ಹೊಡೆದಾಟದಲ್ಲೇ ಕಳೆದುಹೋದ ಮಗ


Team Udayavani, Mar 16, 2019, 5:42 AM IST

rajannana-maga.jpg

“ಯುದ್ಧ ಮಾಡೋಕೆ ನನಗೆ ಇಷ್ಟ ಇಲ್ಲ. ಆದರೆ, ಯುದ್ಧ ಮಾಡೋಕೆ ನಿಂತರೆ ಗೆಲ್ಲೋದು ಕಷ್ಟ ಏನಲ್ಲ…’ ಚಿತ್ರದ ನಾಯಕ ಎದುರಾಳಿಗಳನ್ನು ಹಿಗ್ಗಾಮುಗ್ಗಾ ಚಚ್ಚಿದ ಬಳಿಕ ಈ ಪಂಚಿಂಗ್‌ ಡೈಲಾಗ್‌ ಹೇಳುವ ಹೊತ್ತಿಗೆ, ಅದಾಗಲೇ ಅವನು ರೌಡಿಸಂನಲ್ಲಿ ಬೇಜಾನ್‌ ಹವಾ ಇಟ್ಟಿರುತ್ತಾನೆ. ಸಮಾಜ ಕೂಡ ಅವನೊಬ್ಬ ದೊಡ್ಡ ರೌಡಿ ಎಂಬ ಕಾರಣಕ್ಕೆ ಅವನ ಹೆಸರು ಹೇಳಿದರೆ ಸಾಕು ಮೌನಕ್ಕೆ ಶರಣಾಗಿ ತಲೆಬಾಗುತ್ತಿರುತ್ತದೆ. ಪೊಲೀಸು, ಪಬ್ಲಿಕ್ಕು, ಪೊಲಿಟಿಷಿಯನ್ಸ್‌ ಇದ್ಯಾವುದೂ ಅವನನ್ನು ಏನೂ ಮಾಡೋಕ್ಕಾಗಲ್ಲ. ಅಷ್ಟಕ್ಕೂ ಅವನು ಅಷ್ಟು ದೊಡ್ಡ ಕೆಟ್ಟ ರೌಡಿ ಆಗೋಕೆ ಕಾರಣ ಏನೆಂಬುದೇ ಚಿತ್ರದ ಕಥಾವಸ್ತು.

ಚಿತ್ರದ ಶೀರ್ಷಿಕೆ ಕೇಳಿದವರಿಗೆ ಅದೊಂದು ಕೌಟುಂಬಿಕ ಸಿನಿಮಾ, ಪ್ರೀತಿ, ಮಮತೆ, ಸಹನೆ, ತಾಳ್ಮೆ, ಬಾಳ್ವೆ ಇರುವಂತಹ ಚಿತ್ರ ಎಂಬ ಭಾವನೆ ಮೂಡಬಹುದು. “ರಾಜಣ್ಣನ ಮಗ’ ಶೀರ್ಷಿಕೆಗೆ ಅಂಥದ್ದೊಂದು ಕಲ್ಪನೆ ಮಾಡಿಕೊಂಡರೆ ತಪ್ಪೇನಿಲ್ಲ. ಆದರೆ, ಈ “ರಾಜಣ್ಣನ ಮಗ’ನದ್ದು ಒಂದು ರೌಡಿಸಂ ಕಥೆ ಇದೆ. ಜೊತೆಗೊಂದು ವ್ಯಥೆಯೂ ಇದೆ. ಇಲ್ಲಿ ರೌಡಿಸಂ ಸ್ಟೋರಿ ಇದ್ದರೂ, ಅಷ್ಟೇ ಭಾವುಕತೆ ಹೆಚ್ಚಿಸುವಂತಹ ಅಂಶಗಳೂ ಇವೆ. ಅಮ್ಮ ಮಗನ ವಾತ್ಸಲ್ಯ, ಅಪ್ಪ ಮಗನ ಬಾಂಧವ್ಯ, ಮೊದಲ ಸಲ ಹುಟ್ಟುವ ಪ್ರೀತಿ, ರಕ್ತ ಸಂಬಂಧಗಳ ನಡುವಿನ ರೀತಿ, ಗೆಳೆತನದ ಆಳ ಇತ್ಯಾದಿ ವಿಷಯಗಳು ಇಲ್ಲಿ ಅಡಕವಾಗಿವೆ.

