ಕಡ್ಡಾಯವಾಗಿ ಅತೀ ಬುದ್ಧಿವಂತರಿಗೆ ಮಾತ್ರ
Team Udayavani, Dec 16, 2017, 12:43 PM IST
ಏನ್ ನಡೀತಿದೆ ಇಲ್ಲಿ … ಹಾಗಂತ ಪ್ರೇಕ್ಷಕರು ಕೇಳಬೇಕೆನ್ನುವಷ್ಟರಲ್ಲೇ ನಾಯಕ ಕೇಳಿಬಿಡುತ್ತಾನೆ. ಹಾಗಾಗಿ ಪ್ರಶ್ನೆ ಕೇಳುವ ಭಾಗ್ಯ ಪ್ರೇಕ್ಷಕನ ಬಾಯಿ ತಪ್ಪಿ ಹೋಗುತ್ತದೆ. ಹೋಗಲಿ ಆ ಪ್ರಶ್ನೆಗೆ ಉತ್ತರವನ್ನಾದರೂ ನಾಯಕ ಹುಡುಕುತ್ತಾನಾ ಎಂದರೆ ಅದೂ ಇಲ್ಲ. ಅವನೆಷ್ಟು ಗೊಂದಲದಲ್ಲಿರುತ್ತಾನೋ ಪ್ರೇಕ್ಷಕನಿಗೂ ಅದೇ ಗೊಂದಲ. ಪ್ರೇಕ್ಷಕನ ಪಾಡೇನೋ, ನಾಯಕನ ಪಾಡೂ ಅದೇ.
ಕನ್ನಡದಲ್ಲಿ ಇದುವರೆಗೂ ಅದೆಷ್ಟೋ, “ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಚಿತ್ರಗಳು ಬಂದಿವೆ. ರಾಜ್ ಪ್ರಭು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ, “ಕಡ್ಡಾಯವಾಗಿ ಅತೀ ಬುದ್ಧಿವಂತರಿಗೆ ಮಾತ್ರ’ ಒಂದು ಸಿನಿಮಾ ಮಾಡಿದ್ದಾರೆ. ನಿಮ್ಮ ಬುದ್ಧಿಮತ್ತೆಯ ಮೇಲೆ ನಿಮಗೇನಾದರೂ ಸ್ವಲ್ಪವಾದರೂ ಸಂಶಯವಿದ್ದರೆ, ಚಿತ್ರಕ್ಕೆ ಕರೆದವರಿಗೆ “ಇಲ್ಲ’ ಎಂದು ಬಿಡಬಹುದು.
ಸ್ವಲ್ಪವೂ ಸಂಶಯವಿಲ್ಲ, ನೀವು ಬುದ್ಧಿವಂತರು ಎಂಬ ನಂಬಿಕೆ ನಿಮಗಿದ್ದ ಪಕ್ಷದಲ್ಲಿ ಹೋಗಿ ಚಿತ್ರವನ್ನು ಎಂಜಾಯ್ ಮಾಡಿ ಬನ್ನಿ. ಅಷ್ಟೇ ಅಲ್ಲ, ನಾಲ್ಕು ಜನರಿಗೆ ಚಿತ್ರದಲ್ಲೇನಾಗುತ್ತದೆ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿ. ಹಾಗೆ ನೋಡಿದರೆ “ಇಲ್ಲ’ ಒಂದು ಕೆಟ್ಟ ಪ್ರಯತ್ನವೇನಲ್ಲ ಅಥವಾ ತೀರಾ ಅರ್ಥವಾಗದ ಕಥೆಯೇನಲ್ಲ. ಒಬ್ಬ ಮನುಷ್ಯ ಕಾರಣಾಂತರಗಳಿಂದ ಕಾಡಿಗೆ ಹೋಗುತ್ತಾನೆ.
ಅಲ್ಲಿ ಕಳೆದು ಹೋಗುತ್ತಾನೆ. ದಾರಿ ಹುಡುಕುತ್ತಾ ಬರುವಾಗ ಚಳಿಯಾಗುತ್ತದೆ. ಮರಕ್ಕೆ ಹೊದೆಸಿರುವ ಒಂದು ಬಿಳಿ ಬಟ್ಟೆಯನ್ನು ಹೊದ್ದು ಊರಿಗೆ ವಾಪಸ್ಸಾಗುತ್ತಾನೆ. ಅವನಿಗೆ ಗೊತ್ತಿಲ್ಲದಿರುವ ವಿಷಯವೇನೆಂದರೆ ಅಲ್ಲಿ ಮಾಟ-ಮಂತ್ರ ಮಾಡಿಸಲಾಗಿದೆ ಮತ್ತು ಆ ಬಿಳಿ ಬಟ್ಟೆಯನ್ನು ಮೂರು ದಿನಗಳ ಕಾಲ ಯಾರೂ ಮುಟ್ಟಬಾರದು ಎಂದು.
ಹಾಗೆ ಮುಟ್ಟಿದವರಿಗೆ ಒಂದಲ್ಲ ಒಂದು ಅಪಾಯ ತಪ್ಪಿದ್ದಲ್ಲ ಎಂದು ಗೊತ್ತಿಲ್ಲದ ಆತ ಊರಿಗೆ ಮರಳುತ್ತಿದ್ದಂತೆಯೇ, ವಿಚಿತ್ರವಾಗಿ ಆಡುವುದಕ್ಕೆ ಶುರು ಮಾಡುತ್ತಾನೆ. ಆ ನಂತರ ಏನಾಗುತ್ತದೆ ಎಂಬುದು ಕಥೆ. ಹೀಗೆ ಸ್ಪಷ್ಟವಾಗಿ ಕೆಲವೇ ಸಾಲುಗಳಲ್ಲಿ ಹೇಳಬಹುದಾದ ಒಂದು ಕಥೆಯನ್ನು ವಿಚಿತ್ರವಾಗಿ ಮತ್ತು ಅರ್ಥವೇ ಆಗದಂತೆ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ರಾಜ್ ಪ್ರಭು.
