ಮನುಷ್ಯನ ಅತಿಯಾಸೆಗೆ ವೈಜ್ಞಾನಿಕ ದರ್ಪಣ
Team Udayavani, Sep 9, 2017, 10:10 AM IST
ಮಧ್ಯರಾತ್ರಿ 3 ಗಂಟೆಗೆ ಬರ್ಬರವಾಗಿ ಒಂದು ಹತ್ಯೆಯಾಗುತ್ತದೆ. ಸತ್ತವನ ಹೆಸರನ್ನು ರಕ್ತದಲ್ಲಿ ಗೋಡೆಯ ಮೇಲೆ ಬರೆಯಲಾಗಿರುತ್ತದೆ. ಅಲ್ಲಿಗೆ ಕೊಲೆ ನಿಲ್ಲೋದಿಲ್ಲ, 6 ಗಂಟೆಗೊಂದು, 9 ಗಂಟೆಗೊಂದು, 12 ಗಂಟೆ … ಕೊಲೆಗಳು ನಡೆಯುತ್ತಲೇ ಇರುತ್ತವೆ. ಪ್ರತಿ ಕೊಲೆಯಲ್ಲೂ ಒಂದು ಸಾಮ್ಯತೆ ಕಾಣಸಿಗುತ್ತದೆ. ಕೊಲೆಯಾಗಿರುವ ವ್ಯಕ್ತಿಯ ಕೈಗಳು ಆತ ಕೊಲೆಯಾಗಿರುವ ಸಮಯವನ್ನು ಸೂಚಿಸಿದರೆ, ಸತತವಾಗಿ ಆಗುತ್ತಿರುವ ಕೊಲೆಗಳಲ್ಲಿ ಮತ್ತೂಂದು ಸಾಮ್ಯತೆ ಎಂದರೆ, ಎಲ್ಲವೂ “ಎ ಬಿ ಸಿ ಡಿ’ ಪ್ರಕಾರವೇ ಆಗಿರುತ್ತದೆ.
ಅಲ್ಲಿಗೆ ಒಂದು ಪಕ್ಕಾ ಆಗುತ್ತದೆ. ಅಷ್ಟು ಕೊಲೆಗಳನ್ನು ಒಬ್ಬನೇ ಮಾಡಿರುತ್ತಾನೆ ಮತ್ತು ಆತನದು ಬ್ರೈನ್ ಗೇಮ್ ಎಂಬುದು. ಎಲ್ಲಾ ಓಕೆ, ಆತ ಕೊಲೆ ಮಾಡಲು ಕಾರಣವೇನು, ಆತನ ಕೊಲೆಯ ಹಿಂದೆ ಏನಿದೆ ಎಂಬ ಕುತೂಹಲ ನಿಮಗಿದ್ದರೆ ನೀವು “ದರ್ಪಣ’ ನೋಡಬೇಕು. ಇತ್ತೀಚೆಗೆ ಬರುತ್ತಿರುವ ಕೆಲವು ಥ್ರಿಲ್ಲರ್ ಸಿನಿಮಾಗಳು ಒಂದಷ್ಟು ವಿಭಿನ್ನತೆಯಿಂದ ಗಮನ ಸೆಳೆಯುತ್ತಿವೆ. “ದರ್ಪಣ’ ಕೂಡಾ ಅದೇ ರೀತಿ ಒಂದಷ್ಟು ಹೊಸ ಪ್ರಯೋಗಗಳೊಂದಿಗೆ ಮೂಡಿಬಂದ ಥ್ರಿಲ್ಲರ್ ಸಿನಿಮಾ.
ನಿರೂಪಣೆ ಹಾಗೂ ಕಥಾ ಶೈಲಿಯಿಂದ “ದರ್ಪಣ’ ಗಮನ ಸೆಳೆಯುತ್ತದೆ. ಸೈನ್ಸ್ ಫಿಕ್ಷನ್ ಹಿನ್ನೆಲೆಯ ಥ್ರಿಲ್ಲರ್ ಸಿನಿಮಾವಿದು. ನಿರ್ದೇಶಕರ ಪ್ರಕಾರ, ಇದು ಸೈನ್ಸ್ ಫ್ಯಾಕ್ಟ್. ಮುಂದಿನ ದಿನಗಳಲ್ಲಿ ಹೀಗಾಗುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಇಲ್ಲಿ. ಮನುಷ್ಯ ದೇವರ ನಿಯಮವನ್ನು ಬದಲಿಸುವುದಕ್ಕೆ ಹೊರಟರೆ, ಅದರಿಂದ ಏನೆಲ್ಲಾ ಆಗುತ್ತದೆ ಎಂಬುದು ಈ ಚಿತ್ರದ ಕಥೆ. ಆ ಕಥೆಯನ್ನು ಮುಖ್ಯಭೂಮಿಕೆಗೆ ತರಲು ಒಂದಷ್ಟು ಕೊಲೆಗಳು ನಡೆಯುತ್ತವೆ.