ಹಾಗಂತ ಇದನ್ನು ಸೆಂಟಿಮೆಂಟ್‌ ಚಿತ್ರ ಎನ್ನಬೇಕೋ, ಅಂಡರ್‌ವರ್ಲ್ಡ್ ಸಿನಿಮಾ ಎನ್ನಬೇಕೋ ಎಂಬ ಗೊಂದಲ ಕಾಡದೇ ಇರದು. ಯಾಕೆಂದರೆ, ಇಲ್ಲಿ ರೌಡಿಸಂಗೆ ಹೆಚ್ಚು ಜಾಗ ಕಲ್ಪಿಸಲಾಗಿದೆ. ಹಾಗಾಗಿ ಭರ್ಜರಿ ಆ್ಯಕ್ಷನ್‌ ಬಿಟ್ಟರೆ ಬೇರೇನೂ ಕಾಣಸಿಗಲ್ಲ. ಮಾತೆತ್ತಿದರೆ ಸಾಕು, ಮಚ್ಚು, ಲಾಂಗುಗಳು ಝಳಪಳಿಸುತ್ತವೆ. ತರಹೇವಾರಿ ರೌಡಿಗಳ ಆರ್ಭಟ ಕಿವಿಗಡಚಿಕ್ಕುತ್ತದೆ. ಹಾಗಾಗಿ ಇದನ್ನು ಯಾವ ಕೆಟಗರಿಯ ಚಿತ್ರ ಎಂದು ಹೇಳುವುದು ಕೊಂಚ ಕಷ್ಟ. ಆದರೆ, ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ ಎಂಬುದು ಸ್ಪಷ್ಟ.

ಆರಂಭದಲ್ಲಿ ಚಿತ್ರ ನೋಡುವವರಿಗೆ ಚಿತ್ರದ ಹೆಸರೊಂದೇ “ನಾಮಬಲ’ ಅನಿಸಿದರೆ ಅಚ್ಚರಿ ಇಲ್ಲ. ಆದರೆ, ಸಿನಿಮಾ ಕಥೆ ನಿಧಾನವಾಗಿ ಬಿಚ್ಚಿಕೊಳ್ಳುತ್ತಲೇ, ಚಿತ್ರದೊಳಗಿನ ಸಾರ ಕೂಡ ವಿಸ್ತಾರವಾಗುತ್ತ ಹೋಗುತ್ತದೆ. ಆ ಕಾರಣಕ್ಕೆ “ರಾಜಣ್ಣನ ಮಗ’ ಒಂದು ಮಾಸ್‌ ಚಿತ್ರವಾಗಿ, ಗಮನಸೆಳೆಯುತ್ತದೆ. ಹಾಗಂತ ಇದು ಕ್ಲಾಸ್‌ ಮಂದಿಗೆ ಇಷ್ಟವಾಗುತ್ತಾ? ಈ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು. ಇಲ್ಲಿ ದೊಡ್ಡ ಮಟ್ಟದ ಕಥೆ ಹುಡುಕುವಂತಿಲ್ಲ. ಆದರೆ, ಕಣ್ಣಿಗೆ ರಾಚುವಷ್ಟು ರೌಡಿಗಳ ದೊಡ್ಡ ಪಟ್ಟಿಗಂತೂ ಬರವಿಲ್ಲ. ಇಂತಹ ಚಿತ್ರಗಳಿಗೆ ಮುಖ್ಯವಾಗಿ ಬೇಕಿರುವುದು “ಡಿಫ‌ರೆಂಟ್‌’ ಸ್ಟಂಟ್ಸ್‌.

