ಗುಡಿಯೊಳಗಿನ ಆಸ್ತಿ,ಈ ಮಾಸ್ತಿ
Team Udayavani, May 14, 2017, 2:09 PM IST
ಚಿತ್ರ: ಮಾಸ್ತಿಗುಡಿ ನಿರ್ಮಾಣ: ಸುಂದರ್ ಗೌಡ ನಿರ್ದೇಶನ: ನಾಗಶೇಖರ್ ತಾರಾಗಣ: ವಿಜಯ್, ಅಮೂಲ್ಯ,ಕೃತಿ ಖರಬಂದಾ, ರಂಗಾಯಣ ರಘು,ಬಿ. ಜಯಶ್ರೀ, ಅನಿಲ್, ಉದಯ್‌ಮುಂತಾದವರು.
ಕಾಡಲ್ಲಿ ಹುಲಿ ವಾಸಿಸುವುದಕ್ಕೂ, ಊರುಗಳಲ್ಲಿ ನೀರು ಸರಬರಾಜಾಗುವುದಕ್ಕೂ ಏನು ಸಂಬಂಧ? ಸಂಬಂಧ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬ ಉತ್ತರ ಬರಬಹುದು. ಆದರೆ, ಅಲ್ಲೊಂದು ಸಂಬಂಧ ಇದೆ. ನಾವಿಲ್ಲಿ ನೆಮ್ಮದಿಯಾಗಿರಬೇಕಾದರೆ, ನಗರಗಳಲ್ಲಿ ನೀರಿನ ಸಮಸ್ಯೆಗಳಿರಬಾರದೆಂದಾದರೆ, ಕಾಡುಗಳಲ್ಲಿ ಹುಲಿಗಳು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಓಡಾಡಿಕೊಂಡಿರಬೇಕು. ಆ ಸಂಬಂಧವನ್ನು ಕಮರ್ಷಿಯಲ್ ಆಗಿ ಹೇಳುವ ಪ್ರಯತ್ನವನ್ನು “ಮಾಸ್ತಿಗುಡಿ’ ಚಿತ್ರದಲ್ಲಿ ನಾಗಶೇಖರ್ ಮಾಡಿದ್ದಾರೆ.
ಅದೊಂದು ಕಾಡು. ಆ ಕಾಡುಗಳಲ್ಲಿ 350 ಹುಲಿಗಳಿವೆ. ಆ ಹುಲಿಗಳನ್ನು ಕೊಂದು, ಅದರ ಚರ್ಮ, ಉಗುರು ಮಾರಿ ಕೋಟ್ಯಾಂತರ ಹಣ ಮಾಡಬೇಕೆಂದು ಒಂದು ಮಾಫಿಯಾ ಹೊರಟಿದೆ. ಇನ್ನೊಂದು ಕಡೆ ಆ ಕಾಡಿನಲ್ಲೊಬ್ಬ ಕಾವಾಡಿಗ. ಹುಲಿ ಸಂರಕ್ಷಿಸುವುದಷ್ಟೇ, ಇಡೀ ಕಾಡೇ ದೇವರು ಎಂದು ನಂಬಿರುವವನು ಅವನು. ಒಬ್ಬ ಸಾಮಾನ್ಯ ಕಾವಾಡಿಗ, ಹೇಗೆ ಈ ಮಾಫಿಯಾ ವಿರುದ್ಧ ಹೋರಾಡುತ್ತಾನೆ ಎಂಬ ಕಥೆಯನ್ನು ನಾಗಾ ಶೇಖರ್, “ಮಾಸ್ತಿಗುಡಿ’ಯಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ.
