ಎದೆಗೂಡಲ್ಲಿ ನೋವಿನ ಛಾಯೆ
Team Udayavani, Feb 3, 2019, 5:40 AM IST
“ಲೇ ಬೇವರ್ಸಿ ಇನ್ನು ಮುಂದೆ ನೀನಾಗಲಿ, ನಿನ್ನ ಹಂದಿಗಳಾಗಲಿ ಇನ್ನೊಂದು ಸಲ ನನ್ನ ಹೊಲಕ್ಕೇನಾದರೂ ಬಂದರೆ ಬೆಂಕಿ ಹಚ್ಚಿ ಸಾಯಿಸ್ ಬಿಡ್ತೀನಿ…’ ಚಿತ್ರದ ಆರಂಭದಲ್ಲೇ ಆ ಹೊಲದ ಮಾಲೀಕ ಹಂದಿ ಕಾಯೋಳಿಗೆ ಈ ರೀತಿ ಬೈದು ಕಳಿಸಿರುತ್ತಾನೆ. ಮರುದಿನ ಬೆಳಗ್ಗೆ ಆ ಹಂದಿ ಕಾಯೋಳ ಮನೆಗೆ ಬೆಂಕಿ ಬಿದ್ದು, ಹಂದಿಗಳು ಸುಟ್ಟು ಕರಕಲಾಗುವುದಲ್ಲದೆ, ಹಂದಿ ಕಾಯೋಳು ಕೂಡ ಸುಟ್ಟು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾಳೆ.
ಸಾಯುವ ಮುನ್ನ ಪೊಲೀಸರ ಎದುರು “ಅಟ್ಟಯ್ಯ’ ಎಂಬ ಹೆಸರನ್ನಷ್ಟೇ ಹೇಳಿ ಸಾಯುತ್ತಾಳೆ. ಅಲ್ಲಿಗೆ ಪೊಲೀಸರು ಈ ಅಟ್ಟಯ್ಯ ಯಾರು ಎಂಬುದನ್ನು ಪತ್ತೆ ಹಚ್ಚಿ “ಅಟ್ಟಯ್ಯ’ನ್ನು ಹಿಡಿದು ಜೈಲಿಗಟ್ಟುತ್ತಾರೆ. ಆ ಬಳಿಕ ಏನೆಲ್ಲಾ ನಡೆಯುತ್ತೆ ಅನ್ನೋದೇ ಕಥೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಗುರುತಿಸಿಕೊಂಡ ಯಾವ ನಟರೂ ಇಲ್ಲಿಲ್ಲ. ಆದರೆ, ಗಮನಸೆಳೆಯುವ ಪಾತ್ರಗಳಿವೆ. ಪ್ರತಿ ಪಾತ್ರಗಳಲ್ಲೂ ವಿಭಿನ್ನತೆ ಇದೆ.
ಒಂದು ಹಳ್ಳಿಯ ವಾತಾವರಣದಲ್ಲಿ ನಡೆಯುವ ಸನ್ನಿವೇಶಗಳೇ ಚಿತ್ರದ ಜೀವಾಳ. ಮುಖ್ಯವಾಗಿ ಇಲ್ಲಿ, ಅನಗತ್ಯ ದೃಶ್ಯಗಳಾಗಲಿ, ಕಿರಿ ಕಿರಿ ಎನಿಸುವ ಪಾತ್ರಗಳಾಗಲಿ ಇಲ್ಲ. ಇದ್ದರೂ ಅದು ಸಣ್ಣ ಮಟ್ಟಿಗಿನ “ಕಿರಿಕ್ ಅಷ್ಟೇ. ಮುಖ್ಯವಾಗಿ ತೆರೆಯ ಮೇಲೆ, ತೆರೆಯ ಹಿಂದೆ ಹೊಸಬರೇ ಇರುವುದರಿಂದ ಚಿತ್ರದಲ್ಲಿ ತಕ್ಕಮಟ್ಟಿಗೆ ಹೊಸತನ ಎದ್ದು ಕಾಣುತ್ತದೆ. ಶೀರ್ಷಿಕೆಯಷ್ಟೇ ಕಥೆಯಲ್ಲೂ ಕೊಂಚ ಹೊಸತನವಿದೆ.
