ಒಳ್ಳೇದು ಮನಸ್ಸಿಗೆ, ಮಿಕ್ಕಿದ್ದು ಹೊಟ್ಟೆಗೆ
Team Udayavani, Oct 15, 2017, 11:36 AM IST
ಚಿತ್ರ: ಸಿತಾರ ನಿರ್ಮಾಣ: ಡಾ ವಿಜಯ್‌ಕುಮಾರ್, ನಿರ್ದೇಶನ: ಮಸ್ತಾನ್
ತಾರಾಗಣ: ದಿಲೀಪ್ ರಾಜ್, ಹರೀಶ್ ರಾಜ್, ನೇಹಾ ಪಾಟೀಲ್, ನೀತು, ದತ್ತಣ್ಣ, ರಮೇಶ್ ಭಟ್ ಮುಂತಾದವರು.
ಅಲ್ಲಿಯವರೆಗೂ ಆ ಮನೆಯಲ್ಲಿ ಒಂದೇ ಅಡುಗೆ ಮನೆ, ಎಲ್ಲರಿಗೂ ಒಂದೇ ಅಡುಗೆ. ಮನೆಗೆ ಹೊಸ ಹೊಸ ಸದಸ್ಯರು ಬರುತ್ತಿದ್ದಂತೆ ಕ್ರಮೇಣ ಎರಡಾಗುತ್ತದೆ. ಅದು ಮೂರಾಗುವ ಮೂಲಕ ಹಳ್ಳಿಯ ಆದರ್ಶಮಯ ಕುಟುಂಬವೊಂದು ಛಿದ್ರಛಿದ್ರವಾಗುತ್ತದೆ … ಈ ತರಹದ ಚಿತ್ರಗಳಿಗೆ ಕನ್ನಡದಲ್ಲಿ ಬರವಿಲ್ಲ. ಈ ಹಿಂದೆ ಸಾಕಷ್ಟು ಅಂತಹ ಚಿತ್ರಗಳು ಬಂದಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಳ್ಳಿ ಕಥೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಳ್ಳಿ ಕಥೆಗಳೆಂದರೆ ಡಬ್ಬಲ್ ಮೀನಿಂಗ್ ಎನ್ನುವಂತಹ ದಿನಗಳಲ್ಲಿ ಹಳೆಯ ಜಮಾನ ಮತ್ತು ಚಿತ್ರಗಳನ್ನು ನೆನಪಿಸುವುದಕ್ಕೆ “ಸಿತಾರ’ ಬಂದಿದೆ.
ಇಲ್ಲೊಂದು ಪುಟ್ಟ ಹಳ್ಳಿಯಿದೆ. ಆ ಹಳ್ಳಿಯಲ್ಲಿ ತಂದೆ-ತಾಯಿ ಕಳೆದುಕೊಂಡ ಮೂವರು ಪುಟ್ಟ ಮಕ್ಕಳಿದ್ದಾರೆ. ಮಕ್ಕಳು ಚಿಕ್ಕವರಾದರೂ ಹೃದಯಂವತಿಕೆ ಮತ್ತು ಪ್ರೀತಿಯಲ್ಲಿ ದೊಡ್ಡವರು. ಅದರಲ್ಲೂ ಅಣ್ಣಂದಿರಿಗೆ ತಂಗಿಯನ್ನು ಕಂಡರೆ ತುಂಬಾ ಪ್ರೀತಿ. ಕ್ರಮೇಣ ಎಲ್ಲರೂ ದೊಡ್ಡವರಾಗುತ್ತಾರೆ. ಅಣ್ಣಂದಿರಿಗೆ ಮದುವೆಯಾಗುತ್ತದೆ. ತಂಗಿ ದೂರದ ಪಟ್ಟಣಕ್ಕೆ ಓದುವುದಕ್ಕೆ ಹೋಗುತ್ತಾಳೆ. ತಂಗಿ ಇಲ್ಲದ ಮನೆ ಎರಡಾಗುತ್ತದೆ.