ಮೊದಲೇ ಹೇಳಿದಂತೆ ಆ ಕೊಲೆಗಳಲ್ಲಿ ಒಂದೊಂದು ಸಾಮ್ಯತೆಗಳು ಕೂಡಾ ಇರುತ್ತವೆ. ಇಲ್ಲಿ ಕೊಲೆಯಾದ ವ್ಯಕ್ತಿಯ ಕೈಗಳು ಆತನ ಕೊಲೆಯ ಸಮಯ ಸೂಚಿಸುವುದನ್ನು ನೋಡಿದಾಗ ನಿಮಗೆ ಹಿಂದಿಯ “ಸಮಯ್’ ಸಿನಿಮಾ ನೆನಪಾಗಬಹುದು. 2003ರಲ್ಲಿ ಬಂದ ಈ ಚಿತ್ರದಲ್ಲೂ ಕೊಲೆಯಾದ ವ್ಯಕ್ತಿಯ ಕೈಗಳು ಆತ ಕೊಲೆಯಾದ 12, 3 ಹಾಗೂ 6 ಗಂಟೆಗಳನ್ನು ತೋರಿಸುತ್ತಿದ್ದವು. “ದರ್ಪಣ’ದಲ್ಲೂ ನಿರ್ದೇಶಕ ಕಾರ್ತಿಕ್ ವೆಂಕಟೇಶ್, ಆ ಟೆಕ್ನಿಕ್ ಬಳಸಿಕೊಂಡಿದ್ದಾರೆ.
ಇನ್ನು, ಚಿತ್ರದ ಆಲ್ಪಬೆಟ್ ಮರ್ಡರರ್ ಕೂಡಾ ಈ ಚಿತ್ರದ ವಿಶೇಷ. ನೀವು ಮಲಯಾಳಂನ “ದಿ ಗ್ರ್ಯಾಂಡ್ ಮಾಸ್ಟರ್’ ನೋಡಿದರೆ ನಿಮಗೆ ಅಲ್ಲಿ “ಎಬಿಸಿ’ ಮರ್ಡರ್ ಕಾಣಸಿಗುತ್ತದೆ. ಇಲ್ಲೂ “ಎಬಿಸಿಡಿಇಎಫ್ …’ ಸೀರೀಸ್‌ನಲ್ಲೇ ಕೊಲೆಗಳು ನಡೆಯುತ್ತಾ ಹೋಗುತ್ತವೆ. ಹಾಗಂತ ಇದು ಚಿತ್ರದಿಂದ ಬೇರೆಯಾಗಿ ಕಾಣುವುದಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಅದಕ್ಕೆ ಸಮಜಾಯಿಷಿ ಕೂಡಾ ಸಿಗುತ್ತದೆ. ನಿರ್ದೇಶಕ ಕಾರ್ತಿಕ್ ಒಂದಷ್ಟು ಪ್ರೇರಣೆಗಳೊಂದಿಗೆ ಒಂದು ನೀಟಾದ ಸಿನಿಮಾ ಕಟ್ಟಿದ್ದಾರೆ.
ಹಾಗಾಗಿ, ನಿಮಗೆ “ದರ್ಪಣ’ ಖುಷಿಕೊಡುತ್ತದೆ. ಒಂದು ಸೈನ್ಸ್ ಫಿಕ್ಷನ್ ಕಥೆಯನ್ನು ಕಮರ್ಷಿಯಲ್ ಆಗಿ ಕಟ್ಟಿಕೊಡುವಾಗ ಏನೆಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಬೇಕೋ ಆ ಎಲ್ಲಾ ಅಂಶಗಳು ಇಲ್ಲಿವೆ. ಮುಖ್ಯವಾಗಿ ಕಥೆ ಹಾಗೂ ನಿರೂಪಣೆ. ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಚಿತ್ರದ 21 ವಿಭಾಗಗಳಲ್ಲಿ ಕೆಲಸ ಮಾಡಿದರೂ ಅವರಿಗೆ ತಾನು ಏನು ಹೇಳುತ್ತಿದ್ದೇನೆ ಮತ್ತು ಎಷ್ಟು ಹೇಳಬೇಕು ಎಂಬುದರ ಅರಿವಿದ್ದ ಕಾರಣ, ಚಿತ್ರ ತಣ್ಣನೆಯ ಕುತೂಹಲದೊಂದಿಗೆ ಸಾಗುತ್ತದೆ.
