ಹಾಡಿದೆ, ಫೈಟ್ ಇದೆ, ಬಿಲ್ಡಪ್ ಇದೆ …
Team Udayavani, Jul 14, 2018, 11:08 AM IST
ಕೆಲವು ಚಿತ್ರಗಳಲ್ಲಿ ಕಥೆ ಇರುತ್ತೆ ಅರ್ಥವಿರಲ್ಲ. ಇನ್ನೂ ಕೆಲ ಚಿತ್ರಗಳಲ್ಲಿ ಅರ್ಥವಿರುತ್ತೆ ಪ್ರಯತ್ನವಿರಲ್ಲ. ಇವೆರೆಡರ ನಡುವಿನ ಚಿತ್ರಗಳಲ್ಲಿ ಶ್ರಮವಿರುತ್ತೆ “ಸಾರ್ಥಕತೆ’ ಇರುವುದಿಲ್ಲ. ಆದರೆ, ಈ “ಅಥರ್ವ’ನನ್ನು ಅರ್ಥೈಸಿಕೊಳ್ಳುವುದು ಅವರವರ ಭಾವಕ್ಕೆ ಬಿಟ್ಟದ್ದು. ಹಾಗೆ ಹೇಳುವುದಾದರೆ, “ಅಥರ್ವ’ನನ್ನು ಮೂರನೇ ಗುಂಪಿಗೆ ಸೇರಿಸಬಹುದು. ಇಲ್ಲಿ ಹೊಸ ತಂಡದ ಶ್ರಮ ಎದ್ದು ಕಾಣುತ್ತೆ. ಆದರೆ, ಸಾರ್ಥಕತೆಯ ಪ್ರಶ್ನೆ ಎದುರಾಗುತ್ತೆ. ಇಲ್ಲಿ ಕಥೆ ಇದೆ. ಅದಕ್ಕೊಂದು ಪೂರ್ಣತೆ ಇಲ್ಲ.
ಅಲ್ಲಲ್ಲಿ ಅರ್ಥವಿದೆ, ಆದರೆ, ಮುಂದುವರೆದ ಪ್ರಯತ್ನವಿಲ್ಲ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಏನೆಲ್ಲಾ ಇರಬೇಕೋ, ಹೇಗೆಲ್ಲಾ ಇರಬೇಕೋ ಆ ಎಲ್ಲಾ ಗುಣಮಟ್ಟ “ಅಥರ್ವ’ನಲ್ಲಿದೆ. ಆದರೆ, ನಿರ್ದೇಶಕರು ಇನ್ನಷ್ಟು ಬಿಗಿ ನಿರೂಪಣೆಯೊಂದಿಗೆ ಕಥೆಗೊಂದು “ಅರ್ಥ’ ಕಲ್ಪಿಸಿಕೊಟ್ಟಿದ್ದರೆ “ಅಥರ್ವ’ ಹೋರಾಟಕ್ಕೊಂದು ಪ್ರತಿಫಲವಾದರೂ ಸಿಗುತ್ತಿತ್ತು. ಚಿತ್ರದಲ್ಲಿ ಕಥೆ ಹೇಗಿದೆ ಅನ್ನುವುದಕ್ಕಿಂತ, ಚಿತ್ರ ಹೇಗೆ ನೋಡಿಸಿಕೊಂಡು ಹೋಗುತ್ತೆ ಅನ್ನೋದು ಅಷ್ಟೇ ಮುಖ್ಯ.
ಒಬ್ಬ ಹೊಸ ಪ್ರತಿಭೆಗೆ ಹೇಳಿಮಾಡಿಸಿದ ಚಿತ್ರವೇನೋ ನಿಜ. ಆದರೆ, ಇರುವ ಕಥೆಗೆ ಒಂದಷ್ಟು ಚುರುಕುತನ ಬೇಕಿತ್ತು. ಬರೀ, ಬಿಲ್ಡಪ್ಪು, ಡೈಲಾಗುಗಳಿಂದ ಚಿತ್ರ ಆಕರ್ಷಿಸುವುದಿಲ್ಲ. ಹಾಗಂತ, ಚಿತ್ರದ ಮೇಕಿಂಗ್ ಬಗ್ಗೆಯೂ ಮಾತಾಡುವಂತಿಲ್ಲ. ಪ್ರತಿ ದೃಶ್ಯ ಮತ್ತು ಹಾಡಲ್ಲಿ ನಿರ್ಮಾಪಕರ ಶ್ರಮ ಎದ್ದು ಕಾಣುತ್ತೆ. ನಿರ್ದೇಶಕರೂ ಅಂಥದ್ದೇ ಶ್ರಮವನ್ನು ಇನ್ನಷ್ಟು ಹಾಕಿದ್ದರೆ, “ಅಥರ್ವ’ ರೂಪುರೇಷೆಯೇ ಬೇರೆಯಾಗುತ್ತಿತ್ತು. ನಿರ್ದೇಶಕರು ಅಷ್ಟಕ್ಕೇ ಸುಸ್ತಾದಂತಿದೆ. ಸಾಮಾನ್ಯವಾಗಿ ಚಿತ್ರಗಳು ಶುರು ಆಗೋದೇ, ಹೀರೋಗಳ ಬಿಲ್ಡಪ್ ಶಾಟ್ಸ್‌ಗಳಿಂದ.