ಹಳ್ಳಿ ಸೊಗಡು ತುಂಬಿದ ಈ ಚಿತ್ರದಲ್ಲಿ ಒಟ್ಟೊಟ್ಟಿಗೆ ಮೂರು ಕಥೆಗಳು ಸಾಗುತ್ತವೆ. ಆ ಮೂರು ಕಥೆಗಳಿಗೂ ಒಂದೊಕ್ಕೊಂದು ಲಿಂಕ್ ಕಲ್ಪಿಸಿರುವುದು ನಿರ್ದೇಶಕರ ಜಾಣತನ. ಒಂದು ಕೊಲೆಯ ಸುತ್ತ ನಡೆಯುವ ಚಿತ್ರದಲ್ಲಿ ಪ್ರೀತಿ, ಗೆಳೆತನ ಮತ್ತು ಮೋಸ ಮೇಳೈಸಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಪಾತ್ರಗಳಲ್ಲಿರುವ ಮುಗ್ಧತೆ. ಆ ಕಾರಣಕ್ಕೆ ಚಿತ್ರ ಒಂದಷ್ಟು ಗಮನಸೆಳೆಯುತ್ತದೆ.
ಮೊದಲರ್ಧ ಅಷ್ಟಾಗಿ ರುಚಿಸದಿದ್ದರೂ, ದ್ವಿತಿಯಾರ್ಧದಲ್ಲಿ ನಿಜವಾದ ಕಥೆ ಮತ್ತು ನಿರೂಪಣೆಯ ಓಟ ನೋಡುಗನನ್ನು ರುಚಿಸುತ್ತದೆ. ಎಲ್ಲೋ ಒಂದು ಕಡೆ ಸಿನಿಮಾ ಬೋರು ಎನಿಸುತ್ತಿದ್ದಂತೆಯೇ, “ಸಂಸಾರ ಅಂದ್ರೆ ಏನೋ ಮಗ…’ ಹಾಡು ಸ್ವಲ್ಪ ರಿಲ್ಯಾಕ್ಸ್‌ಗೆ ದೂಡುತ್ತದೆ. ಅದು ಮುಗಿಯುತ್ತಿದ್ದಂತೆಯೇ ಕಥೆಯಲ್ಲಿ ತಿರುವುಗಳು ಪಾತ್ರ ವಹಿಸುತ್ತವೆ. ಹಳ್ಳಿ ಕಥೆ, ಅಲ್ಲಿರುವ ಪಾತ್ರಗಳಾದ್ದರಿಂದ ಮಾತುಗಳು ಸಹ ಪಕ್ಕಾ ಲೋಕಲ್ ಆಗಿಯೇ ಇವೆ.
ಅಲ್ಲಲ್ಲಿ ಪೋಲಿತನದ ಮಾತುಗಳನ್ನು ಹೊರತುಪಡಿಸಿದರೆ, ಒಂದು ಹಳ್ಳಿಯಲ್ಲಿ ನಡೆಯುವ ಘಟನೆಗಳು ಹೀಗೆ ಇರುತ್ತವೇನೋ ಎಂಬಷ್ಟರ ಮಟ್ಟಿಗೆ ನಿರೂಪಿಸಿರುವುದು ತಕ್ಕಮಟ್ಟಿಗಿನ ಸಮಾಧಾನ. ಚಿತ್ರ ಶುರುವಾಗೋದೇ ಅಟ್ಟಯ್ಯ ಮತ್ತು ಹಂದಿ ಕಾಯೋಳು ನಡುವಿನ ಜಗಳದಲ್ಲಿ. ಹಂದಿ ಕಾಯೋಳು ಸತ್ತಾಗ, ಅಟ್ಟಯ್ಯನೇ ಕಾರಣ ಅಂತ ಜೈಲಿಗಟ್ಟುತ್ತಾರೆ. ಅವನೊಬ್ಬ ಅಮಾಯಕ ಅನ್ನೋದು ಆಮೇಲೆ ಗೊತ್ತಾಗುತ್ತೆ.
