ಯಕ್ಷಪ್ರಶ್ನೆಗೆ ಅಚ್ಚ ಕನ್ನಡದ ಉತ್ತರ
Team Udayavani, Jan 19, 2018, 4:18 PM IST
ತಂದೆ ಸಾಯುವ ಕೆಲವು ದಿನಗಳ ಮುನ್ನ ಮಗನ ಕೈಗೊಂದು ಪತ್ರ ಕೊಟ್ಟು ಇದನ್ನು ಈಗ ಓದಬೇಡ. ನಿನಗೆ 16 ವರ್ಷ ತುಂಬಿದ ನಂತರ ಓದು ಎಂದಿರುತ್ತಾರೆ. ಮಗನಿಗೆ 16 ವರ್ಷ ತುಂಬುತ್ತದೆ. ಪೆಟ್ಟಿಗೆ ತೆರೆದು ಪತ್ರ ಓದುತ್ತಾನೆ. ಅಲ್ಲಿ, “ಜೀವನದಲ್ಲಿ ಅತಿ ಮುಖ್ಯವಾದುದು ….’ ಎಂದು ಬರೆದು “ಬಿಟ್ಟ ಸ್ಥಳವನ್ನು ತುಂಬು’ ಎಂಬಂತೆ ಖಾಲಿ ಬಿಟ್ಟಿರುತ್ತಾರೆ. ಅಲ್ಲಿಂದ ಆತ ಜೀವನದಲ್ಲಿ ಏನು ಮುಖ್ಯ ಎಂಬುದನ್ನು ಹುಡುಕುತ್ತಾ ಸಾಗುತ್ತಾನೆ.
ಮೊದಲು ಹೈಸ್ಕೂಲ್‌ನಲ್ಲಿರುವ ಆತನಿಗೆ ಜೀವನದಲ್ಲಿ ಪ್ರೀತಿಯೇ ಮುಖ್ಯ ಎಂದು ಗೊತ್ತಾಗುತ್ತದೆ. ಕೆಲದಿನಗಳ ನಂತರ ಪ್ರೀತಿಗಿಂತ ಕುಟುಂಬ ಮುಖ್ಯ ಎಂಬ ನಿರ್ಧಾರಕ್ಕೆ ಬರುತ್ತಾನೆ. ಕುಟುಂಬದಲ್ಲಾದ ಕಹಿಘಟನೆಯಿಂದ ಜೀವನದಲ್ಲಿ ಸ್ನೇಹ ಮುಖ್ಯ ಎಂದು ತೀರ್ಮಾನಿಸುತ್ತಾನೆ. ಮುಂದೆ, ಉದ್ಯೋಗ, ಹಣ, ಪ್ರೀತಿ, ನೆಮ್ಮದಿ, ಸುಖ …. ಮುಖ್ಯ ಎಂದು ಬಿಟ್ಟ ಸ್ಥಳ ತುಂಬುತ್ತಲೇ ಹೋಗುತ್ತಾನೆ.
ಆತನಿಗೆ ವಯಸ್ಸಾಗುತ್ತಾ ಹೋಗುತ್ತಿದ್ದಂತೆ, ಹೊಸ ಹೊಸ ಅನುಭವಗಳಾಗುತ್ತಿದ್ದಂತೆ ಜೀವನದ ಆದ್ಯತೆಗಳು ಬದಲಾಗುತ್ತಾ ಹೋಗುತ್ತದೆ. ಕೊನೆಗೂ ರಾಜು, ಜೀವನದಲ್ಲಿ ಅತಿ ಮುಖ್ಯವಾದುದು ಏನು ಎಂಬುದನ್ನು ಸರಿಯಾಗಿಯೇ ಕಂಡುಹಿಡಿಯುತ್ತಾನೆ. ಅದೇನೆಂಬುದನ್ನು ನೀವು ತೆರೆಮೇಲೆ ನೋಡಿ. “ರಾಜು ಕನ್ನಡ ಮೀಡಿಯಂ’ ಚಿತ್ರ ಮೇಲ್ನೋಟಕ್ಕೆ ಒಂದು ಕಾಮಿಡಿ ಹಿನ್ನೆಲೆಯ ಸಿನಿಮಾದಂತೆ ಕಂಡರೂ ಅದರಲ್ಲಿ ಜೀವನ ಹಾಗೂ ಅದರ ಆದ್ಯತೆಗಳು ಏನು ಎಂಬ ಸೂಕ್ಷ್ಮಹಾಗೂ ಅಷ್ಟೇ ಗಂಭೀರ ಅಂಶಗಳನ್ನು ಹೇಳಿದ್ದಾರೆ ನಿರ್ದೇಶಕ ನರೇಶ್.