ಇಷ್ಟೇ ಹೇಳಿದರೆ ಅದೊಂದು ಥ್ರಿಲ್ಲರ್ ಕಥೆಯಾಗಿಬಿಡುತ್ತದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ತಂತ್ರ-ಪ್ರತಿತಂತ್ರಗಳ ಈ ಕಥೆಯಲ್ಲಿ ಅವರು ಹಲವು ಟ್ವಿಸ್ಟುಗಳನ್ನು ತರುವ ಪ್ರಯತ್ನ ಮಾಡುತ್ತಾರೆ. ಪ್ರಮುಖವಾಗಿ ಒಂದು ತ್ರಿಕೋನ ಪ್ರೇಮಕಥೆಯನ್ನು ಇಟ್ಟಿದ್ದಾರೆ. ಕಾಡು ಜನರ ನಂಬಿಕೆ-ಮೂಢನಂಬಿಕೆ, ಆಚಾರ-ವಿಚಾರಗಳು, ಮುಗ್ಧತೆ-ಸಿಟ್ಟನ್ನು ಪೂರಕವಾಗಿ ಬಿಚ್ಚಿಡುತ್ತಾ ಹೋಗಿದ್ದಾರೆ. ಜನ ಗಂಭೀರವಾಗಿರಬಾರದು, ಸ್ವಲ್ಪ ನಗಬೇಕೆಂದು, ಕಾಮಿಡಿ ಸೀನುಗಳಿಗೂ ಜಾಗ ಕೊಟ್ಟಿದ್ದಾರೆ.
ಬಹುಶಃ ಇದೇ ಚಿತ್ರದ ಸಮಸ್ಯೆಯೆಂದರೆ ತಪ್ಪಿಲ್ಲ. ಚಿತ್ರದ ಮೊದಲಾರ್ಧವೆಲ್ಲಾ ಕಾಡಿನಲ್ಲಿ ಒಂದಿಷ್ಟು ಅನಿರೀಕ್ಷಿತ ಘಟನೆಗಳು ನಡೆಯುವುದು, ಅದನ್ನು ನಾಯಕ ಬೇಧಿಸುವ ಪ್ರಯತ್ನ ಮಾಡುವುದು ಇವೆಲ್ಲಾ ಪ್ರೇಕ್ಷಕರನ್ನು ಒಂದು ಕಡೆ ಹಿಡಿದಿಡುತ್ತದೆ. ಇಂಟರ್‌ವೆಲ್‌ಗಿಂಥ ಮುನ್ನ ಒಂದು ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಅಲ್ಲಿಂದ ಚಿತ್ರ ಇನ್ನೊಂದು ಮಜಲಿಗೆ ಹೋಗಬಹುದು ಎಂದು ಪ್ರೇಕ್ಷಕರು ಕಾದರೆ, ಅವರ ನಿರೀಕ್ಷೆ ಸುಳ್ಳಾಗುತ್ತದೆ. ಒಂದು ಕಡೆ ಮಾಫಿಯಾದ ಕೆಲಸ ಪ್ರಗತಿಯಲ್ಲಿರುವಾಗಲೇ, ಎರಡೆರೆಡು ಪ್ರೇಮಕಥೆಗಳು, ಆತ್ಮದ ನೆರಳು, ಕಾಡು ಜನರ ಆತಂಕ ಇವೆಲ್ಲವೂ ಚಿತ್ರದಲ್ಲಿದೆ.
ಯಾವುದೋ ಒಂದು ಘಟನೆ ಚಿತ್ರವನ್ನು ಮೇಲಕ್ಕೆತ್ತಿತು ಎನ್ನುವಷ್ಟರಲ್ಲಿ, ಇನ್ನೊಂದೆರೆಡು ದೃಶ್ಯಗಳು ಕಾಲೆಳೆಯುತ್ತವೆ. ಮತ್ತೆ ಚಿತ್ರ ಪಿಕಪ್ ಆಯಿತು ಎನ್ನುವಷ್ಟರಲ್ಲಿ, ಇನ್ನಾéವುದೋ ದೃಶ್ಯ ಚಿತ್ರದ ವೇಗಕ್ಕೆ ಅಡ್ಡಗಾಲು ಹಾಕುತ್ತದೆ. ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ, ಒಂದು ವಿಷಯ ಖುಷಿಯಾಗುತ್ತದೆ. ನಾಗಶೇಖರ್ ಇದುವರೆಗೂ ಹೆಚ್ಚಾಗಿ ಲವ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರಗಳನ್ನು ಮಾಡಿಕೊಂಡು ಬಂದವರು. ಈ ಚಿತ್ರದಿಂದ ಇನ್ನೊಂದು ಹೆಜ್ಜೆ ಅವರು ಮೇಲಿಟ್ಟಿದ್ದಾರೆ.