ಆದರೆ, “ಅಥರ್ವ’ ಆ ವಿಷಯದಲ್ಲಿ ಕೊಂಚ ಭಿನ್ನ. ಇಲ್ಲಿ ವಿಲನ್‌ಗಳ ಬಿಲ್ಡಪ್‌ಗ್ಳಿಂದಲೇ ಚಿತ್ರ ಶುರುವಾಗುತ್ತೆ. ಆ ವಿಷಯದಲ್ಲಿ ನಿರ್ದೇಶಕರು ಸ್ವಲ್ಪ ಹೆಚ್ಚು ತಲೆಕೆಡಿಸಿಕೊಂಡಂತಿದೆ. ಅದೇ ಪ್ರಯತ್ನವನ್ನು ಚಿತ್ರದುದ್ದಕ್ಕೂ ಮಾಡಿದ್ದರೆ, “ಅಥರ್ವ’ನಿಗೊಂದು ಬೆಂಬಲ ಬೆಲೆ ಸಿಗುತ್ತಿತ್ತು. ಆದರೂ, “ಅಥರ್ವ’ನ ಧೈರ್ಯ, ಶೌರ್ಯ ಮೆಚ್ಚಲೇಬೇಕು. ಇಲ್ಲಿ ಕೆಲ ಸಣ್ಣಪುಟ್ಟ ತಪ್ಪುಗಳನ್ನು ಬದಿಗೊತ್ತಿ ನೋಡಿದರೆ, ಧಮ್ ಕಟ್ಟಿಕೊಂಡೇ ಅಥರ್ವ ಸುಮ್ಮನೆ ನೋಡಿಸಿಕೊಂಡು ಹೋಗುತ್ತಾನೆ. ಒಬ್ಬ ಹೊಸ ನಾಯಕನಿಗೆ “ಅಥರ್ವ’ ಹೇಳಿಮಾಡಿಸಿದ ಚಿತ್ರವಂತೂ ಹೌದು.
ಇಲ್ಲಿ ಕಮರ್ಷಿಯಲ್ ಆಗಿ ನೋಡುವುದಾದರೆ, ಭರ್ಜರಿ ಫೈಟ್‌ಗಳಿವೆ, ಕಲರ್‌ಫುಲ್ ಹಾಡುಗಳಿವೆ, ಅಲ್ಲಲ್ಲಿ ರೊಚ್ಚಿಗೆಬ್ಬಿಸೋ ಡೈಲಾಗ್‌ಗಳೂ ಇವೆ. ಮೊದಲರ್ಧದಲ್ಲಿ ಏನಾಗುತ್ತೆ ಅಂತ ಸ್ವಲ್ಪ ಗೊಂದಲ ಅನಿಸಬಹುದು. ದ್ವಿತಿಯಾರ್ಧದಲ್ಲಿ ಅಥರ್ವ ಸ್ವಲ್ಪ ಮಟ್ಟಿಗೆ ಪಳಗಿದಂತೆ ಕಾಣುತ್ತಾನೆ. ಕಥೆಯಲ್ಲಿ ಇನ್ನಷ್ಟು ಆಳವಾಗಿ ಇಳಿದು, ಅರ್ಧಂಬರ್ಧ ಎನಿಸುವ ಕೆಲ ದೃಶ್ಯಗಳಿಗೆ ಅರ್ಥ ಕಲ್ಪಿಸಿಕೊಟ್ಟಿದ್ದರೆ, “ಅಥರ್ವ’ನಿಗೆ ಫುಲ್ ಮಾರ್ಕ್ಸ್ ಕೊಡಲು ಯಾವುದೇ ಅಡ್ಡಿ ಇರುತ್ತಿರಲಿಲ್ಲ. ಆದರೂ, ಚಿತ್ರತಂಡದ ಸಣ್ಣದ್ದೊಂದು ಎಫರ್ಟ್‌ಗೆ ಬೆನ್ನುತಟ್ಟಲೇಬೇಕು.