ಹಾಗಂತ ಸಿನಿಮಾ ಸಂದೇಶ ನೀಡುತ್ತಾ, ಭೋದನೆ ಮಾಡುತ್ತಾ ಸಾಗುತ್ತದೆಯೇ ಎಂದರೆ ಖಂಡಿತಾ ಇಲ್ಲ. ಇದು ಔಟ್ ಅಂಡ್ ಔಟ್ ಅಂಡ್ ಎಂಟರ್‌ಟೈನರ್ ಸಿನಿಮಾ. ಮನರಂಜನೆಯ ಜೊತೆಗೆ ಜೀವನದ ಅಂಶಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾ ಹೋಗಲಾಗಿದೆ. ಇಲ್ಲಿ ಹಳ್ಳಿ ಇದೆ. ಅಲ್ಲೊಂದು ಮುಗ್ಧ ಪ್ರೀತಿಯೂ ಇದೆ. ಕುಟುಂಬವಿದೆ ಅಲ್ಲೊಂದು ಸ್ವಾರ್ಥವೂ ಇದೆ, ಸಿಟಿಯಿದೆ, ಅಲ್ಲಿ ಲೆಕ್ಕಾಚಾರಾದ ಜೀವನವಿದೆ, ಕೈ ತುಂಬಾ ಕಾಸಿದೆ, ಉಸಿರಾಡದ ಸ್ಥಿತಿಯೂ ಇದೆ… ಈ ತರಹದ ಅಂಶಗಳೊಂದಿಗೆ “ರಾಜು ಕನ್ನಡ ಮೀಡಿಯಂ’ ಸಾಗುತ್ತದೆ.
ಹಳ್ಳಿಯಿಂದ ಕನ್ನಡ ಮೀಡಿಯಂನಲ್ಲಿ ಓದಿ ಸಿಟಿಗೆ ಬರುವ ರಾಜು ಎದುರಿಸುವ ಪರಿಸ್ಥಿತಿ, ಆತನ ಪ್ರೀತಿ, ಜೀವನವನ್ನು ಕಟ್ಟಿಕೊಳ್ಳಲು ಆತ ಹೆಣಗಾಡುವ ರೀತಿ, ಕಾಸಿನಾಸೆ ಹಾಗೂ ಕೊನೆಗೆ ಆತ ಅನುಭವಿಸುವ ನೋವು, ಯಾತನೆ ಏನು ಎಂಬ ಅಂಶದಲ್ಲಿ ರಾಜುವಿನ ಕಥೆ ಮುಗಿದು ಹೋಗುತ್ತದೆ. ಈ ಚಿತ್ರ ನಿಮಗೆ ಇಷ್ಟವಾಗಲು ಕಾರಣ ಯಾವೊಂದು ಅಂಶವನ್ನು ಹೆಚ್ಚಾಗಿ ಎಳೆದಾಡಿಲ್ಲ. ಯಾವುದು ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಳಿಸಲಾಗಿದೆ. ಆ ಮೂಲಕ ಸಿನಿಮಾ ತನ್ನ ವೇಗ ಕಾಯ್ದುಕೊಂಡಿದೆ.
