ಗೊಂಬೆಯಾಟಕ್ಕೆ ವಿಧಿಕಾಟ
Team Udayavani, Jan 5, 2019, 6:07 AM IST
“ಆ ದೇವರಿಗೆ ಕೊಂಚ ಕರುಣೆ ಬೇಡವೆ, ಅವನು ಆಡಿಸೋ ಗೊಂಬೆ ನಾನೇ ಆಗಬೇಕಿತ್ತಾ, ಬೇರೆ ಯಾರೂ ಇರಲಿಲ್ವಾ…? ನಾಯಕ ಮಾಧವ ಹೀಗೆ ದುಃಖದಿಂದ ಹೇಳುವ ಹೊತ್ತಿಗೆ, ಅವನ ಬದುಕಿನಲ್ಲಿ ಸಾಕಷ್ಟು ತಿರುವುಗಳು ಎದುರಾಗಿರುತ್ತವೆ. ನಿರೀಕ್ಷಿಸದ ಇಕ್ಕಟ್ಟಿಗೆ ಸಿಲುಕಿರುತ್ತಾನೆ. ಅವನ ಜೀವನದಲ್ಲಿ ವಿಧಿ ಅನ್ನೋದು ವಿಧ ವಿಧವಾಗಿ ಆಟ ಆಡಿರುತ್ತೆ. ಆ ಎಲ್ಲಾ ಸಂಕೋಲೆಗಳಿಂದ ಮಾಧವ ಹೊರಬರುತ್ತಾನಾ, ಇಲ್ಲವಾ ಅನ್ನೋದೇ “ಗೊಂಬೆ’ಯ ಆಟ-ಚೆಲ್ಲಾಟ!
ಹಿರಿಯ ನಿರ್ದೇಶಕ ಭಗವಾನ್ ಅವರು ಎರಡು ದಶಕಗಳ ಬಳಿಕ ನಿರ್ದೇಶಿಸಿರುವ ಚಿತ್ರವಿದು. ಅದರಲ್ಲೂ ಅವರ ವೃತ್ತಿ ಜೀವನದ 50 ನೇ ಚಿತ್ರ ಎಂಬುದು ವಿಶೇಷ. ಆ ವಿಶೇಷತೆ ಅವರ “ಆಡುವ ಗೊಂಬೆ’ಯಾಟದಲ್ಲಿ ಒಂದಷ್ಟು ಇದೆ ಎಂಬುದೇ ಸಮಾಧಾನ. ಚಿತ್ರ ನೋಡಿದವರಿಗೆ ಹಾಗೊಮ್ಮೆ ಅವರ ನಿರ್ದೇಶನದ ಹಳೆಯ ಚಿತ್ರಗಳ ಛಾಯೆ ಕಾಣಿಸಬಹುದು. ಹಾಗಂತ, ನಿರ್ದೇಶಕರು ಹಳೆಯ ಕಥೆಗೆ ಮಾರು ಹೋಗಿದ್ದಾರೆ ಅಂತಲ್ಲ.
ಈಗಿನ ಟ್ರೆಂಡ್ ಬಗ್ಗೆಯೂ ಗಮನ ಬಿಡದೆ ಯಾವ ವರ್ಗಕ್ಕೆ ಏನೆಲ್ಲಾ ಬೇಕು ಎಂಬುದನ್ನು ಮನಗಂಡು ಅರ್ಥಪೂರ್ಣ ಕಥೆಯೊಂದಿಗೆ ಕುಟುಂಬ ಸಮೇತ ನೋಡಬಹುದಾದ ಚಿತ್ರ ಕಟ್ಟಿಕೊಡುವ ಪ್ರಯತ್ನದಲ್ಲಿ ಹಿಂದೆ ಬಿದ್ದಿಲ್ಲ. ಕೆಲವು ಕಡೆ ನೀರಸ ಎಂಬಂತೆ ಕಾಣುವ ದೃಶ್ಯಗಳನ್ನು ಹೊರತುಪಡಿಸಿದರೆ, ಗೊಂಬೆಯಾಟ ತಕ್ಕಮಟ್ಟಿಗಿನ ಮನರಂಜನೆ ಕೊಡುತ್ತದೆ. ಮೊದಲರ್ಧ ಅಷ್ಟೇನೂ ಗಂಭೀರವಾಗಿ ಸಾಗದ ಗೊಂಬೆಯಾಟ, ದ್ವಿತಿಯಾರ್ಧದಲ್ಲಿ ಸಾಕಷ್ಟು ಟ್ವಿಸ್ಟ್ ಕೊಟ್ಟು ಟೆಸ್ಟ್ ಮಾಡಿದ್ದಾರೆ ನಿರ್ದೇಶಕರು.