ನಂದ ಹುಟ್ಟುವಾಗಲೇ ಸಾವಿನ ಜೊತೆ ಹೋರಾಟ ನಡೆಸುತ್ತಲೇ ಜನಿಸುತ್ತಾನೆ. ಆದರೆ, ಅವನಿಗೆ ನರಸಿಂಹನ ದಯೆ ಇರುತ್ತೆ. ಅನ್ಯಾಯ ಕಂಡರೆ ಸಿಡಿದೇಳುವ ನಂದ, ಮಾನವೀಯತೆಗೆ ಹತ್ತಿರವಾದವನು. ಅಂಥವನ ಲೈಫಲ್ಲಿ ಒಬ್ಬಳು ಆಕಸ್ಮಿಕವಾಗಿ ಎಂಟ್ರಿಯಾಗುತ್ತಾಳೆ. ಯಾವುದೋ ಒಂದು ಘಟನೆಯಲ್ಲಿ ಅವನನ್ನು ಅನುಮಾನಿಸುತ್ತಾಳೆ. ಕೊನೆಗೆ ದೊಡ್ಡ ಸಮಸ್ಯೆಗೂ ಸಿಲುಕುತ್ತಾಳೆ. ಆ ಸಮಸ್ಯೆಯಿಂದ ಅವಳನ್ನು ಬಿಡಿಸಿಕೊಂಡು ಬರುತ್ತಾನಾ, ಅವಳು ಮತ್ತೆ ಅವನ ಲೈಫ್ಗೆ ಎಂಟ್ರಿಯಾಗುತ್ತಾಳಾ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ, ಚಿತ್ರ ನೋಡಲ್ಲಡ್ಡಿಯಿಲ್ಲ.
ಪವನ್‌ತೇಜ ಅವರ ನಟನೆಗಿಂತ ವಾಯುÕ ಮತ್ತು ಫೈಟು ಇಷ್ಟವಾಗುತ್ತೆ. ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿಯತ್ತ ಕೊಂಚ ಗಮನಹರಿಸಿದರೆ, ಗಾಂಧಿನಗರದಲ್ಲಿ ಭವ್ಯಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಸನಮ್‌ಶೆಟ್ಟಿ ಗ್ಲಾಮರ್ ಬಿಟ್ಟರೆ, ಹೇಳಿಕೊಳ್ಳುವುದೇನೂ ಇಲ್ಲ. ಅಪ್ಪನಾಗಿ ರಂಗಾಯಣ ರಘು ಇಷ್ಟವಾದರೆ, ಅಮ್ಮನಾಗಿ ತಾರಾ ಗಮನಸೆಳೆಯುತ್ತಾರೆ. ಇನ್ನು, ಯಶ್ವಂತ್ ಶೆಟ್ಟಿ ಖಳನಾಗಿ ಅಬ್ಬರಿಸಿದ್ದಾರೆ. ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಮೂಲಕ ಭರವಸೆ ಮೂಡಿಸಿದ್ದಾರೆ. ಅವರನ್ನು ಸರಿಯಾಗಿ ಬಳಸಿಕೊಂಡಲ್ಲಿ ಕನ್ನಡಕ್ಕೊಬ್ಬ ಖಳನಟ ಸಿಗುತ್ತಾನೆ. ಉಳಿದಂತೆ ನಿಶಾಂತ್, ಧರ್ಮೇಂದ್ರ ಅರಸ್, ಸುಚೇಂದ್ರ ಪ್ರಸಾದ್ ಇದ್ದಷ್ಟು ಕಾಲ ಇಷ್ಟವಾಗುತ್ತಾರೆ.
ರಾಘವೇಂದ್ರ ಸಂಗೀತದಲ್ಲಿ ಸ್ವಾದವೇನೂ ಇಲ್ಲ. ಶಿವ ಸೀನ ಛಾಯಾಗ್ರಹಣದಲ್ಲಿ ಅಥರ್ವ ಅರ್ಥಪೂರ್ಣ.
ಚಿತ್ರ: ಅಥರ್ವ
ನಿರ್ದೇಶನ: ಅರುಣ್
ನಿರ್ಮಾಣ: ವಿನಯ್‌ಕುಮಾರ್
ತಾರಾಗಣ: ಪವನ್ ತೇಜ, ಸನಮ್ ಶೆಟ್ಟಿ, ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚೇಂದ್ರಪ್ರಸಾದ್, ನಿಶಾಂತ್ ಮುಂತಾದವರು
* ವಿಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.