![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 16, 2024, 10:08 AM IST
ಭಾವನೆಗಳು ಕೆರಳಲು, ಕಣ್ಣೀರಾಗಲು ದೊಡ್ಡ ವಿಷಯಗಳೇ ಆಗಬೇಕೆಂದಿಲ್ಲ. ಮನಸ್ಸಿಗೆ ಹತ್ತಿರವಾದ ಒಂದು ಸಣ್ಣ ವಿಚಾರ ಮನಸ್ಸನ್ನು ಅಲ್ಲೋಲ-ಕಲ್ಲೋಲ ಮಾಡಿ, ಅದು ಯಾವ ಹಂತಕ್ಕೂ ಹೋಗಬಹುದು. ಇಂತಹ ವಿಚಾರವನ್ನಿಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ರವಿಕೆ ಪ್ರಸಂಗ’. ಹೆಸರೇ ಹೇಳುವಂತೆ ಇಡೀ ಸಿನಿಮಾ ರವಿಕೆಯೊಂದರ ಸುತ್ತ ಸುತ್ತುತ್ತದೆ. ತನ್ನ ಕನಸಿನ ರವಿಕೆಯನ್ನು ಕೆಡಿಸಿದ ಟೈಲರ್ ಒಂದು ಕಡೆಯಾದರೆ, ಆತನ ವಿರುದ್ಧ ಕಾನೂನು ಸಮರಕ್ಕೆ ಮುಂದಾಗುವ ಯುವತಿ ಮತ್ತೂಂದು ಕಡೆ… ಅಂತಿಮವಾಗಿ ಏನಾಗುತ್ತದೆ ಎಂಬುದೇ ಸಿನಿಮಾ.
ನಿರ್ದೇಶಕ ಸಂತೋಷ್ ಕೊಡಂಕೇರಿ ಒಂದು ಕಂಟೆಂಟ್ ಸಿನಿಮಾವಾಗಿ ಇದನ್ನು ಕಟ್ಟಿಕೊಡಲು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಅದೇ ಕಾರಣದಿಂದ ಸೀಮಿತ ಪಾತ್ರಗಳನ್ನಿಟ್ಟುಕೊಂಡು ಸಿನಿಮಾವನ್ನು ಕೆಯ ಚೌಕಟ್ಟಿನೊಳಗೆ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ ಸಿನಿಮಾ ದಕ್ಷಿಣ ಕನ್ನಡದ ಪರಿಸರ ಹಾಗೂ ಅಲ್ಲಿನ ಕನ್ನಡದಲ್ಲೇ ಮೂಡಿಬಂದಿದೆ. ಸಣ್ಣ ಸಣ್ಣ ವಿಚಾರಗಳು ಹೇಗೆ ದೊಡ್ಡದಾಗುತ್ತವೆ ಮತ್ತು ಸಮಾಜ ಎಷ್ಟೇ ಮುಂದುವರೆದರೂ ಕೆಲವರು ನೋಡುವ ದೃಷ್ಟಿ ಬದಲಾಗುವುದಿಲ್ಲ ಎಂಬ ಅಂಶವನ್ನು ಚಿತ್ರದಲ್ಲಿ ಹೇಳಲಾಗಿದೆ.
ಇಡೀ ಚಿತ್ರವನ್ನು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿನ ಲೊಕೇಶನ್‌ಗಳು ಕೂಡಾ ಗಮನ ಸೆಳೆಯುತ್ತವೆ. ಪಾವನಾ ಸಂತೋಷ್ ಅವರ ಕಥೆ, ಸಂಭಾಷಣೆ ಸಿನಿಮಾದ ಪ್ಲಸ್‌ಗಳಲ್ಲಿ ಒಂದು.
ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾರತಿ ಭಟ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಮನ್ ರಂಗನಾಥ್ , ರಾಕೇಶ್ ಮಯ್ಯ , ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಪ್ರವೀಣ್ ಅಥರ್ವ ,ರಘು ಪಾಂಡೇಶ್ವರ್ , ಹನುಮಂತೇ ಗೌಡ ಕಥೆಯ ಓಘಕ್ಕೆ ಸಾಥ್ ನೀಡಿದ್ದಾರೆ. ಯಾವುದೇ ಅಬ್ಬರವಿಲ್ಲದ ಒಂದು ಕಂಟೆಂಟ್ ಸಿನಿಮಾವನ್ನು ನೋಡಬೇಕೆನ್ನುವವರು “ರವಿಕೆ ಪ್ರಸಂಗ’ದತ್ತ ಮುಖಮಾಡಬಹುದು.
You seem to have an Ad Blocker on.
To continue reading, please turn it off or whitelist Udayavani.