ಸಾಹೋರೆ ಸಾಹೋರೆ ಬಾಹುಬಲಿ…
Team Udayavani, Apr 29, 2017, 11:17 AM IST
ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ? ಕಳೆದ ಒಂದೂ ಮುಕ್ಕಾಲು ವರ್ಷದ ಹಿಂದೆ ಎದ್ದಿದ್ದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಉತ್ತರ ನೋಡಿ ಪ್ರೇಕ್ಷಕರಿಗೆ ಕೊಂಚ ನಿರಾಶೆಯಾಗಬಹುದು. ಏಕೆಂದರೆ, ಇದೇನು ಪ್ರೇಕ್ಷಕರು ಊಹಿಸಲಾರದ ಉತ್ತರವೇನಲ್ಲ. “ಬಾಹುಬಲಿ – ದಿ ಬಿಗಿನಿಂಗ್’ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದವರಿಗೆ, ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದಿರಬಹುದು ಎಂಬ ಅಂದಾಜು ಸಿಗುತಿತ್ತು. ಅದು ನಿಜವಾಗಿದೆ. ಹಾಗಂತ ಪ್ರೇಕ್ಷಕರು ಬೇಸರಗೊಳ್ಳಬೇಕಿಲ್ಲ.
ಇದೊಂದೇ ಪ್ರಶ್ನೆಯ ಮೇಲೇನೂ ಚಿತ್ರ ನಿಂತಿಲ್ಲ. ಚಿತ್ರವನ್ನು ನೋಡುವುದಕ್ಕೆ, ಮೆಚ್ಚಿಕೊಳ್ಳುವುದಕ್ಕೆ ಇನ್ನೂ ಹಲವಾರು ಕಾರಣಗಳಿವೆ. “ಬಾಹುಬಲಿ 2′ ಚಿತ್ರವನ್ನು “ಬಾಹುಬಲಿ’ಯ ಮುಂದುವರೆದ ಭಾಗ ಎನ್ನುವುದಕ್ಕಿಂತ ಹೆಚ್ಚಾಗಿ, ಆ ಚಿತ್ರದ ಫ್ಲಾಶ್‌ಬ್ಯಾಕ್ ಎಂದರೆ ತಪ್ಪಿಲ್ಲ. ಏಕೆಂದರೆ, ಈ ಚಿತ್ರದಲ್ಲಿ ಮುಕ್ಕಾಲು ಭಾಗದಷ್ಟು ಫ್ಲಾಶ್‌ಬ್ಯಾಕ್ ತುಂಬಿದೆ. ಆ ಕಥೆಯೆಲ್ಲಾ ಮುಗಿದ ನಂತರ ಈ ಚಿತ್ರ ಪ್ರಾರಂಭವಾಗುತ್ತದೆ ಮತ್ತು ಬೇಗ ಮುಗಿಯುತ್ತದೆ.
ಹಾಗೆ ನೋಡಿದರೆ, ಚಿತ್ರ ಹೇಗೆ ಮುಂದುವರೆಯಬಹುದು ಮತ್ತು ಹೇಗೆ ಮುಕ್ತಾಯವಾಗಬಹುದು ಎಂದು ಊಹಿಸುವುದು ಕಷ್ಟವಲ್ಲ. ಹಾಗೆ ಊಹಿಸಿದಂತೆಯೇ ಚಿತ್ರ ಮುಕ್ತಾಯವಾಗುತ್ತದೆ. ಮೊದಲ ಭಾಗ ಅಮರೇಂದ್ರ ಬಾಹುಬಲಿ ಸಾಯುವುದರೊಂದಿಗೆ ಮುಕ್ತಾಯವಾಗುವ ಮೂಲಕ ದುಖಾಂತ್ಯವಾಗಿತ್ತು. ಈ ಭಾಗದಲ್ಲಿ ಅವನ ಮಗ ತನ್ನ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ರಾಜನಾಗುವ ಮೂಲಕ ಸುಖಾಂತ್ಯವಾಗುತ್ತದೆ.
ಆದರೆ, ಚಿತ್ರ ನಿಲ್ಲುವುದು ಬೇರೆಬೇರೆಯೇ ಕಾರಣಗಳಿಂದ. ಒಂದು ಗೊತ್ತಿರುವ ಕಥೆಯನ್ನು ಹೇಗೆ ನೋಡಿಸಿಕೊಂಡು ಹೋಗಬೇಕು ಮತ್ತು ಹೇಗೆ ಪ್ರೇಕ್ಷಕರನ್ನು ಹಿಡಿದಿಡಬೇಕು ಎಂಬ ಕಲೆ ರಾಜಮೌಳಿಗೆ ಚೆನ್ನಾಗಿ ಗೊತ್ತಿದೆ. ಚಿತ್ರದುದ್ದಕ್ಕೂ ಅವರು ಆ ಟ್ರಿಕ್ಕುಗಳನ್ನು ಉಪಯೋಗಿಸುತ್ತಾರೆ. ಚಿತ್ರದ ಓಪನಿಂಗು ಡಲ್ಲಾಯಿತು ಎನ್ನುವಷ್ಟರಲ್ಲಿ ಅವರು ಬಾಹುಬಲಿ ಆನೆಯನ್ನು ಪಳಗಿಸುವ ಮೈನವಿರೇಳಿಸುವ ದೃಶ್ಯವನ್ನು ತರುತ್ತಾರೆ.