ಒಂದು ಹಂತದಲ್ಲಿ ಅದು ಭ್ರಮೆಯಾ, ಕಲ್ಪನೆಯಾ, ಮಾಟ-ಮಂತ್ರದ ಎಫೆಕ್ಟಾ, ಹುಚ್ಚಾ, ಮಕ್ಕಳಾಟವಾ, ದೆವ್ವದ ಚೇಷ್ಟೆಯಾ … ಎಂದು ಗೊತ್ತಾಗದೆ ಪ್ರೇಕ್ಷಕ ಒದ್ದಾಡಿಬಿಡುತ್ತಾನೆ. ರಾಜ್ ಅವರ ಪ್ರಯೋಗ ಮತ್ತು ಕಲ್ಪನೆಯೇನೋ ಚೆನ್ನಾಗಿಯೇ ಇದೆ. ಒಂದೇ ಒಂದು ಪಾತ್ರವನ್ನಿಟ್ಟುಕೊಂಡು ಎರಡು ಗಂಟೆ ಅವಧಿಯ ಚಿತ್ರ ಮಾಡುವುದು ಅಷ್ಟು ಸುಲಭವೇನಲ್ಲ.
ಆದರೆ, ಸ್ವಲ್ಪ ತಾಳ್ಮೆಯಿಂದ ಇನ್ನಷ್ಟು ಅರ್ಥಗರ್ಭಿತವಾಗಿ ಮತ್ತು ಅರ್ಥವಾಗುವ ಹಾಗೆ ಮಾಡಿದ್ದರೆ, ಪ್ರಯೋಗವನ್ನು ಮೆಚ್ಚಬಹುದಿತ್ತು. ಆದರೆ, ರಾಜ್ ನಿರೂಪಣೆ ಕೊನೆಯವರೆಗೂ ಅರ್ಥವಾಗುವುದಿಲ್ಲ. ಚಿತ್ರದಲ್ಲೇನಾಗುತ್ತಿದೆ ಎಂದು ಕೊನೆಯಲ್ಲಾದರೂ ಸ್ಪಷ್ಟವಾಗಬಹುದು ಎಂತಂದುಕೊಂಡರೆ, ಅದೂ ಸುಳ್ಳಾಗಿ, ಚಿತ್ರ ಮುಗಿದರೂ ಸ್ಪಷ್ಟವಾಗುವುದಿಲ್ಲ. ಹಾಗೇನಾದರೂ ಅರ್ಥವಾಗಲೇಬೇಕು ಎಂದರೆ ಮುಂದಿನ ಭಾಗ ನೋಡುವ ತಾಳ್ಮೆ ಇರಬೇಕು.
ಇಲ್ಲವಾದರೆ, ಮೊದಲೇ ಹೇಳಿದಂತೆ ನೀವು ಅತೀ ಬುದ್ಧಿವಂತರಾಗಿರಬೇಕು. ಇಡೀ ಚಿತ್ರದಲ್ಲಿರುವುದು ರಾಜ್ ಒಬ್ಬರೇ. ಮಿಕ್ಕಂತೆ ಆರೇಳು ಧ್ವನಿಗಳು ಕೇಳುತ್ತವೆ. ಹಾಗಾಗಿ ಇಡೀ ಚಿತ್ರವನ್ನು ಮುನ್ನಡೆಸುವ ಜವಾಬ್ದಾರಿ ರಾಜ್ ಒಬ್ಬರೃ ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ಇಡೀ ಚಿತ್ರವನ್ನು ಅವರೊಬ್ಬರೇ ಮುನ್ನಡೆಸಬೇಕಾದ್ದರಿಂದ, ಹಲವು ಅವತಾರಗಳನ್ನು ಅವರು ಎತ್ತುತ್ತಾರೆ.
ಕೆಲವೊಮ್ಮೆ ಅವರ ಅಭಿನಯ, ಮಾತು, ನಡೆ ಎಲ್ಲವೂ ಕೃತಕವೆನಿಸುತ್ತದೆ. ಆದರೂ ಒಬ್ಬರೇ ಅಷ್ಟನ್ನೆಲ್ಲಾ ಮಾಡಿದ್ದಾರಲ್ಲಾ ಎಂಬ ಕಾರಣಕ್ಕಾದರೂ ಬೆನ್ನು ತಟ್ಟಬೇಕು. ಇನ್ನು ಕೆಲವೊಮ್ಮೆ ಅದ್ಭುತ ಶಾಟ್‌ಗಳಿವೆ. ಅದರಲ್ಲೂ ನಾಯಕನನ್ನು ಸ್ಮೈಲಿ ಬಾಲುಗಳು ಕಾಡುವ ದೃಶ್ಯಗಳನ್ನು ಬಹಳ ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಏನಿಲ್ಲ, ಏನಿಲ್ಲ … ನನ್ನ ತಲೆಯಲ್ಲಿ ಏನ್ ಇಲ್ಲ, ಏನ್ ಏನೂ ಇಲ್ಲ … ಎನ್ನುವವರಿಗೆ ಈ ಚಿತ್ರ ಸ್ವಲ್ಪ ಕಷ್ಟವೇ.
ಚಿತ್ರ: ಇಲ್ಲ
ನಿರ್ಮಾಣ: ಶಂಕರ್
ನಿರ್ದೇಶನ: ರಾಜ್ ಪ್ರಭು
ತಾರಾಗಣ: ರಾಜ್ ಪ್ರಭು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.