ಸುಳ್ಳು ಪುರಾಣದ ರಗಳೆ-ರಾದ್ಧಾಂತ
ಚಿತ್ರ ವಿಮರ್ಶೆ
Team Udayavani, Jul 20, 2019, 3:05 AM IST
“ಹಲೋ ನಿಮ್ ನಿಜವಾದ ಹೆಸರು ನಂದಿನಿ ಅಲ್ಲ ತಾನೇ?ಯಾಕೆಂದರೆ ಆ ಹೆಸರಿನ ಹುಡುಗಿಯರೇ ಹುಡುಗರಿಗೆ ಹುಚ್ಚು ಹಿಡಿಸಿರೋದು…’ ಚಿತ್ರದ ನಾಯಕ, ಮೊದಲ ಸಲ ನಾಯಕಿಯನ್ನು ನೋಡಿದ ತಕ್ಷಣ ಅವಳ ಹಿಂದೆ ಬಂದು ಹೇಳುವ ಡೈಲಾಗ್ ಇದು. ಅಲ್ಲಿಗೆ ಇದೊಂದು ಪಕ್ಕಾ ಲವ್‌ಸ್ಟೋರಿ ಇರುವ ಚಿತ್ರ ಇರಬೇಕು ಅಂದುಕೊಂಡರೆ ಆ ಊಹೆ ನಿಜಕ್ಕೂ ತಪ್ಪು.
ಯಾಕೆಂದರೆ, ಇದು ಪೂರ್ಣ ಪ್ರಮಾಣದ ಲವ್‌ಸ್ಟೋರಿಯೂ ಅಲ್ಲ, ಅತ್ತ ತನಿಖೆಯ ಸ್ಟೋರಿಯೂ ಅಲ್ಲ. ಈ ಎರಡರ ನಡುವೆ ನಡೆಯುವ ಸಣ್ಣ ಡ್ರಾಮಾ, ನೋಡುಗರನ್ನು ಆಗಾಗ ತಾಳ್ಮೆಗೆಡಿಸುತ್ತಲೇ, ಒಂದಷ್ಟು ಖುಷಿ, ಒಂದಷ್ಟು ಬೇಸರದ ಸನ್ನಿವೇಶಗಳಿಗೂ ಸಾಕ್ಷಿಯಾಗುತ್ತದೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದು ಆದಿ ಮತ್ತು ಲಕ್ಷ್ಮಿ ಇವರಿಬ್ಬರ ಸುಳ್ಳು-ಸತ್ಯದ ಕಥೆ.
ಹಾಗೆ ಹೇಳುವುದಾದರೆ, ಅದೊಂದು “ಪುರಾಣ’ವೇ ಸರಿ. ಅಷ್ಟರಮಟ್ಟಿಗೆ ಒಂದು ಕಥೆಯನ್ನು ಅಳೆದು, ಎಳೆದು ತೂಗಿ ತೋರಿಸಿ, ಮೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ನೋಡುಗರಿಗೆ ಅವರ “ಪುರಾಣ’ ರುಚಿಸುತ್ತಾ? ಎಂಬುದಕ್ಕೆ ಉತ್ತರಿಸುವುದು ಕಷ್ಟ. ಇಡೀ ಚಿತ್ರವನ್ನು ಶ್ರೀಮಂತವಾಗಿ ಕಟ್ಟಿಕೊಟ್ಟಿರುವುದೇ ಚಿತ್ರದ ಪ್ಲಸ್. ಅದನ್ನು ಹೊರತುಪಡಿಸಿದರೆ, ಅವರ ಪುರಾಣ ಮನಸ್ಸಿಗೆ ಆಪ್ತ ಎನಿಸುವುದು ಕಷ್ಟ.
