“ಅಮ್ಮನ ಮನೆ’ಗೆ ರಾಜೀವನೇ ಆಸರೆ
Team Udayavani, Mar 9, 2019, 5:44 AM IST
“ಅಮ್ಮ, ತಪ್ಪು ಮಾಡಬಾರದು. ನಮ್ಮ ಹಕ್ಕುಗಳನ್ನ ನಾವು ಕೇಳಿ ಪಡೆದುಕೊಳ್ಳಬೇಕು ಅಂತ ನನಗೆ ಹೇಳಿಕೊಟ್ಟಿದ್ದು ನೀನು. ನಾನೂ ಇವತ್ತು, ನನ್ನಂಥ ಅದೆಷ್ಟೋ ಜನರ ಪರವಾಗಿ ಹೋರಾಡುತ್ತಿದ್ದೇನೆ. ಆದ್ರೆ ಜನ, ಸಮಾಜ ಯಾರೂ ನನ್ನ ಪರವಾಗಿಲ್ಲ. ಎಲ್ಲರೂ ಗೇಲಿ ಮಾಡಿಕೊಂಡು ನಗುತ್ತಿದ್ದಾರೆ…’ ಹೀಗೆ ರಾಜೀವ ತನ್ನ ಹೋರಾಟದ ಹಾದಿಯ ಅನುಭವಗಳನ್ನು ಅಮ್ಮನ ಮುಂದೆ ಹೇಳುತ್ತಿದ್ದರೆ, ತಾಯಿ ಜಾನಕಮ್ಮ ಮಗನ ನೋವುಗಳನ್ನು ಕೇಳುತ್ತಾ, ಮೂಖವೇದನೆಯಲ್ಲಿ ಕಣ್ಣೀರು ಹಾಕುತ್ತಿರುತ್ತಾಳೆ.
ಇದು ಅಮ್ಮನ ಮನೆ ಚಿತ್ರದಲ್ಲಿ ಬರುವ ಒಂದು ಸನ್ನಿವೇಶ. ಹಾಗಾದರೆ, ಇಂಥ ಸನ್ನಿವೇಶದ ಹಿನ್ನೆಲೆ ಏನು? ಜಾನಕಮ್ಮ ತನ್ನ ಮಗ ರಾಜೀವನನ್ನು ಬೆಳೆಸಿದ ರೀತಿಯಾದರೂ ಹೇಗೆ? ರಾಜೀವ ಮಾಡುತ್ತಿರುವ ಹೋರಾಟವಾದರೂ ಏನು? ಅದೆಲ್ಲವನ್ನು ನೋಡಬೇಕು ಅಂದ್ರೆ “ಅಮ್ಮನ ಮನೆ’ಗೆ ಹೋಗಬೇಕು. ಹೌದು, ಸುಮಾರು ಹದಿನಾಲ್ಕು ವರ್ಷಗಳ ನಂತರ ನಟ ರಾಘವೇಂದ್ರ ರಾಜಕುಮಾರ್ ಅವರ ಕಂ ಬ್ಯಾಕ್ ಚಿತ್ರ ಎಂದೇ ಹೇಳಲಾಗುತ್ತಿರುವ “ಅಮ್ಮನ ಮನೆ’ ಚಿತ್ರ ಈ ವಾರ ತೆರೆಗೆ ಬಂದಿದೆ.
ನಿರ್ದೇಶಕ ನಿಖೀಲ್ ಮಂಜು, ತಾಯಿ-ಮಗ, ಮನೆ, ಸಂಬಂಧಗಳ ಸುತ್ತ ಸುತ್ತುವ ಗಂಭೀರ ವಿಷಯವೊಂದನ್ನು ಈ ಚಿತ್ರದ ಮೂಲಕ ತೆರೆಗೆ ತಂದಿದ್ದಾರೆ. ಬಾಲ್ಯದಿಂದಲೇ ಅಂಗ ವೈಕಲ್ಯದಿಂದ ಬಳಲುತ್ತಿರುವ ರಾಜೀವನನ್ನು ಅವನ ತಾಯಿ ಜಾನಕಮ್ಮ ಸಾಕಷ್ಟು ಮುತುವರ್ಜಿಯಿಂದ ಸಲಹಿ, ಪೋಷಿಸುತ್ತಾಳೆ. ಅಂಗ ವೈಕಲ್ಯವಿದ್ದರೂ ಅದನ್ನೆಲ್ಲ ಮೆಟ್ಟಿನಿಂತು, ಸ್ವಾವಲಂಭಿ ಮತ್ತು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡಿರುತ್ತಾಳೆ.
ತಾನು ಕೆಲಸ ಮಾಡುವ ಕಡೆ, ಸಮಾಜದಲ್ಲಿ ನೊಂದವರಿಗೆ ಧ್ವನಿಯಾಗಿ, ಅನುಕರಣೀಯವಾಗಿ ಬದುಕುವ ರಾಜೀವ ತನ್ನ “ಅಮ್ಮನ ಮನೆ’ಯಲ್ಲಿ, ಅಮ್ಮನಿಗೆ ಹೆಮ್ಮೆಯ ಮಗನಾದರೆ, ಹೆಂಡತಿ – ಮಗಳಿಗೆ ಅಸಹನೆಯ ವ್ಯಕ್ತಿ. ತನ್ನ ಸ್ವಾಭಿಮಾನಕ್ಕೆ, ಹಕ್ಕುಗಳಿಗೆ ಧಕ್ಕೆಯಾದರೆ ಅದನ್ನು ಖಂಡಿಸಿ ಪ್ರತಿಭಟಿಸುವ ರಾಜೀವ, ತಾನು ನಡೆಯುವ ದಾರಿಯಲ್ಲಿ ಹಲವು ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಾನೆ.