ರಾಮ-ಲಕ್ಷ್ಮಣರಂತಿದ್ದ ಅಣ್ಣ-ತಮ್ಮ ದೂರಾಗುತ್ತಾರೆ. ತಂಗಿ ಬಂದು ಅವರಿಬ್ಬರನ್ನು ಒಂದು ಮಾಡಬಹುದು ಎಂದುಕೊಂಡರೆ, ತಂಗಿ ಸಹ ಮನೆಗೆ ಮೂರನೆಯ ಬಾಗಿಲಿಡುತ್ತಾಳೆ. ಮನೆಯೊಂದಕ್ಕೆ ಮೂರು ಬಾಗಿಲುಗಳಾದಾಗ ಏನೆಲ್ಲಾ ಆಗುತ್ತದೆ ಎಂಬುದು ನೋಡಬೇಕಿದ್ದರೆ “ಸಿತಾರ’ ನೋಡಬೇಕು. ತಂಗಿ ಸ್ವತಂತ್ರಳಾಗುವ ಎಳೆಯೇ ಬಹುಶಃ “ಸಿತಾರ’ದ ಮಹತ್ತರ ತಿರುವು ಮತ್ತು ಹೈಲೈಟ್ ಎಂದರೆ ತಪ್ಪಿಲ್ಲ.
ಇಲ್ಲವಾದರೆ ಅದೊಂದು ಹಳೆಯ ಚಿತ್ರವಾಗಿ ಬಿಡುವ ಅಪಾಯವಿತ್ತು. ಆದರೆ, ಮಸ್ತಾನ್ ಹೊಸದೊಂದು ಟ್ವಿಸ್ಟ್ ಕೊಡುವ ಮೂಲಕ ಚಿತ್ರಕ್ಕೆ ಇನ್ನೊಂದು ಆಯಾಮ ಕೊಡುತ್ತಾರೆ. ಅಷ್ಟಾದರೂ “ಸಿತಾರಾ’ ಅದ್ಭುತ ಎಂದು ಹೇಳುವುದು ಕಷ್ಟವೇ. ಏಕೆಂದರೆ, ನಿಧಾನ ನಿರೂಪಣೆ, ಸೋಬರ್ ಎನಿಸುವಂತಹ ಪಾತ್ರಗಳು, ಚುರುಕಿಲ್ಲದ ಅಭಿನಯ, ಕೆಟ್ಟ ಕಾಮಿಡಿ … ಇವೆಲ್ಲಾ ಸೇರಿ “ಸಿತಾರ’ ಮೇಲಕ್ಕೇಳದಂತೆ ಮಾಡುತ್ತದೆ. ಆದರೂ ಚಿತ್ರ ಖುಷಿಯಾಗುವುದು ಚಿತ್ರದಲ್ಲಿನ ಆದರ್ಶ ಮತ್ತು ಆಶಯಗಳಿಗೆ. ಚಿತ್ರದಲ್ಲಿ ಒಂದಿಷ್ಟು ಒಳ್ಳೆಯ ವಿಷಯಗಳಿವೆ. ಆ ಒಳ್ಳೆಯ ವಿಷಯ ಬೇಕಿದ್ದರೆ, ಮಿಕ್ಕಿದ್ದೆಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳಬೇಕು.
“ಸಿತಾರ’, ನೇಹಾ ಪಾಟೀಲ್ ಅವರ ಮೊದಲ ಚಿತ್ರವಂತೆ. ಆ ಭಯ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಮಿಕ್ಕಂತೆ ದಿಲೀಪ್ ರಾಜ್, ಹರೀಶ್ ರಾಜ್, ದತ್ತಣ್ಣ, ರಮೇಶ್ ಭಟ್, ಚಿಂದೋಡಿ ವಿಜಯ್ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಿದ್ದಾರೆ. ಎಸ್.ಪಿ. ಚಂದ್ರಕಾಂತ್
ಹಾಡುಗಳಲ್ಲಿ ಎರಡೂ¾ರು ಹಾಡುಗಳು ಗುನುಗುವಂತಿವೆ.
ಭುವನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.