ಒಂದು ಸಂತೋಷದ ವಿಷಯವೆಂದರೆ, ಕನ್ನಡದಲ್ಲಿ ಕಾಡಿನ ಚಿತ್ರವೊಂದು ಬರದೇ ಯಾವುದೋ ಕಾಲವಾಗಿತ್ತು. ಅಂಥದ್ದೊಂದು ಪ್ರಯತ್ನವನ್ನು ನಾಗಶೇಖರ್ ಮಾಡಿರುವುದಷ್ಟೇ ಅಲ್ಲ, ಚಿತ್ರದಲ್ಲೊಂದು ಒಳ್ಳೆಯ ಸಂದೇಶವನ್ನೂ ಇಟ್ಟಿದ್ದಾರೆ. ಇದರ ಜೊತೆಗೆ ಖುಷಿಗೆ ಕಾರಣವಾಗುವ ಇನ್ನೊಂದು ವಿಷಯವೆಂದರೆ, ಸಂಗೀತ ನಿರ್ದೇಶಕ ಸಾಧು ಕೋಕಿಲ ವಾಪಸ್ಸಾಗಿರುವುದು.
ಮೂರು ಮೆಲೋಡಿ ಹಾಡುಗಳು, ಸನ್ನಿವೇಶಕ್ಕೆ ತಕ್ಕಂತಹ ಅದ್ಭುತವಾದ ಹಿನ್ನೆಲೆ ಸಂಗೀತ ಇವೆಲ್ಲಾ ಚಿತ್ರದ ಹೈಲೈಟುಗಳು ಎಂದರೆ ತಪ್ಪಿಲ್ಲ. ಇನ್ನು ಸತ್ಯ ಹೆಗಡೆ ಅವರ ಛಾಯಾಗ್ರಹಣದಲ್ಲಿ ಒಂದೊಂದು ಫ್ರೆಮು ಸಹ ಖುಷಿಕೊಡುತ್ತದೆ. ಇದೆಲ್ಲವೂ ಒಂದು ತಕ್ಕಡಿಯಾದರೆ, ಇನ್ನೊಂದರಲ್ಲಿ ಅಭಿನಯವಿದೆ. ಮೂರು ವಿವಿಧ ಗೆಟಪ್‌ಗ್ಳಲ್ಲಿ ವಿಜಯ್ ಚಿತ್ರದ ತುಂಬಾ ಆವರಿಸಿಕೊಳ್ಳುತ್ತಾರೆ.
ಕಾಡು ಪ್ರೀತಿಸುವ ಮಾಸ್ತಿಯಾಗಿ ವಿಜಯ್ ಅಭಿನಯ ಚೆನ್ನಾಗಿದೆ. ಸಾಯುವ ಸನ್ನಿವೇಶದಲ್ಲಿ ಅಮೂಲ್ಯ ಚಪ್ಪಾಳೆ ಗಿಟ್ಟಿಸುತ್ತಾರೆ. ರಂಗಾಯಣ ರಘು, ಬಿ. ಜಯಶ್ರೀ, ಶ್ರೀನಿವಾಸಮೂರ್ತಿ, ದೇವರಾಜ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಅನಿಲ್ ಮತ್ತು ಉದಯ್ ಸಹ ವಿಜಯ್ ಸರಿಸಮನಾಗಿ ಮಿಂಚಿರಬಹುದು ಎಂಬ ನಿರೀಕ್ಷೆ ಇದ್ದರೆ ಅದು ಸುಳ್ಳಾಗುತ್ತದೆ. ಅನಿಲ್ ಮತ್ತು ಉದಯ್ ಚಿತ್ರದಲ್ಲಿ ಇದ್ದೂ, ಇಲ್ಲದಂತಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುವುದು ಹೆಚ್ಚೆಂದರೆ 10 ನಿಮಿಷ ಅಷ್ಟೇ. ಅಲ್ಲಿಗೆ “ಮಾಸ್ತಿಗುಡಿ’ ಕಥೆ ಮುಗಿಯಿತು ಎಂದು ಭಾವಿಸಬೇಕಿಲ್ಲ. ಮಾಸ್ತಿ ಮತ್ತೂಮ್ಮೆ ಬರುತ್ತಾರಂತೆ, ಎರಡನೆಯ ಭಾಗದಲ್ಲಿ. ಅಲ್ಲಿಯವರೆಗೂ ಈ ಗುಡಿಯ ದರ್ಶನ ಪಡೆದುಕೊಳ್ಳಿ.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.