ದೇವಸೇನ ಕಥೆಯು ಸ್ವಲ್ಪ ನಿಧಾನವಾಯಿತು ಎನ್ನುವಷ್ಟರಲ್ಲಿ ಒಂದು ಬೇಟೆಯ ಮತ್ತು ಒಂದು ಯುದ್ಧದ ಸನ್ನಿವೇಶವನ್ನು ತರುತ್ತಾರೆ. ಅದ್ಯಾವಗಲೋ ಒಂದೊಳ್ಳೆಯ ಸೆಂಟಿಮೆಂಟ್ ದೃಶ್ಯವನ್ನು ತಂದು, ಪ್ರೇಕ್ಷಕರ ಬಾಯಿ ಮುಚ್ಚಿಸಿದರೆ, ಇನ್ನಾéವಗಲೋ ಚೆಂದದ ಹಾಡೊಂದನ್ನು ಇಡುತ್ತಾರೆ. ಇದೆಲ್ಲದರ ಜೊತೆಗೆ ಕಟ್ಟಪ್ಪ, ಬಾಹುಬಲಿಯನ್ನು ಕೊಲ್ಲುವ ಮತ್ತು ಆ ನಂತರದ ದೃಶ್ಯಗಳು ಸಹ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ.
ಒಟ್ಟಾರೆ ಪ್ರೇಕ್ಷಕರು ಕದಲದಂತೆ ಚಿತ್ರದುದ್ದಕ್ಕೂ ನೋಡಿಕೊಳ್ಳುತ್ತಾರೆ ರಾಜಮೌಳಿ. ಚಿತ್ರ ನೋಡಿದ ಕೆಲವು ಪ್ರೇಕ್ಷಕರು ಮೊದಲಾರ್ಧ ಚೆನ್ನಾಗಿತ್ತು ಎಂದರೆ, ಇನ್ನೂ ಕೆಲವರು ದ್ವಿತೀಯಾರ್ಧ ಚೆನ್ನಾಗಿತ್ತು ಎಂದು ತೀರ್ಪು ನೀಡುತ್ತಾರೆ. ಇನ್ನೂ ಕೆಲವರು ಮೊದಲ ಭಾಗಕ್ಕೆ ಹೋಲಿಸಿದರೆ, ಈ ಭಾಗ ಕೊಂಚ ಡಲ್ಲು ಎಂಬ ಅಭಿಪ್ರಾಯವನ್ನೂ ನೀಡುತ್ತಾರೆ. ಹಾಗೆ ನೋಡಿದರೆ, “ಬಾಹುಬಲಿ’ ಒಂದೇ ಏಟಿಗೆ ತೀರ್ಪು ಕೊಟ್ಟು ಮುಗಿಸುವಂತಹ ಸಿನಿಮಾ ಅಲ್ಲ.
ಇಲ್ಲಿ ತೀರ್ಪಿಗಿಂತಲೂ, ಚಿತ್ರವನ್ನು ಎಂಜಾಯ್ ಮಾಡಿಕೊಂಡು ನೋಡುವುದು ಬಹಳ ಮುಖ್ಯ. ಚಿತ್ರದಲ್ಲಿ ಹಲವು ಅದ್ಭುತ ಎನಿಸುವಂತಹ ದೃಶ್ಯಗಳಿವೆ, ಮೈನವಿರೇಳಿಸುವ ಸಾಹಸಗಳಿವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದುವರೆಗೂ ಭಾರತೀಯ ಚಿತ್ರಗಳಲ್ಲಿ ನೋಡದಂತಹ ಕಂಪ್ಯೂಟರ್ ಗ್ರಾಫಿಕ್ಸ್ ಇವೆ. ಅವೆಲ್ಲವನ್ನೂ, ಬಾಹುಬಲಿನ ಕಟ್ಟಪ್ಪ ಯಾಕೆ ಕೊಂದ ಎಂಬ ಪ್ರಶ್ನೆ ಮತ್ತು ಅದರ ಉತ್ತರದಿಂದ ಅಳಿಯುವುದಕ್ಕೆ ಸಾಧ್ಯವೇ ಇಲ್ಲ.