ವಿಜ್ಞಾನ ಮುಂದುವರಿದಿದೆ. ಹಾಗಂತ ನಾವು ದೇವರ ನಿಯಮವನ್ನು ಮೀರಿದರೆ ಅದು ನಮಗೆ ತಿರುಗು ಬಾಣವಾಗುತ್ತದೆ ಎಂಬ ಅಂಶವನ್ನು ಎಚ್ಚರಿಸುತ್ತಲೇ ಸಾಗುವ ಈ ಸಿನಿಮಾದಲ್ಲಿ ಹಾಗೆ ಬಂದು ಹೀಗೆ ಹೋಗುವ ಲವ್‌ಸ್ಟೋರಿ ಇದೆ, ಫ್ಯಾಮಿಲಿ ಸೆಂಟಿಮೆಂಟ್ ಇದೆ, ಜೊತೆಗೆ ಬಾಲಕನೊಬ್ಬನ ತಾಯಿ ಸೆಂಟಿಮೆಂಟ್ ಹಾಗೂ ಬಾಲ್ಯದ ಪ್ರೇಮ, ಶಾಲಾ ದಿನಗಳಲ್ಲಿ ಆತನ ಮಾನಸಿಕ ಒತ್ತಡ, ತಂದೆಯ ವರ್ತನೆ … ಇವೆಲ್ಲವೂ ಈ ಸಿನಿಮಾದಲ್ಲಿದೆ. ಇಷ್ಟೆಲ್ಲಾ ಅಂಶಗಳು ಚಿತ್ರದಲ್ಲಿದ್ದರೂ ಅದು ಸಿನಿಮಾದಿಂದ ಬೇರೆಯಾಗಿ ಕಾಣೋದಿಲ್ಲ.
ಏಕೆಂದರೆ, ಕಥೆಯನ್ನು ಮುನ್ನಡೆಸಿಕೊಂಡು ಹೋಗುವುದು ಆ ಅಂಶಗಳೇ. ಅವಧಿ ವಿಚಾರದಲ್ಲಿ ಚಿತ್ರ ನಿಮ್ಮ ತಾಳ್ಮೆ ಪರೀಕ್ಷಿಸುತ್ತದೆ. ಒಂದಷ್ಟು ದೃಶ್ಯಗಳನ್ನು ಹಾಗೂ ಸುದೀರ್ಘ ಕ್ಲೈಮ್ಯಾಕ್ಸ್ ಅನ್ನು ಟ್ರಿಮ್ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಅದು ಬಿಟ್ಟರೆ ಚಿತ್ರದಲ್ಲಿ ಗ್ರಾಫಿಕ್ ಬಳಕೆ ಹೆಚ್ಚಿದೆ. ತಾವರೆಕೆರೆಯ ಭೂತಬಂಗಲೆಯನ್ನು ಯಾವುದೋ ದ್ವೀಪದಂತೆಯೂ, ಬೆಂಗಳೂರಿನಲ್ಲೇ ಹೆಜ್ಜೆ ಹಾಕಿದ ನಾಯಕ-ನಾಯಕಿಯನ್ನು ಫಾರಿನ್‌ನಲ್ಲಿ ಕುಣಿದಂತೆಯೂ ಮಾಡಿರುವುದು ನಿರ್ದೇಶಕರ “ಹೆಚ್ಚುಗಾರಿಕೆ’.
ಚಿತ್ರದ ಪ್ರಮುಖ ಪಾತ್ರದಲ್ಲಿ ಅರವಿಂದ್ ರಾವ್ ನಟಿಸಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸಾಗುತ್ತದೆ. ಖಡಕ್ ಪೊಲೀಸ್ ಆಫೀಸರ್ ಆಗಿ ಆರಂಭವಾಗುವ ಅವರ ಪಾತ್ರ ನೋಡ ನೋಡುತ್ತಿದ್ದಂತೆಯೇ ಹೊಸದೊಂದು ಪಾತ್ರವಾಗಿ ಬಿಡುತ್ತದೆ. ಅಂತಹ ಒಂದು ಅವಕಾಶ ಅರವಿಂದ್‌ಗೆ ಈ ಸಿನಿಮಾದಲ್ಲಿ ಸಿಕ್ಕಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅರವಿಂದ್ ಪ್ರಯತ್ನಿಸಿದ್ದಾರೆ ಮತ್ತು ತಕ್ಕಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಕೂಡಾ. ಉಳಿದಂತೆ ಯತಿರಾಜ್, ದುಬೈ ರಫೀಕ್ ಸೇರಿದಂತೆ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ದರ್ಪಣ
ನಿರ್ಮಾಣ: ಎಡ್ವರ್ಡ್ ಡಿ’ಸೋಜಾ
ನಿರ್ದೇಶನ: ಕಾರ್ತಿಕ್ ವೆಂಕಟೇಶ್
ತಾರಾಗಣ: ಅರವಿಂದ್, ಯತಿರಾಜ್, ಸೂರ್ಯ, ದುಬೈ ರಫೀಕ್, ಸಂದೀಪ್ ಮಲಾನಿ, ಸೂರ್ಯ, ಮಧುರ ಮುಂತಾದವರು
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.