ಮತ್ತೂಂದು ಕಡೆ, ಅಟ್ಟಯ್ಯ ಜೈಲಿಗೆ ಹೋಗುತ್ತಿದ್ದಂತೆಯೇ ಅತ್ತ ಅವನ ಹೆಂಡತಿ ಪರಪುರುಷನ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾಳೆ. ಜೈಲಲ್ಲೇ ಕುಳಿತ ಆ ಅಟ್ಟಯ್ಯ ಪತ್ನಿಯನ್ನೇ ಕೊಲ್ಲಲು ಸುಫಾರಿ ಕೊಡುತ್ತಾನೆ. ಇನ್ನೊಂದು ಕಡೆ ತಮ್ಮ ಪಾಡಿಗೆ ಜಾಲಿಯಾಗಿ ಬದುಕು ಸವೆಸುವ ಅಮಾಯಕ ಹುಡುಗರು ಊರ ಗೌಡನ ಮಗಳನ್ನು ಪ್ರೀತಿ ಮಾಡುವ ಗೆಳೆಯನಿಗೆ ಮದುವೆ ಮಾಡಿಸಲು ಹರಸಾಹಸ ಪಡುತ್ತಾರೆ.
ಅದೇ ವೇಳೆ, ಅಟ್ಟಯ್ಯನ ಪತ್ನಿ ಕೊಲ್ಲಲು ಸುಫಾರಿ ಪಡೆದ ವ್ಯಕ್ತಿಯೊಬ್ಬ ಆ ಹುಡುಗರನ್ನು ತನ್ನ ಕಾರಲ್ಲಿ ಕೂರಿಸಿಕೊಂಡು ಹೋಗಿ, ಕೊಲೆ ಮಾಡಿ ಹೊರಬರುತ್ತಾನೆ. ಅಮಾಯಕ ಹುಡುಗರಿಗೆ ಆ ವಿಷಯ ತಿಳಿಯುತ್ತಿದ್ದಂತೆಯೇ ಒಬ್ಬೊಬ್ಬರು ಕಂಗಾಲಾಗುತ್ತಾರೆ. ಒಬ್ಬ ಆತ್ಮಹತ್ಯೆ ಹಾದಿ ಹಿಡಿದರೆ, ಇನ್ನೊಬ್ಬ ಜೈಲು ಸೇರುತ್ತಾನೆ. ಮತ್ತೂಬ್ಬ ಇಷ್ಟಕ್ಕೆಲ್ಲ ಕಾರಣವಾದ ಕೊಲೆಗೆಡುಕನನ್ನು ಬೆನ್ನತ್ತುತ್ತಾನೆ. ಆಮೇಲೆ ಏನಾಗುತ್ತೆ ಎಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು.
ಲೋಕೇಂದ್ರ ಸೂರ್ಯ ಪಕ್ಕಾ ಲೋಕಲ್ ಭಾಷೆ ಜೊತೆಗೆ ತನ್ನ ಬಾಡಿಲಾಂಗ್ವೇಜ್ ಮೂಲಕ ಗಮನ ಸೆಳೆಯುತ್ತಾರೆ. “ಅಟ್ಟಯ್ಯ’ ಪಾತ್ರಧಾರಿ ಕೂಡ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ಉಳಿದಂತೆ ತೆರೆ ಮೇಲೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಕಳಪೆ ಎನಿಸುವುದಿಲ್ಲ. ಯಶವಂತ್ ಭೂಪತಿ ಸಂಗೀತದಲ್ಲಿ “ಬೀಸಿತಯ್ಯೋ ಗಾಳಿ, ತೇಲಿತಯ್ಯೋ ಮೋಡ, ಬಾನಿನಲ್ಲಿ ಸೂರ್ಯ ತಣ್ಣಗಾದ ನೋಡು’ ಹಾಡು ಗುನುಗುವಂತಿದೆ. ವಿಜಯ್ ಛಾಯಾಗ್ರಹಣದಲ್ಲಿ ತಕ್ಕಮಟ್ಟಿಗೆ ಹಳ್ಳಿ ಸೊಬಗಿದೆ.
ಚಿತ್ರ: ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು
ನಿರ್ಮಾಣ: ಲೋಕೇಶ್ ಗೌಡ
ನಿರ್ದೇಶನ: ಲೋಕೇಂದ್ರ ಸೂರ್ಯ
ತಾರಾಗಣ: ಲೋಕೇಂದ್ರ ಸೂರ್ಯ, ಋತುಚಂದ್ರ, ಮಹದೇವ್, ತಾತಗುಣಿ ಕೆಂಪೇಗೌಡ, ವಿನಯ್ ಕೂರ್ಗ್, ರಾಜು ಕಲ್ಕುಣಿ, ಪ್ರೇಮಾ, ಅರ್ಜುನ್ ಕೃಷ್ಣ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.