ರಜಾ ಮಜ ಸವಿಯೋದು ನಿಮಗೆ ಬಿಟ್ಟಿದ್ದು!
Team Udayavani, Feb 7, 2021, 9:48 AM IST
ಕೆಲವು ಸಿನಿಮಾಗಳ ಆರಂಭ ತುಂಬಾ ಚೆನ್ನಾಗಿರುತ್ತದೆ. ಆದರೆ, ಮುಂದೆ ಸಾಗುತ್ತಾ ಅದು ಟ್ರ್ಯಾಕ್ ತಪ್ಪುತ್ತದೆ. ಹಾಗಂತ ಇಂತಹ ಸಿನಿಮಾಗಳನ್ನು ನಾವು ಒಂದೇ ಮಾತಲ್ಲಿ ಕೆಟ್ಟ ಸಿನಿಮಾ ಎಂದು ಹೇಳಿದರೆ ತಪ್ಪಾದೀತು. ಈ ವಾರ ತೆರೆಕಂಡಿರುವ “ಮಂಗಳವಾರ ರಜಾದಿನ’ ಚಿತ್ರ ಕೂಡಾ ಇದೇ ಸಾಲಿಗೆ ಸೇರುತ್ತದೆ.
ಸಿನಿಮಾದಲ್ಲಿ ಒಂದು ಸುಂದರ ಹಾಗೂ ತುಂಬಾ ತಾಜಾ ಎನಿಸುವ ಕಥೆ ಇದೆ. ಒಂದಷ್ಟು ಮಜ ನೀಡುವ ನಿರೂಪಣೆಯೂ ಇದೆ. ಆದರೆ, ಪ್ರೇಕ್ಷಕರು ಸಿನಿಮಾದ ಕೊನೆಯವರೆಗೂ ಇದನ್ನೇ ಬಯಸುವಂತಿಲ್ಲ. ನಿರ್ದೇಶಕರ ತಲೆಯಲ್ಲಿ ಆಗಾಗ ಹೊಳೆಯುವ ಹೊಸ “ಐಡಿಯಾ’ಗಳು ಸಿನಿಮಾದ ಮೂಲ ಆಶಯವನ್ನು ಮರೆತು ಮುಂದೆ ಸಾಗುವ ಪರಿಣಾಮ ಸಿನಿಮಾದ ಆರಂಭದಲ್ಲಿ ಸಿಕ್ಕ ಖುಷಿ ಹೆಚ್ಚು ಹೊತ್ತು ಇರುವುದಿಲ್ಲ. ಅಷ್ಟಕ್ಕೂ ಸಿನಿಮಾದ ಕಥೆ ಏನು ಎಂದು ನೀವು ಕೇಳಬಹುದು.
ಇದನ್ನೂ ಓದಿ:ನಮ್ಮದು ಟಾಮ್ – ಜೆರ್ರಿ ಥರದ ಕ್ಯಾರೆಕ್ಟರ್: ಪೊಗರು ಬಗ್ಗೆ ಕೂರ್ಗ್ ಬೆಡಗಿ ಮಾತು
ಜೀವನದಲ್ಲಿ ತುಂಬಾ ಡೀಸೆಂಟ್ ಆಗಿರುವ ಕ್ಷೌರಿಕ ಹುಡುಗನಿಗೆ ಒಂದು ದೊಡ್ಡ ಆಸೆ ಇರುತ್ತದೆ. ಅದು ಸುದೀಪ್ ಅವರಿಗೆ ಹೇರ್‌ಕಟ್ ಮಾಡಬೇಕೆಂಬುದು. ಹೇಗಾದರೂ ಮಾಡಿ ಆ ಆಸೆಯನ್ನು ಈಡೇರಿಸಬೇಕೆಂದು ಹೊರಡುವ ಆತನಿಗೆ ಒಬ್ಬ ಮಧ್ಯವರ್ತಿ ಸಿಗುತ್ತಾನೆ. ಅಲ್ಲಿಂದ ಸಾಕಷ್ಟು ಘಟನೆಗಳು ಜರುಗುತ್ತಾ ಹೋಗುತ್ತದೆ. ಹಾಗಾದರೆ ಸುದೀಪ್‌ಗೆ ಹೇರ್ ಕಟ್ ಮಾಡಬೇಕೆಂಬ ಆತನ ಆಸೆ ಈಡೇರುತ್ತಾ ಎಂಬ ಕುತೂಹಲ ನಿಮಗಿದ್ದರೆ ನೀವು ಸಿನಿಮಾ ನೋಡಬಹುದು.
ಮೊದಲೇ ಹೇಳಿದಂತೆ ಚಿತ್ರ ಕೇವಲ ಒಂದೇ ಟ್ರ್ಯಾಕ್‌ನಲ್ಲಿ ಸಾಗುವುದಿಲ್ಲ. ನಿರ್ದೇಶಕರು ನಾಯಕನ ಕನಸಿನ ಜೊತೆಗೆ ತಂದೆ-ಮಗನ ಬಾಂಧವ್ಯದ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಾರೆ. ಅದಕ್ಕಾಗಿಯೇ ಒಂದಷ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಭಾವನಾತ್ಮಕವಾಗಿ ಈ ಸನ್ನಿವೇಶಗಳು ಇಷ್ಟವಾದರೂ ಕಥೆಯ ಓಟಕ್ಕೆ ಅಡ್ಡಿಯುಂಟು ಮಾಡಿದಂತಾಗುತ್ತದೆ. ಜೊತೆಗೆ ಸಿನಿಮಾವನ್ನು ಒಂದಷ್ಟು ಫನ್ನಿ ಮಾಡಲು ಹೊರಟ ಪರಿಣಾಮ, ಸಿನಿಮಾ ಹಳಿತಪ್ಪಿದಂತೆ ಭಾಸವಾಗುತ್ತದೆ. ಅದರಾಚೆ ಒಂದು ಪ್ರಯತ್ನವಾಗಿ “ಮಂಗಳವಾರ ರಜಾದಿನ’ ಗಮನ ಸೆಳೆಯುತ್ತದೆ.
ಚಿತ್ರದಲ್ಲಿ ಚಂದನ್ ಆಚಾರ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇವರ ನಟನೆ ಈ ಸಿನಿಮಾದ ಜೀವಾಳ. ಉಳಿದಂತೆ ಲಾಸ್ಯ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ರವಿ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.