ಅದಕ್ಕೇನೂ ಕೊರತೆ ಇಲ್ಲ. ಇಲ್ಲಿನ ಒಂದೊಂದು ಆ್ಯಕ್ಷನ್‌ ನೋಡುತ್ತಿದ್ದರೆ, ಮೊದಲು ನೆನಪಾಗೋದೇ ಸ್ಟಂಟ್‌ ಮಾಸ್ಟರ್‌. ಅದಕ್ಕೆ ಪೂರಕ ಎನಿಸುವ ಹಿನ್ನೆಲೆ ಸಂಗೀತವೂ ಇಲ್ಲಿದೆ. ಹಾಗೆ ಹೇಳುವುದಾದರೆ ಹಿನ್ನೆಲೆ ಸಂಗೀತ ತಕ್ಕಮಟ್ಟಿಗೆ ಚಿತ್ರದ ತಾಕತ್ತು ಎನ್ನಬಹುದು. ಜೊತೆಗೊಂದಷ್ಟು ಪಂಚಿಂಗ್‌ ಡೈಲಾಗ್‌ಗಳು ಸಹ ಚಿತ್ರದ ವೇಗವನ್ನು ಹೆಚ್ಚಿಸಿಕೊಂಡು ಹೋಗಿವೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಯಾದ ಹಿಡಿತ ಇದ್ದಿದ್ದರೆ, “ರಾಜಣ್ಣನ ಮಗ’ನ “ಹರ ಸಾಹಸ’ ಸಾರ್ಥಕವೆನಿಸುತ್ತಿತ್ತು. ಇದು ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗದಿದ್ದರೂ, ಯೂಥ್‌ಗೊಂದು ಭರ್ಜರಿ ಮಾಸ್‌ ಚಿತ್ರವಂತೂ ಹೌದು.

ಇಲ್ಲಿರುವ ಕಥೆ ಹೊಸದೇನಲ್ಲ. ಕನ್ನಡದ ಅದೆಷ್ಟೋ ಚಿತ್ರಗಳಲ್ಲಿ ಬಂದ ಕಥೆಯ ಎಳೆ ಇಲ್ಲೂ ಇದೆ. ರಾಜಣ್ಣನದು ಮಧ್ಯಮವರ್ಗದ ಕುಟುಂಬ. ಹೆಂಡತಿ, ಮಕ್ಕಳ ಪ್ರೀತಿನೇ ಆಸ್ತಿ ಅಂದುಕೊಂಡಾತ. ತನ್ನ ಮೂವರು ಗಂಡು ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸುವ ರಾಜಣ್ಣ ದಂಪತಿಗೆ ಮಕ್ಕಳ ಬಗ್ಗೆ ಇನ್ನಿಲ್ಲದ ಕನಸು. ದಿನ ಕಳೆದಂತೆ ರಾಜಣ್ಣನ ಕುಟುಂಬ ದೊಡ್ಡದಾಗುತ್ತದೆ. ಎರಡನೇ ಮಗ “ಗೌರಿ’ ಘಟನೆಯೊಂದರಲ್ಲಿ ಒಬ್ಬನನ್ನು ಕೊಂದು ಜೈಲು ಸೇರುತ್ತಾನೆ. ರಾಜಣ್ಣ ಆ ಮಗ ತನ್ನ ಪಾಲಿಗೆ ಸತ್ತು ಹೋದ ಅಂದುಕೊಳ್ಳುತ್ತಾನೆ.