ಸಂಭಾಷಣೆಯಲ್ಲಿ ಇನ್ನಷ್ಟು ಚುರುಕುತನ ಇರಬೇಕಿತ್ತು. ಈಗಿನ ವೇಗಕ್ಕೆ ತಕ್ಕಂತಹ ಮಾತುಗಳಿಲ್ಲ ಎಂಬ ಸಣ್ಣ ಅಸಮಾಧಾನ ಬಿಟ್ಟರೆ, ಉಳಿದಂತೆ ಯೂಥ್‌ಗೆ ಬೇಕಾಗುವ ರೊಮ್ಯಾಂಟಿಕ್ ಹಾಡು, ಗ್ಲಾಮರ್ ನೋಟ, ತಮಾಷೆ ಮಾತು ಎಲ್ಲವೂ ಅಡಕವಾಗಿದೆ. ಮಾತುಗಳಲ್ಲೇ ದೆಹಲಿ, ಹೈದರಾಬಾದ್ ಬಂದು ಹೋಗುತ್ತವೆಯಾದರೂ, ಎಲ್ಲೂ ಆ ಚಿತ್ರಣವೇ ಇಲ್ಲವಲ್ಲ ಎಂಬ ಪ್ರಶ್ನೆ ಎದುರಾಗದಂತೆ ನಿರ್ದೇಶಕರು ಜಾಣತನದಿಂದ ಆ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ.
ಮೊದಲೇ ಹೇಳಿದಂತೆ ಇದೊಂದು ಕುಟುಂಬ ಚಿತ್ರ. ಕಥೆ ಈಗಿನ ಕಾಲಕ್ಕೆ ಒಗ್ಗುವುದಿಲ್ಲ ಅನ್ನುವುದು ಬಿಟ್ಟರೆ, ಅದನ್ನು ಚಿತ್ರರೂಪಕ್ಕೆ ಅಳವಡಿಸಿ, ಸುಮ್ಮನೆ ನೋಡಿಸಿಕೊಂಡು ಹೋಗುವಂತೆ ಮಾಡಿರುವ ತಾಕತ್ತು ಚಿತ್ರಕಥೆಗಿದೆ. ಅಷ್ಟೇ ಅಲ್ಲ, ಚಿತ್ರದುದ್ದಕ್ಕೂ ನಿರ್ದೇಶಕರು ಕೊಡುವ ಟ್ವಿಸ್ಟ್‌ಗಳಿಗೆ ಪ್ರೇಕ್ಷಕ ಅಲ್ಲಲ್ಲಿ ಅಚ್ಚರಿಯಾಗುವುದೂ ನಿಜ. ಇಲ್ಲೊಂದು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವಿದೆ. ಅದೇನೆಂದರೆ, ಬರೀ, ಹೊಡಿ,ಬಡಿ, ಕಡಿ ಕುರಿತ ಚಿತ್ರಗಳ ಹೊರತಾದ ಕಥೆ ಇಲ್ಲಿದೆ.
ಮುಂದೇನಾಗುತ್ತೆ ಎಂಬ ಸಣ್ಣ ಪ್ರಶ್ನೆಯಿಂದಲೇ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಅದರ ಜೊತೆಗೆ ಆಯ್ಕೆ ಮಾಡಿಕೊಂಡಿರುವ ಪಾತ್ರಗಳು ಸಹ, ನಿರ್ದೇಶಕರ ಕಲ್ಪನೆಗೆ ಮೋಸ ಮಾಡಿಲ್ಲ. ಹಾಗಾಗಿ, ತೆರೆಯ ಮೇಲೆ ಆಡುವ ಪಾತ್ರಗಳ ಆಟ ನೋಡುಗರಿಗೆ ಎಲ್ಲೂ ಬೋರ್ ಎನಿಸದಷ್ಟರ ಮಟ್ಟಿಗೆ ಚಿತ್ರವಿದೆ. ಅಲ್ಲಲ್ಲಿ ವೇಗ ಕಡಿಮೆಯಾಯ್ತು ಅನ್ನುವ ಹೊತ್ತಿಗೆ ಚೆಂದದ ಹಾಡುಗಳು ಕಾಣಿಸಿಕೊಂಡು ಒಂದಷ್ಟು ವೇಗಮಿತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ.
ಅಲ್ಲಲ್ಲಿ ತಪ್ಪುಗಳಿದ್ದರೂ ಸಂಕಲನದ ಕೆಲಸ ಆ ಸಣ್ಣಪುಟ್ಟ ತಪ್ಪುಗಳನ್ನು ಬದಿಗೊತ್ತಿ ನಿಲ್ಲಿಸುತ್ತದೆ. ಅಪ್ಪ ಅಮ್ಮನ ಪ್ರೀತಿ ಕಾಣದ ಮಾಧವನಿಗೆ ಅಕ್ಕ ಮತ್ತು ಭಾವನೇ ತನ್ನ ಪ್ರಪಂಚ. ದೆಹಲಿಯಲ್ಲಿ ಕೆಲಸ ಅರಸಿ ಹೊರಟ ಮಾಧವ ಅಲ್ಲಿ ಹುಡುಗಿಯೊಬ್ಬಳ ಪ್ರೀತಿಗೆ ಸಿಲುಕುತ್ತಾನೆ. ಅಷ್ಟರೊಳಗೆ ಅಕ್ಕನ ಮನೆಗೆ ಹಿಂದಿರುಗುವ ಮಾಧವನಿಗೆ, ತನ್ನ ಅಕ್ಕ, ಮೊದಲ ಮಗಳನ್ನು ಮದುವೆ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಾಳೆ. ಅಕ್ಕನ ಮಾತು ಮೀರದ ಮಾಧವ ಮದುವೆಗೆ ಒಪ್ಪುತ್ತಾನೆ. ಮದ್ವೆ ಹಿಂದಿನ ರಾತ್ರಿ ಮದುವೆ ಹೆಣ್ಣು ಮಾಯ.