ಉತ್ತರ ಸಿಕ್ಕಿತು ಎಂಬ ಮಾತ್ರಕ್ಕೆ ಇಷ್ಟೇನಾ ಎನ್ನುವಂತೆಯೂ ಇಲ್ಲ. ಇಡೀ ಚಿತ್ರ ಒಂದು ಅನುಭವ. ಹಾಗಾಗಿ ಚಿತ್ರ ಅದ್ಭುತವಾಗಿದೆಯಾ ಅಥವಾ ಚೆನ್ನಾಗಿದೆಯಾ ಅಥವಾ ಕೆಟ್ಟದಾಗಿದೆಯಾ ಎಂಬ ವಿಷಯಗಳನ್ನು ಪಕ್ಕಕ್ಕಿಟ್ಟು, ಅನುಭವಕ್ಕಾಗಿಯೇ ನೋಡಬೇಕು. ಆ ಮಟ್ಟದ ಅನುಭವವನ್ನು ರಾಜಮೌಳಿ ಎರಡೂ ಚಿತ್ರಗಳ ಮೂಲಕ ಕೊಟ್ಟಿದ್ದಾರೆ. ಬಹುಶಃ ಹಾಲಿವುಡ್‌ನ “ದಿ ಟೆನ್ ಕಮಾಂಡ್‌ಮೆಂಟ್ಸ್’ ಮತ್ತು “ಬೆನ್‌ಹರ್’ ತರಹದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಬರುವುದಕ್ಕೆ ಸಾಧ್ಯವಿಲ್ಲ ಎಂಬ ಕೊರಗಿಗೆ ಉತ್ತರವಾಗಿ ಚಿತ್ರ ಮೂಡಿಬಂದಿದೆ ಎಂದರೆ ತಪ್ಪಿಲ್ಲ.
“ಬಾಹುಬಲಿ 2’ನಲ್ಲಿ ಏನು ಚೆನ್ನಾಗಿದೆ ಎಂದು ಹೇಳುವುದು ಕಷ್ಟವೇ. ಅಭಿನಯದ ಜೊತೆಗೆ ಪೀಟರ್ ಹೇನ್ ಸಂಯೋಜಿಸಿರುವ ಸಾಹಸ ದೃಶ್ಯಗಳು, ಕೀರವಾಣಿ ಸಂಗೀತ, ಸೆಂಧಿಲ್ ಕುಮಾರ್ ಛಾಯಾಗ್ರಹಣ, ಮಕುಟ ಗ್ರಾಫಿಕ್ಸ್ ಮಾಡಿಕೊಟ್ಟಿರುವ ಗ್ರಾಫಿಕ್ಸ್ ಎಲ್ಲವೂ ಚೆನ್ನಾಗಿಯೇ ಇದೆ. ಅದರಲ್ಲೂ ಅಭಿನಯದ ವಿಷಯವಾಗಿ ಹೇಳಬೇಕಾದರೆ, ಮೊದಲ ಭಾಗ ಹೆಚ್ಚಾಗಿ ಪ್ರಭಾಸ್, ತಮನ್ನಾ ಮತ್ತು ಸತ್ಯರಾಜ್ ಅವರ ಮೇಲೆ ನಿಂತಿತ್ತು.
ಆದರೆ, ಇಲ್ಲಿ ರಮ್ಯಾ ಕೃಷ್ಣ, ಅನೂಷ್ಕಾ ಶೆಟ್ಟಿ, ನಾಜರ್, ರಾಣ ಎಲ್ಲರಿಗೂ ಗಟ್ಟಿ ಪಾತ್ರಗಳೇ ಇವೆ. ಎಲ್ಲರೂ ತಮ¤ಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರಭಾಸ್ ಮತ್ತು ಸತ್ಯರಾಜ್ ಅವರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಿತ್ರದ ಆರಂಭದಿಂದ ಕೊನೆಯವರೆಗೂ ಇಬ್ಬರೂ ಮತ್ತು ಪ್ರಭಾಸ್ ಎರಡೂ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಒಟ್ಟಾರೆ “ಬಾಹುಬಲಿ’ ಚಿತ್ರಗಳನ್ನು ಯಾಕೆ ನೋಡಬೇಕು, ಚಿತ್ರ ಎಷ್ಟು ಚೆನ್ನಾಗಿದೆ ಎನ್ನುವುದಕ್ಕಿಂತ ರಾಜಮೌಳಿ ಎಂಬ ದೊಡ್ಡ ಕನಸುಗಾರನ ಬೃಹತ್ ಕನಸೊಂದನ್ನು ಕಣ್ತುಂಬಿಕೊಳ್ಳುವುದಕ್ಕಾದರೂ ನೋಡಲಡ್ಡಿಯಿಲ್ಲ.
ಚಿತ್ರ: ಬಾಹುಬಲಿ
ನಿರ್ಮಾಣ: ಆರ್ಕಮೀಡಿಯಾ
ನಿರ್ದೇಶನ: ಎಸ್.ಎಸ್. ರಾಜಮೌಳಿ
ತಾರಾಗಣ: ಪ್ರಭಾಸ್, ರಾಣಾ ದಗ್ಗುಬಟ್ಟಿ, ಅನೂಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ಸತ್ಯರಾಜ್ ಮುಂತಾದವರು
* ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSDL ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ
2024ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ರೆಸಿಪಿ ಯಾವುದು ಗೊತ್ತಾ?
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.