ತಾನು ಮಾಡದ ತಪ್ಪಿಗಾಗಿ ಜೈಲು ಸೇರುವ ಗೌರಿ, ಆ ಬಳಿಕ ಹೊರಬಂದಾಗ ಸಮಾಜ ಅವನಿಗೆ  ರೌಡಿ ಪಟ್ಟ ಕಟ್ಟುತ್ತೆ. ಅವನ ಹೆಸರು ಹೇಳಿಕೊಂಡೇ ಅದೆಷ್ಟೋ ಪುಡಿ ರೌಡಿಗಳು ಮುಗ್ಧ ಜನರನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಾರೆ. ಆದರೆ, ಗೌರಿಗೆ ಮಾತ್ರ ಅಷ್ಟೆಲ್ಲಾ ನಡೆಯುತ್ತಿದೆ ಅಂತ ಅರ್ಥವಾಗುವ ಹೊತ್ತಿಗೆ ಅವನೊಬ್ಬ ದೊಡ್ಡ ರೌಡಿ ಎಂದೇ ಹೆಸರು ಪಡೆದಿರುತ್ತಾನೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು “ರಾಜಣ್ಣನ ಮಗ’ನ ಕಥೆ. ಹರೀಶ್‌ ಜಲಗೆರೆ ಅವರ ಆ್ಯಕ್ಟಿಂಗ್‌ಗಿಂತ ಆ್ಯಕ್ಷನ್‌ ಇಷ್ಟವಾಗುತ್ತೆ. ಹತ್ತಾರು ಜನರನ್ನು ಒಂದೇ ಏಟಿಗೆ ಹೊಡೆದುರುಳಿಸುವ ಅವರ ತಾಕತ್ತು ಪ್ರದರ್ಶನ ಚೆನ್ನಾಗಿದೆ.

ದೇಹ ಇನ್ನಷ್ಟು ಫಿಟ್‌ ಆಗಿರಬೇಕಿತ್ತು. ಆದರೂ, ರಿಸ್ಕೀ ಸ್ಟಂಟ್ಸ್‌ನಲ್ಲಿ ಯಾವ ಮಾಸ್‌ ಹೀರೋಗು ಕಮ್ಮಿ ಇಲ್ಲವೆಂಬಂತೆ ಬೆವರಿಳಿಸಿದ್ದಾರೆ. ನಾಯಕಿ ಬಗ್ಗೆ ಹೇಳದಿರುವುದೇ ಒಳಿತು. ರಾಜಣ್ಣನಾಗಿ ಚರಣ್‌ರಾಜ್‌ ಇಷ್ಟವಾಗುತ್ತಾರೆ. ಒಬ್ಬ ಪ್ರಾಮಾಣಿಕ ವ್ಯಾಪಾರಿಯಾಗಿ, ಕುಟುಂಬವನ್ನು ಪ್ರೀತಿಸುವ ಅಪ್ಪನಾಗಿ ಗಮನಸೆಳೆಯುತ್ತಾರೆ. ಕೆಲವೆಡೆ ಭಾವುಕರನ್ನಾಗಿಸುತ್ತಾರೆ. ಅರುಣ ಬಾಲರಾಜ್‌, ರಾಜೇಶ್‌ ನಟರಂಗ, ಕರಿಸುಬ್ಬು, ಶರತ್‌ಲೋಹಿತಾಶ್ವ ಸೇರಿದಂತೆ ಇತರೆ ಕಲಾವಿದರು ಪಾತ್ರಕ್ಕೆ ಮೋಸ ಮಾಡಿಲ್ಲ. ಡಿಫ‌ರೆಂಟ್‌ ಡ್ಯಾನಿ ಅವರ ಸಾಹಸ ಚಿತ್ರದ ಹೈಲೈಟ್‌ ಆಗಿದ್ದರೆ, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತಕ್ಕೂ ಅಷ್ಟೇ ಕ್ರೆಡಿಟ್‌ ಸಲ್ಲಬೇಕು. ಪ್ರಮೋದ್‌ ಅವರ ಛಾಯಾಗ್ರಹಣ ಪರವಾಗಿಲ್ಲ.

ಚಿತ್ರ: ರಾಜಣ್ಣನ ಮಗ
ನಿರ್ಮಾಣ: ಜಲಗೆರೆ ಪ್ರೈ.ಲಿ.
ನಿರ್ದೇಶನ: ಕೋಲಾರ ಸೀನು
ತಾರಾಗಣ: ಹರೀಶ್‌ ಜಲಗೆರೆ, ಅಕ್ಷತಾ, ಚರಣ್‌ರಾಜ್‌, ಅರುಣಬಾಲರಾಜ್‌, ಶರತ್‌ ಲೋಹಿತಾಶ್ವ, ರಾಜೇಶ್‌ ನಟರಂಗ, ಕರಿಸುಬ್ಬು, ಕುರಿರಂಗ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.