ಮನೆಯ ಗೌರವ ಹಾಳಾಗುತ್ತೆ ಎಂದು ಭಯಪಡುವ ಮಾಧವನ ಅಕ್ಕ, ತನ್ನ ಎರಡನೆ ಮಗಳನ್ನು ಕೈ ಹಿಡಿಯುವಂತೆ ಮನವಿ ಮಾಡುತ್ತಾಳೆ. ಅಕ್ಕನ ಆಸೆಯಂತೆ ಮದುವೆ ನಡೆದು ಹೋಗುತ್ತೆ. ಆಮೇಲೆ ಅಕ್ಕನ ಎರಡನೇ ಮಗಳು ಸಹ ಮಾಧವನಿಗೆ ಕೈ ಕೊಡ್ತಾಳೆ. ಕೊನೆಗೊಂದು ಕೊಲೆಯ ಅಪವಾದಕ್ಕೆ ಮಾಧವ ಸಿಲುಕುತ್ತಾನೆ. ಇವೆಲ್ಲದರ ನಡುವೆ, ಅಕ್ಕನೇ ತಮ್ಮನ ವಿರುದ್ಧ ನಿಲ್ಲುತ್ತಾಳೆ. ಮುಂದೆ ಮಾಧವನ ಸ್ಥಿತಿ ಏನಾಗುತ್ತೆ, ಅಕ್ಕ, ಭಾವ ಅವನನ್ನು ಒಪ್ಪುತ್ತಾರಾ ಇಲ್ಲವಾ ಅನ್ನೋದೇ ಸಸ್ಪೆನ್ಸ್.
ಕುತುಹಲವಿದ್ದರೆ, ಭಗವಾನ್ ಗೊಂಬೆ ಆಟವನ್ನೊಮ್ಮೆ ನೋಡಲ್ಲಡ್ಡಿಯಿಲ್ಲ. ಸಂಚಾರಿ ವಿಜಯ್ ನಟನೆಯಲ್ಲಿ ಗಮನಸೆಳೆದರೆ, ಅನಂತ್‌ನಾಗ್, ಸುಧಾಬೆಳವಾಡಿ ಅವರು ಸಹ ನೆನಪಲ್ಲುಳಿಯುತ್ತಾರೆ. ಉಳಿದಂತೆ ರಿಶಿತಾ, ನಿರೂಷಾ, ದಿಶಾ ನಿರ್ದೇಶಕರ ಕಲ್ಪನೆಗೆ ಮೋಸ ಮಾಡಿಲ್ಲ. ಹೇಮಂತ್ ಕುಮಾರ್ ಸಂಗೀತದಲ್ಲಿ “ಪಿಸು ಮಾತಿಗೆ’ “ಆಡಿಸಿ ನೋಡು ಬೀಳಿಸಿ ನೋಡು ಗೊಂಬೆಗೆ ಏನಾಗದು’, “ಓ ಮದನಾ ಹರೆಯ ಅರಳುತ್ತಿದೆ..’ ಹಾಡುಗಳು ಗುನುಗುವಂತಿವೆ. ಹಿನ್ನೆಲೆ ಸಂಗೀತ ಪೂರಕವಾಗಿಲ್ಲ. ಜಬೇಜ್ ಕೆ.ಗಣೇಶ್ ಕ್ಯಾಮೆರಾದಲ್ಲಿ ಗೊಂಬೆಯಾಟದ ಸೊಗಸಿದೆ.
ಚಿತ್ರ: ಆಡುವ ಗೊಂಬೆ
ನಿರ್ಮಾಣ: ಎ.ಶಿವಪ್ಪ, ಕೆ.ವೇಣುಗೋಪಾಲ
ನಿರ್ದೇಶನ: ದೊರೆ-ಭಗವಾನ್
ತಾರಾಗಣ: ಸಂಚಾರಿ ವಿಜಯ್, ಅನಂತ್‌ನಾಗ್, ಸುಧಾ ಬೆಳವಾಡಿ, ರಿಶಿತಾ ಮಲ್ನಾಡ್, ನಿರೂಷಾ ಶೆಟ್ಟಿ, ದಿಶಾ ಕೃಷ್ಣಯ್ಯ ಇತರರು.
* ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.