ಅಂತಿಮವಾಗಿ ರಾಜೀವ ತನ್ನ ಹೋರಾಟದಲ್ಲಿ ಗೆಲ್ಲುತ್ತಾನಾ? ರಾಜೀವನ ಹೋರಾಟದ ಪರಿಣಾಮಗಳೇನು? ಎನ್ನುವುದೇ “ಅಮ್ಮನ ಮನೆ’ ಚಿತ್ರದ ಕಥಾ ಹಂದರ. “ಅಮ್ಮನ ಮನೆ’ ಕಥೆ ಪ್ರಸ್ತುತ ಕಾಲಮಾನಕ್ಕೆ ಹತ್ತಿರವಿದ್ದರೂ, ಚಿತ್ರದ ನಿರೂಪಣೆ ಶೈಲಿ ಕಥೆಯನ್ನು ಅಲ್ಲಲ್ಲಿ ಮಂಕಾಗಿಸಿದೆ. ಚಿತ್ರ ಗಂಭೀರವಾಗಿ ನಡೆಯುತ್ತಿರುವಾಗ, ಕಥೆಗೆ ಅಗತ್ಯವಿರದ ಕೆಲ ಪಾತ್ರಗಳು ಬಂದು ಅಲ್ಲಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತವೆ.
“ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರದ್ದು ಕುಟುಂಬದ ಜವಾಬ್ದಾರಿ ಹೊತ್ತ ಮಧ್ಯ ವಯಸ್ಕ ರಾಜೀವನ ಪಾತ್ರ. ಅಂಗ ವೈಕಲ್ಯವಿದ್ದರೂ, ಸ್ವಾಭಿಮಾನಿಯಾಗಿ ಅಮ್ಮನ ಮನೆಯನ್ನು ನಡೆಸಿಕೊಂಡು ಹೋಗುವ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರದ್ದು ಅಚ್ಚುಕಟ್ಟಾದ ಅಭಿನಯ. ಅವರ ಹಾವ-ಭಾವ, ನಡೆ-ನುಡಿ ಎಲ್ಲವೂ ರಾಜೀವ ಪಾತ್ರಕ್ಕೆ ಒಪ್ಪುವಂತಿದೆ.
ರಾಜೀವನ ಪಾತ್ರದಲ್ಲೇ ಇಡೀ ಚಿತ್ರ ನಡೆಯುವುದರಿಂದ, ಬೇರೆ ಪಾತ್ರಗಳು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ. ಉಳಿದಂತೆ ಚಿತ್ರದ ಬಹುತೇಕ ಕಲಾವಿದರು ತಮಗಿದ್ದ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಬರುವ ಸಂಭಾಷಣೆಗಳು ನೋಡುಗರ ಮನ ಮುಟ್ಟುವಂತಿವೆ. ಛಾಯಾಗ್ರಹಣ ಚಿತ್ರದ ದೃಶ್ಯಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದೆ.
ಸಂಕಲನ ಕಾರ್ಯ ಇನ್ನಷ್ಟು ಮೊನಚಾಗಿದ್ದರೆ “ಅಮ್ಮನ ಮನೆ’ ತೆರೆಮೇಲೆ ಇನ್ನಷ್ಟು ಹೊಳೆಯುತ್ತಿತ್ತು. ಹಿನ್ನೆಲೆ ಸಂಗೀತದ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಕೊಡಬಹುದಿತ್ತು. ಕೆಲವೊಂದು ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ, “ಅಮ್ಮನ ಮನೆ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಆ್ಯಕ್ಷನ್, ಥ್ರಿಲ್ಲರ್, ಹಾರರ್, ಮಾಮೂಲಿ ಕಮರ್ಷಿಯಲ್ ಚಿತ್ರಗಳಿಂದ ಕೊಂಚ ಬ್ರೇಕ್ ಇರಲಿ ಎನ್ನುವವರು ಒಮ್ಮೆ “ಅಮ್ಮನ ಮನೆಗೆ’ ಹೋಗಿ ಬರಬಹುದು.
ಚಿತ್ರ: ಅಮ್ಮನ ಮನೆ
ಚಿತ್ರಕಥೆ – ನಿರ್ದೇಶನ: ನಿಖಿಲ್ ಮಂಜು
ನಿರ್ಮಾಣ: ಆತ್ಮಶ್ರೀ, ಆರ್.ಎಸ್ ಕುಮಾರ್
ತಾರಾಗಣ: ರಾಘವೇಂದ್ರ ರಾಜಕುಮಾರ್, ಸುಚೇಂದ್ರ ಪ್ರಸಾದ್, ತಬಲನಾಣಿ, ಪ್ರಣವ ಮೂರ್ತಿ, ಎಂ.ಡಿ ಕೌಶಿಕ್, ಮಾನಸಿ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.