ನಿಮಗೆ ಸಿನಿಮಾ ಸ್ವಲ್ಪ ನಿಧಾನ ಅನಿಸೋದು ಹಾಗೂ ಅಲ್ಲೇ ಸುತ್ತಾಡುತ್ತಿದೆಯಲ್ಲಾ ಅನಿಸೋದು ಚಿತ್ರದಲ್ಲಿ ದ್ವೀಪದ ಸನ್ನಿವೇಶವೊಂದರಲ್ಲಿ. ಅಲ್ಲಿ ನಿಮಗೆ ಯಾವುದೋ ಹೊಸ ಸಿನಿಮಾ ಬಂದು ಸೇರಿಕೊಂಡಂತೆ ಭಾಸವಾಗುತ್ತದೆ. ಅಲ್ಲಿನ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಕಥೆಗೆ ಹೆಚ್ಚು ಕನೆಕ್ಟ್ ಮಾಡಬಹುದಿತ್ತು. ಅದು ಬಿಟ್ಟರೆ “ರಾಜು’ವಿನ ಜರ್ನಿ ನೀಟಾಗಿದೆ. ಮುಖ್ಯವಾಗಿ ಚಿತ್ರದ ಸಂಭಾಷಣೆ ನಗು ತರಿಸುತ್ತದೆ. ಆ ಮಟ್ಟಿಗೆ ಫನ್ನಿಯಾದ ಡೈಲಾಗ್‌ಗಳೊಂದಿಗೆ ಚಿತ್ರ ಸಾಗುತ್ತದೆ.
ಬೆಂಗಳೂರು ಏನು, ಅಲ್ಲಿನ ಜನ ಹೇಗೆ ಎಂಬುದನ್ನು ಚಿಕ್ಕಣ್ಣ ಒಂದೇ ಉಸಿರಿನಲ್ಲಿ ಹೇಳುವ ಡೈಲಾಗ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಇನ್ನು, ಚಿತ್ರದಲ್ಲಿ ಗ್ರಾಫಿಕ್ ಅನ್ನು ಕೂಡಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ನಾಯಕ ಗುರುನಂದನ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಆರಂಭದಲ್ಲಿ ಸ್ಕೂಲ್ ಹುಡುಗನಾಗಿ, ಮುಂದೆ ಅಮಾಯಕ ಉದ್ಯೋಗಿಯಾಗಿ, ಕಾಸು ಸಂಪಾದಿಸಲು ಹೋರಾಡುವ ಸ್ವಾಭಿಮಾನಿಯಾಗಿ … ಹೀಗೆ ನಾನಾ ಶೇಡ್‌ನ ಪಾತ್ರವನ್ನು ನಿಭಾಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಚಿತ್ರದ ಮತ್ತೂಬ್ಬ ನಾಯಕ ಎಂದರೆ ಅದು ಸುದೀಪ್ ಎನ್ನಬಹುದು. ವಿಶೇಷ ಪಾತ್ರದ ಮೂಲಕ ಕಾಣಿಸಿಕೊಂಡರೂ ಅವರನ್ನು ಇಲ್ಲಿ ಕಥೆಗೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಕಥೆಯನ್ನು ಮುಂದೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಸುದೀಪ್ ಕೂಡಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯರಾದ ಆಶಿಕಾ ರಂಗನಾಥ್ ಹಾಗೂ ಆವಂತಿಕಾ ಶೆಟ್ಟಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಾಗೆ ನೋಡಿದರೆ ಇಡೀ ಸಿನಿಮಾ ಆವರಿಸಿಕೊಂಡಿರೋದು ಆವಂತಿಕಾ ಶೆಟ್ಟಿ. ಉಳಿದಂತೆ ಸಾಧು ಕೋಕಿಲ ಅವರನ್ನು ಹಿತಮಿತವಾಗಿ ಬಳಸಿಕೊಂಡಿದ್ದಾರೆ ಮತ್ತು ನಗಿಸಿದ್ದಾರೆ ಕೂಡಾ. ಉಳಿದಂತೆ ಸುಚೇಂದ್ರ ಪ್ರಸಾದ್, ಕುರಿ ಪ್ರತಾಪ್, ಅಮಿತ್, ಸುಂದರ್, ಅಶೋಕ್ ಸೇರಿದಂತೆ ಅನೇಕರು ನಟಿಸಿದ್ದು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಮೂರು ಹಾಡುಗಳು ಇಷ್ಟವಾಗುತ್ತವೆ.
ಚಿತ್ರ: ರಾಜು ಕನ್ನಡ ಮೀಡಿಯಂ
ನಿರ್ದೇಶನ: ನರೇಶ್
ನಿರ್ಮಾಣ: ಸುರೇಶ್
ತಾರಾಗಣ: ಗುರುನಂದನ್, ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸುದೀಪ್, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ ಮುಂತಾದವರು
* ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.