ತುಂಬಾ ಸರಳವಾದ ಕಥೆ ಇಲ್ಲಿದೆ. ಅದನ್ನು ಇನ್ನಷ್ಟು ಬಿಗಿಯಾದ ಚಿತ್ರಕಥೆಯನ್ನು ಕಟ್ಟಿಕೊಡುವ ಅವಶ್ಯಕತೆ ಇತ್ತು. ನಿರೂಪಣೆಯ ಶೈಲಿಯಲ್ಲೂ ಮಂದಗತಿ ಆವರಿಸಿದೆ. ಎಲ್ಲೋ ಒಂದು ಕಡೆ ಸಿನಿಮಾ ನಿಧಾನ ಎನಿಸುತ್ತಿದೆ ಎನ್ನುವ ಹೊತ್ತಿಗೆ ಅಲ್ಲೊಂದು ಫೈಟು, ಸಾಂಗ್ ಕಾಣಿಸಿಕೊಂಡು, ಕೊಂಚ ಮಂದಗತಿಯ ವೇಗವನ್ನು ಚುರುಕಾಗಿಸುತ್ತದೆ. ಅಲ್ಲಲ್ಲಿ ಹಾಸ್ಯದ ಸನ್ನಿವೇಶಗಳಿದ್ದರೂ, ಅವು ಅಷ್ಟೊಂದು ನಗುವಿಗೆ ಕಾರಣವಾಗಲ್ಲ.
ಮೊದಲರ್ಧ ಲವಲವಿಕೆ ತುಂಬಿದೆ. ದ್ವಿತಿಯಾರ್ಧದಲ್ಲೂ ಆ ಲವಲವಿಕೆ ಮುಂದುವರೆದಿದೆಯಾದರೂ, ಕ್ಲೈಮ್ಯಾಕ್ಸ್ ನಲ್ಲಿ ದೊಡ್ಡದೇನೋ ತಿರುವು ಸಿಗುತ್ತೆ ಅಂತ ಭಾವಿಸಿದವರಿಗೆ ಸ್ವಲ್ಪಮಟ್ಟಿಗಿನ ಸಮಾಧಾನ ಹೊರತಾಗಿ ಬೇರೇನೂ ಇಲ್ಲ. ಇನ್ನು, ಸರಾಗವಾಗಿ ನೋಡಿಸಿಕೊಂಡು ಹೋಗುವ ಚಿತ್ರಕ್ಕೆ ಮಾತುಗಳು ಹೆಗಲು ಕೊಡುವಂತಿರಬೇಕು.
ಕೆಲವೊಂದು ದೃಶ್ಯಗಳನ್ನು ಹೊರತುಪಡಿಸಿದರೆ, ಇಡೀ ಚಿತ್ರದುದ್ದಕ್ಕೂ ಸರಳ ಮಾತುಗಳು ಒಮ್ಮೊಮ್ಮೆ ನಗುತರಿಸುವುದರ ಜೊತೆಗೆ ಗಂಭೀರತೆಗೂ ದೂಡುತ್ತವೆ. ಈಗಿನ ಟ್ರೆಂಡ್ ಸಿನಿಮಾ ಅಂದುಕೊಂಡು ನೋಡಿದವರಿಗೆ ಅಷ್ಟೇನೂ ಮೋಸ ಆಗಲ್ಲ. ಆದರೂ, ಕೆಲವೊಂದು ದೃಶ್ಯಗಳಲ್ಲಿ ಎಡವಟ್ಟುಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಲಾಜಿಕ್, ಮ್ಯಾಜಿಕ್ ಪಕ್ಕಕ್ಕಿಟ್ಟು ಸಿನಿಮಾವಾಗಿ ನೋಡಿ ಬರಬೇಕಷ್ಟೆ.
ಸರಾಗವಾಗಿ ಸಾಗುವ ಚಿತ್ರದ ನಡುವೆ ಅಲ್ಲಲ್ಲಿ ಅಂತಹ ದೋಷಗಳು ಕೂಡ ಎದುರಾಗುತ್ತವೆ. ಇವೆಲ್ಲ ಬದಿಗೊತ್ತಿ ನೋಡುವುದಾದರೆ, ಹುಡುಗ, ಹುಡುಗಿಯರಿಗಷ್ಟೇ ಅಲ್ಲ, ಪೋಷಕರಿಗೂ ಇಲ್ಲೊಂದು ಸಣ್ಣ ಸಂದೇಶ ಉಂಟು. ಕಥೆ ಬಗ್ಗೆ ಹೇಳುವುದಾದರೆ, ನಾಯಕ ಆದಿ ಒಬ್ಬ ತನಿಖಾಧಿಕಾರಿ. ನಾಯಕಿ ಲಕ್ಷ್ಮೀ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಹುಡುಗಿ.
