತ್ ಪ್ರೊಡಕ್ಷನ್ಸ್
ನಿರ್ದೇಶನ: ದಕ್ಷಿಣಾ ಮೂರ್ತಿ
ತಾರಾಗಣ: ಸಾಹಿಲ್ ರೈ, ಪ್ರೇರಣಾ, ಶಾಲಿನಿ, ವಿಕಾಸ್ ಮುಂತಾದವರು
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.