ಆದಿ ಪೋಷಕರಿಗೆ ಮಗನಿಗೊಂದು ಹೆಣ್ಣು ನೋಡಿ ಮದುವೆ ಮಾಡುವ ಆತುರ. ಆದಿಗೆ, ತನಗೆ ಇಷ್ಟವಾಗುವ ಹುಡುಗಿ ಸಿಗುವ ತನಕ ಮದುವೆ ಬೇಡ ಎಂಬ ಹಠ. ಅದೇಗೋ, ಲಕ್ಷ್ಮೀ ಆದಿ ಕಣ್ಣಿಗೆ ಬೀಳುತ್ತಾಳೆ. ಲಕ್ಷ್ಮಿಯದು ಬರೀ ಸುಳ್ಳು ಹೇಳುವ ಬುದ್ಧಿ. ಈ ನಡುವೆ ಆದಿ ಆಕೆಯನ್ನು “ಮನಸಾರೆ’ ಹಚ್ಚಿಕೊಂಡಿರುತ್ತಾನೆ.
ತನಗೆ ಮದ್ವೆ ಆಗಿದೆ, ಮಗೂ ಕೂಡ ಇದೆ ಅನ್ನುವ ಲಕ್ಷ್ಮಿಯ ಮಾತಿನಿಂದ ಆದಿಯ ಲೈಫ್ ಏನಾಗುತ್ತೆ, ಆಕೆಯ ಮಾತು ಎಷ್ಟೆಲ್ಲಾ ಎಡವಟ್ಟುಗಳಿಗೆ ಕಾರಣವಾಗುತ್ತೆ ಎಂಬ ಕುತೂಹಲವಿದ್ದರೆ, “ಆದಿಲಕ್ಷ್ಮಿ ಪುರಾಣ’ವನ್ನೊಮ್ಮೆ ನೋಡಿಬರಬಹುದು. ರಾಧಿಕಾ ಪಂಡಿತ್ ಎಂದಿನಂತೆಯೇ ತೆರೆಯ ಮೇಲೆ ಲವಲವಿಕೆಯಿಂದ ನಟಿಸಿದ್ದಾರೆ. ಸುಳ್ಳುಬುರುಕಿಯಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ನಿರೂಪ್ ಭಂಡಾರಿ ತನಿಖಾಧಿಕಾರಿ ಅಂತ ಒಪ್ಪಿಕೊಳ್ಳೋದು ಕಷ್ಟ.
ಆದರೆ, ಅವರೊಬ್ಬ ಲವ್ವರ್‌ಬಾಯ್ ಆಗಿ ತೆರೆ ಮೇಲೆ ಇಷ್ಟವಾಗುತ್ತಾರೆ. ಉಳಿದಂತೆ ಡ್ಯಾನ್ಸ್, ಫೈಟ್‌ನಲ್ಲಿ ಹಿಂದೆ ಬಿದ್ದಿಲ್ಲ. ತಾರಾ, ಸುಚೇಂದ್ರಪ್ರಸಾದ್, ಜೋ ಸೈಮನ್, ಯಶ್ ಶೆಟ್ಟಿ ಇತರರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅನೂಪ್ ಭಂಡಾರಿ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಸ್ವಾದ ಬೇಕಿತ್ತು. ಪ್ರೀತಾ ಛಾಯಾಗ್ರಹಣದಲ್ಲಿ ಎಲ್ಲರ ಪುರಾಣ ಸೊಗಸಾಗಿದೆ.
ಚಿತ್ರ: ಆದಿಲಕ್ಷ್ಮಿ ಪುರಾಣ
ನಿರ್ಮಾಣ: ರಾಕ್‌ಲೈನ್ ವೆಂಕಟೇಶ್
ನಿರ್ದೇಶನ: ಪ್ರಿಯಾ
ತಾರಾಗಣ: ನಿರೂಪ್ ಭಂಡಾರಿ, ರಾಧಿಕಾ ಪಂಡಿತ್, ತಾರಾ, ಸುಚೇಂದ್ರ ಪ್ರಸಾದ್, ಯಶ್ ಶೆಟ್ಟಿ, ದೀಪಕ್‌ರಾಜ್ ಶೆಟ್ಟಿ, ಜೋಸೈಮನ್ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.